* ಕುಂಭದ್ರೋಣ ಮಳೆಗೆ ತತ್ತರಿಸಿದ ಜನತೆ
* ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳಗಳು
* ದಿಂಗಾಲೇಶ್ವರ ಮಠದೊಳಗೆ ನುಗ್ಗಿದ ಮಳೆ ನೀರು
ಡಂಬಳ(ಮೇ.21): ಕನ್ಯೆ ನೋಡಲು ತೆರಳಿದ್ದ ಯುವಕ ಊರಿಗೆ ವಾಪಸ್ ಬರುವಾಗ ಹಳ್ಳದಲ್ಲಿ ಕೊಚ್ಚಿಕೊಂಡ ಹೋದ ಘಟನೆ ಡಂಬಳ ಬಳಿ ನಡೆದಿದೆ. ಗದಗ ಜಿಲ್ಲೆಯ ಡಂಬಳ ಹೋಬಳಿಯ ಯಕ್ಲಾಸಪುರ ಗ್ರಾಮಕ್ಕೆ ತೆರಳುವಾಗ ಗುರುವಾರ ರಾತ್ರಿ ನಿರಂತರ ಮಳೆಗೆ ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯಕ್ಲಾಸಪುರ ಗ್ರಾಮದ ಟಿಪ್ಪುಸಾಬ್ ಅಕ್ಬರಸಾಬ್ ದೊಡ್ಡಮನಿ (29) ಮೃತ ದೇಹ ಶುಕ್ರವಾರ ಪತ್ತೆಯಾಗಿದೆ.
ರಾತ್ರಿಯ ವೇಳೆ ಮೈದುಂಬಿ ಹರಿಯುತ್ತಿರುವ ಹಳ್ಳ ಅರಿಯದೇ ಬೈಕ್‌ನಲ್ಲಿ ಹಳ್ಳ ದಾಟುವ ಸಾಹಸಕ್ಕೆ ಮುಂದಾಗಿರುವುದರಿಂದ ಈ ಅವಘಡ ಸಂಭವಿಸಿದೆ. ಮೃತ ಟಿಪ್ಪುಸಾಬ್ ಜೇಬಿನಲ್ಲಿ ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿದ್ದ ಮೊಬೈಲ್ ಒದ್ದೆಯಾಗದ ಕಾರಣ ಪೊಲೀಸರು ಆತನ ಮೊಬೈಲ್‌ಗೆ ಕರೆ ಮಾಡಿ ಲೋಕೇಶನ್ ಮೂಲಕ ಮೃತ ದೇಹ ಪತ್ತೆ ಮಾಡಿದ್ದಾರೆ.
undefined
Gadag: ಕೃಷಿ ಹೊಂಡದಲ್ಲಿ ಬಿದ್ದು ಮೂವರು ಬಾಲಕಿಯರ ಸಾವು!
ಘಟನಾ ಸ್ಥಳಕ್ಕೆ ಮುಂಡರಗಿ ತಹಸೀಲ್ದಾರ್ ಆಶಪ್ಪ ಪೂಜಾರ, ಡಂಬಳ ಉಪತಹಸೀಲ್ದಾರ್ ಸಿ.ಕೆ. ಬಳೊಟಗಿ, ಕಂದಾಯ ನಿರೀಕ್ಷಕ ಪ್ರಭು ಭಾಗಲಿ, ಎಎಸ್‌ಐ ಮಾರುತಿ ಜೋಗದಂಡಕರ ಸೇರಿದಂತೆ ಇತರ ಅಧಿಕಾರಿ ವರ್ಗ ಇದ್ದರು. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಣೆ
ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ 2 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಯು ಹಲವಾರು ಅನಾಹುತ ಸೃಷ್ಟಿಮಾಡಿದೆ. ಲಕ್ಷ್ಮೇಶ್ವರದಿಂದ ಬೆಳ್ಳಟ್ಟಿಗೆ ಹೋಗುವ ಮಾರ್ಗದಲ್ಲಿನ ನೆಲೂಗಲ್ಲ ಗ್ರಾಮದ ಸಮೀಪದ ಹಳ್ಳದಲ್ಲಿ ಕಾರು ಸಮೇತ ಕೊಚ್ಚಿಕೊಂಡು ಹೋಗುತ್ತಿರುವ ನಾಲ್ವರನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಪ್ರಾಣ ಉಳಿಸಿದ ಘಟನೆ ನಡೆದಿದೆ.
ಮುಂಗಾರು ಪೂರ್ವಕ್ಕೆ ಹೆಚ್ಚಿದ ತುಂಗಭದ್ರಾ ಒಳಹರಿವು
ಲಕ್ಷ್ಮೇಶ್ವರದಿಂದ ಹೆಬ್ಬಾಳ ಗ್ರಾಮಕ್ಕೆ ಡಾ. ಪ್ರಭು ಮನ್ಸೂರ ಸೇರಿದಂತೆ ಚೆನ್ನವೀರಗೌಡ ಪಾಟೀಲ, ಬಸನಗೌಡ ತೆಗ್ಗಿನಮನಿ, ವೀರೇಶ ಡಂಬಳ ಎಂಬುವವರು ಗುರುವಾರ ರಾತ್ರಿ ತೆರಳುತ್ತಿದ್ದಾಗ ನೆಲೂಗಲ್ಲ ಸಮೀಪ ಹಳ್ಳವು ತುಂಬಿ ಹರಿಯುತ್ತಿತ್ತು. ಆದರೂ ಧೈರ್ಯ ಮಾಡಿ ಕಾರನ್ನು ಚಲಾಯಿಸಿಕೊಂಡು ಹೋಗುವ ವೇಳೆ ನೀರಿನ ರಭಸಕ್ಕೆ ಸಿಲುಕಿದ ಕಾರು ನಾಲ್ವರ ಸಮೇತ ಕೊಚ್ಚಿ ಹೋಗುತ್ತಿತ್ತು. ಕಾರಿನ ಅರ್ಧಕ್ಕೂ ಹೆಚ್ಚು ಭಾಗ ಸಂಪೂರ್ಣವಾಗಿ ಮುಳುಗಿದ್ದು, ರಭಸಕ್ಕೆ ಕಾರು ಕೊಚ್ಚಿ ಹೋಗುತ್ತಿತ್ತು. ಗ್ರಾಮಸ್ಥರು ಹಾಗೂ ಸಿಪಿಐ ವಿಕಾಸ ಲಮಾಣಿ ಕಾರಿನ ಗಾಜು ಒಡೆದು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಕಾರನ್ನೂ ಸಹ ಮೆಲಕ್ಕೆ ಎಳೆದು ತರಲಾಗಿದೆ.
ದಿಂಗಾಲೇಶ್ವರ ಮಠದೊಳಗೆ ನುಗ್ಗಿದ ಮಳೆ ನೀರು
ಸಮೀಪದ ಬಾಲೆಹೊಸೂರಿನ ಗ್ರಾಮದಲ್ಲಿ ಧಾರಾಕಾರ ಮಳೆಯ ನೀರು ಚರಂಡಿ ಮೂಲಕ ಹರಿದು ಹೋಗುತ್ತಿರುವ ವೇಳೆ ಪಕ್ಕದಲ್ಲಿನ ದಿಂಗಾಲೇಶ್ವರಮಠದ ಆವರಣದೊಳಗೆ ನುಗ್ಗಿ ಕೆಲ ಕಾಲ ಆತಂಕ ಸೃಷ್ಟಿಮಾಡಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಇದರಿಂದ ದಿಂಗಾಲೇಶ್ವರ ಮಠದ ಭಕ್ತರು ಮೊಣಕಾಲುದ್ದ ನೀರಿನಲ್ಲಿ ನಡೆದುಕೊಂಡು ಹೋಗಿ ದೇವರ ದರ್ಶನ ಪಡೆದುಕೊಂಡಿದ್ದಾರೆ.
ಪು. ಬಡ್ನಿ ಗ್ರಾಮದ ಹತ್ತಿರ ಹರಿಯುತ್ತಿರವ ದೊಡ್ಡ ಹಳ್ಳದ ನೀರು ಸೇತುವೆ ಮೇಲೆ ಹರಿಯುತ್ತಿದ್ದ ಹೊಲಗಳಿಗೆ ನುಗ್ಗಿರುವ ಘಟನೆ ನಡೆದಿದೆ. ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಪು. ಬಡ್ನಿ ಗ್ರಾಮದಿಂದ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದ ಬಸ್ ರಸ್ತೆಯ ಪಕ್ಕದ ಮಣ್ಣಿನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.