* ಸುಡು ಬೇಸಿಗೆಯ ತಿಂಗಳಲ್ಲಿ ಕನಿಷ್ಠ 17.9ಕ್ಕೆ ಕುಸಿದ ಕನಿಷ್ಠ ಉಷ್ಣಾಂಶ
* 1945ರಲ್ಲಿ 16.7 ಡಿ.ಸೆ. ಈವರೆಗಿನ ದಾಖಲೆ
* ವಾರಾಂತ್ಯದ ದಿನದಲ್ಲೂ ಮಳೆ
ಬೆಂಗಳೂರು(ಮೇ.21): ನಗರದಲ್ಲಿ ಸುರಿಯುತ್ತಿರುವ ಅಕಾಲಿಕ ಭರ್ಜರಿ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ತಾಪಮಾನ ಇಳಿಕೆಯ ಹೊಸ ದಾಖಲೆಗಳೇ ನಿರ್ಮಾಣವಾಗುತ್ತಿದೆ. ಗುರುವಾರ 50 ವರ್ಷಗಳ ಅತಿ ಕಡಿಮೆ ಗರಿಷ್ಠ ತಾಪಮಾನ ವರದಿ ಆಗಿದ್ದರೆ ಶುಕ್ರವಾರ 77 ವರ್ಷದಲ್ಲೇ ಮೇ ತಿಂಗಳ ಅತಿ ಕನಿಷ್ಠ ತಾಪಮಾನ ದಾಖಲಾಗಿದೆ.
ಶುಕ್ರವಾರ ನಗರದ ಕನಿಷ್ಠ ತಾಪಮಾನ 17.9ಕ್ಕೆ ಕುಸಿದಿದೆ. 1945ರ ಮೇ 6ರಂದು 16.7 ಡಿಗ್ರಿ ಸೆಲ್ಸಿಯಸ್ ದಾಖಲಾದ ಬಳಿಕ ಮೇ ತಿಂಗಳಲ್ಲಿ ವರದಿ ಆಗಿರುವ ಅತಿ ಕಡಿಮೆ ಉಷ್ಣಾಂಶ ಇದಾಗಿದೆ. ಇತ್ತೀಚೆಗೆ ಅಂದರೆ 2013ರ ಮೇ 13 ಮತ್ತು 2014ರ ಮೇ 25ಕ್ಕೆ 18.9 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿತ್ತು.
ಬೆಂಗಳೂರಿನಲ್ಲಿ ಮೇ ತಿಂಗಳಲ್ಲೇ ಅತ್ಯಂತ ಚಳಿ : 50 ವರ್ಷದಲ್ಲೇ ಇದೇ ಮೊದಲು
1972ರ ಬಳಿಕದ ಅತಿ ಕಡಿಮೆ ಗರಿಷ್ಠ ತಾಪಮಾನ 22.4 ಡಿಗ್ರಿ ಸೆಲ್ಸಿಯಸ್ ಗುರುವಾರ ದಾಖಲಾಗಿತ್ತು. ನಗರದಲ್ಲಿ ಕಳೆದ ಮೂರು ವಾರಗಳಿಂದ ಬಹುತೇಕ ಎಲ್ಲ ದಿನ ಮಳೆ ಸುರಿಯುತ್ತಿರುವುದು, ವಾತಾವರಣದಲ್ಲಿ ಹೆಚ್ಚಿದ ತೇವಾಂಶ, ತಗ್ಗಿನಲ್ಲಿರುವ ಮೋಡಗಳಿಂದಾಗಿ ಕಡು ಬೇಸಿಗೆ ಇರುವ ಮೇ ತಿಂಗಳಿನಲ್ಲಿಯೂ ಚಳಿಯ ವಾತಾವರಣ ಮೂಡಿದೆ.
ಇಂದು ಗರಿಷ್ಠ 27 ಡಿ.ಸೆ.:
ನಗರದಲ್ಲಿ ಅತ್ಯಂತ ಕಡಿಮೆ ತಾಪಮಾನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ. ಅಲ್ಲಿ 16.6 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಇಳಿದಿದೆ. ಗರಿಷ್ಠ ತಾಪಮಾನ 28.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕನಿಷ್ಠ ತಾಪಮಾನ 17.4 ಡಿಗ್ರಿ ಸೆಲ್ಸಿಯಸ್ ವರದಿಯಾಗಿದ್ದು ಗರಿಷ್ಠ ತಾಪಮಾನ 27.8 ಡಿಗ್ರಿ ಸೆಲ್ಸಿಯಸ್ ಇದೆ.
2026ರ ವೇಳೆಗೆ ಜಾಗತಿಕ ತಾಪಮಾನ ತಾತ್ಕಾಲಿಕ 1.5 °C ಮಿತಿ ತಲುಪುವ 50:50 ಸಾಧ್ಯತೆ: ವರದಿ
ಅಲ್ಲಲ್ಲಿ ಸುರಿದ ಮಳೆ
ಶುಕ್ರವಾರ ಮೂರು ಗಂಟೆಯ ಸುಮಾರಿಗೆ ನಗರದ ಬಹುತೇಕ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ವಿದ್ಯಾಪೀಠ, ಹೆಬ್ಬಾಳ, ಶಿವಾನಂದ, ಶೇಷಾದ್ರಿಪುರ, ರಾಜಾಜಿನಗರ, ಮಲ್ಲೆಶ್ವರ, ಚಾಮರಾಜಪೇಟೆ, ಎನ್. ಆರ್. ಕಾಲೋನಿ, ಶಿವಾಜಿ ನಗರ, ಸಂಪಂಗಿ ರಾಮನಗರ, ಮಂಜುನಾಥನಗರ, ಕುರುಬರಹಳ್ಳಿ, ಹಂಪಿ ನಗರ, ಬಸವೇಶ್ವರ ನಗರ, ಬೊಮ್ಮನಹಳ್ಳಿ, ಸಾರಕ್ಕಿ, ಕೋರಮಂಗಲ, ಕೆಂಗೇರಿ, ಹೆಮ್ಮಿಗೆಪುರ, ಬೆಳ್ಳಂದೂರು, ಹೂಡಿ, ಮಾರುತಿ ಮಂದಿರ, ವಿವಿ ಪುರ, ಬಿಟಿಎಂ ಲೇ ಔಟ್, ಉತ್ತರಹಳ್ಳಿಯಲ್ಲಿ ಮಳೆಯಾಗಿದೆ. ದಿನವಿಡೀ ಭಾರಿ ಮಳೆ ಸುರಿಯುವ ರೀತಿಯಲ್ಲಿ ಮೋಡ ದಟೈಸಿದ್ದರೂ ನಿರೀಕ್ಷಿಸಿದಷ್ಟುಮಳೆಯಾಗಿಲ್ಲ,.
ವಾರಾಂತ್ಯದ ದಿನದಲ್ಲೂ ಮಳೆ
ಶನಿವಾರ ಮತ್ತು ಭಾನುವಾರವೂ ನಗರದಲ್ಲಿ ಮಳೆಯಾಗುವ ಸಾಧ್ಯತೆಯಿದ್ದು ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಮತ್ತು 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.