Koppal: ಭಾರೀ ಮಳೆ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ

By Girish Goudar  |  First Published May 21, 2022, 8:42 AM IST

*   ಅಪಾಯದ ಮಟ್ಟಮೀರಿ ಹರಿಯುತ್ತಿರುವ ಹಿರೇಹಳ್ಳ ಜಲಾಶಯ
*   ಕೊಚ್ಚಿಹೋದ ರೈತರ 20 ಪಂಪ್‌ಸೆಟ್‌ಗಳು
*   ಹಿರೇಸಿಂಧೋಗಿ, ಮಂಗಳಾಪುರ, ಕಾಟ್ರಳ್ಳಿ, ಚಿಕ್ಕಸಿಂಧೋಗಿ ಸಂಪರ್ಕ ಕಡಿತ
 


ಮುನಿರಾಬಾದ್‌(ಮೇ.21): ಮಲೆನಾಡು ಹಾಗೂ ಇತರ ಕಡೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಶುಕ್ರವಾರ ತುಂಗಭದ್ರಾ ಜಲಾಶಯಕ್ಕೆ ಸುಮಾರು 16046 ಕ್ಯುಸೆಕ್‌ ನೀರು ಹರಿದು ಬಂದಿದೆ. ಇದು ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವ ಅತ್ಯಧಿಕ ಪ್ರಮಾಣದ ನೀರಾಗಿದೆ. 

ಶುಕ್ರವಾರ ತುಂಗಭದ್ರಾ ಜಲಾಶಯದ ನೀರಿನ ಮಟ್ಟ 1595.58 ಅಡಿ ಇತ್ತು. ಜಲಾಶಯದಲ್ಲಿ 14.5 ಟಿಎಂಸಿ ನೀರು ಶೇಖರಣೆಯಾಗಿದೆ. ಮುಂಬರುವ ದಿನಗಳಲ್ಲಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಕಳೆದ ಹತ್ತು ವರ್ಷಗಳ ಇತಿಹಾಸದಲ್ಲಿ ಮೇ ತಿಂಗಳಲ್ಲಿ ಜಲಾಶಯಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಒಳಹರಿವು ಹರಿದುಬಂದಿದ್ದು ಇದೇ ಮೊದಲು ಎನ್ನಲಾಗುತ್ತಿದೆ ಹಾಗೂ ಮೇ ತಿಂಗಳಿನಲ್ಲಿ ಜಲಾಶಯದ ನೀರಿನ ಮಟ್ಟ1595 ಅಡಿ ದಾಟಿದ್ದು ದಾಖಲೆಯಾಗಿದೆ.

Tap to resize

Latest Videos

Bengaluru Rains: ಬೆಂಗ್ಳೂರಲ್ಲಿ 77 ವರ್ಷದಲ್ಲೇ ಕನಿಷ್ಠ ತಾಪಮಾನ..!

ನಿರಂತರ ಮಳೆಗೆ ಜನಜೀವನ ತತ್ತರ

ಕೊಪ್ಪಳ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಶುಕ್ರವಾರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಿದ್ದಾರೆ.

ನಿರಂತರ ಮಳೆಯಿಂದಾಗಿ ತಾಲೂಕಿನ ಮುದ್ಲಾಪುರ ಬಳಿ ಇರುವ ಹಿರೇಹಳ್ಳ ಜಲಾಶಯ ಭರ್ತಿಯಾಗಿದ್ದು, ಅಪಾಯ ಮಟ್ಟಮೀರಿ ಹರಿಯುತ್ತಿದೆ. ಜಲಾಶಯದ ನಾಲ್ಕು ಗೇಟ್‌ ಮೂಲಕ ನೀರನ್ನು ಹೊರಬಿಡಲಾಗಿದೆ. ಒಟ್ಟು 6 ಗೇಟ್‌ಗಳಲ್ಲಿ ನಾಲ್ಕು ಗೇಟ್‌ಗಳನ್ನು ತೆರೆಯಲಾಗಿದೆ. ಇದರಿಂದಾಗಿ ಮುದ್ಲಾಪೂರ, ಕಿನ್ನಾಳ, ಮಾದಿನೂರ ಗ್ರಾಮದ ಜನರಲ್ಲಿ ಆತಂಕ ಮೂಡಿದೆ. ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಆಸುಪಾಸಿನ ಗ್ರಾಮಗಳಲ್ಲಿ ನೀರು ನುಗ್ಗುವ ಭೀತಿಯಲ್ಲಿದ್ದಾರೆ. ಜಲಾಶಯ ನಿರ್ಮಾಣ ವಾದ ಬಳಿಕ ಮೊದಲ ಬಾರಿಗೆ ಒಂದೇ ಮಳೆಗೆ ತುಂಬಿ ಹರಿಯುತ್ತಿವ ಹಿರೇಹಳ್ಳ ಜಲಾಶಯ ಇದಾಗಿದ್ದು, 1.69 ಟಿಎಂಸಿ ಸಾಮರ್ಥ್ಯದ ಹಿರೇಹಳ್ಳ ಜಲಾಶಯ ಭರ್ತಿಯಾಗಿದೆ. ಒಂದೇ ರಾತ್ರಿಯಲ್ಲಿ ಸುರಿದ ಮಳೆಗೆ ಜಲಾಶಯ ಭರ್ತಿಯಾಗಿದೆ.

ಬೆಳೆ ಜಲಾವೃತ:

ಮಂಗಳಾಪುರ ಬಳಿ ಇರುವ ಬ್ರಿಡ್ಜ್‌ ಕಮ್‌ ಬ್ಯಾರೇಜ್‌ ಗೇಟ್‌ಗಳನ್ನು ತೆರೆಯದ ಹಿನ್ನೆಲೆ ರೈತರ ಜಮೀನಿಗೆ ನುಗ್ಗಿದ್ದು, ರೈತರ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಅಲ್ಲದೇ 20ಕ್ಕೂ ಹೆಚ್ಚು ಪಂಪ್‌ಸೆಟ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ರೈತರಿಗೆ ಅಪಾರ ನಷ್ಟವಾಗಿದೆ. ಗೇಟ್‌ ತೆರೆಯದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶಗೊಂಡಿದ್ದಾರೆ.

ರಾಜ್ಯದಲ್ಲಿ ಅಕಾಲಿಕ ಮಳೆಗೆ ಬೆಳೆ ಹಾನಿ, ರೈತರು ತತ್ತರ!

ಸಂಪರ್ಕ ಕಡಿತ:

ಹಿರೇಹಳ್ಳ ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆ ತಾಲೂಕಿನ ಹಿರೇಸಿಂಧೋಗಿ ಬಳಿ ಇರುವ ಬ್ರಿಡ್ಜ್‌ ಕಂ ಬ್ಯಾರೇಜ… ಬ್ರಿಡ್ಜ್‌ ಕಂ ಬ್ಯಾರೇಜ್‌ ಗೇಟ್‌ ತೆರೆಯದ ಹಿನ್ನೆಲೆ ಹಿರೇಸಿಂಧೋಗಿ, ಮಂಗಳಾಪುರ, ಕಾಟ್ರಳ್ಳಿ, ಚಿಕ್ಕಸಿಂಧೋಗಿ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ನೀರು ಮೇಲೆ ಹರಿಯುತ್ತಿವೆ. ನೀರಿನ ರಭಸಕ್ಕೆ ಹಲವೆಡೆ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿವೆ.

ಶಾಲೆ- ಕಾಲೇಜಿಗೆ ರಜೆ

ಜಿಲ್ಲಾದ್ಯಂತ ನಿರಂತರ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಶಾಲೆ- ಕಾಲೇಜುಗಳಿಗೆ ಶುಕ್ರವಾರ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಅವರು ರಜೆ ಘೋಷಿಸಿದ್ದರು. ವಿದ್ಯಾರ್ಥಿಗಳು ಎಚ್ಚರ ವಹಿಸಬೇಕೆಂದು ತಿಳಿಸಿದ್ದಾರೆ.
 

click me!