ಯಕ್ಷ ರಂಗದಲ್ಲೊಬ್ಬ ಪುರುಷ ಸುಧಾಚಂದ್ರನ್‌: ಕೃತಕ ಕಾಲಿನಲ್ಲೇ 20-30 ಧಿಗಿಣ ತೆಗೆಯಬಲ್ಲ ವೇಣೂರಿನ ಮನೋಜ್‌

Suvarna News   | Asianet News
Published : May 15, 2020, 10:05 AM ISTUpdated : May 15, 2020, 12:03 PM IST
ಯಕ್ಷ ರಂಗದಲ್ಲೊಬ್ಬ ಪುರುಷ ಸುಧಾಚಂದ್ರನ್‌: ಕೃತಕ ಕಾಲಿನಲ್ಲೇ 20-30 ಧಿಗಿಣ ತೆಗೆಯಬಲ್ಲ ವೇಣೂರಿನ ಮನೋಜ್‌

ಸಾರಾಂಶ

ಲಯಬದ್ಧ ಹಿಮ್ಮೇಳಕ್ಕೆ ಅಷ್ಟೇ ಆಕರ್ಷಕವಾಗಿ ಯಕ್ಷಗಾನದ ಪ್ರವೇಶ ನಾಟ್ಯ ನೀಡಿದ ಈತ, ನಿರಾಯಾಸವಾಗಿ ಧಿಗಿಣ ತೆಗೆದು ಪ್ರೇಕ್ಷಕರ ಹುಬ್ಬೇರುವಂತೆ ಮಾಡುತ್ತಾನೆ. ಸಂಭಾಷಣೆಯನ್ನೂ ನಿರರ್ಗಳವಾಗಿ ಒಪ್ಪಿಸುತ್ತಾನೆ. ಪುಂಡುವೇಷಧಾರಿಯಾಗಿ ಒಂದು ಬಾರಿಗೆ ನಿರಾಯಾಸವಾಗಿ 20ರಿಂದ 30 ಧಿಗಿಣ ತೆಗೆಯಬಲ್ಲ (ಹಾರುವುದು). ಇಂತಹ ವಿಡಿಯೋವೊಂದು ಕರಾವಳಿಯಲ್ಲಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಂಗಳೂರು(ಮೇ 15): ಲಯಬದ್ಧ ಹಿಮ್ಮೇಳಕ್ಕೆ ಅಷ್ಟೇ ಆಕರ್ಷಕವಾಗಿ ಯಕ್ಷಗಾನದ ಪ್ರವೇಶ ನಾಟ್ಯ ನೀಡಿದ ಈತ, ನಿರಾಯಾಸವಾಗಿ ಧಿಗಿಣ ತೆಗೆದು ಪ್ರೇಕ್ಷಕರ ಹುಬ್ಬೇರುವಂತೆ ಮಾಡುತ್ತಾನೆ. ಸಂಭಾಷಣೆಯನ್ನೂ ನಿರರ್ಗಳವಾಗಿ ಒಪ್ಪಿಸುತ್ತಾನೆ. ಪುಂಡುವೇಷಧಾರಿಯಾಗಿ ಒಂದು ಬಾರಿಗೆ ನಿರಾಯಾಸವಾಗಿ 20ರಿಂದ 30 ಧಿಗಿಣ ತೆಗೆಯಬಲ್ಲ (ಹಾರುವುದು). ಇಂತಹ ವಿಡಿಯೋವೊಂದು ಕರಾವಳಿಯಲ್ಲಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

"

ವಿಶೇಷ ಏನು ಗೊತ್ತಾ... ಈತನಿಗೆ ಎಡ ಕಾಲಿಲ್ಲ. ಕೃತಕ ಕಾಲು ಬಳಸಿ ಸಮರ್ಥವಾಗಿ ಯಕ್ಷಗಾನದ ಕುಣಿತ ಈತನ ತಾಕತ್ತು. ಈತ ಮನೋಜ್ ಕುಮಾರ್. 17ರ ಹರೆಯದ ಚಿಗುರು ಮೀಸೆಯ ಯುವಕ ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿ. ವೇಣೂರು ಸರ್ಕಾರಿ ಕಾಲೇಜಿನ ದ್ವಿತೀಯ ಪಿ.ಯು. ವಿದ್ಯಾರ್ಥಿ. 6ನೇ ಕ್ಲಾಸಿನಲ್ಲಿದ್ದಾಗ ಈತನ ಎಡಕಾಲು ಗ್ಯಾಂಗ್ರಿನ್ ಗೆ ತುತ್ತಾಗಿ ಕಾಲನ್ನು ಮೊಣಕಾಲಿನಿಂದ ಕೆಳಗೆ ಶಸ್ತ್ರಕ್ರಿಯೆ ಮೂಲಕ ಕತ್ತರಿಸಲಾಯಿತು.

ರಂಗಸ್ಥಳದಲ್ಲಿ ವೇಷ ಕುಣಿಸುತ್ತಿದ್ದ ಭಾಗವತ ಮನೆಯಲ್ಲಿ ಬಾಣಸಿಗ: ಎಲ್ಲವೂ ಲಾಕ್‌ಡೌನ್ ಮಹಿಮೆ

ಎಳವೆಯಿಂದಲೇ ಯಕ್ಷಗಾನವನ್ನು ಕನಸಾಗಿಸಿದ್ದ ಈತ ಎದೆಗುಂದಲಿಲ್ಲ. ಶಸ್ತ್ರಚಿಕಿತ್ಸೆಗೆ ಸಂದರ್ಭ ಆಸ್ಪತ್ರೆಯಲ್ಲಿದ್ದಾಗ ಈತ ಓದಿದ ಖ್ಯಾತ ನೃತ್ಯಗಾರ್ತಿ, ಕಾಲು ಕಳೆದುಕೊಂಡರೂ ಎದೆಗುಂದದೆ ನೃತ್ಯದಿಂದಲೇ ವಿಶ್ವವಿಖ್ಯಾತರಾದ ಸುಧಾ ಚಂದ್ರನ್ ಕುರಿತ ಪುಸ್ತಕದಿಂದ ಪ್ರೇರಿತನಾದ. ಕೃತಕ ಕಾಲು ಅಳವಡಿಸಿದ ಬಳಿಕ ಹೈಸ್ಕೂಲಿಗೆ ಬಂದಾಗ ಯೋಗ್ಯ ಗುರುಗಳ ಮುಖೇನ ಯಕ್ಷಗಾನ ಕಲಿಕೆ ಆರಂಭಿಸಿದ.

ತಾಳ ಹಿಡಿಯುತ್ತಿದ್ದ ಕೈಯಲ್ಲಿ ಈಗ ಗರಗಸ ವರಸೆ..!

ಐದು ವರ್ಷಗಳಿಂದ ಯಕ್ಷಗಾನದ ನಾಟ್ಯ ತರಬೇತಿ ಪಡೆಯುತ್ತಿರುವ ಮನೋಜ್ ಕಳೆದ ಎರಡು ವರ್ಷಗಳಿಂದ ಮೇಳಗಳಲ್ಲಿ ಸಾಂದರ್ಭಿಕ ಕಲಾವಿದನಾಗಿಯೂ ಪಾತ್ರ ನಿರ್ವಹಿಸಿದ್ದಾನೆ. ಸುಂಕದಕಟ್ಟೆ, ಬಪ್ಪನಾಡು, ಮಂಗಳಾದೇವಿ ಹಾಗೂ ಕಟೀಲು ಮೇಳಗಳಲ್ಲಿ ಹರಿಕೆ ರೂಪದಲ್ಲಿ ಹಾಗೂ ಬದಲಿ ಕಲಾವಿದನಾಗಿ ಸುಮಾರು 30ಕ್ಕೂ ಅಧಿಕ ಕಡೆ ಪ್ರದರ್ಶನ ನೀಡಿದ್ದಾನೆ. ನಿತ್ಯವೇಷ, ದೇವೇಂದ್ರಬಲ, ಯಕ್ಷರಾಜ ಪಿಂಗಳಾಕ್ಷ ಮತ್ತಿತರ ಪಾತ್ರಗಳನ್ನು ನಿರ್ವಹಿಸಿದ್ದಾನೆ. ಸಂಭಾಷಣೆ ಕಲಿಯುತ್ತಿದ್ದು, ವೇಷವನ್ನು ಸ್ವತಃ ತಾನೇ ಹಾಕಿಕೊಳ್ಳುತ್ತಿರುವುದು ಹೆಗ್ಗಳಿಕೆಯಾಗಿದೆ.

ಯಕ್ಷಗಾನ ವೇದಿಕೆಯಲ್ಲೇ ಮೈಕ್‌ನಲ್ಲೇ ಬಡಿದಾಡಿದ ಶುಂಭ-ರಕ್ತ​ಬೀಜರು!

ಹೈಸ್ಕೂಲಿನಲ್ಲಿ ಪ್ರಾಂಶುಪಾಲರಾಗಿದ್ದ ವೆಂಕಟೇಶ ತುಳುಪುಲೆ ಅವರು ಆರಂಭದ ಗುರುಗಳು, ಬಳಿಕ ರಮೇಶ್ ಶೆಟ್ಟಿ ಪಡ್ಡಂದಡ್ಕ, ಭಾಗವತಿಕೆಯಲ್ಲಿ ಪ್ರಮೋದ ಅಂಡಿಂಜೆ ತರಬೇತಿ ನೀಡಿದ್ದಾರೆ. ವೇಣೂರು ಕಲಾಕಾರ ಹವ್ಯಾಸಿ ಯಕ್ಷಗಾನ ಕಲಾಸಂಘದ ಸಕ್ರಿಯ ಸದಸ್ಯ, ಅಲ್ಲಿ ಪ್ರಭಾಕರ ಪ್ರಭು ಗುರುಗಳು. ಅಪ್ಪ-ಅಮ್ಮ ಹಾಗೂ ಇಬ್ಬರು ತಂಗಿಯರೊಂದಿಗೆ ಸುಮಾರು 11 ಮಂದಿ ಇರುವ ಕುಟುಂಬ ಈತನದ್ದು. ಆರ್ಥಿಕವಾಗಿ ಸಬಲರೇನಲ್ಲ. ಅಪ್ಪ ಊರಿನಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ಅಮ್ಮ ಗೃಹಿಣಿ. ಯಕ್ಷಗಾನವನ್ನೇ ವೃತ್ತಿಯಾಗಿಸಿ ಬದುಕು ಸಾಗಿಸಲು ಕಷ್ಟ. ಹವ್ಯಾಸಿಯಾಗಿಯೇ ಮುಂದುವರಿಯುತ್ತೇನೆ. ಬಣ್ಣದ ವೇಷಧಾರಿಯಾಗುವ ಹಂಬಲವೂ ಇದೆ ಎನ್ನುತ್ತಾನೆ.

ಕಾಲೇಜಿಗೂ, ಯಕ್ಷಗಾನ ಪ್ರದರ್ಶನಕ್ಕೂ ಬಸ್ಸಿನಲ್ಲೇ ಪ್ರಯಾಣ, ಊರಿನ ಕಲಾವಿದರಿದ್ದರೆ ಅವರ ಬೈಕಿನಲ್ಲಿ ಹೋಗುತ್ತಾನೆ. ಲಾಕ್ ಡೌನ್ ಅವಧಿಯಲ್ಲಿ ತನ್ನ ಮನೆ ಅಂಗಳದಲ್ಲಿ ಮನೋಜ್ ಯಕ್ಷಗಾನ ಪ್ರಾಕ್ಟೀಸ್ ಮಾಡುವ ವಿಡಿಯೋವನ್ನು ಶ್ರೀ ಸುಂಕದಕಟ್ಟೆ ಮೇಳದ ಕಲಾವಿದ ಜಯೇಂದ್ರ ಕುಮಾಲ್ ಜಾಲತಾಣಗಳಲ್ಲಿ ಹಂಚಿಕೊಂಡದ್ದು ಈಗ ವೈರಲ್ ಆಗುತ್ತಿದೆ.

ಕೃತಕ ಕಾಲಿನಿಂದಲೇ ನೃತ್ಯ ಮಾಡಿ ಜನಮನ ಗೆದ್ದ ಸುಧಾಚಂದ್ರನ್

ಸುಧಾ ಚಂದ್ರನ್ ಭಾರತೀಯ ಚಲನಚಿತ್ರ ಮತ್ತು ಕಿರುತರೆ ನಟಿ ಹಾಗೂ ಭರತನಾಟ್ಯ ನೃತ್ಯ ಕಲಾವಿದೆ . ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ 1981 ಮೇ 2ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ತಮಿಳುನಾಡಿನ ತಿರುಚಿರಾಪಲ್ಲಿ ಬಳಿ ರಸ್ತೆ ಅಪಘಾತದಿಂದಾಗಿ ತನ್ನ ಕಾಲನ್ನು ಕಳೆದುಕೊಂಡರು. ಮೊದಲಿಗೆ ಸುಧಾ ಬೇಸತ್ತರು . ನಂತರ ಅಭ್ಯಾಸವಾಯಿತು.

ದಿನನಿತ್ಯ ಜೀವನದಲ್ಲಿ ಹೊಂದುಕೊಂಡರು. ದಿನ ಕಳೆದಂತೆ ಆತ್ಮವಿಶ್ವಾಸವು ಬೆಳೆಯಿತು. ಮುಂದಿನ ಓದಿನಲ್ಲಿ ಆಸಕ್ತಿವಹಿಸಿದರು. ಅವರ ತಂದೆ ಆಕೆಗೆ ಬೆಂಬಲವಾಗಿದ್ದರು . ವೀಲ್ ಚೇರನ್ನು ಉಪಯೋಗಿಸಲು ಸೂಚಿಸಿದರು. ಇವರು ಅದಕ್ಕೆ ನಿರಾಕರಿಸಿದರು. ಮರಗಾಲಿನಲ್ಲಿಯೇ ನಡೆಯಲು ಪ್ರಾರಂಭಿಸಿದರು .6 ತಿಂಗಳ ನಂತರ ಸುಧಾ ಚಂದ್ರನ್ ರವರು ಮ್ಯಾಗಜಿನ್ ಓದುತ್ತಿರುವಾಗ ಡಾಕ್ಟರ್ ಸೆತ್ತಿ ಜೈಪುರ ಅವರ ಕೃತಕ ಕಾಲಿನ ಬಗ್ಗೆ ತಿಳಿದ ಸುಧಾ ಚಂದ್ರನ್ ಅವರ ಕಲಾ ಲೋಕಕ್ಕೆ ಬೆಳಕು ಚೆಲ್ಲಿದಂತಾಯಿತು. ನಂತರ ಕೃತಕ ಕಾಲಿನ ಸಹಾಯದಿಂದ ಅವರು ನಡೆಯಲು ಪ್ರಾರಂಭಿಸಿದರು.

ಫೋನಲ್ಲಿ ನೀವು ಕೇಳೋ ಕೊರೋನಾ ಜಾಗೃತಿ ಧ್ವನಿಯ ಒಡತಿಯರು ಇವರೇ ನೋಡಿ..!

ನೃತ್ಯಗಾತಿಯಾಗಿ ವೃತ್ತಿ ಬದುಕು ಮುಂದುವರಿಸಿದರು. ಸುಧಾ ಅವರು ಕಾಹಿನ್ ಕಿಸ್ಸಿ ರೋಜ್ ನಲ್ಲಿ ರಾಮೋಲಾ ಸಿಕಂದ್ , ನಾಗಿನ್ 1ಮತ್ತು ನಾಗಿನ್ 2 ನಲ್ಲಿ ಯಾಮಿನಿ ಸಿಂಗ್ ರಹೇಜಾ , ದೈವಂ ತಂದ ವೀಡು ನಲ್ಲಿ ಚಿತ್ರಾದೇವಿ ಹಮ್ ಪಾಂಚ್ ನಲ್ಲಿ ಆನಂದ ನ ಮೊದಲನೆಯ ಹೆಂಡತಿಯಾಗಿ , ಪರ್ದೇಸ್ ಮೆ ಹೆ ಮೇರಾ ದಿಲ್ ನಲ್ಲಿ ಹರ್ಜೀತ್ ಖುರಾನ , ಯೆ ಹೆ ಮೊಹೋಬತೆ ನಲ್ಲಿ ಸುಧಾ ಶ್ರೀವಾತ್ಸವ್ ಎಂಬ ಪಾತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. ಅವರು ಮಯೂರಿ ಎಂಬ ತೆಲುಗು ಚಲನಚಿತ್ರದಿಂದ ತನ್ನ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವನ್ನು ತಮಿಳು , ಮಲೆಯಾಳಂ ಹಾಗೂ ಹಿಂದಿಯಲ್ಲಿ ನಾಚೆ ಮಯೂರಿ ಎಂಬ ಹೆಸರಿನಲ್ಲಿ ಡಬ್ ಮಾಡಲಾಯಿತು . ಈ ಚಿತ್ರದಲ್ಲಿ ಅಭಿನಯಿಸಿದ ಇವರಿಗೆ 1986 ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷವಾದ ಜ್ಯೂರಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಮನೋಜ್ ಕುಮಾರ್‌ ಅವರಿಗೆ ಕರೆ ಮಾಡಿ ನೀವೂ ಅಭಿನಂದಿಸಿ, ಮೊಬೈಲ್ ಸಂಖ್ಯೆ 73385 94927.

-ಕೃಷ್ಣಮೋಹನ ತಲೆಂಗಳ

PREV
click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?