
ಮೈಸೂರು (ಜ.30) : ಮೈಸೂರಿನ ಹಾಲಾಳು ಗ್ರಾಮದ ಬಳಿ ನಿರ್ಮಿಸಲಾಗಿರುವ ದಿವಂಗತ ಸಾಹಸ ಸಿಂಹ ವಿಷ್ಣುವರ್ಧನ ಅವರ ಸ್ಮಾರಕದ ಬಳಿ ಯಾವುದೇ ಮೂಲಭೂತ ಸೌಲಭ್ಯ ಇಲ್ಲದ್ದಕ್ಕೆ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಭಾನುವಾರ ವಿಷ್ಣು ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದ್ದರು. ವಿಷ್ಣು ಅಭಿಮಾನಿಗಳಿಂದ ಅದ್ಧೂರಿಯಾಗಿ ಮೆರವಣಿಗೆ ನಡೆದಿತ್ತು. ಆದರೆ ಕಾರ್ಯಕ್ರಮದಲ್ಲಿ ಜಗಮಗಿಸಿದ್ದಷ್ಟೇ ಬಂತು. ರಾತ್ರಿಯಾಗುತ್ತಿದ್ದಂತೆ ಸ್ಮಾರಕದ ಸುತ್ತಮುತ್ತ ಬೆಳಕಿನ ವ್ಯವಸ್ಥೆ ಇಲ್ಲ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಕಾಟಾಚಾರಕ್ಕೆ ಸ್ಮಾರಕ ನಿರ್ಮಾಣ ಮಾಡಿದೆಯೆಂದು ಸರ್ಕಾರದ ವಿರುದ್ಧ ಕೋಪಗೊಂಡಿರುವ ಅಭಿಮಾನಿಗಳು.
ವಿಷ್ಣು ಸ್ಮಾರಕ ಲೋಕಾರ್ಪಣೆ: ಅಭಿಮಾನಿಗಳಿಂದ ಅದ್ದೂರಿ ಮೆರವಣಿಗೆ
ಬೆಳಗ್ಗೆಯಿಂದ ಸಂಜೆಯವರೆಗೂ ಎಲ್ಲ ರೀತಿಯ ಆಡಂಬರ ಇತ್ತು. ಆದರೆ ರಾತ್ರಿಯಾಗುತ್ತಿದ್ಧಂತೆ ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳದಲ್ಲಿ ಎಲ್ಲೆಡೆ ಕತ್ತಲು ಆವರಿಸಿದೆ. ಸಂಜೆ ಬಳಿಕ ವಿಷ್ಣುವರ್ಧನ್ ಸ್ಮಾರಕ ವೀಕ್ಷಣೆಗೆ ಬಂದ ನೂರಾರು ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಸ್ಮಾರಕ ವೀಕ್ಷಿಸಲು ಬಂದವರಿಗೆ ಕತ್ತಲಲ್ಲಿ ಸ್ಮಾರಕ ಹುಡುಕುವಂತಾಯಿತು.
ಸರ್ಕಾರ ಕಾಟಾಚಾರಕ್ಕೆ ಕನ್ನಡದ ಮೇರು ನಟನ ಸ್ಮಾರಕ ಉದ್ಘಾಟನೆ ಮಾಡಿದೆಯಾ? ಎಂದು ವಿಷ್ಣುವರ್ಧನ್ ಅವರ ಅಭಿಮಾನಿಗಳ ಪ್ರಶ್ನಿಸಿದ್ದಾರೆ. ಶೀಘ್ರ ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದ್ದಾರೆ.