ಶ್ರೀ ತಿಪ್ಪೇರುದ್ರಸ್ವಾಮಿ ತಪ್ಪಲಿನಲ್ಲಿರುವ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ರಂಗಸಮುದ್ರ ಗ್ರಾಪಂ ವ್ಯಾಪ್ತಿಯ ಓಬಳಾಪುರ ಹಾಗೂ ಕಾರನಾಗಮಹಟ್ಟಿಗ್ರಾಮದಲ್ಲಿ ಫೆ.6ರಿಂದ 10ರವರೆಗೆ ಹಮ್ಮಿಕೊಂಡಿರುವ ದೊಡ್ಡ ಜಾತ್ರೆಗೆ ಸಕಲ ಸಿದ್ಧತೆ ಕೈಗೊಂಡಿದ್ದು, ಕುರಿ, ಮೇಕೆ, ಕೋಳಿ ಬೇಟೆ ಆರತಿ ದೀಪಗಳ ಉತ್ಸವಕ್ಕೆ ಗ್ರಾಮಸ್ಥರು ಸಜ್ಜಾಗಿದ್ದಾರೆ.
ನಾಗೇಂದ್ರ
ಪಾವಗಡ : ಶ್ರೀ ತಿಪ್ಪೇರುದ್ರಸ್ವಾಮಿ ತಪ್ಪಲಿನಲ್ಲಿರುವ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ರಂಗಸಮುದ್ರ ಗ್ರಾಪಂ ವ್ಯಾಪ್ತಿಯ ಓಬಳಾಪುರ ಹಾಗೂ ಕಾರನಾಗಮಹಟ್ಟಿಗ್ರಾಮದಲ್ಲಿ ಫೆ.6ರಿಂದ 10ರವರೆಗೆ ಹಮ್ಮಿಕೊಂಡಿರುವ ದೊಡ್ಡ ಜಾತ್ರೆಗೆ ಸಕಲ ಸಿದ್ಧತೆ ಕೈಗೊಂಡಿದ್ದು, ಕುರಿ, ಮೇಕೆ, ಕೋಳಿ ಬೇಟೆ ಆರತಿ ದೀಪಗಳ ಉತ್ಸವಕ್ಕೆ ಗ್ರಾಮಸ್ಥರು ಸಜ್ಜಾಗಿದ್ದಾರೆ.
50 ವರ್ಷಗಳ ಬಳಿಕ ಐತಿಹಾಸಿಕ ಹಿನ್ನೆಲೆಯ ಗ್ರಾಮ ದೇವತೆ ರಸ್ತೆ ಮಾರೆಮ್ಮ, ಆಂಜನೇಯಸ್ವಾಮಿ, ಬಸವಣ್ಣ ದೇವರ ಉತ್ಸವಕ್ಕೆ ಓಬಳಾಪುರ ಹಾಗೂ ಕಾರನಾನಹಟ್ಟಿಗ್ರಾಮಸ್ಥರು ಸಜ್ಜಾಗಿದ್ದಾರೆ. ತಾಲೂಕಿನ ರಂಗಸಮುದ್ರ ಗ್ರಾಮದ ಶ್ರೀ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಮಡಿಲು ಪೂರ್ವಾಭಿಮುಖದ ಓಬಳಾಪುರದಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚು ಕುಟುಂಬಗಳು ವಾಸವಾಗಿವೆ. ತೆಂಗು, ಶೇಂಗಾ, ಹೂವು, ತರಕಾರಿ ಬೆಳೆಯುವ ತೋಟಗಾರಿಕೆ ಬೆಳೆಗಳ ವ್ಯಾಪಾರ ವಹಿವಾಟಿನ ವಾಣಿಜ್ಯ ಗ್ರಾಮವಾಗಿದೆ. ಹಸು,ಕುರಿ, ಮೇಕೆ, ಎಮ್ಮೆ ಸಾಕಾಣಿಕೆಯ ಕೃಷಿ ಜೀವನ ಕಟ್ಟಿಕೊಂಡಿದ್ದು, ಗ್ರಾಮದಲ್ಲಿ ವಿದ್ಯಾವಂತ ಸಂಖ್ಯೆ ಹೆಚ್ಚಿದ್ದರೂ ಸರ್ಕಾರಿ ಹುದ್ದೆಗಳಿಂದ ವಂಚಿತರಾಗಿ ವ್ಯವಸಾಯಕ್ಕೆ ಹೆಚ್ಚು ಆದ್ಯತೆ ನೀಡಿ ತೃಪ್ತಿದಾಯಕ ಬದಕು ರೂಪಿಸಿಕೊಂಡಿದ್ದಾರೆ.
ಕಳೆದ 25 ವರ್ಷಗಳಿಂದ ಮಳೆಯಿಲ್ಲದೇ ಅಂತರ್ಜಲ ಕುಸಿತದಿಂದ ಬಹುತೇಕ ಕೊಳವೆ ಬಾವಿಗಳು ಬತ್ತಿಹೋಗಿದ್ದವು. ಹೊಸ ಕೊಳವೆ ಬಾವಿಗಳ ಅಲ್ಪ ಸ್ವಲ್ಪ ನೀರಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಸಂರಕ್ಷಿಸಿಕೊಂಡಿದ್ದರು. ಬೆಳೆ ನಷ್ಟದಿಂದ ಕಂಗಾಲಾದ ಗ್ರಾಮಸ್ಥರು ಗ್ರಾಮ ದೇವತೆಯ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ 2022ರಲ್ಲಿ ಬಿದ್ದ ಭಾರಿ ಪ್ರಮಾಣದ ಮಳೆಯಿಂದ ಕೊಳವೆ ಬಾವಿಗಳಲ್ಲಿ ಹೆಚ್ಚು ನೀರು ಬರುತ್ತಿದ್ದು, ತೋಟಗಾರಿಕೆ ಬೆಳೆಗಳು ಹಸಿರಾಗುತ್ತಿವೆ.
ಶ್ರೀ ತಿಪ್ಪೇರುದ್ರಸ್ವಾಮಿ ಶಾಪ:
ಕೆರೆಕಟ್ಟೆನಿರ್ಮಾಣ ವೇಳೆ ಗ್ರಾಮಸ್ಥರು ವಿರೋಧಿಸಿ ಕಿರುಕುಳ ನೀಡಿದ್ದ ಹಿನ್ನೆಲೆಯಲ್ಲಿ ಹಗಲುಬಂದ ನೀರು ಹಗಲಿಗೆ, ಇರಳು ಬಂದ ನೀರು ಇರಳಿಗೆ ಎಂದು ಶ್ರೀ ತಿಪ್ಪೇರುದ್ರಸ್ವಾಮಿ ಶಾಪವಿತ್ತ ಹಿನ್ನಲೆಯಲ್ಲಿ ಅನೇಕ ವರ್ಷಗಳಿಂದ ರಂಗಸಮುದ್ರ ಕೆರೆ ತುಂಬಿರಲಿಲ್ಲ. ಶಾಪದಿಂದ ಮುಕ್ತಿಪಡೆಯಲು ಕೆರೆ ದಡದ ಮೇಲೆ ರಂಗಸಮುದ್ರ ಗ್ರಾಮಸ್ಥರು ಶ್ರೀ ತಿಪ್ಪೇರುದ್ರಸ್ವಾಮಿ ದೇವಸ್ಥಾನ ನಿರ್ಮಿಸಿದ್ದು ಮಳೆಯಿಂದ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಕೆರೆ ತಪ್ಪಲಿನಲ್ಲಿರುವ ಓಬಳಾಪುರ ರ ನೀರಾವರಿ ಬೆಳೆಗಳಿಗೆ ಹೆಚ್ಚು ಸಹಕಾರಿಯಾಗಿದೆ. ಸತತವಾಗಿ ದೊಡ್ಡ ಹಳ್ಳ ಹರಿಯುತ್ತಿದ್ದು ಇನ್ನೂ ಮೂರು ವರ್ಷಗಳ ಕಾಲ ನೀರಾವರಿ ಬೆಳೆಗೆ ಅಡ್ಡಿಯಿಲ್ಲ. ಈಗಾಗಲೇ ರೈತಾಪಿ ಬೆಳೆಗಳು ಕಂಗೊಳಿಸುತ್ತಿದ್ದು, ಇದೆಲ್ಲಾ ಗ್ರಾಮದೇವತೆ ಮಾರೆಮ್ಮ ದೇವಿ ಕೃಪೆ ಎಂದು ಭಾವಿಸಿದ್ದು ಗ್ರಾಮದ ಶಾಂತಿಕೋರಿ ಫೆಬ್ರವರಿ 6ರಿಂದ 10ರವರೆಗೆ ಐದು ದಿನಗಳ ಕಾಲ ಮಾರೆಮ್ಮದೇವಿಯ ಭರ್ಜರಿ ಭೇಟೆ ಉತ್ಸವ ಹಮ್ಮಿಕೊಳ್ಳಲಾಗಿದೆ. ಫೆ.6ರಸಂಜೆ ಶ್ರೀ ತಿಪ್ಪೇರುದ್ರಸ್ವಾಮಿ, ಶ್ರೀ ಆಂಜನೇಯ, ಬಸವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದು ಫೆ.7ಕ್ಕೆ ಗ್ರಾಮ ದೇವತೆಗೆ ಕೋಣ ಕಡಿದು ಊರೆಲ್ಲಾ ಶಾಂತಿ ಮಾಡಲಿದ್ದಾರೆ. ಬಳಿಕ ಕುರಿ, ಮೇಕೆ, ಕೋಳಿ ಬೇಟೆ ಭರಾಟೆ ಇರುತ್ತದೆ. ಮನೆಗೆರಡು ಮೂರು ಕುರಿಮೇಕೆ ಹರಿಕೆ ತೀರಿಸಲು ಉತ್ಸವಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.
ನಿಯಮಾನುಸಾರ ಗ್ರಾಮ ದೇವತೆ ಉತ್ಸವಕ್ಕೆ ಅಡ್ಡಿಯಿಲ್ಲ ಎಂದು ವೈ.ಎನ್.ಹೊಸಕೋಟೆ ಎಎಸ್‌ಐ ಹನುಮನಾಯಕ್ ತಿಳಿಸಿದ್ದಾರೆ.
ಮುಖಂಡರಾದ ಗೋವಿಂದಪ್ಪ, ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ,ರಾಮದಾಸ್, ಗ್ರಾಪಂ ಅಧ್ಯಕ್ಷ ಸುರೇಂದ್ರ, ಸದಸ್ಯರಾದ ಒ.ಓಬಳಪತಿ, ಓಬಯ್ಯ, ಡಿಸ್ ಮಂಜು, ಮದಕರಿ ಭಾಗ್ಯಮ್ಮ ಗ್ರಾಮಸ್ಥರ ಸಹಕಾರದ ಮೇರೆಗೆ ಅದ್ಧೂರಿ ಉತ್ಸವಕ್ಕೆ ಸಜ್ಜಾಗಿದ್ದು ಶಾಸಕ, ಮಾಜಿ ಶಾಸಕ ಇತರೆ ಜನಪ್ರತಿನಿಧಿಗಳು ಹಾಗೂ ಪಕ್ಷಾತೀತಾವಾಗಿ ಗಣ್ಯರನ್ನು ಆಹ್ವಾನಿಸಿದ್ದೇವೆ. ಫೆ.6ರಂದು ಗ್ರಾಮ ದೇವತೆಯ ಜಲ್ದಿ ಉತ್ಸವಕ್ಕೆ ಚಾಲನೆ ನೀಡಲಿದ್ದು, ಆಂಜನೇಯಸ್ವಾಮಿಗೆ ಆರುತಿ ದೀಪ, ಫೆ.7 ಮತ್ತು 8ಕ್ಕೆ ಗ್ರಾಮದೇವತೆಗೆ ಬೇಟೆ ಕಾರ್ಯಕ್ರಮವಿದೆ. ರಾತ್ರಿ ಗ್ರಾಮದ ಶಾಂತಿ ಕಾರ್ಯಕ್ರಮ ಬಳಿಕ ಫೆ.9ಕ್ಕೆ ವೇಷಭೂಷಣ, ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಫೆ.10ಕ್ಕೆ ಗ್ರಾಮದೇವತೆಯನ್ನು ಗುಡಿಗೆ ಸೇರಿಸುವ ಕಾರ್ಯಕ್ರಮ ನಡೆಯಲಿದೆ. ಗ್ರಾಮ ದೇವತೆ ಉತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಳಿರು ತೋರಣ, ವಿದ್ಯುತ್ ದೀಪ ಅಳವಡಿಕೆ, ಶುದ್ಧ ಕುಡಿವ ನೀರು ಹಾಗೂ ಇತರೆ ಅಗತ್ಯ ಸೌಲಭ್ಯ ಕೈಗೊಂಡಿದ್ದು, ತಾಲೂಕು ಆಡಳಿತ ಆದೇಶ ಪಾಲಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ. ಉತ್ಸವ ಯಶಸ್ವಿಯತ್ತ ಸಾಗಬೇಕು, ಶಾಂತರೀತಿ ಸಹಕಾರಕ್ಕೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿರುವುದಾಗಿ ಗ್ರಾಪಂ ಮಾಜಿ ಅಧ್ಯಕ್ಷ ಪಿ.ರಾಮಮೂರ್ತಿ ತಿಳಿಸಿದ್ದಾರೆ.
ಓಬಳಾಪುರದಲ್ಲಿ ಗ್ರಾಮದಲ್ಲಿ ದೇವರ ಉತ್ಸವ ಹಮ್ಮಿಕೊಂಡಿದ್ದು ಅನುಮತಿ ಕೋರಿದ್ದಾರೆ. ಕಾನೂನಿನ್ವಯ ಆಚರಣೆಗೆ ಸೂಚಿಸಲಾಗಿದೆ.
ಪಿಎಸ್‌ಐ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆ
ಮಳೆ ಬೆಳೆಗೆ ಶಾಂತಿ ಕೋರಿ ಹಿರಿಯರ ಅನುಸರಿಸಿದ ಸಂಪ್ರದಾಯದಂತೆ ನಿಯಮಾನುಸಾರ ಗ್ರಾಮದಲ್ಲಿ ದೇವತೆ ಉತ್ಸವವಿದೆ. ಇದರ ಜತೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಎಸ್.ಸುರೇಂದ್ರ ಗ್ರಾಪಂ ಅಧ್ಯಕ್ಷ
ಸಂತೃಷ್ಟಕಾಲ ಬಂದೊದಗಿದ್ದು, 50 ವರ್ಷಗಳ ಬಳಿಕ ಗ್ರಾಮದಲ್ಲಿ ಮಾರೆಮ್ಮ ದೇವತೆ ಉತ್ಸವ ಹಮ್ಮಿಕೊಳ್ಳಲಾಗಿದೆ. ಹಿರಿಯರ ಕಾಲದಲ್ಲಿ ನಡೆದ ರೀತಿಯಲ್ಲಿ ಎಲ್ಲರ ಸಮ್ಮುಖದಲ್ಲಿ ಶಾಂತಿ ರೀತಿಯ ಆಚರಣೆಗೆ ಗ್ರಾಮಸ್ಥರು ಸಜ್ಜಾಗಿದ್ದಾರೆ.
ಸತ್ಯನಾರಾಯಣರೆಡ್ಡಿ ಹಿರಿಯ ಮುಖಂಡ