Karwar: ಹೊಲಗಳಿಗಾಯ್ತು, ಇದೀಗ ಗ್ರಾಮಗಳಿಗೆ ಹುಳದ ಕಾಟ: ಆತಂಕದಲ್ಲಿರುವ ಗ್ರಾಮಸ್ಥರು!

By Govindaraj S  |  First Published May 29, 2022, 1:35 AM IST

ಆ ಗ್ರಾಮಗಳ ಜನರು ನೆಮ್ಮದಿಯಿಂದ ಜೀವನ‌ ನಡೆಸುತ್ತಿದ್ರು. ಆದ್ರೆ, ಇದ್ದಕ್ಕಿದ್ದಂತೇ ಆ ಗ್ರಾಮಗಳಲ್ಲಿ ವಿಚಿತ್ರ ಹುಳುಗಳ ಕಾಟ ಆರಂಭವಾಗಿದೆ. ಏಕಾಏಕಿ ಆ ಗ್ರಾಮಗಳಿಗೆ ಲಗ್ಗೆಯಿಟ್ಟ  ಹುಳುಗಳಿಂದಾಗಿ ಜನರ ನೆಮ್ಮದಿಯೇ ಹಾಳಾಗಿದೆ.


ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಮೇ.29): ಆ ಗ್ರಾಮಗಳ ಜನರು ನೆಮ್ಮದಿಯಿಂದ ಜೀವನ‌ ನಡೆಸುತ್ತಿದ್ರು. ಆದ್ರೆ, ಇದ್ದಕ್ಕಿದ್ದಂತೇ ಆ ಗ್ರಾಮಗಳಲ್ಲಿ ವಿಚಿತ್ರ ಹುಳುಗಳ ಕಾಟ ಆರಂಭವಾಗಿದೆ. ಏಕಾಏಕಿ ಆ ಗ್ರಾಮಗಳಿಗೆ ಲಗ್ಗೆಯಿಟ್ಟ  ಹುಳುಗಳಿಂದಾಗಿ ಜನರ ನೆಮ್ಮದಿಯೇ ಹಾಳಾಗಿದೆ. ರಾಶಿ ರಾಶಿಯಾಗಿ ಬರುತ್ತಿರುವ ಹುಳುಗಳು ತೆರೆದ ಬಾವಿಯಲ್ಲಿ, ರಸ್ತೆಯಲ್ಲಿ, ಮನೆಗಳೊಳಗೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಆತಂಕಗೊಂಡ ಜನರು ಮುಂದೇನು ? ಅಂತಾ ಪ್ರಶ್ನೆ ಎದುರಿಸುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

Tap to resize

Latest Videos

ತೆರೆದ ಬಾವಿಗಳಲ್ಲಿ, ರಸ್ತೆಗಳಲ್ಲಿ, ಮನೆಗಳ ಕಾಂಪೌಂಡ್‌ಗಳೊಳಗೆ ಹರಿದಾಡುತ್ತಿರುವ ಈ ವಿಚಿತ್ರ ಹುಳುಗಳು ಜನರ ನಿದ್ದೆಗೆಡಿಸಿವೆ. ಕಳೆದ ನಾಲ್ಕು ದಿನಗಳಿಂದ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಈ ಹುಳುಗಳು ಜನರಲ್ಲಿ ಆತಂಕ ಮೂಡಿಸಿದ್ದು, ಮುಂದೇನು? ಅನ್ನೋ ಪ್ರಶ್ನೆ ಮೂಡಿಸಿದೆ. ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಆಮದಳ್ಳಿ, ಹೊಸಗದ್ದೆ, ಮಾದೆವಾಡ, ಐಯನ್ ಭಾಗ್ ಮುಂತಾದ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ವಿಚಿತ್ರ ಹುಳುಗಳು ಜನರಲ್ಲಿ ಯಕ್ಷ ಪ್ರಶ್ನೆ ಮೂಡಿಸಿದೆ. ಜನರು ಹೇಳೋ ಪ್ರಕಾರ, ಇಂತಹ ಹುಳುಗಳನ್ನು ನಾವು ಜೀವಮಾನದಲ್ಲಿ ಈ ಮೊದಲು ನೋಡಿದ್ದೆ ಇಲ್ಲ. 

Karwar: ರೈತರಿಗೆ 'ಸೈನಿಕ' ಹುಳಗಳ ಕಾಟ: ಸಂಕಷ್ಟದಲ್ಲಿ ಅನ್ನದಾತ..!

ಅದರಲ್ಲೂ, ಇಷ್ಟು ಪ್ರಮಾಣದ ರಾಶಿ ರಾಶಿ ಹುಳಗಳನ್ನು ನಾವು ಎಂದೂ ಕಂಡಿಲ್ಲ. ಇವುಗಳನ್ನು ನೋಡಿದರೆ ಭಯವಾಗುತ್ತೆ. ಕುಡಿಯುವುದಕ್ಕೂ ನಮಗೆ ನೀರಿಲ್ಲ. ಎಲ್ಲಾ ಬಾವಿಗಳಲ್ಲಿ ಹುಳುಗಳು ಬಿದ್ದಿವೆ. ಬಾವಿಯಿಂದ ನೀರು ತೆಗೆದರೆ ಬಿಂದಿಗೆ ತುಂಬಾ ಹುಳಗಳು ಇರುತ್ತೆ. ಹೀಗಾದ್ರೆ ನಾವು ಜೀವನ ಮಾಡೋದಾದ್ರೂ ಹೇಗೆ? ಈ ಹುಳಗಳಿಂದ ಎಲ್ಲಿ ನಮಗೆ ರೋಗ ರುಜಿನಗಳು ಅಂಟಿಕೊಳ್ಳುತ್ತವೋ ಅಂತಾ ಭೀತಿ ಶುರುವಾಗಿದೆ. ರಾಶಿ ರಾಶಿ ಹುಳುಗಳು ಎಲ್ಲಿಂದ ಬರುತ್ತಿವೆ ಅಂತಾ ಗೊತ್ತಿಲ್ಲ. ನಮಗಂತೂ ಸಿಕ್ಕಾಪಟ್ಟೆ ಹೆದರಿಕೆ ಶುರುವಾಗಿದೆ ಅಂತಾರೆ ಗ್ರಾಮಸ್ಥರು. 

ಮನೆಗಳ ಕಾಂಪೌಂಡ್, ತೆರೆದ ಬಾವಿಗಳಲ್ಲೂ ಈ ಹುಳುಗಳು ವ್ಯಾಪಿಸಿದ್ದು, ಕುಡಿಯೋ ನೀರಿಗೂ ಗ್ರಾಮದಲ್ಲಿ ತಾತ್ವಾರ ಉಂಟಾಗಿದೆ. ಕಳೆದ ನಾಲ್ಕು ದಿನಗಳಿಂದ ಈ ಹುಳುಗಳಿಂದಾಗಿ ಗ್ರಾಮಸ್ಥರಂತೂ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಯಾವುದೇ ಕೃಷಿ  ಚಟುವಟಿಕೆಗಳು ನಡೆಯದ ಪ್ರದೇಶಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಈ ಹುಳುಗಳು ತುಂಬಿರಲು ಕಾರಣ ಏನು ಎಂಬುದೇ ಗ್ರಾಮಸ್ಥರಿಗೆ ಯಕ್ಷ ಪ್ರಶ್ನೆಯಾಗಿದೆ. ಹೆಜ್ಜೆ ಇಟ್ಟಲೆಲ್ಲಾ ಹುಳುಗಳ ರಾಶಿಯೇ ಸಿಗುತ್ತಿರುವುದರಿಂದ ಜನರು ಊಟೋಪಚಾರಕ್ಕೂ ಅಸಹ್ಯ ಪಡುವಂತಹ ಸ್ಥಿತಿ ಉಂಟಾಗಿದೆ. ಸಣ್ಣ ಮಕ್ಕಳು ಹೊರಗೆ ಓಡಾಡುವುದಕ್ಕೆ ಭಯಪಡುತ್ತಿದ್ದು, ಕೆಲವು ಮಕ್ಕಳಂತೂ ಶಾಲೆಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. 

CRZ ನಿಯಮ ಉಲ್ಲಂಘಿಸಿ ಪಾರ್ಕ್ ನಿರ್ಮಾಣ: ಕಾರವಾರ ನಗರಸಭೆ ಮೊಂಡುತನಕ್ಕೆ ಬೇಸತ್ತ ಜನತೆ..!

ಈ ವಿಚಿತ್ರ ಹುಳುಗಳು ಜನರಿಗೆ ಭಾರೀ ಸಮಸ್ಯೆಯನ್ನು ಉಂಟು ಮಾಡಿರೋದ್ರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಈ ಸಂಕಷ್ಟ ಪರಿಹರಿಸಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಹೊನ್ನಾವರ ಭಾಗದಲ್ಲಿ ಹೊಲಗಳಿಗೆ ಲಗ್ಗೆ ಇಟ್ಟು ರೈತರನ್ನ ಕಾಡುತ್ತಿದ್ದ ಹುಳುಗಳು ಇದೀಗ ಕಾರವಾರ ಭಾಗದಲ್ಲಿ ಊರಿಗೇ ಕಾಲಿಟ್ಟಿವೆ.. ಹೀಗಾಗಿ ಜನ ಆತಂಕಗೊಂಡಿರುವ ಜನರು ಇದರಿಂದ ತಮಗೆ ಕಾಯಿಲೆ ಬರುತ್ತೊ ಅಂತಾ ಭೀತಿಗೊಳಗಾಗಿದ್ದಾರೆ. ಈ ಕಾರಣದಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. 

click me!