ಶನಿವಾರ ಬೆಳಗಿನ ಜಾವ ಸುರಿದ ಬಿರುಗಾಳಿ ಮಿಶ್ರಿತ ಆಲಿಕಲ್ಲು ಮಳೆಗೆ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಬೆಳೆ ನಷ್ಟವಾದ ವರದಿಯಾಗಿದೆ.
ಶಹಾಪುರ (ಮಾ.19) : ಶನಿವಾರ ಬೆಳಗಿನ ಜಾವ ಸುರಿದ ಬಿರುಗಾಳಿ ಮಿಶ್ರಿತ ಆಲಿಕಲ್ಲು ಮಳೆಗೆ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಬೆಳೆ ನಷ್ಟವಾದ ವರದಿಯಾಗಿದೆ.
ತಾಲೂಕಿನ ಹಳಿಸಗರ, ಬೆನಕನಹಳ್ಳಿ, ಕನ್ಯಾಕೋಳೂರು, ತಿಪ್ಪನಹಳ್ಳಿ ದೋರನಹಳ್ಳಿ ಕೆಲ ಭಾಗದ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಅಕಾಲಿಕ ಆಲಿಕಲ್ಲು ಮಳೆ(Untimely rain)ಯಿಂದ ಭಾರೀ ಬೆಳೆ ನಷ್ಟ(Crop loss)ವಾಗಿದೆ. ತೋಟಗಾರಿಕೆ ಬೆಳೆಗಾರರ ಮೆಣಸಿನಕಾಯಿ, ಪಪ್ಪಾಯಿ, ದಾಳಿಂಬೆ, ಟೊಮೆಟೊ, ಮಾವು ಸೇರಿದಂತೆ ವಿವಿಧ ಬೆಳೆಗಳು ಹಾಗೂ ಸಜ್ಜೆ, ಭತ್ತ ಬಾರಿ ಮಳೆಯಿಂದಾಗಿ ತೀವ್ರ ಹೊಡೆತಬಿದ್ದಿದ್ದು, ಸುಮಾರು 600 ರಿಂದ 800 ಎಕರೆಗೂ ಅಧಿಕ ಬೆಳೆ ಹಾನಿಯಾಗಿದೆ. ಇದರಲ್ಲಿ ಭತ್ತ, ಸಜ್ಜೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. 70 ರಿಂದ 80 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
undefined
ಚಿತ್ತಾಪುರಕ್ಕೂ ಕಾಲಿಟ್ಟ ಗಿಫ್ಟ್ ರಾಜಕಾರಣ: ಕುಕ್ಕರ್ ಹಂಚಿದ ಬಿಜೆಪಿ ಎಂಎಲ್‌ಸಿ ವಲ್ಯಾಪುರೆ
ಬಿತ್ತನೆ ವಿವರ:
ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ 4 ಸಾವಿರ ಎಕರೆ, ಪಪ್ಪಾಯಿ 700 ಎಕರೆ, ಟೊಮೆಟೊ 400 ಎಕರೆ, ದಾಳಿಂಬೆ 500 ಎಕರೆ, ಕಲ್ಲಂಗಡಿ 2000 ಎಕರೆ ಹಾಗೂ ಕೃಷಿ ಇಲಾಖೆಯ ಪ್ರಕಾರ ಸಜ್ಜೆ 1800 ಎಕರೆ, ಭತ್ತ 14750 ಬಿತ್ತನೆ ಮಾಡಲಾಗಿದೆ.
ಮಳೆ ವಿವರ:
ಶಹಾಪುರ 60ಮೀಮೀ, ಭೀಗುಡಿ 52ಮೀಮೀ, ದೋರನಹಳ್ಳಿ 40ಮೀಮೀ, ಗೋಗಿ 48 ಮೀಮೀ ಹಾಗೂ ವಡಗೇರಾದಲ್ಲಿ 26 ಮೀಮೀ ಮಳೆಯಾಗಿರುವ ವರದಿಯಾಗಿದೆ.
ಸಾಲ ಮನ್ನಾಕ್ಕೆ ಆಗ್ರಹ:
ಅಕಾಲಿಕ ಮಳೆಯಿಂದ ಭಾರೀ ಪ್ರಮಾಣದಲ್ಲಿ ಬೆಳೆ ಮತ್ತು ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ಸರ್ಕಾರ ಎಕರೆಗೆ ಒಂದು ಲಕ್ಷ ರು.ಗಳ ಪರಿಹಾರ ನೀಡಬೇಕು ಮತ್ತು ಎಲ್ಲ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ರೈತ ಮುಖಂಡ ನಿಂಗಣ್ಣ ನಾಟೇಕಾರ ಸರಕಾರಕ್ಕೆ ಆಗ್ರಹಿಸಿದರು.
4 ಎಕರೆ ಜಮೀನಿನಲ್ಲಿ 10 ರಿಂದ 12 ಲಕ್ಷ ರು.ಗಳು ಖರ್ಚು ಮಾಡಿ ಮೆಣಸಿನಕಾಯಿ ಬೆಳೆ ಹಾಳಾಗಿದ್ದು, ಎಕರೆಗೆ 25 ಕ್ವಿಂಟಲ್ ಇಳುವರಿ ಬರುತ್ತಿತ್ತು. ಈಗಾಗಲೇ 4ಕ್ವಿಂಟಲ್ ಮೆಣಸಿನಕಾಯಿ ಬಿಡಿಸಿಕೊಂಡಿದ್ದೇನೆ. ಮೆಣಸಿನಕಾಯಿಗೆ ಒಳ್ಳೆ ಬೆಲೆ ಇದ್ದು, ಕ್ವಿಂಟಲ್‌ಗೆ 25 ಸಾವಿರ ರು.ಗಳ ಬೆಲೆ ಇದೆ. ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದಾಗಿ 25 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಸಾಲ ತೀರಿಸುವುದೇ ಚಿಮತೆಯಾಗಿದೆ. ಸರ್ಕಾರ ಪರಿಹಾರ ನೀಡಿದರೆ ಬದುಕು ಭರವಸೆ ಮೂಡುತ್ತದೆ ಎನ್ನುತ್ತಾರೆ ಬೆನಕನಹಳ್ಳಿ ಗ್ರಾಮದ ರೈತ ದೇವಿಂದ್ರಪ್ಪ ಜಿಲೇರ್.
ಎನ್‌ಡಿಆರ್‌ಎಫ್(NDRF) ಪರಿಹಾರ ವಿವರ
ಮಳೆಯಾ]ತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 6800, ಹೆಚ್ಚುವರಿಯಾಗಿ 6800 ಸೇರಿ 13600 ರು.ಗಳು, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 13500, ಹೆಚ್ಚುವರಿಯಾಗಿ 11500 ಸೇರಿ 25000 ರು.ಗಳು, ಬಹು ವಾರ್ಷಿಕ ಬೆಳೆಗೆ 18000, ಹೆಚ್ಚುವರಿಯಾಗಿ 10000 ಸೇರಿ 28000 ಸಾವಿರ ಪರಿಹಾರ ನೀಡಲಾಗುತ್ತದೆ. ಗರಿಷ್ಟ5 ಎಕರೆ ವರೆಗೆ ಈ ಪರಿಹಾರ ನೀಡಲಾಗುತ್ತಿದೆ ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅವೈಜ್ಞಾನಿಕ ಎನ್‌ಡಿಆರ್‌ಎಫ್ ಪರಿಹಾರ
ರೈತರು ಎಕರೆಗೆ ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆದ ಬೆಳೆ ನಷ್ಟವಾದರೆ ಎನ್‌ಡಿಆರ್‌ಎಫ್ ಯೋಜನೆ ಅಡಿಯಲ್ಲಿ ಸರ್ಕಾರ ನೀಡುವ ಪರಿಹಾರ ರೈತರ ಅಂತ್ಯಸಂಸ್ಕಾರಕ್ಕೂ ಸಾಲದು. ಇಂಥ ಅವೈಜ್ಞಾನಿಕ ಪರಿಹಾರದಿಂದ ರೈತರ ಬದುಕು ಭರವಸೆ ಕಳೆದುಕೊಳ್ಳುತ್ತಿದೆ. ಯಾವುದೇ ಒತ್ತಡವಿಲ್ಲದೆ ಶಾಸಕರ ಮಾಸಿಕ ವೇತನ ದುಪ್ಪಟ್ಟು ಮತ್ತು ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿದ ಸರ್ಕಾರ ಕಷÜ್ಟಪಟ್ಟು ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಯೂ ಇಲ್ಲ, ನಷ್ಟದ ಪರಿಹಾರವು ಇಲ್ಲ. ಸರ್ಕಾರ ಬೆಳೆ ಹಾನಿಯಿಂದ ಸಂಕಷ್ಟಕ್ಕೀಡಾದ ರೈತರಿಗೆ ಬೆಳಗ್ಗೆ ತಕ್ಕಂತೆ ಪರಿಹಾರ ನೀಡಬೇಕು ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ ಸರ್ಕಾರಕ್ಕೆ ಒತ್ತಾಯಿಸಿದರು.
ಶನಿವಾರ ಬೆಳಿಗ್ಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ರೈತರು ಬೆಳೆದ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ನಾನು ಮತ್ತು ಜಿಲ್ಲಾಧಿಕಾರಿಗಳು ಹಾನಿಗೀಡಾದ ಬೆಳೆ ವೀಕ್ಷಣೆ ಮಾಡಿದ್ದೇವೆ. ತಕ್ಷಣ ಹಾನಿಗೊಳಗಾದ ಬೆಳೆ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಬೆಳೆನಷ್ಟದ ಬಗ್ಗೆ ಕೃಷಿ ಸಚಿವರೊಂದಿಗೆ ಮಾತನಾಡಿದ್ದೇನೆ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ
- ಶರಣಬಸಪ್ಪಗೌಡ ದರ್ಶನಾಪೂರ್, ಶಾಸಕರು, ಶಹಾಪುರ ಮತಕ್ಷೇತ್ರ.
14 ಎಕರೆ ಪಪ್ಪಾಯಿ, 9 ಎಕರೆ ದಾಳಿಂಬೆ, ಒಂದುವರೆ ಎಕರೆ ವೀಳ್ಯದೆಲೆ ಬೆಳೆದಿದ್ದೇನೆ. ಈ ಎಲ್ಲಾ ಬೆಳೆಗಳಿಗೆ ಸುಮಾರು 12 ರಿಂದ 14 ಲಕ್ಷ ರು.ಗಳು ಖರ್ಚು ಮಾಡಿದ್ದೇನೆ. ಎಲ್ಲಾ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. 25 ರಿಂದ 30 ಲಕ್ಷ ಬರುವ ಇಳುವರಿಯು ಇಲ್ಲ. ಇತ್ತ ಸಾಲದ ಹೊರೆ ಭಾರವಾಗಿದೆ. ಹೊಲದಾಗಿನ ಹಾಳಾದ ಬೆಳೆ ನೋಡಿ ಕಂಗಾಲಾಗಿದ್ದೇನೆ
- ಶ್ರೀನಿವಾಸ್‌ರೆಡ್ಡಿ, ಬೆಳೆ ಹಾನಿಗೊಳಗಾದ ರೈತ.
ಅಕಾಲಿಕ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಬೆಳೆಯನ್ನು ಸರ್ವೇ ಕಾರ್ಯ ನಡೆದಿದೆ. ಹಾನಿಗೊಳಗಾದ ಅಂದಾಜು ಮೊತ್ತದ ವರದಿಯನ್ನು ತಕ್ಷಣ ಮೇಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ
- ದತ್ತಾತ್ರೇಯ ಪಾಟೀಲ್, ಸಾಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ, ಶಹಾಪುರ ಮತ್ತು ಸುನಿಲ್‌ಕುಮಾರ್ ಸಹಾಯಕ ನಿರ್ದೇಶಕ, ಕೃಷಿ ಇಲಾಖೆಯ ಶಹಾಪುರ.
ಶಹಾಪುರದ ಸಂಗಮೇಶ್ವರ ನರ್ಸರಿಗೆ ಜಿಲ್ಲಾಧಿಕಾರಿ, ಶಾಸಕರು ಭೇಟಿ, ಪರಿಶೀಲನೆ
ಶನಿವಾರ ಬೆಳಗಿನ ಜಾವ ಮಿಂಚು, ಬಿರುಗಾಳಿ ಮಿ]ತ ಆಲಿಕಲ್ಲು ಮಳೆಯಿಂದ ಪರಿಣಾಮ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಬೆಳೆ ನಷ್ಟವಾದ ವರದಿಯಾಗಿದೆ. ಆದರೆ, ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ.
ರೈತ ಮಲ್ಲಿಕಾರ್ಜುನ ದೇಸಾಯಿ ಎಂಬುವವರಿಗೆ ಸೇರಿದ ನಗರದ ಹಳಿಸಗರ ಸೀಮಾಂತರದ ಸಂಗಮೇಶ್ವರ ನರ್ಸರಿ ಆಲಿಕಲ್ಲು ಮಳೆಯಿಂದಾಗಿ ಸುಮಾರು 6 ಎಕರೆ ಜಮೀನಿನಲ್ಲಿ ಲಕ್ಷಾಂತರ ರು.ಗಳು ಖರ್ಚು ಮಾಡಿ ಹಾಕಲಾಗಿದ್ದ ನೆಟ್ ಹಾಗೂ ಸ್ಪಿಂಕ್ಲರ್ ಸೇರಿದಂತೆ ಹನಿ ನೀರಾವರಿ ವ್ಯವಸ್ಥೆ ಪೂರ್ಣ ಹಾನಿಗೊಳಗಾಗಿದೆ. ಲಕ್ಷಾಂತರ ರು.ಗಳ ವೆಚ್ಚದ ಮೆಣಸಿನ ಕಾಯಿ, ತಮಟೆ, ಗೋಬಿ, ಬೀನ್ಸ್ ಸಸಿಗಳು ಆಲಿಕಲ್ಲು ಮಳೆಗೆ ಕುಸಿದು ನೆಲಕ್ಕುರುಳಿ ಹಾಳಾಗಿವೆ. ಅಂದಾಜು 10 ರಿಂದ 15 ಲಕ್ಷ ರು.ಗಳ ನಷ್ಟಉಂಟಾಗಿದೆ ಎಂದು ಸಂಗಮೇಶ್ವರ ನರ್ಸರಿ ಮಾಲೀಕ ತಿಳಿಸಿದ್ದಾರೆ.
ನರ್ಸರಿಗೆ ಡೀಸಿ, ಶಾಸಕರು ಭೇಟಿ:
ಆಲಿಕಲ್ಲು ಮಳೆಗೆ ಅಪಾರ ಹಾನಿಯುಂಟಾದ ರೈತ ಮಲ್ಲಿಕಾರ್ಜುನ ದೇಸಾಯಿ ಅವರ ಸಂಗಮೇಶ್ವರ ನರ್ಸರಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ್ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರೈತರು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡು, ಬೆಳೆನಷ್ಟಕುರಿತು ಮಾಹಿತಿ ನೀಡಿದರು. ಅವರಿಂದ ಸಮರ್ಪಕ ಮಾಹಿತಿ ಪಡೆದುಕೊಂಡು ಈ ಕುರಿತು ಸೂಕ್ತ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಲಬುರಗಿ: ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಕೊನೆಗೂ ದಕ್ಕಿದ ಸರ್ಕಾರದ ನೆರವು
ನೈಸರ್ಗಿಕ ವಿಕೋಪದಿಂದಾಗಿರುವ ಬೆಳೆ ನಷ್ಟಕುರಿತು ಕೃಷಿ ಇಲಾಖೆ ಅಧಿಕಾರಿಗಳಿಗೆ ಸಮರ್ಪಕ ವರದಿ ತಯಾರಿಸಲು ಸೂಚಿಸಿದ್ದು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಬೆಳೆ ನಷ್ಟದಿಂದ ಯಾವುದೇ ರೈತರು ಹೆದರಬೇಕಿಲ್ಲ. ಸೂಕ್ತ ವರದಿ ಆಧರಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುವುದು ಎಂದು ಡೀಸಿ ತಿಳಿಸಿದರು.
ಶಾಸಕ ದರ್ಶನಾಪೂರ್ ಅವರು ನೊಂದ ರೈತರಿಗೆ ಸಾಂತ್ವನ ತಿಳಿಸಿ, ಯಾರೊಬ್ಬರು ಹೆದರಬೇಕಿಲ್ಲ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಕಣ್ಣಾರೆ ಕಂಡಿದ್ದಾರೆ. ನಾನು ಸಮರ್ಪಕ ಮಾಹಿತಿ ಪಡೆದು ಅಧಿಕಾರಿಗಳಿಗೆ ನೀಡುವೆ. ನಷ್ಟಭರಿಸುವ ಕೆಲಸ ಮಾಡಲಾಗುತ್ತದೆ. ಆದಷ್ಟುಬೇಗನೆ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ನಾನು ಆಗ್ರಹಿಸುವೆ ಎಂದರು.