* ಭ್ರಷ್ಟಾಚಾರದ ಹಣ ಸಾಗಿಸುವಾಗ ಎಸಿಬಿ ಬಲೆಗೆ
* ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸೇರಿ ಮೂವರ ಬಂಧನ
* 17.80 ಲಕ್ಷ ಹಣದ ಚೀಲದೊಂದಿಗೆ ತೆರಳುತ್ತಿದ್ದಾಗ ದಾಳಿ
ಧಾರವಾಡ(ಮಾ.09): ಸಣ್ಣ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ತಮ್ಮದೇ ಇಲಾಖೆಯ ಮತ್ತೊಬ್ಬ ಅಧಿಕಾರಿಯ ಮನೆಯಿಂದ ಲಂಚದ(Bribe) ಹಣವನ್ನು ಸಂಬಂಧಿ ಮೂಲಕ ಬೇರೆಡೆ ಸಾಗಿಸುವಾಗ ಖಚಿತ ಮಾಹಿತಿ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ (ACB)ದ ಅಧಿಕಾರಿಗಳು ಹಣದ ಜೊತೆಗೆ ಲಂಚಕೋರರನ್ನು ಬಂಧಿಸಿದ(Arrest) ಘಟನೆ ಮಂಗಳವಾರ ನಡೆದಿದೆ.
ಇಲ್ಲಿಯ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗದ ಕಾರ್ಯ ನಿರ್ವಾಹಕ ಕಚೇರಿಯಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಆಗಿರುವ ಶಿವಪ್ಪ ಸಂಗಪ್ಪ ಮಂಜಿನಾಳ ಲಂಚದ ಮೂಲಕ ಪಡೆದ ಹಣವನ್ನು ನೀರಾವರಿ ತನಿಖಾ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಪ್ರಶಾಂತ ಶಾಮರಾವ್ ಅವರ ಸತ್ತೂರಿನ ನಿವಾಸದಲ್ಲಿ ಇಟ್ಟಿದ್ದರು. ಮಂಗಳವಾರ ಬೆಳಗ್ಗೆ ಮಂಜಿನಾಳ ಸಹೋದರನ ಮಗ ಮಹಾಂತೇಶ ರೇವಣಪ್ಪ ಮಂಜಿನಾಳ ಮೂಲಕ ಸಾಗಿಸುವ ಸಮಯದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
BBMP Corruption: ತ್ಯಾಜ್ಯದ ಹಣವನ್ನೂ ತಿಂದು ತೇಗಿದ ಪಾಲಿಕೆ ಭ್ರಷ್ಟರು!
ಶಿವಪ್ಪ ಮಂಜಿನಾಳ ಭ್ರಷ್ಟಾಚಾರ(Corruption) ನಡೆಸಿ ಅಕ್ರಮ ಹಣ ಸಂಗ್ರಹಿಸಿದ್ದು, ಮಂಗಳವಾರ ಬೇರೆ ಕಡೆಗೆ ಸಾಗಿಸಲಿದ್ದಾರೆ ಎಂಬ ಖಚಿತ ಮಾಹಿತಿ ಎಸಿಬಿ ಅಧಿಕಾರಿಗಳಿಗೆ ಲಭಿಸಿತ್ತು. ಈ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದು, ಸತ್ತೂರಿನ ಪ್ರಶಾಂತ ಶಾಮರಾವ್ ಅವರ ಮನೆಯಿಂದ ಹೊರ ಬಂದ ಮಹಾಂತೇಶ ಮಂಜಿನಾಳ ಅವರನ್ನು ತನಿಖೆ ನಡೆಸಿದಾಗ ಸಂಪೂರ್ಣ ಮಾಹಿತಿ ಬಹಿರಂಗವಾಗಿದೆ.
ಒಟ್ಟು 17.80 ಲಕ್ಷ ಹಣದ(Money) ಚೀಲದೊಂದಿಗೆ ತೆರಳುತ್ತಿದ್ದ ಮಹಾಂತೇಶ ಅವರ ವಿಚಾರಣೆ ನಡೆಸಿದಾಗ, ತಮ್ಮ ಊರಾದ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕಂದಗನೂರ ಗ್ರಾಮದ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ತಕ್ಷಣ ಪ್ರಕರಣ ದಾಖಲಿಸಿಕೊಂಡು, ಪ್ರಶಾಂತ ಅವರ ಸತ್ತೂರಿನ ಮನೆಗೆ ತೆರಳಿ ಶೋಧ ಕಾರ್ಯ ನಡೆಸಿದಾಗ ಚೀಲದಲ್ಲಿ 16 ಲಕ್ಷ ಹಾಗೂ ಮನೆಯಲ್ಲಿ 1.80 ಲಕ್ಷ ಹಣ ಸೇರಿ ಒಟ್ಟು ರು. 17.80 ಲಕ್ಷ ಪತ್ತೆಯಾಗಿದೆ. ಬಳಿಕ ಅಕ್ರಮ ಹಣ ಮತ್ತು ಮೂವರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಡಿಎಸ್ಪಿ ಮಹಾಂತೇಶ ಮಹಾಂತೇಶ ಜಿದ್ದಿ ತಿಳಿಸಿದ್ದಾರೆ.
ತಹಸೀಲ್ದಾರ ಕಚೇರಿಯಲ್ಲಿ ಎಸಿಬಿ ದಾಳಿ: ಲಂಚ ಸಮೇತ ಟೈಪಿಸ್ಟ್ ಬಲೆಗೆ
ಮುಂಡರಗಿ: ಆರ್‌ಟಿಸಿ ಕಾಲಂ ನ.11 ರಲ್ಲಿ ಹೆಸರು ಕಡಿಮೆ ಮಾಡಲು 5 ಸಾವಿರ ಬೇಡಿಕೆ ಇಟ್ಟಿದ್ದ ಇಲ್ಲಿಯ ತಹಶೀಲ್ದಾರ್ ಕಚೇರಿಯ ಟೈಪಿಸ್ಟ್ ಮಾರುತಿ ಉಪ್ಪಾರಟ್ಟಿ, ಬುಧವಾರ ಮಧ್ಯಾಹ್ನ ಆ ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ(ACB) ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಫೆ.23 ರಂದು ನಡೆದಿತ್ತು.
ACB Raids: ಬಿಬಿಎಂಪಿ ಭ್ರಷ್ಟರಿಗೆ ಎಸಿಬಿ ಶಾಕ್: 230 ಕೋಟಿ ಹಗರಣ ಪತ್ತೆ
ತಾಲೂಕಿನ ಗಂಗಾಪೂರ ಗ್ರಾಮದ ಕರಿಯಪ್ಪ ಬಂಗಿ ಎನ್ನುವವರು ತಮ್ಮ ಜಮೀನಿನ ಆರ್‌ಟಿಸಿ 11 ಕಾಲಂನಲ್ಲಿ ಹೆಸರು ಕಡಿಮೆ ಮಾಡುವಂತೆ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಟೈಪಿಸ್ಟ್ ಮಾರುತಿ ಉಪ್ಪಾರಟ್ಟಿ ಒಟ್ಟು 12 ಸಾವಿರ ಬೇಡಿಕೆ ಇಟ್ಟಿದ್ದರು. ಅದರಲ್ಲಿ ಈ ಹಿಂದೆ 6 ಸಾವಿರ ಪಡೆದಿದ್ದರು. ಇದೀಗ ಉಳಿದ ಹಣ ಕೊಡುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಚೌಕಾಶಿ ಮಾಡಿ 5 ಸಾವಿರ ಕೊಡುವಂತೆ ತಿಳಿಸಿದ್ದರು ಎನ್ನಲಾಗುತ್ತಿದ್ದು, ಬುಧವಾರ ಅದನ್ನು ಪಡೆಯುವ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದರು.
ಎಸಿಬಿ ಡಿಎಸ್‌ಪಿ ಎಂ.ವಿ. ಮಲ್ಲಾಪುರ ನೇತೃತ್ವದ ತಂಡ ದಾಳಿ(Raid) ನಡೆಸಿದ್ದು, ಈ ಸಂದರ್ಭದಲ್ಲಿ ಎಸಿಬಿ ಸಿಪಿಐ ವಿ.ಎಂ. ಹಳ್ಳಿ, ಆರ್.ಎಫ್. ದೇಸಾಯಿ, ಸಿಬ್ಬಂದಿಗಳಾದ ಎಂ.ಎಂ. ಅಯ್ಯನಗೌಡ, ವೀರೇಶ ಜೋಳದ, ದೀಪಾಲಿ, ವೀರೇಶ ಬಿಸನಳ್ಳಿ, ಎಸ್.ಬಿ. ಮುಲ್ಲಾ, ಎಂ.ಜಿ. ಮುಳಗುಂದ, ಎನ್.ಎಸ್. ತಾಯಣ್ಣವರ, ಐ.ಸಿ. ಜಾಲಿಹಾಲ, ತಾರಪ್ಪ, ನಾರಾಯಣ ರಡ್ಡಿ ಸೇರಿದಂತೆ ಇತರರು ಇದ್ದರು.