ರಾಜ್ಯಕ್ಕೆ ಮಾಸಾಂತ್ಯದೊಳಗೆ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಚಿಕ್ಕಬಳ್ಳಾಪುರ (ಆ.12): ರಾಜ್ಯಕ್ಕೆ ಮಾಸಾಂತ್ಯದೊಳಗೆ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸ ಮತ್ತು ವಿಶ್ವಪ್ರಸಿದ್ಧ ನಂದಿಗಿರಿಧಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 95 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 200 ಆಸನಗಳ ಸಾಮರ್ಥ್ಯದ ಸಮ್ಮೇಳನ ಸಭಾಂಗಣವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಈಗಾಗಲೇ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ 300 ಕೋಟಿ ರೂ ಬಂಡವಾಳ ಹೂಡಿಕೆ ಮಾಡಿದೆ ಎಂದರು.
ಪ್ರವಾಸೋದ್ಯಮದಲ್ಲಿ ಬದಲಾವಣೆ: ಇಷ್ಟು ದಿನಗಳ ಕಾಲ ಪ್ರವಾಸೋದ್ಯಮ ಎಂದರೆ ಶ್ರೀಮಂತರಿಗೆ ಎಂಬ ಭಾವನೆ ಇತ್ತು. ಪ್ರವಾಸೋದ್ಯಮ ಇಲಾಖೆ ಆ ರೀತಿಯ ಅಪವಾದವನ್ನು ತೊಡೆದು ಹಾಕಿ ಶ್ರಮಿಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆ ತರಲು ಚಿಂತನೆ ನಡೆಸಿದೆ. ಕೃಷಿ, ಶಿಕ್ಷಣ ಮತ್ತು ಶ್ರದ್ದಾ ಪ್ರವಾಸಿ ಕೇಂದ್ರಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವುಗಳ ಬೆಳವಣಿಗೆಗೆ ಪೂರಕವಾಗಿ ಮತ್ತು ಸಹಕಾರಿಯಾಗಿ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯತೆಯನ್ನು ಸರ್ಕಾರ ಕಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿ ಮಾಡಲು ನಿರ್ಧರಿಸಿದೆ. ಇನ್ನು ಒಂದು ತಿಂಗಳೊಳಗಾಗಿ ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಯಾಗಲಿದೆ ಎಂದರು.
ಬಂಡೀಪುರ: ರಾಜ್ಯದ ಸಂರಕ್ಷಿತ ಪ್ರದೇಶಗಳಲ್ಲಿ ಬರುವ ಪ್ರವಾಸಿಗರಿಗೆ ವಿಮೆ ಭಾಗ್ಯ!
ನಂದಿಬೆಟ್ಟದ ಪ್ರಕೃತಿಯ ಮಡಿಲಲ್ಲಿ ಸುಮಾರು 95 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಆಗಿ ನಿರ್ಮಿಸಲಾಗಿರುವ ಸಮ್ಮೇಳನ ಸಭಾಂಗಣ ನೋಡಲು ಆಕರ್ಷಕವಾಗಿದೆ. ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಕಾರ್ಪೊರೆಟ್ ಕಂಪನಿಗಳು ನಡೆಸುವ ಸಭೆ, ಸಮಾರಂಭಗಳ ಆಯೋಜನೆಗೆ ಈ ಸಮ್ಮೇಳನ ಸಭಾಂಗಣ ನಿರ್ಮಿಸಲಾಗಿದೆ. ಕೇವಲ 6 ತಿಂಗಳಲ್ಲಿ ಸಭಾಂಗಣ ನಿರ್ಮಿಸಲಾಗಿದೆ. 200 ಕ್ಕೂ ಹೆಚ್ಚು ಮಂದಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು
ನಂದಿಬೆಟ್ಟದಲ್ಲಿ ಪ್ರವಾಸಿಗರಿಗೆ ಸೌಲಭ್ಯ: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಮಾತನಾಡಿ, ನಂದಿ ಬೆಟ್ಟದಲ್ಲಿ ಕೆಎಸ್‌ಡಿಟಿಸಿ ಬಂದ ಮೇಲೆ ಪ್ರವಾಸಿಗರಿಗೆ ಎಲ್ಲಿ ಏನಿದೆ ಎಂದು ತಿಳಿಯಲು ಸೂಚನಾ ಫಲಕಗಳನ್ನು ಹಾಕಲಾಗಿದೆ. ಶೌಚಾಲಯ ವ್ಯವಸ್ಥೆಯನ್ನು ಉತ್ತಮ ಗೊಳಿಸಲಾಗಿದೆ, ಬೆಟ್ಟದ ಸ್ವಚ್ಛತೆಗೆ 20 ಮಂದಿ ಸಿಬ್ಬಂದಿ ನೇಮಿಸಲಾಗಿದೆ, ಬ್ಯಾಂಬೂ ವಾಕ್ ವೇಯನ್ನು ಪುನರ್ ಅಭಿವೃದ್ಧಿ ಪಡಿಸಲಾಗಿದೆ.ನೆಲ್ಲಿಕಾಯಿ ಬಸವಣ್ಣ ದೇವಾಲಯವನ್ನು ಹೊಸದಾಗಿ ನವೀಕರಣ ಮಾಡಲಾಗಿದೆ. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.
ಬೆಳೆ ವಿಮೆ ತೊಡಕುಗಳ ನಿವಾರಣೆಗೆ ಸಚಿವ ಎಂ.ಸಿ.ಸುಧಾಕರ್ ಸೂಚನೆ
ಬೆಟ್ಟದ ಸಮಗ್ರ ಅಭಿವೃದ್ಧಿಗೆ ಕ್ರಮ: ನಂದಿಬೆಟ್ಟದಲ್ಲಿ 150 ಸೊಲಾರ್ ಲೈಟ್ಸ್ ಗಳನ್ನು ಅಳವಡಿಸಲಾಗಿದೆ. ಉತ್ತಮ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರವಾಸಿಗರು ಕುಳಿತುಕೊಳ್ಳಲು ಹೊಸದಾಗಿ 50 ವಿಶ್ರಾಂತಿ ಆಸನಗಳನ್ನು ಅಳವಡಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯನ್ನು ಉತ್ತಮ ಪಡಿಸಿ 4 ತಿಂಗಳಲ್ಲಿ ಸುಮಾರು 6 ಕೋಟಿ ಆದಾಯ ತಂದುಕೊಡಲಾಗಿದೆ. ಮುಂದಿನ ದಿನಗಳಲ್ಲಿ ಆದಾಯ ಹೆಚ್ಚಿಸಲು ಯೋಜಿಸಲಾಗಿದೆ. ಒಟ್ಟಾರೆ ನಂದಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಇನ್ನಷ್ಟುಪ್ರವಾಸಿಗರನ್ನು ಆಕರ್ಷಸಿಸಲು ಯೋಜಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿ ಮಂಜುನಾಥ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಯಶ್ವಂತ್ ಕುಮಾರ್, ಕೆಎಸ್‌ಟಿಡಿ ನಿಗಮದ ಸಹಾಯಕ ವ್ಯವಸ್ಥಾಪಕ ದೇವರಾಜು, ವ್ಯವಸ್ಥಾಪಕ ಮನೋಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.