ಕಳೆದ 18 ವರ್ಷಗಳಿಂದ ಒಂದೇ ಮನೆಯಲ್ಲಿ ಬಾಡಿಗೆ ಇದ್ದ ಕುಟುಂಬವನ್ನು ಮಾಲೀಕನಲ್ಲದ ಮೂರನೇ ವ್ಯಕ್ತಿಯೊಬ್ಬ ಬಂದು ಬಾಡಿಗೆ ಇದ್ದ ಕುಟುಂಬವನ್ನು ಏಕಾಏಕಿ ಮನೆಯಿಂದ ಹೊರಗೆ ಹಾಕಲು ಯತ್ನಿಸಿದ ಪರಿಣಾಮ ಬಾಡಿಗೆದಾರ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ.
ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಡಿ.01): ಕಳೆದ 18 ವರ್ಷಗಳಿಂದ ಒಂದೇ ಮನೆಯಲ್ಲಿ ಬಾಡಿಗೆ ಇದ್ದ ಕುಟುಂಬವನ್ನು ಮಾಲೀಕನಲ್ಲದ ಮೂರನೇ ವ್ಯಕ್ತಿಯೊಬ್ಬ ಬಂದು ಬಾಡಿಗೆ ಇದ್ದ ಕುಟುಂಬವನ್ನು ಏಕಾಏಕಿ ಮನೆಯಿಂದ ಹೊರಗೆ ಹಾಕಲು ಯತ್ನಿಸಿದ ಪರಿಣಾಮ ಬಾಡಿಗೆದಾರ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಗಾಳಿಬೀಡಿನ ನಂದ ಮತ್ತು ರಾಣಿ ಕುಟುಂಬ ಈಗ ಬೀದಿಗೆ ಬಿದ್ದಿದೆ. ಹೌದು! ಇಂತಹ ವಿಚಿತ್ರ ಮತ್ತು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ನಂದ ಮತ್ತು ರಾಣಿ ಕುಟುಂಬ ಪರದಾಡುತ್ತಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ತುಂತಜೆ ಕುಟುಂಬಸ್ಥರಿಗೆ ಸೇರಿದ ಮನೆಯಲ್ಲಿ ನಂದ ಮತ್ತು ರಾಣಿ ದಂಪತಿಗಳು ತಮ್ಮ ಇಬ್ಬರು ಮಕ್ಕಳು ಹಾಗೂ ತಾಯಿಯೊಂದಿಗೆ 18 ವರ್ಷಗಳಿಂದ ಬಾಡಿಗೆಗೆ ವಾಸವಾಗಿದ್ದರು.
undefined
ತುಂತಜೆ ಕುಟುಂಬಸ್ಥರು ಬೆಂಗಳೂರಿನಲ್ಲೇ ಹಲವು ವರ್ಷಗಳಿಂದ ನೆಲೆಸಿದ್ದರು. ಇದನ್ನೇ ದುರ್ಬಳಕೆ ಮಾಡಿಕೊಂಡ ಅದೇ ಗ್ರಾಮದ ಸುಗು ಎಂಬುವರು ಇದು ತನ್ನದೇ ಮನೆ ಎಂದು 18 ವರ್ಷಗಳಿಂದ ಬಾಡಿಗೆಯನ್ನು ನಂದ ಮತ್ತು ರಾಣಿ ದಂಪತಿಯಿಂದ ಪಡೆದುಕೊಂಡಿದ್ದಾರೆ. ಇದು ಯಾರ ಗಮನಕ್ಕೂ ಬಂದಿಲ್ಲ. ಆದರೆ ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುವ ವಿಷ್ಣುಕುಮಾರ್ ಎಂಬಾತ ಬಾಡಿಗೆ ಪಡೆಯುತ್ತಿದ್ದ ಸುಗು ಎಂಬುವರೊಂದಿಗೆ ಬಂದು ‘ನೀವು ಮನೆ ಖಾಲಿ ಮಾಡಿ, ನಾವು ಈ ಮನೆಯನ್ನು ಕೊಂಡುಕೊಂಡಿದ್ದು, ಬೇರೆ ಕೆಲಸ ಮಾಡಿಸಬೇಕಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಇದನ್ನು ಕೆಡುವುತ್ತೇವೆ’ ಎಂದು ನಂದ ಕುಟುಂಬಕ್ಕೆ ಹೇಳಿದ್ದಾನೆ.
Kodagu: ಕೊರಗಜ್ಜ ದೈವಕೋಲಕ್ಕೆ ಅವಮಾನ: ಆರೋಪ
ಸುಗು ಅವರಿಂದಲೇ ಮನೆ ಮಾರಾಟವಾಗಿರಬಹುದೆಂದು ಭಾವಿಸಿದ್ದ ಕುಟುಂಬ ಒಂದು ತಿಂಗಳು ಸಮಯ ಕೇಳಿ ಮನೆಯನ್ನು ಖಾಲಿ ಮಾಡಲು ಒಪ್ಪಿಕೊಂಡಿತ್ತು. ಆದರೆ ಒಂದೇ ವಾರದಲ್ಲಿ ಮತ್ತೆ ಬಂದಿದ್ದ ವಿಷ್ಣುಕುಮಾರ್ ಕೂಡಲೇ ಮನೆ ಖಾಲಿ ಮಾಡುವಂತೆ ಒತ್ತಡ ಹೇರಿದ್ದನಂತೆ. ಇದರಿಂದ ಗ್ರಾಮದಲ್ಲಿ ಮತ್ತೊಂದು ಮನೆ ಹುಡುಕಿದ್ದ ನಂದ ಮತ್ತು ರಾಣಿ ಜಯಂತಿಶೆಟ್ಟಿ ಎಂಬುವರ ಮನೆಯನ್ನು ಬಾಡಿಗೆ ಪಡೆಯಲು ನಿರ್ಧರಿಸಿದೆ. ಇನ್ನೇನು ಎರಡು ದಿನದಲ್ಲಿ ಮನೆ ಬದಲಾಯಿಸಬೇಕು ಎನ್ನುವಷ್ಟರಲ್ಲಿ ಹೊಸದಾಗಿ ಬಾಡಿಗೆ ಪಡೆಯಬೇಕಾಗಿದ್ದ ಮನೆಯಲ್ಲಿಯೇ ಕಳ್ಳತನವಾಗಿದೆ ಎನ್ನಲಾಗಿದೆ. ಮನೆಯ ಕಿಟಕಿಯ ಗಾಜು ಹೊಡೆದು ಹೋಗಿದ್ದು ಮನೆಯ ಬಾಗಿಲಿಗೆ ಹೊಸಬೀಗ ಹಾಕಲಾಗಿದೆ ಎಂದು ಜಯಂತಿ ಶೆಟ್ಟಿ ಅವರಿಗೆ ಸ್ವತಃ ನಂದನೇ ಫೋನ್ ಮೂಲಕ ಹೇಳಿದ್ದಾರೆ.
ವಿಪರ್ಯಾಸವೆಂದರೆ ಮನೆ ಬಾಡಿಗೆ ಪಡೆಯಬೇಕಾಗಿದ್ದ ನಂದ ಅವರೇ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ನಂದ ಅವರನ್ನು ನಿತ್ಯ ವಿಚಾರಣೆ ಹೆಸರಲ್ಲಿ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿ ಕಳುಹಿಸುತ್ತಿದ್ದಾರೆ ಎಂದು ನಂದಾ ಅವರ ಪತ್ನಿ ರಾಣಿ ದೂರಿದ್ದಾರೆ. ಕಳ್ಳತನ ಮಾಡಿರುವುದು ನೀನೇ ಎಂದು ಒಪ್ಪಿಕೋ ಎಂದು ಪೊಲೀಸರು ನಂದ ಅವರಿಗೆ ಟಾರ್ಚರ್ ಕೊಡುತ್ತಿರುವುದಾಗಿ ನೊಂದು ನುಡಿದಿದ್ದಾರೆ. ಬಡಕುಟುಂಬದ ನಂದ ಅವರು ಒಂದೆಡೆ ಪೊಲೀಸು ಕೇಸು ಎದುರಿಸುವಂತೆ ಆಗಿದ್ದರೆ ಮತ್ತೊಂದೆಡೆ 18 ವರ್ಷಗಳಿಂದ ನಂದ ಕುಟುಂಬ ಬಾಡಿಗೆ ಇದ್ದ ಮನೆಯ ಹೆಂಚುಗಳನ್ನು ಇದ್ದಕ್ಕಿದ್ದಂತೆ ಇಳಿಸಿದ್ದಾರೆ. ಇದೀಗ ನಂದ ಕುಟುಂಬ ಛಾವಣಿ ಇಲ್ಲದ ಮನೆಯಲ್ಲಿ ಬದುಕು ದೂಡುವಂತೆ ಆಗಿದೆ. ಅತ್ತ ಹೊಸದೊಂದು ಬಾಡಿಗೆ ಮನೆಗೂ ಹೋಗಲಾರದೆ ಇತ್ತ ಇರುವ ಬಾಡಿಗೆ ಮನೆಯಲ್ಲೂ ನೆಮ್ಮದಿಯಿಂದ ಇರಲಾರದೆ ಚಿತ್ರಹಿಂಸೆ ಅನುಭವಿಸುತ್ತಿದೆ.
ಕೊಡಗು ಜಿಲ್ಲಾಸ್ಪತ್ರೆಯ 7 ವೈದ್ಯರ ಬ್ಯಾಗ್, ಬೈಕ್ ಕಳವು
ಸದ್ಯ ಈ ಕುಟುಂಬಕ್ಕೆ ವಕೀಲರೊಬ್ಬರು ರಕ್ಷಣೆ ನೀಡಿದ್ದು ನಂದ ಅವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ಮುಂದಾಗಿದ್ದಾರೆ. ಈ ಕುರಿತು ಮಾತನಾಡಿರುವ ವಕೀಲ ಮನೋಜ್ ಬೋಪಯ್ಯ ಒಂದೆರಡು ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ಇದ್ದವರನ್ನು ಖಾಲಿ ಮಾಡಿಸಬೇಕಾದರೆ ಅದಕ್ಕೊಂದು ನಿಯಮವಿದೆ. ಎರಡು ತಿಂಗಳ ಮೊದಲೇ ನೋಟೀಸ್ ನೀಡಿರಬೇಕು. ಆದರೆ ಇವರು ಆದ್ಯಾವುದನ್ನೂ ಪಾಲಿಸದೇ ಇದ್ದಕ್ಕಿದ್ದಂತೆ ದೌರ್ಜನ್ಯ ಎಸಗುವ ರೀತಿಯಲ್ಲಿ ಮನೆ ಖಾಲಿ ಮಾಡಿಸಲು ಮುಂದಾಗಿರುವುದು ಸರಿಯಲ್ಲ. ಮನೆ ಕಳ್ಳತನವಾಗಿರುವದಕ್ಕೆ ಎಫ್ಐಆರ್ ದಾಖಲಾಗಿದ್ದು ಅದರಲ್ಲಿ ಯಾರೊಬ್ಬರನ್ನು ಆರೋಪಿಯೆಂದು ಹೆಸರು ನಮೂದಿಸಿಲ್ಲ. ಆದರೂ ನಂದ ಅವರಿಗೆ ಕಳ್ಳತನ ಆರೋಪದಲ್ಲಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.