ಒಂದಿಲ್ಲೊಂದು ಅಪಸವ್ಯಗಳಿಂದಾಗಿ ಸದಾ ಸುದ್ದಿಯಲ್ಲಿರೋ ಗುಲ್ಬರ್ಗ ವಿವಿ ಪರೀಕ್ಷಾಂಗ, ಮೌಲ್ಯ ಮಾಪನ ವಿಭಾಗ 42ನೇ ವಾರ್ಷಿಕ ಘಟಿಕೋತ್ಸವದ ಚಿನ್ನದ ಪದಕ ಘೋಷಣೆಯಲ್ಲಿಯೂ ಭಾರಿ ಅವಾಂತರ ಮಾಡಿ ಸುದ್ದಿಗೆ ಗ್ರಾಸವಾಯ್ತು.
ಶೇಷಮೂರ್ತಿ ಅವಧಾನಿ
ಕಲಬುರಗಿ (ಆ.13): ಒಂದಿಲ್ಲೊಂದು ಅಪಸವ್ಯಗಳಿಂದಾಗಿ ಸದಾ ಸುದ್ದಿಯಲ್ಲಿರೋ ಗುಲ್ಬರ್ಗ ವಿವಿ ಪರೀಕ್ಷಾಂಗ, ಮೌಲ್ಯ ಮಾಪನ ವಿಭಾಗ 42ನೇ ವಾರ್ಷಿಕ ಘಟಿಕೋತ್ಸವದ ಚಿನ್ನದ ಪದಕ ಘೋಷಣೆಯಲ್ಲಿಯೂ ಭಾರಿ ಅವಾಂತರ ಮಾಡಿ ಸುದ್ದಿಗೆ ಗ್ರಾಸವಾಯ್ತು. ಜ್ಞಾನಗಂಗೆಯ ಇಂಗ್ಲಿಷ್ ವಿಭಾಗ ಹಾಗೂ ಮೌಲ್ಯಮಾಪನ ವಿಭಾಗದ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಚಿನ್ನದ ಪದಕ ಪಡೆಯಲು ಬಂದಿದ್ದ ಬೀದರ್ ಜಿಲ್ಲೆಯ ಭಾಲ್ಕಿ ಸಿಬಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ರೋಶನಿ ಮಾಳಗೆ ಕೊನೆ ಕ್ಷಣದಲ್ಲಿ ಪದಕ ಕೈ ತಪ್ಪಿ ಸಮಾರಂಭದಲ್ಲೇ ಕಣ್ಣೀರು ಹಾಕುವಂತಾಯ್ತು!
ರೋಶನಿ ಎಂಎ ಇಂಗ್ಲಿಷ್ (ಇಂಡಿಯನ್ ಲಿಟ್ರೆಚರ್) ವಿಷಯದಲ್ಲಿ ಹೆಚ್ಚಿನ ಅಂಕ ಪಡೆದು ಚಿನ್ನದ ಪದಕ ಗಿಟ್ಟಿಸಿದ್ದಾಳೆಂದು ಭಾಲ್ಕಿಯ ಸಿಬಿ ಕಾಲೇಜಿನ ಪ್ರಾಚಾರ್ಯರಿಗೆ ಗುವಿವಿ ಮೌಲ್ಯಮಾಪನ ವಿಭಾಗ ಪತ್ರ ಬರೆದು ಹೇಳಿತ್ತಲ್ಲದೆ, ಆಕೆಯ ಭಾವಚಿತ್ರ, ವಿಳಾಸದ ಮಾಹಿತಿ ಕೇಳಿತ್ತು.
ರಾಜ್ಯಾದ್ಯಂತ ಮೂರು ಸಾವಿರ ಕೆಪಿಎಸ್ ಶಾಲೆಗಳ ನಿರ್ಮಾಣ, ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ: ಮಧು ಬಂಗಾರಪ್ಪ
ಪದಕ ಪಟ್ಟಿಯಲ್ಲಿ ರೋಶನಿ ಹೆಸರೇ ನಾಪತ್ತೆ: ವಿವಿ ಮೌಲ್ಯಮಾಪನ ಕುಲಸಚಿವರ ಸೂಚನೆಯಂತೆ ಕಾಲೇಜಿನ ಪ್ರಾಚಾರ್ಯರು ರೋಶನಿಗೆ ಸುದ್ದಿ ತಿಳಿಸಿದ್ದಲ್ಲದೆ ಆಕೆಯ ಭಾವಚಿತ್ರ, ವಿವರಗಳನ್ನೆಲ್ಲ ವಿವಿ ಪರೀಕ್ಷಾಂಗ, ಮೌಲ್ಯ ಮಾಪನ ವಿಭಾಗಕ್ಕೆ ರವಾನಿಸಿತ್ತು. ಆ.12ರಂದು ಘಟಿಕೋತ್ಸವ ದಿನಾಂಕ ನಿಗದಿಯಾಗಿದ್ದರಿಂದ ರೋಶನಿ ಚಿನ್ನದ ಪದಕ ಪಡೆಯಲು ಆ ದಿನ ಬಂಧುಗಳೊಂದಿಗೆ ಕೂಡಿಕೊಂಡು ನೇರವಾಗಿ ಗುಲ್ಬರ್ಗ ವಿವಿ ಘಟಿಕೋತ್ಸವ ಸಮಾರಂಭಕ್ಕೆ ಆಗಮಿಸಿದ್ದಳು.
ಚಿನ್ನದ ಪದಕ ಪಡೆದವರಿಗೆ ಇರುವ ವಿಶೇಷ ಗೌನ್ ಪಡೆಯಲು ಆಕೆ ಕೌಂಟರ್‌ಗೆ ಹೋದಾಗಲೇ ಅಲ್ಲಿರುವ ಪದಕ ವಿಜೇತರ ಪ್ಟಿಯಲ್ಲಿ ಈಕೆಯ ಹೆಸರಿನ ಬದಲು ಅನ್ಯರ ಹೆಸರು ಕಂಡು ನಿರಾಶಳಾದಳು. ಯಾಕೆ ಹೀಗಾಯ್ತೆಂದು ವಿಚಾರಿಸಿದಾಗ ತನಗಿಂತ ಇನ್ನೋರ್ವ ವಿದ್ಯಾರ್ಥಿನಿಗೆ ಅಂಕ ಹೆಚ್ಚಿಗೆ ಬಂದಿದ್ದು ಗೊತ್ತಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ವಿವಿ ಆಡಳಿತ ಸಬೂಬು ಹೇಳಿ ಈಕೆಯನ್ನ ಸಾಗ ಹಾಕಿತ್ತು. ಈ ಬಗ್ಗೆ ಕಾಲೇಜಿಗೆ ಪತ್ರ ಕೂಡಾ ಹಾಕಿರೋದಾಗಿ ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು.
ವಿಷಾದ ಪತ್ರ ರೋಶನಿ ಕೈ ಸೇರಿತು: ಇತ್ತ ಮನಸ್ಸಿಗೆ ನೋವು ಮಾಡಿಕೊಂಡು ತನಗಾದ ಅನ್ಯಾಯಕ್ಕೆ ಕಣ್ಣೀರು ಹಾಕಿದಳು.ಅತೀ ಹೆಚ್ಚಿನ ಅಂಕ ಪಡೆದಿರೋಳು ಎಂದು ಚಿನ್ನದ ಪದಕ ಘೋಷಿಸಿದ್ದ ವಿವಿ ಯಾಕೆ ಹೀಗೆ ಎಡವಟ್ಟು ಮಾಡಿತೋ ಗೊತ್ತಿಲ್ಲ, ಮುಂಚೆಯೇ ಬದಲಾವಣೆಯಾಗಿರೋ ವಿಚಾರ ಹೇಳಿದ್ದರೆ ತಾನು ಇಲ್ಲಿಗೆ ಬರುತ್ತಲೇ ಇರಲಿಲ್ಲವೆಂದು ರೋಶನಿ ಕನ್ನಡಪ್ರಭ ಜೊತೆ ಮಾತನಾಡುತ್ತ ಗೋಳಾಡಿದಳು. ಚಿನ್ನದ ಪದಕ ಸಿಕ್ಕಿತೆಂದು ಖುಷಿಯಲ್ಲಿ ಊರವರು, ಬಂಧುಗಳೊಂದಿಗೆ ಘಟಿಕೋತ್ಸವಕ್ಕೆ ಬಂದಿದ್ದೇನೆ. ಇಲ್ಲಿ ನೋಡಿದರೆ ಭಾರಿ ಅವಮಾನ, ಅನ್ಯಾಯವಾಗಿದೆ. ತನಗಿಂತ ಅನ್ಯರಿಗೆಹೆಚ್ಚಿ ಅಂಕ ಬಂದಿದ್ದರೆ ಅದನ್ನು ನಿರ್ಧರಿಸೋವಾಗ ಯಾಕೆ ವಿವಿ ಆಡಳಿತ ಕಣ್ಣು ಮುಚ್ಚಬೇಕಿತ್ತು? ಯಾಕೆ ಹೀಗೆ ಆಟ ಆಡಬೇಕಿತ್ತು? ಎಂದು ಖಾರವಾಗಿ ಪ್ರಶ್ನಿಸಿದಳು.
ಘಟಿಕೋತ್ಸವ ದಿನ ಆ.12ರ ಬೆ.11.20ಕ್ಕೆ ನಾನು ಓದಿರುವ ಭಾಲ್ಕಿ ಸಿಬಿ ಕಾಲೇಜಿನ ಪಾಚಾರ್ಯರಿಗೆ ವಿಷಾದದ ಪತ್ರ ಬಂದಿದೆ. ಅದರಲ್ಲಿ ಪದಕ ಆಯ್ಕೆಯಲ್ಲಾಗಿರುವ ಎಡವಟ್ಟಿನ ಬಗ್ಗೆ ವಿವರಿಸಿದ್ದಾರೆ. ಅದೇ ಪತ್ರ ನನಗೆ ಕಾಲೇಜಿನವರು ಘಟಿಕೋತ್ಸವದ ಈ ಗಳಿಗೆಯಲ್ಲಿ ಮೋಬೈಲ್‌ಗೆ ರವಾನಿಸಿದ್ದಾರೆ. ಇದಂತಹ ಅವಾಂತರ ಎಂದು ನನಗೆ ಗೊತ್ತಾಗುತ್ತಿಲ್ಲ? ಮೊದಲು ನನ್ನ ಹೆಸರು ಹೇಳಿ ಪತ್ರ ಬರೆದರೇಕೆ? ನಂತರ ಹೀಗೇಕೆ ಅದಲು ಬದಲು ಮಾಡಿದರೋ? ಎಂದು ರೋಶನಿ ವಿವಿ ಆಡಳಿತ, ಮೌಲ್ಯ ಮಾಪನ ವಿಭಾಗ, ಇಂಗ್ಲಿಷ್ ವಿಭಾಗದಲ್ಲಿನ ಬೆಳವಣಿಗೆಗಳನ್ನೇ ಶಂಕೆಯಿಂದ ನೋಡುವಂತಾಗಿದೆ ಎಂದು ದೂರಿದಳು.
ಗುವಿವಿ ಮೌಲ್ಯಮಾಪನ ಕುಲಸಚಿವರ ಕಚೇರಿ ನಡೆಯೇ ಶಂಕಾಸ್ಪದ: ಚಿನ್ನದ ಪದಕಕ್ಕೆ ಆಯ್ಕೆಯಾಗಿರೋ ಸುದ್ದಿ ತಿಳಿಸಲು ಭಾಲ್ಕಿ ಸಿಬಿ ಕಾಲೇಜಿಗೆ ಮೌಲ್ಯಮಾಪನ ಕುಲಸಚಿವರ ಸಹಿ ಇರುವ ಪತ್ರ ಜುಲೈ 8 ರಂದೇ ರವಾನೆಯಾಗುತ್ತದೆ. ಅದರಲ್ಲಿ ರೋಶನಿ ಹೆಸರು ಸ್ಪಷ್ಟವಾಗಿ ನಮೂದಾಗಿರತ್ತದೆ. ಇದಾದ ಬರೊಬ್ಬರಿ 1 ತಿಂಗಳ ನಂತರ ಆ. 8 ಕ್ಕೆ ಅದೇ ಕುಲಸಚಿವರಿಂದ ಭಾಲ್ಕಿ ಸಿಬಿ ಕಾಲೇಜಿಗೆ ಗುವಿವಿಯಿಂದ ಮತ್ತೊಂದು ಪತ್ರ ರವಾನೆಯಾಗಿ, ಆ ಪತ್ರದಲ್ಲಿ ರೋಶನಿ ಬದಲು ಅಷಫಿಯಾ ಮಹರೀನ್‌ಗೆ ಚಿನ್ನದ ಪದಕವೆಂದು ಹೇಳಲಾಗಿತ್ತು. ಈ ಪತ್ರ ಕಾಲೇಜಿಗೆ ತಲುಪಿ ರೋಶನಿ ಕೈ ಸೇರುವಾಗಲೇ ಘಟಿಕೋತ್ಸವ ಸಮಾರಂಭ ಆರಂಭವಾಗಿತ್ತು!
ಈ ಪ್ರಸಂಗದಲ್ಲಿ ಗುವಿವಿ ಮೌಲ್ಯಮಾಪನ ವಿಭಾಗದಿಂದ ಅಚಾತುರ್ಯ ಘಟಿಸಿರೋದು ಪಕ್ಕಾ, ಚಿನ್ನದ ಪದಕವೇ ಬದಲಾಗಿರೋದು ಗಂಭೀರ ವಿಚಾರ. ಮೊದಲೇ ಸರಿಯಾಗಿ ಅತೀ ಹೆಚ್ಚಿನ ಅಂಕ ಎಣಿಕೆ ಮಾಡಿ ನೋಡದೆ ಪ್ರಮಾದ ನಡೆದಿದ್ದರೂ, ಪ್ರಮಾದವಾಗಿದೆ ಎಂದು ವಿಷಾದಿಸುವ ಪತ್ರ ವಿಳಂಬವಿಲ್ಲದಂತೆ ಭಾಲ್ಕಿ ಕಾಲೇಜಿಗೆ ತಲುಪಿಸಿ ವಿವಿ ಮೌಲ್ಯಮಾಪನ ವಿಭಾಗ ತನ್ನ ಹೊಣೆಗಾರಿಕೆ ಪ್ರದರ್ಶಿಸುವಲ್ಲಿಯೂ ವಿವಿ ಮುಗ್ಗರಿಸಿದೆ. ಆದರಿಲ್ಲಿ ಮೌಲ್ಯಮಾಪನ ಕುಲಸಚಿವರು ಹೊಣೆಗಾರಿಕೆ ಮರೆತು ತೋರಿರುವ ಉದಾಸೀನತಯೇ ಇಂತಹ ಯಡವಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಯಡವಟ್ಟುಗಳಿಂದಲೇ ಸುದ್ದಿಯಾಗಿದ್ದ ಗುವಿವಿ ಮೌಲ್ಯ ಮಾಪನ ವಿಭಾಗಕ್ಕೆ ಈಚೆಗೆ ಲೋಕಾಯುಕ್ತ ಎಸ್ಪಿ ಹಾಗೂ ತಂಡ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಮತ್ತೊಂದು ಮಹಾ ಯಡವಟ್ಟಿಗೆ ಜ್ಞಾನಗಂಗೆ ಸಾಕ್ಷಿಯಾಗಿರೋದು ಪ್ರತಿಭಾವಂತ ವಿದ್ಯಾರ್ಥಿಗಳ ಸಮೂಹದಲ್ಲಿ ಕಳವಳ ಉಂಟು ಮಾಡಿದೆ.
ನಟ ಶಿವಣ್ಣರನ್ನು 'ಚೆಲುವ ಚಾಮರಾಜನಗರ ಬ್ರ್ಯಾಂಡ್'ಗೆ ರಾಯಭಾರಿಯಾಗಿ ನೇಮಿಸಲು ಒತ್ತಾಯ: ಇಲ್ಲದಿದ್ರೆ ಹೋರಾಟದ ಎಚ್ಚರಿಕೆ
ಕಣ್ಣೀರು ಹಾಕಿ ರೋಶನಿ ತಳಮಳ: ಈ ಬಾರಿಯ 42ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪಕಗಳ ಪ್ರದಾನ ಮಾಡಲು ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಆಗಮಿಸಿದ್ದರು. ಪದಕ ಹಂಚಿಕೆಯಲ್ಲಿನ ಯಡವಟ್ಟಿನಿಂದ ಕಣ್ಣೀರು ಹಾಕುತ್ತಿದ್ದ ರೋಶನಿ ಸಮಾರಂಭದ ಮುಂಭಾಗಕ್ಕೆ ಬಂದು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ತಡೆದರು, ಆಗ ರೋಶನಿ ಸಮಾರಂಭ ಮುಗಿಯೋವರೆಗೂ ಕಣ್ಣೀರು ಹಾಕಿದಳು.