ಜಲಾಶಯಗಳ ನಿರ್ವಹಣೆ ಕುರಿತು ಮಾಹಿತಿ ಪಡೆದ ಸರ್ಕಾರ. ಆಲಮಟ್ಟಿ, ಬಸವಸಾಗರದಲ್ಲಿ ಅಳವಡಿಸಲಾಗಿದೆ ಸ್ಟಾಪ್ ಲಾಕ್ ಸಿಸ್ಟಮ್
ಅನಿಲ್ ಬಿರಾದರ್
ಯಾದಗಿರಿ (ಆ.13): ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ (19) ಚೈನ್ ತುಂಡಾಗಿದ್ದರಿಂದ ಅಪಾರ ಪ್ರಮಾಣದಲ್ಲಿ ಕಳೆದೆರಡು ದಿನಗಳಿಂದ ನೀರು ಪೋಲಾಗುತ್ತಿರುವುದರಿಂದ ರಾಜ್ಯದ ಆಣೆಕಟ್ಟುಗಳಿಗೆ ಇದೊಂದು ನಿರ್ವಹಣೆ ನಿಟ್ಟಿನಲ್ಲಿ ಎಚ್ಚರಿಕೆಯ ಗಂಟೆಯಾಗಿದೆ. ಕೊಡೇಕಲ್ ಸಮೀಪದ ಬಸವಸಾಗರ ಜಲಾಶಯದ ಕ್ರಸ್ಟ್ ಗೇಟ್ ಈ ಮೊದಲು 2006 ರಲ್ಲಿ ಕಿತ್ತು ಹೋಗಿದ್ದರಿಂದ ಆಣೆಕಟ್ಟಿನ ಅಧಿಕಾರಿಗಳು ಮತ್ತಷ್ಟು ಅಲರ್ಟ ಆಗಿದ್ದಾರೆ.
ಕೊಡೇಕಲ್ ಸಮೀಪದ ಬಸವಸಾಗರ ಜಲಾಶಯ ಈಗಾಗಲೇ ಪ್ರತಿಶತ 100ರಷ್ಟು ಸಂಪೂರ್ಣ ಭರ್ತಿಯಾಗಿದ್ದು, ತುಂಗಭದ್ರಾ ಆಣೆಕಟ್ಟೆಯ ಗೇಟ್ ದುರಂತದ ನಂತರ ಬಸವಸಾಗರದ ಕ್ರಸ್ಟ್ ಗೇಟ್‌ಗಳನ್ನು ಮತ್ತೊಮ್ಮೆ ಪರೀಶಿಲಿಸಲಾಗಿದೆ. ಎಲ್ಲ 30 ಗೇಟ್‌ಗಳು ಸುಸ್ಥಿತಿಯಲ್ಲಿವೆ ಎಂದು ಆಣೆಕಟ್ಟು ವಿಭಾಗ ಅಧಿಕಾರಿಯಾದ ವಿಜಯಕುಮಾರ ಅರಳಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಟಿಬಿ ಡ್ಯಾಂ ನೀರು ಉಳಿಸಿಕೊಳ್ಳುವ ಪ್ರಯತ್ನ, ಗೇಟ್ ಅಯಸ್ಸು 40 ವರ್ಷ, ಜಲಾಶಯದ್ದು 70 ವರ್ಷ: ಆಂಧ್ರ ತಜ್ಞ ಕನ್ನಯ್ಯ
ಈ ಹಿಂದೆ 2006 ರಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಸವಸಾಗರ ಜಲಾಶಯದ ಕ್ರಸ್ಟ್ ಗೇಟ್ ಸಂಖ್ಯೆ 5 ಸಹ ನೀರಿನ ರಭಸಕ್ಕೆ ಕಿತ್ತು ಹೋಗಿತ್ತು, ಆದರೆ, ಜಲಾಶಯದಲ್ಲಿದ್ದ ಸ್ಟಾಪ್ ಲಾಕ್ ಸಿಸ್ಟಮ್‌ನಿಂದ ಹೆಚ್ಚಿನ ನೀರು ಪೋಲಾಗದಂತೆ ಕಾರ್ಯನಿರ್ವಹಿಸಿದ್ದರಿಂದ 2 ದಿನಗಳಲ್ಲಿಯೇ ನೂತನ ಕ್ರಸ್ಟ್‌ಗೇಟ್ ಅನ್ನು ಅಳವಡಿಸುವ ಮೂಲಕ ಅತಿದೊಡ್ಡ ಅನಾಹುತವನ್ನು ಆಗ ಅಧಿಕಾರಿಗಳು ತಪ್ಪಿಸಿದ್ದರು.
ಕ್ರಸ್ಟ್ ಗೇಟ್ ನಿರ್ವಹಿಸಲು ಮಹತ್ತರ ಪಾತ್ರ ವಹಿಸಿದ್ದ ಕ್ರೇನ್: 2006 ರ ಅಕ್ಟೋಬರ್ ತಿಂಗಳಲ್ಲಿ ನೀರಿನ ರಭಸಕ್ಕೆ ಗೇಟ್ ಕಿತ್ತು ನದಿಯಲ್ಲಿ ಹರಿದು ಹೋದಾಗ, ಪುನಃ 50 ಟನ್ ಸಾಮರ್ಥ್ಯದ ಹೊಸ ಗೇಟ್ ಜಲಾಶಯಕ್ಕೆ ಅಳವಡಿಸುವಾಗ ಕ್ರೇನ್ ಸಂಚರಿಸಲು ವಿನೂತನ ಹಳಿಗಳನ್ನು ಜೋಡಿಸಿದ್ದರಿಂದ ಎರಡೇ ದಿನದಲ್ಲಿ ನೀರಿನ ಪೊಲಾಗುವಿಕೆಯನ್ನು ತಡೆದು ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿತ್ತು.
ತುಂಗಭದ್ರಾ ನೀರು ಉಳಿಸಲು ಗ್ರೇಟ್ ಐಡಿಯಾ ಕೊಟ್ಟ ತಜ್ಞ ಕನ್ನಯ್ಯ, ನೀರು ಪೋಲಾಗುತ್ತಿರುವುದಕ್ಕೆ ಮರುಕ
ರೋಪ್ ಮಾದರಿಯಿಂದ ಕ್ರಸ್ಟ್ ಗೇಟ್‌ಗಳ ನಿರ್ವಹಣೆ: ರೆಡಿಯಲ್ (ತ್ರಿಜ್ಯಾಕಾರದ) ವಿನ್ಯಾಸವುಳ್ಳ 15.12 ಮೀ ಅಳತೆ ಹೊಂದಿದ ಹಾಗೂ 10.50 ಮೀ ವರೆಗೆ ಎತ್ತರಿಸಬಹುದಾದ ಒಟ್ಟು 30 ಪ್ರಮುಖ ಎಲೆಕ್ಟ್ರಾನಿಕ್ ಆಧಾರಿತ ಕ್ರಸ್ಟ್ ಗೇಟ್ ಒಳಗೊಂಡ ಬಸವಸಾಗರ ಜಲಾಶಯದಲ್ಲಿ ಒಳಹರಿವು ಅಧಿಕ ಪ್ರಮಾಣದಲ್ಲಿ ಹರಿದು ಬಂದಾಗ ಗೇಟ್‌ಗಳನ್ನು ಎರಿಸಲು ಎಲೆಕ್ಟ್ರಾನಿಕ್ ಆಧಾರಿತ ರೋಪ್‌ಗಳ ಬಳಕೆ ಮಾಡಲಾಗುತ್ತದೆ. ಪ್ರತಿವರ್ಷ ಆಣೆಕಟ್ಟು ನಿರ್ವಹಣೆ ಹಾಗೂ ಗೇಟ್‌ಗಳ ಪೇಂಟಿಂಗ್, ವೆಲ್ಡಿಂಗ್ ಮತ್ತು ಗ್ರೀಸಿಂಗ್ ಮಾಡುತ್ತಿದ್ದು 60 ರಿಂದ 70 ಲಕ್ಷ ರು. ವರೆಗೆ ವೆಚ್ಚ ತಗಲುತ್ತಿರುವುದಾಗಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ನದಿಗೆ ನೀರು ಬಿಡುವ ಮುನ್ನ ಹಾಗೂ ಬಿಟ್ಟ ನಂತರ ಗ್ರೀಸಿಂಗ್ ಸೇರಿದಂತೆ ಇನ್ನಿತರ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಗೇಟ್‌ಗಳನ್ನು ಆಗಾಗ ಮಾಡುತ್ತಿದ್ದು, ಕಳೆದ ಜುಲೈ ಹಾಗೂ ಈ ತಿಂಗಳ ಆಗಸ್ಟ್ 10ರವರೆಗೆ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದು, ಕೆಲವೊಮ್ಮೆ 3.30 ಲಕ್ಷ ಕ್ಯೂಸೆಕ್ ವರೆಗೆ ಜಲಾಶಯದ ಎಲ್ಲಾ 30 ಕ್ರಸ್ಟ್ ಗೇಟ್‌ಗಳನ್ನು ತೆರೆದು ನೀರು ಬಿಟ್ಟಿದ್ದು ಸೂಕ್ತವಾಗಿ ಕಾರ್ಯನಿರ್ವಸುತ್ತಿರುವುದಾಗಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಭರದಿಂದ ಭಣಗುಟ್ಟಿದ್ದ ಬಸವಸಾಗರ ಜಲಾಶಯ ಇದೀಗ ಭರ್ತಿಯಾಗಿದ್ದು 33.33 ಟಿಎಂಸಿ ಸಾಮರ್ಥ್ಯ ಹಾಗೂ 492.25 ಮೀ ಎತ್ತರವಿರುವ ಜಲಾಶಯದಲ್ಲಿ 33.12 ಟಿಎಂಸಿ ನೀರಿನ ಸಂಗ್ರಹವಿದ್ದು 492.21 ಮೀ. ನೀರಿನ ಮಟ್ಟ ಕಾಯ್ದುಕೊಂಡಿದ್ದಾರೆ.
ಬಸವಸಾಗರದ ಎಲ್ಲಾ 30 ಕ್ರಸ್ಟ್ ಗೇಟ್‌ಗಳನ್ನು ಪರಿಶೀಲಿಸಿದ್ದು ಎಲ್ಲವೂ ಸುಸ್ಥಿತಿಯಲ್ಲಿವೆ, ಜುಲೈ 17ರಿಂದ ಆಗಸ್ಟ್ 10 ರವರೆಗೆ ಜಲಾಶಯದಿಂದ ಹೆಚ್ಚುವರಿ ನೀರನ್ನು ಬದಿಗೆ ಬಿಟ್ಟಿದ್ದು ಕೆಲವೊಮ್ಮ 3.30 ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವುದೇ ನಿದರ್ಶನ.
ವಿಜಯಕುಮಾರ ಅರಳಿ, ಆಣೆಕಟ್ಟು ವಿಭಾಗ ಅಧಿಕಾರಿ, ಬಸವಸಾಗರ ಜಲಾಶಯ.