ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಡಿ.4ರ ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಸಾವಿರಾರು ರೈತರು ಪಾದಯಾತ್ರೆ ಮೂಲಕ ತೆರಳಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಬೆಳಗಾವಿ (ಡಿ.03): ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಡಿ.4ರ ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಸಾವಿರಾರು ರೈತರು ಪಾದಯಾತ್ರೆ ಮೂಲಕ ತೆರಳಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಜಾರಿಗೊಳಿಸಿ ಬಳಿಕ ಅದನ್ನು ವಾಪಸ್ ಪಡೆದಿದೆ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತ್ತು. ಈ ವೇಳೆ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದರು. ಆದರೆ, ಈಗ ಕೃಷಿ ಕಾಯ್ದೆಯನ್ನು ವಾಪಸ್ ಪಡೆದಿಲ್ಲ. ರೈತರ ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪರಾಧ ಗುರುತಿಸುವಲ್ಲಿ ವಿಧಿ ವಿಜ್ಞಾನ ತಜ್ಞರು ಮುಖ್ಯ: ಪ್ರಲ್ಹಾದ್ ಜೋಶಿ
ಈ ಹಿಂದೆ ರೈತರ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೆಂಬಲಿಸಿದ್ದರು. ಕಳೆದ ಅಧಿವೇಶನದಲ್ಲಿ ಸಚಿವ ಶಿವಾನಂದ ಪಾಟೀಲ್ ಕೃಷಿ ಕಾಯ್ದೆ ವಾಪಸ್ ಪಡೆಯುವ ಬಿಲ್ ಮಂಡಿಸಲು ಮುಂದಾಗಿದ್ದರು. ಆಗ ವಿಪಕ್ಷದವರು ವಿರೋಧಿಸಿದ್ದರು. ಬಿಜೆಪಿಯವರು ಜಾರಿಗೆ ತಂದಿರುವ ಕೃಷಿ ಕಾಯ್ದೆ ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಬಿಜೆಪಿ ಜಾರಿ ತಂದ ಭೂಸುಧಾರಣಾ ಕಾಯ್ದೆಯನ್ನ ಅನುಷ್ಠಾನಗೊಳಿಸುವ ಕೆಲಸವನ್ನು ಕಾಂಗ್ರೆಸ್ ಅಚ್ಚುಕಟ್ಟಾಗಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹೈನುಗಾರಿಕೆ ಯೋಜನೆಯಲ್ಲಿ ಸರ್ಕಾರ ರೈತರಿಂದ ₹4 ಹಗಲು ದರೋಡೆ ಮಾಡುತ್ತಿದೆ. ಬರಗಾಲದಿಂದ ರೈತರು ತತ್ತರಿಸಿದ್ದರೂ ಈವರೆಗೂ ಪರಿಹಾರ ಬಂದಿಲ್ಲ. ಮೋದಿ ಸರ್ಕಾರ ರೈತರಿಗೆ ₹ 2 ಸಾವಿರ ಕೊಡುತ್ತಿತ್ತು. ಇದಕ್ಕೆ ರಾಜ್ಯ ಬಿಜೆಪಿ ಸರ್ಕಾರ₹ 2 ಸಾವಿರ ಸೇರಿಸಿ ಕೊಡುತ್ತಿತ್ತು. ಆದರೆ, ಈಗ ಕಾಂಗ್ರೆಸ್ ಸರ್ಕಾರ ಆ ₹ 2 ಸಾವಿರ ಕಟ್ ಮಾಡಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಒಂದೇ ಒಂದು ರೈತ ಪರ ಯೋಜನೆ ಮಾಡಿಲ್ಲ. ಕಬ್ಬು ಬೆಳೆಗಾರರಿಗೆ ಈವರೆಗೂ ಸೂಕ್ತ ದರ ಸಿಗುತ್ತಿಲ್ಲ.
ಬಡವರ ಏಳ್ಗೆಗೆ ಟೊಂಕಕಟ್ಟಿ ನಿಂತ ಪ್ರಧಾನಿ ಮೋದಿ: ಸಂಸದ ರಮೇಶ ಜಿಗಜಿಣಗಿ
ಯಾವುದೇ ಕಾರ್ಖಾನೆಗಳು ರೈತರಿಗೆ ಸೂಕ್ತ ದರ ನೀಡುತ್ತಿಲ್ಲ. ಹಾವೇರಿ ರೈತರಿಗೆ ಒಂದು ದರ, ಹುಬ್ಬಳ್ಳಿ ಧಾರವಾಡ, ಕಾರವಾರದ ರೈತರಿಗೆ ಮತ್ತೊಂದು ದರ ಕೊಡುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿಯಿದೆ. ರಾಜ್ಯ ಸಚಿವ ಸಂಪುಟದ ಸದಸ್ಯರೆಲ್ಲರೂ ಪಂಚರಾಜ್ ಚುನಾವಣೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ನಿಮ್ಮ ಪಕ್ಷವನ್ನು ಗೆಲ್ಲಿಸಲು ಬೇರೆ ರಾಜ್ಯಕ್ಕೆ ಹೋಗಿ ದುಂದು ವೆಚ್ಚ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ರಾಜು ಮೋರವೆ, ಭೀಮಶಿ ಗಡಾದಿ ಮೊದಲಾದವರು ಉಪಸ್ಥಿತರಿದ್ದರು.