ಮತ್ತೊಮ್ಮೆ ರಿಯಾಯ್ತಿ ದರದ ಬೀಜ ವಿತರಿಸಲು ಪ್ರಸ್ತಾವನೆ ಸಲ್ಲಿಸಿ: ಸಚಿವ ಸಂತೋಷ್ ಲಾಡ್‌

By Kannadaprabha News  |  First Published Oct 23, 2024, 9:54 PM IST

ಅತಿಯಾದ ಮಳೆಯಿಂದ ಹಿಂಗಾರು ಬಿತ್ತನೆ ಬೀಜಗಳು ನಾಟಿ ಬಂದಿಲ್ಲ. ಆದ್ದರಿಂದ ಈಗಾಗಲೇ ಕೃಷಿ ಇಲಾಖೆಯಿಂದ ಹಿಂಗಾರು ಬಿತ್ತನೆಗೆ ಬೀಜ ಪಡೆದಿದ್ದ ರೈತರಿಗೆ ಮರಳಿ ರಿಯಾಯಿತಿಯಲ್ಲಿ ಬಿತ್ತನೆ ಬೀಜ ವಿತರಿಸಲು ಅಗತ್ಯವಿರುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸಚಿವ ಸಂತೋಷ್ ಲಾಡ್‌ ಕೃಷಿ ಇಲಾಖೆಗೆ ಸೂಚಿಸಿದರು. 


ಧಾರವಾಡ (ಅ.23): ಅತಿಯಾದ ಮಳೆಯಿಂದ ಹಿಂಗಾರು ಬಿತ್ತನೆ ಬೀಜಗಳು ನಾಟಿ ಬಂದಿಲ್ಲ. ಆದ್ದರಿಂದ ಈಗಾಗಲೇ ಕೃಷಿ ಇಲಾಖೆಯಿಂದ ಹಿಂಗಾರು ಬಿತ್ತನೆಗೆ ಬೀಜ ಪಡೆದಿದ್ದ ರೈತರಿಗೆ ಮರಳಿ ರಿಯಾಯಿತಿಯಲ್ಲಿ ಬಿತ್ತನೆ ಬೀಜ ವಿತರಿಸಲು ಅಗತ್ಯವಿರುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ ಕೃಷಿ ಇಲಾಖೆಗೆ ಸೂಚಿಸಿದರು. ಜಿಪಂ ಸಭಾಂಗಣದಲ್ಲಿ ಜರುಗಿದ 2024-25ನೇ ಸಾಲಿನ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅ. 1ರಿಂದ 14 ರ ವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಗೆ 25 ಸಾವಿರ ಹೆಕ್ಟೇರ್‌ ಬೆಳೆ ನಾಶವಾಗಿದೆ. ಅ. 14ರ ನಂತರದ ನಿರಂತರ ಮಳೆಗೆ ಮತ್ತೆ ಬೆಳೆ ಹಾನಿ, ಬಿತ್ತನೆ ಹಾನಿ ಆಗಿದೆ. ಈ ಕುರಿತು ಸರಿಯಾದ ಸಮೀಕ್ಷೆ ಮಾಡಿ, ಸೂಕ್ತ ವರದಿ ಸಲ್ಲಿಸಲು ಸಚಿವರು ಸೂಚಿಸಿದರು.

ಹಳ್ಳಿಗೆ ಭೇಟಿ ನೀಡಿ: ಮುಂದಿನ ಮೂರನಾಲ್ಕು ದಿನ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಪರಿಸ್ಥಿತಿಯಲ್ಲಿ ಎಲ್ಲ ಹಂತದ ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡಬೇಕು. ತಮ್ಮ ಇಲಾಖೆಗೆ ಸಂಬಂಧಿಸಿದ ಸೇವೆ, ಮೂಲಸೌಕರ್ಯ ಹಾಗೂ ಇತರೆ ಹಾನಿ ಪರಿಶೀಲಿಸಿ, ತಕ್ಷಣ ಸಾರ್ವಜನಿಕರ ನೆರವಿಗೆ ಬರಬೇಕು. ಮಳೆ ಹಾನಿ ಸಂದರ್ಭದಲ್ಲಿ ಮನೆ, ಜಮೀನು, ರಸ್ತೆ, ಸೇತುವೆ, ಕಟ್ಟಡ ಪರಿಶೀಲಿಸಿ ಸ್ಪಂದಿಸಬೇಕು. ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.

Tap to resize

Latest Videos

ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೆ ಪಕ್ಷೇತರರ ಸೆಡ್ಡು

ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ಷೇತ್ರ ಭೇಟಿ ಮೂಲಕ ರೈತರ ಹಾನಿ ಕುರಿತು, ಜನಪ್ರತಿನಿಧಿಗಳ, ರೈತ ಮುಖಂಡರ ಗಮನಕ್ಕೆ ತಂದು ವರದಿ ರೂಪಿಸಬೇಕು. ಹಾನಿಯಾಗಿರುವ ಪ್ರತಿ ರೈತರ ಹೊಲಕ್ಕೆ ಖುದ್ದು ಇಲಾಖೆ ಸಿಬ್ಬಂದಿ, ವಿಮಾ ಕಂಪನಿ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಾಕೀತು ಮಾಡಿದ ಸಚಿವರು, ಪಶುಪಾಲನೆ ಇಲಾಖೆಯಿಂದ ಪಶು ಸಂಜೀವಿನಿ ಮತ್ತು ಪಶು ಸಖಿಯರ ಸೇವೆಯನ್ನು ಎಲ್ಲ ರೈತರಿಗೆ, ಜಾನುವಾರು ಮಾಲೀಕರಿಗೆ ಮುಟ್ಟುವಂತೆ ಮಾಡಬೇಕು. ಪ್ರತಿ ಪಶು ಸಖಿ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿನ ದನ-ಕರುಗಳ ಬಗ್ಗೆ ಸಮೀಕ್ಷೆ ಮಾಡಿ, ಇಲಾಖೆ ಯೋಜನೆಗಳನ್ನು ತಲುಪಿಸುವಂತೆ ಮುಂಜಾಗೃತೆ ವಹಿಸಬೇಕೆಂದರು.

ರಸ್ತೆ ಸುಧಾರಿಸಿ: ಗ್ರಾಮೀಣ ಕುಡಿಯುವ ನೀರು ಶುದ್ಧೀಕರಣ ಘಟಕಗಳ ದುರಸ್ತಿ ಬಗ್ಗೆ ದೂರುಗಳು ಬರುತ್ತಿವೆ. ಜಿಲ್ಲೆಯ ಎಲ್ಲ 476 ಆರ್‌ಒ ಪ್ಲಾಂಟ್‍ಗಳನ್ನು ಗಮನಿಸಲು ಕೇಂದ್ರ ಸ್ಥಾನದಲ್ಲಿ ಡ್ಯಾಶ್ ಬೋರ್ಡ್ ವ್ಯವಸ್ಥೆ ಮಾಡಲು ಸಚಿವರು ಸೂಚಿಸಿದರು. ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗಿದೆ. ಲೋಕೋಪಯೋಗಿ ವಿಭಾಗದಿಂದ ಸಾರ್ವಜನಿಕರ ಸಂಚಾರಕ್ಕೆ ಅಗತ್ಯವಿರುವ ರಸ್ತೆಗಳ ತುರ್ತು ದುರಸ್ತಿಗೆ ಕ್ರಮವಹಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಮಳೆ ನಿರಂತರವಾಗಿರುವದರಿಂದ ಬೆಳೆ ಹಾನಿ ಹೆಚ್ಚಾಗಿದೆ. ಹಿಂಗಾರಿಗಾಗಿ ಬಿತ್ತಿದ್ದ ಬೀಜಗಳು ಕೊಚ್ಚಿ ಹೋಗಿವೆ. 

ಯುವಶಕ್ತಿಯೇ ಕಾಂಗ್ರೆಸ್ ಪಕ್ಷದ ಆಸ್ತಿ: ಮಾಜಿ ಸಂಸದ ಡಿ.ಕೆ.ಸುರೇಶ್

ಇವುಗಳ ಮರು ಸಮೀಕ್ಷೆ ಆಗಬೇಕು. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಜಮೀನುಗಳಿಗೆ ತಪ್ಪದೇ ಭೇಟಿ ನೀಡಿ, ನಿಖರವಾಗಿ ಹಾನಿ ದಾಖಲಿಸಬೇಕೆಂದು ಹೇಳಿದರು. ಶಾಸಕ ಅಬ್ಬಯ್ಯ ಪ್ರಸಾದ, ಮಹಾನಗರದಲ್ಲಿ ನೀರು ಸರಬರಾಜು ಸುಧಾರಿಸಬೇಕು. ಸರ್ಕಾರಿ ಉಪಯೋಗಕ್ಕಾಗಿ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಬೇಕು. ಬಹಳಷ್ಟು ಯೋಜನೆಗಳಿಗೆ, ಗೃಹ ನಿರ್ಮಾಣಕ್ಕಾಗಿ ಜಮೀನು ಅಗತ್ಯವಿದೆ. ಆರೋಗ್ಯ ಇಲಾಖೆ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು. ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಸ್ವರೂಪ ಟಿ.ಕೆ. ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಉಪಾಧ್ಯಕ್ಷ ಆರ್.ಎಸ್. ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

click me!