ನೀರಿನ ತೊಟ್ಟಿಗೆ ಇಳಿದ ವಿದ್ಯಾರ್ಥಿಯ ದುರಂತ ಸಾವು

By Kannadaprabha NewsFirst Published Jan 26, 2021, 11:44 AM IST
Highlights

ಶಾಲೆಯ ನೀರಿನ ತೊಟ್ಟಿಗೆ ಇಳಿದ ವಿದ್ಯಾರ್ಥಿ ದುರಂತ ಸಾವು ಕಂಡಿದ್ದಾನೆ. ಗಣರಾಜ್ಯೋತ್ಸವ ಹಿನ್ನೆಲೆ ಸ್ವಚ್ಛತಾ ಕಾರ್ಯಗಳು ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. 

ಚಿಕ್ಕಬಳ್ಳಾಪುರ (ಜ.26): ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿದ್ದ ನೀರಿನ ಸಂಪು ಸ್ವಚ್ಛಗೊಳಿಸಲು ವಿದ್ಯಾರ್ಥಿ ಇಳಿದಿದ್ದ ವೇಳೆ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿರುವ ಧಾರುಣ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಸಮೀಪದ ಶೆಟ್ಟಿಹಳ್ಳಿ ಗ್ರಾಮದಲ್ಲಿ  ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಶಂಕರಪ್ಪನವರ ಪುತ್ರ 12 ವರ್ಷದ ನಂದೀಶ್‌ ಎಂದು ಗುರುತಿಸಲಾಗಿದೆ. ಈ ದುರಂತಕ್ಕೆ ಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಕಿರಿತ ಪ್ರಾಥಮಿಕ ಶಾಲೆಯ ಶಿಕ್ಷಕರೇ ಕಾರಣ ಎಂದು ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿರಸಿ: ನೇಣು ಬಿಗಿದು ಪ್ರೇಮಿಗಳ ಆತ್ಮಹತ್ಯೆ, ಕಾರಣ..? ...

ಮಂಗಳವಾರ ಶಾಲೆಯಲ್ಲಿ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಶಾಲಾ ಆವರಣವನ್ನು ವಿದ್ಯಾರ್ಥಿಗಳಿಂದೇ ಸ್ವಚ್ಛಗೊಳಿಸಲಾಗುತ್ತಿತ್ತು. ಈ ವೇಳೆ ಆವರಣದಲ್ಲಿದ್ದ ನೀರಿನ ತೊಟ್ಟಿಯಿಂದ ನೀರು ತೆಗೆದುಕೊಳ್ಳುವ ವೇಳೆ ನೀರಿನ ಬಕೆಟ್‌ ಹಗ್ಗ ತುಂಡಾಗಿ ತೊಟ್ಟಿಒಳಗೆ ಬಿದ್ದಿದೆ. ಆಗ ನಂದೀಶ್‌ ಬಕೆಟ್‌ ಎತ್ತಿಕೊಳ್ಳಲು ತೊಟ್ಟಿಗೆ ಇಳಿದಾಗ ವಿದ್ಯುತ್‌ ಸ್ಪರ್ಶಿಸಿ ನಂದೀಶ್‌ ತೊಟ್ಟಿಯಲ್ಲಿ ಬಿದ್ದು ಮೃತ ಪಟ್ಟಿದ್ದಾನೆ.

ಕುಟುಂಬಕ್ಕೆ ಒಬ್ಬನೇ ಮಗ:  ವಿಷಯ ತಿಳಿಯುತ್ತಿದ್ದಂತೆ ಪೋಷಕರು ಶಾಲೆಯ ಬಳಿ ಆಗಮಿಸಿ ದುರಂತದಲ್ಲಿ ಮನೆಗೆ ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಶಂಕರಪ್ಪ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಕೂಡ ಘಟನೆಗೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮೂರಿನ ಶಿಕ್ಷಕರು ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ಕೊಡಲ್ಲ. ಮಕ್ಕಳಿಂದಲೇ ಎಲ್ಲ ಕೆಲಸವನ್ನು ಮಾಡಿಸುತ್ತಾರೆಂದು ಮೃತ ಬಾಲಕನ ತಂದೆ ಶಂಕರಪ್ಪ ಶಾಲೆಯ ಶಿಕ್ಷಕರ ವಿರುದ್ಧ ಕಿಡಿಕಾರಿದರು. ಆದರೆ ಶಿಕ್ಷಕರು ಹೇಳುವ ಪ್ರಕಾರ ತಾವು ಬರುವುದಕ್ಕೆ ಮೊದಲೇ ವಿದ್ಯಾರ್ಥಿಗಳು ಶಾಲಾ ಆವರಣದ ಸ್ವಚ್ಛತೆಯಲ್ಲಿ ತೊಡಗಿದ್ದರೆಂದು ಹೇಳುತ್ತಿದ್ದಾರೆ.

click me!