*ಮಗಳನ್ನು ಕಳೆದುಕೊಂಡ ಪೋಷಕರ ನೋವು
* ನನ್ನ ಮಗಳು ಕೈ ಮುಗಿದುಕೊಂಡು ಪರೀಕ್ಷೆ ಬರೆಯಲು ಹೋಗಿದ್ಲು
* ತಾಯಿಯ ಅಳು ಇನ್ನು ನಿಂತಿಲ್ಲ
* ಉತ್ತರ ಪತ್ರಿಕೆ ಕಿತ್ತುಕೊಂಡಿದ್ದಕ್ಕೆ ಆಘಾತವಾಯ್ತು
ವರದಿ : ಮಧು.ಎಂ.ಚಿನಕುರಳಿ, ಮೈಸೂರು
ಮೈಸೂರು(ಮಾ. 30) ಲವಲವಿಕೆಯಿಂದ ಪರೀಕ್ಷೆಗೆ ತೆರಳಿದ್ದ ಮಗಳು ಇದ್ದಕ್ಕಿದ್ದಂತೆ ಸಾವಿಗೀಡಾದ ದುಖಃ ತಾಯಿ (Mother)ಜೀವವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಗಳು ತೀರಿಕೊಂಡು ಮೂರು ದಿನ ಕಳೆದರೂ ತಾಯಿ ಮಾತ್ರ ಮಗಳನ್ನು ನೆನೆದು ಅಳುವುದನ್ನು ಮಾತ್ರ ನಿಲ್ಲಿಸಿಲ್ಲ. ಅದೇ ದುಖಃದಲ್ಲಿರುವ ತಾಯಿ ಜೀವ ಶಿಕ್ಷಕರ ಅಜಾಗರೂಕತೆಯೇ ಮಗಳ ಸಾವಿಗೆ ನಾಂದಿ ಎನ್ನುತ್ತಿದೆ.
ಹೋಗಿ ಬರುತ್ತೇನೆ ಎಂದವಳು ಶವವಾಗಿ ಬಂದಳು: ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಬರೆಯುವ ವೇಳೆ ಕುಸಿದುಬಿದ್ದು ಸಾವನ್ನಪ್ಪಿದ (Death) ಅನುಶ್ರೀ ಕುಟುಂಬ ಸದಸ್ಯರ ಸಂಕಟ ಹೇಳತೀರದಾಗಿದೆ. ಎರಡು ದಿನ ಕಳೆದರೂ ಅನುಶ್ರೀ ತಾಯಿ ಲಕ್ಷ್ಮಿ ಮನೆ ಮುಂದೆ ರೋದಿಸುತ್ತಿರುವ ದೃಶ್ಯ ಕರುಳು ಹಿಂಡುತ್ತಿದೆ. ಮಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ತಾಯಿ ಲಕ್ಷ್ಮಿ, ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾಳೆ. ಕೊಠಡಿ ಮೇಲ್ವಿಚಾರಕರು ಬೆದರಿಸದಿದ್ದರೆ ನನ್ನ ಮಗಳು ಸಾಯುತ್ತಿರಲಿಲ್ಲ. ಅಲ್ಲಿಯೇ ಪರೀಕ್ಷೆ ಬರೆಯಲು ಬಿಟ್ಟು ಬಿಟ್ಟಿದ್ರೆ ಹೇಗೋ ಮನೆಗೆ ಬಂದು ಬಿಡುತಿದ್ಲು. ಉತ್ತರ ಪತ್ರಿಕೆ(Answer Paper) ಕಿತ್ತು ಕೊಂಡಿದ್ದರಿಂದಲೇ ಅವಳು ಗಾಬರಿಯಾಗಿ ಈ ರೀತಿ ಸಾವೀಗೀಡಾಗಿದ್ದಾಳೆ ಎಂಬುದು ಅನುಶ್ರೀ ತಾಯಿ ಲಕ್ಷ್ಮಿ ಆರೋಪವಾಗಿದೆ.
ನನ್ನ ಮಗಳು ಒಂದು ತಿಂಗಳಿಂದ ಪರೀಕ್ಷೆ ಬರೆಯಲು ತಯಾರಾಗಿದ್ದಳು. ಬ್ಯಾಗ್ ತೊಳೆದುಕೊಂಡು ಬುಕ್ ಎಲ್ಲ ರೆಡಿ ಮಾಡಿಕೊಂಡಿದ್ಲು. ಬೆಳಿಗ್ಗೆ ಆಟೋ ಹತ್ತಿ ಪರೀಕ್ಷೆ ಬರೆಯಲು ಹೋರಟವಳನ್ನು ಹೆಣವಾಗಿ ಕಳುಹಿಸಿದ್ದಾರೆ ಶಿಕ್ಷಕರು ಎನ್ನುವಾಗ ತಾಯಿ ಕಣ್ಣಲ್ಲ ಗಳಗಳನೆ ಕಣ್ಣೀರು ಸುರಿಯತೊಡಗಿತು. ಅಜ್ಜಿಗೆ ಹೋಗಿ ಬರುತ್ತೇನೆ ಎಂದವರಳು ಹೆಣವಾಗಿ ಬಂದುಬಿಟ್ಟಳು ಎಂದು ಬಿಕ್ಕಿ ಬಿಕ್ಕಿ ಅಳುತಿದ್ದಾರೆ ಮೃತ ಅನುಶ್ರೀ ತಾಯಿ.
ಪರೀಕ್ಷಾ ಕೇಂದ್ರದಲ್ಲಿ ಸ್ಥಳ ಬದಲಾವಣೆ ಆಗಿತ್ತಂತೆ. ಅಷ್ಟಕ್ಕೇ ಅವಳ ಉತ್ತರ ಪತ್ರಿಕೆ ಕಸಿದುಕೊಂಡು ಹೊರಗೆ ಕಳುಹಿಸಿದ್ದಾರೆ. ಬೇರೆ ಕಟ್ಟಡಕ್ಕೆ ಹೋಗಬೇಕು ಎಂದು ಹೇಳಿ ಗಾಬರಿ ತರಿಸಿದ್ದಾರೆ. ಇದರಿಂದಲೇ ನನ್ನ ಮಗಳು ಗಾಬರಿಯಿಂದ ಸಾವನ್ನಪ್ಪಿದ್ದಾಳೆ. ಇದಕ್ಕೆಲ್ಲ ಪರೀಕ್ಷಾ ಕೇಂದ್ರದಲ್ಲಿದ್ದ ಶಿಕ್ಷಕರೇ ಹೊಣೆಯಾಗಿದ್ದು, ನನ್ನ ಮಗಳಿಗೆ ಬಂದ ಪರಿಸ್ಥಿತಿ ಮತ್ಯಾರಿಗೂ ಬರಬಾರದು ಎಂದಿದ್ದಾರೆ. ನನ್ನ ಮಗಳು ಓದಿ ವೈದ್ಯೆ ಆಗಬೇಕು ಎನ್ನುತ್ತಿದ್ಲು. ನಮ್ಮ ಬಳಿ ಅಷ್ಟು ಶಕ್ತಿ ಇಲ್ಲ ಅಂತ ಅವಳನ್ನ ಸಮಾಧಾನ ಮಾಡುತ್ತಿದ್ದೆ. ಈಗ ಅವಳೇ ಹೆಣವಾಗಿಬಿಟ್ಟಿದ್ದಾಳೆ ಎಂದು ಲಕ್ಷ್ಮಿ ಗೋಳಾಟ ಮುಂದುವರಿಸಿದರು.
ನನ್ನ ಮಗಳು ಕೈ ಮುಗಿದುಕೊಂಡು ಪರೀಕ್ಷೆ ಬರೆಯಲು ಹೋಗಿದ್ಲು: ಅಷ್ಟಕ್ಕೂ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕು ಅಕ್ಕೂರು ಗ್ರಾಮದ ಅನುಶ್ರೀ ತಂದೆ ತಾಯಿ ತೀರಾ ಬಡ ಕುಟುಂಬದವರು. ತಾಯಿ ಲಕ್ಷ್ಮಿ ಮನೆ ಕೆಲಸ ಮಾಡಿಕೊಂಡಿದ್ದರೆ, ತಂದೆ ಕೆಂಪರಾಜು ಕೂಲಿ ಕೆಲಸಕ್ಕಾಗಿ ಊರುರು ಅಲೆಯುವರು. ಅನುಶ್ರೀ ಪರೀಕ್ಷೆ ಬರೆಯಲು ತೆರಳಿದ್ದ ದಿನ ಕೂಡ ಕೆಂಪರಾಜು ತಿ.ನರಸೀಪುರದಲ್ಲಿ ಗಾರೆ ಕೆಲಸಕ್ಕೆ ಹೋಗಿದ್ದರು. ಅವರ ತಮ್ಮ ಮಗಳಿಗೆ ಉಷಾರಿಲ್ಲ ಅಂತ ಹೇಳಲಾಗಿ ಆಸ್ಪತ್ರೆಗೆ ಹೋಗಿ ವಿಚಾರಿಸಿದ್ದಾರೆ. ಅಲ್ಲಿ ಮಗಳು ಸಾವೀಗೀಡಾದ ವಿಚಾರ ತಿಳಿದು ದಿಗ್ಬ್ರಾಂತರಾಗಿಬಿಟ್ಟಿದ್ದರು. ಪರೀಕ್ಷೆ ಕೇಂದ್ರದಲ್ಲಿ ಜಾಗ ಬದಲಾಗಿದೆ ಅಂತ ಶಿಕ್ಷಕರು ಅವಳನ್ನ ತಳ್ಳಿ ಬಿಟ್ಟಿದ್ದಾರೆ. ಇದರಿಂದ ನನ್ನ ಮಗಳಿಗೆ ಆಘಾತ ಆಗಿದೆ ಎಂಬುದು ಅನುಶ್ರೀ ತಂದೆ ಕೆಂಪರಾಜು ವಾದ.
SSLC ಪರೀಕ್ಷೆ ವೇಳೆ ವಿದ್ಯಾರ್ಥಿನಿ ಸಾವು; ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳೋದೇನು?
ಎಲ್ಲವನ್ನು ಸರಿಯಾಗಿ ನೋಡಿಕೊಳ್ಳಬೇಕಿರೋದು ಶಿಕ್ಷಕರ ಜವಾಬ್ದಾರಿ ಅಲ್ಲವೆ!: ಮಕ್ಕಳು ಪರೀಕ್ಷೆ ಬರೆಯುವಾಗ ಎಲ್ಲ ಅನುಕೂಲ ಮಾಡಿಕೊಡುವುದು ಶಿಕ್ಷಕರ ಕೆಲಸ. ಸೀಟ್ ನಂಬರ್, ರಿಜಿಸ್ಟರ್ ನಂಬರ್ ಎಲ್ಲವನ್ನು ತೋರಿಸಬೇಕಿತ್ತು. ಮಕ್ಕಳಿಗೆ ಗಾಬರಿ ಆಗದಂತೆ ದೈರ್ಯ ಹೇಳಬೇಕಿತ್ತು. ಇದನ್ನು ಮಾಡದ ಪರಿಕ್ಷಾ ಕೊಠಡಿ ಸಿಬ್ಬಂದಿಗಳು ನನ್ನ ಅಣ್ಣನ ಮಗಳ ಸಾವಿಗೆ ಕಾರಣವಾದರು ಅಂತ ಅನುಶ್ರೀ ಚಿಕ್ಕಪ್ಪ ಮಹೇಶ್ ಹೇಳುತ್ತಾರೆ. ಮೇಲಾಗಿ ಅಂದು ರಜೆ ಇದ್ದ ಹುಡುಗ ಪರೀಕ್ಷೆ ಬರೆಯಲು ಬಂದಿದ್ದರೆ ನನ್ನ ಮಗಳು ಸಾಯುತ್ತಿರಲಿಲ್ಲವೇನೋ. ಬೇರೆ ಕಟ್ಟಡ ಅಂತ ಹೇಳಿ ಅರ್ಧ ಪರೀಕ್ಷೆ ಬರೆದಿದ್ದ ಮಗಳ ಪೇಪರ್ ಕಿತ್ತುಕೊಳ್ಳಲಾಗಿದೆ. ಇದರಿಂದ ಮುಂದೇನಪ್ಪ ಎನ್ನುವ ಗಾಬರಿಯಲ್ಲಿ ಈಗೆ ಆಗಿದೆ. ಅಲ್ಲಿ ಸರಿಯಾದ ನಿರ್ವಹಣೆ ಮಾಡದವರೇ ಇದಕ್ಕೆಲ್ಲ ಕಾರಣ ಎನ್ನುವುದು ಅನುಶ್ರೀ ಚಿಕ್ಕಪ್ಪ ಮಹೇಶ್ ಮಾತು.
ಕೇಂದ್ರದಲ್ಲಿದ್ದ ಇಬ್ಬರಿಗೆ ಸದ್ಯ ಕೆಲಸವಿಲ್ಲ: ಇನ್ನು ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅನುಶ್ರೀ ಮನೆಗೆ ತೆರಳಿದ ಡಿಡಿಪಿಐ ರಾಮಚಂದ್ರರಾಜೇ ಅರಸ್ ವಿದ್ಯಾರ್ಥಿನಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಶಿಕ್ಷಣ ಇಲಾಖೆ ವತಿಯಿಂದ ಮೃತಳ ಕುಟುಂಬಕ್ಕೆ ಒಂದು ಲಕ್ಷ ಪರಿಹಾರದ ಚೆಕ್ ವಿತರಿಸಲಾಗಿದ್ದು, ಘಟನೆ ಸಂಬಂಧಿಸಿದಂತೆ ಕೇಂದ್ರದ ಮುಖ್ಯಸ್ಥ ಪುಟ್ಟಬುದ್ದಿ ಹಾಗೂ ಕೊಠಡಿ ಮೇಲ್ವಿಚಾರಕ ಕಿರಣ್ ಇಬ್ಬರನ್ನು ಪರಿಕ್ಷೆ ಕೆಲಸದಿಂದ ಬಿಡುಗಡೆಗೊಳಿಸಿದ್ದಾರೆ. ಸಿಬ್ಬಂದಿಗಳಿಬ್ಬರಿಗೂ ಶೋಕಾಸ್ ನೋಟಿಸ್ ನೀಡಲಾಗಿದ್ದು, ಇಲಾಖೆ ವಿಚಾರಣೆ ನಂತರ ಮುಂದಿನ ಕ್ರಮ ಎಂದಿದ್ದಾರೆ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್.
ಅಷ್ಟಕ್ಕೂ ಮಾರ್ಚ್ 28ರಂದು ತಿ.ನರಸೀಪುರ ತಾಲೂಕಿನ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಂದಿದ ಅನುಶ್ರೀ ತಪ್ಪಾದ ಜಾಗದಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದಳು. ಪರೀಕ್ಷೆ ಆರಂಭವಾದ ಅರ್ಧ ಗಂಟೆ ನಂತರ ಅದನ್ನ ಗಮನಿಸಿದ ಕೊಠಡಿ ಮೇಲ್ವಿಚಾರಕ ಕಿರಣ್ ಅನುಶ್ರೀ ಕುಳಿತಿದ್ದ ಜಾಗದಲ್ಲಿ ಬೆರೊಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಯಬೇಕಿದ್ದು, ಆತ ಗೈರು ಎಂದು ತಿಳಿಸಿದ್ದರು. ಅಲ್ಲದೆ ಅನುಶ್ರೀ ಮತ್ತೊಂದು ಕಟ್ಟಡದಲ್ಲಿ ಪರೀಕ್ಷೆ ಬರೆಯಬೇಕಿದ್ದು ಅಲ್ಲಿಗೆ ಆಕೆಯನ್ನು ತರಾತುರಿಯಲ್ಲಿ ಕಳುಹಿಸಿದ್ದರು. ಈ ವೇಳೆ ಮೆಟ್ಟಿಲು ಇಳಿಯುವಾಗ ವಿದ್ಯಾರ್ಥಿನಿ ಅನುಶ್ರೀ ಕುಸಿದು ಬಿದ್ದಿದ್ದಳು. ಆಕೆಯನ್ನು ತಿ.ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅನುಶ್ರೀ ಸಾವನಪ್ಪಿದ್ದಳು. ಅನುಶ್ರೀ ಪೋಷಕರು ತಿ.ನರಸೀಪುರ ಠಾಣೆಯಲ್ಲಿ ನೀಡಿದ ದೂರಿನನ್ವಯ ಸಿಬ್ಬಂದಿಗಳಿ ಮೇಲೆ ತಕ್ಷಣದ ಕ್ರಮ ಜರುಗಿದೆ.