
16 ವರ್ಷದ ವಯಸ್ಸಿನ ಒಳಗೆ ಇರುವ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡುವಂಥ ಮಹತ್ವದ ನಿರ್ಧಾರವನ್ನು ಕರ್ನಾಟಕ ಸರ್ಕಾರ ಇಂದು ಬಜೆಟ್ನಲ್ಲಿ ಮಂಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಅತಿಯಾಗಿರುವ ಕೆಟ್ಟ ಪರಿಣಾಮದಿಂದಾಗಿ ಸರ್ಕಾರ ಇದನ್ನು ಜಾರಿಗೆ ತಂದಿರುವುದಕ್ಕೆ ಬಹುತೇಕ ಎಲ್ಲರೂ ಖುಷಿ ಪಡುತ್ತಿದ್ದಾರೆ. ಅದರಲ್ಲಿಯೂ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಸಬೇಡಿ ಎಂದು ಹೇಳಿ ಹೇಳಿ ಸುಸ್ತಾಗಿರೋ ಪೋಷಕರಿಗಂತೂ ಇದು ಇನ್ನಿಲ್ಲದ ಖುಷಿ ತಂದಿದೆ. ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ ಕಾಪಾಡುವುದಕ್ಕಾಗಿ ಇಂಥದ್ದೊಂದು ನಿಯಮ ಇಂದಿನ ಅಗತ್ಯವೂ ಆಗಿದೆ.
ಹಾಗೆಂದು ಇದಾಗಲೇ ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಈ ನಿಯಮ ಇದಾಗಲೇ ಜಾರಿಗೆ ತರಲಾಗಿದೆ. ಆಸ್ಟ್ರೇಲಿಯಾ ಇತ್ತೀಚೆಗೆ 16 ವರ್ಷದೊಳಗಿನ ಮಕ್ಕಳಿಗಾಗಿ ಹೆಚ್ಚಿನ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿದ ವಿಶ್ವದ ಮೊದಲ ದೇಶವಾಯಿತು, ಇದು ವೇದಿಕೆಗಳು ಬಳಕೆದಾರರ ವಯಸ್ಸನ್ನು ಪರಿಶೀಲಿಸುವುದು ಮತ್ತು ಅಪ್ರಾಪ್ತ ಬಳಕೆದಾರರ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಭಾರತದ ಮಟ್ಟಿಗೆ ಹೇಳುವುದಾದರೆ ಆಂಧ್ರ ಪ್ರದೇಶ ಇದನ್ನು ಜಾರಿಗೆ ಇದಾಗಲೇ ತಂದಿದೆ. ಇದರ ಪರಿಣಾಮಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.
ಆದರೆ, ರಾಜ್ಯಗಳು ಕಾನೂನು ಜಾರಿಗೆ ತಂದರೆ ಆಗುವುದಿಲ್ಲ. ಸದ್ಯ ಆಂಧ್ರದಲ್ಲಿಯೂ ಇಂಥದ್ದೇ ಸಮಸ್ಯ ಉಂಟಾಗಿದೆ. ಏಕೆಂದರೆ, ಆಂಧ್ರಪ್ರದೇಶ ಸರ್ಕಾರವು ಜಾಗತಿಕ ನಿಯಂತ್ರಕ ಚೌಕಟ್ಟುಗಳನ್ನು ಅಧ್ಯಯನ ಮಾಡಲು ಸಚಿವರ ಗುಂಪನ್ನು ಸ್ಥಾಪಿಸಿದೆ ಮತ್ತು ಮೆಟಾ, ಎಕ್ಸ್, ಗೂಗಲ್ ಮತ್ತು ಶೇರ್‌ಚಾಟ್ ಸೇರಿದಂತೆ ಪ್ರಮುಖ ವೇದಿಕೆಗಳನ್ನು ಸಮಾಲೋಚನೆಗಾಗಿ ಆಹ್ವಾನಿಸಿದೆ. ಕಂಪನಿಗಳು ಇನ್ನೂ ಆಹ್ವಾನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏಕೆಂದರೆ, ಹೀಗೆ ಬ್ಯಾನ್ ಮಾಡಿದರೆ, ಇಂಥ ಕಂಪೆನಿಗಳು ತಮ್ಮ ಸ್ವಾರ್ಥವನ್ನೂ ನೋಡಿಕೊಳ್ಳುವ ಅಗತ್ಯವಿದೆಯಲ್ಲ! ಇದರ ಬೆನ್ನಲ್ಲೇ ಗೋವಾ ಕೂಡ ಈ ಬಗ್ಗೆ ಚಿಂತನೆ ಮಾಡುತ್ತಿದೆ.
ಯಾವುದೇ ಕಾನೂನು ಜಾರಿಗೆ ತಂದರೂ ರಂಗೋಲಿ ಕೆಳಗೆ ನುಸುಳುವ ಬಹಳ ದೊಡ್ಡ ಪ್ರಮಾಣದ ಮಂದಿ ಇದ್ದೇ ಇರುತ್ತಾರೆ. ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡುವಂಥ ಅತಿ ಮುಖ್ಯವಾದ ಹಾಗೂ ಅಷ್ಟೇ ಒಳ್ಳೆಯ ನಿರ್ಧಾರದ ಕುರಿತು ಕೂಡ ಇದೇ ಕಳವಳವೂ ವ್ಯಕ್ತವಾಗುತ್ತಿದೆ. ಡಿಜಿಟಲ್ ಹಕ್ಕುಗಳ ಕಾರ್ಯಕರ್ತ ನಿಖಿಲ್ ಪಹ್ವಾ ಅವರು ಬಿಬಿಸಿಗೆ ಹೇಳಿರುವಂತೆ, ರಾಜ್ಯ ಮಟ್ಟದ ನಿಷೇಧಗಳನ್ನು ಜಾರಿಗೊಳಿಸುವುದು ಜಟಿಲ ಎನ್ನುವುದು. "ಕಂಪನಿಗಳು ಐಪಿ ವಿಳಾಸಗಳ ಮೂಲಕ ಬಳಕೆದಾರರ ಸ್ಥಳಗಳನ್ನು ಊಹಿಸಬಹುದಾದರೂ, ಅಂತಹ ವ್ಯವಸ್ಥೆಗಳು ಹೆಚ್ಚಾಗಿ ತಪ್ಪಾಗಿರುತ್ತವೆ. ರಾಜ್ಯಗಳ ಗಡಿಗಳು ತುಂಬಾ ಹತ್ತಿರದಲ್ಲಿದ್ದಾಗ, ಒಂದು ರಾಜ್ಯವು ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಿದರೆ ಮತ್ತು ಇನ್ನೊಂದು ರಾಜ್ಯವು ನಿಷೇಧಿಸದಿದ್ದರೆ ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ. ಆಗ ಮಕ್ಕಳು ಬೇರೆ ರೀತಿಯಲ್ಲಿ ತಲೆ ಉಪಯೋಗಿಸುತ್ತಅರೆ ಎನ್ನುತ್ತಾರೆ.
ಅಷ್ಟೇ ಅಲ್ಲದೇ, "ವಯಸ್ಸಿನ ಪರಿಶೀಲನೆ ಸರಳವಲ್ಲ. ಅಂತಹ ನಿಷೇಧಗಳನ್ನು ಪಾಲಿಸಲು, ಕಂಪನಿಗಳು ಇಂಟರ್ನೆಟ್‌ನಲ್ಲಿರುವ ಪ್ರತಿಯೊಂದು ಸೇವೆಯನ್ನು ಬಳಸಿಕೊಂಡು ಪ್ರತಿಯೊಬ್ಬ ವ್ಯಕ್ತಿಯನ್ನು ಪರಿಣಾಮಕಾರಿಯಾಗಿ ಪರಿಶೀಲಿಸಬೇಕಾಗುತ್ತದೆ. ಇದಾಗೇ ಆಸ್ಟ್ರೇಲಿಯಾದಲ್ಲಿ ಹಲವಾರು ಮಕ್ಕಳು ಹೊಸ ಖಾತೆಗಳನ್ನು ರಚಿಸಲು ನಕಲಿ ಜನ್ಮದಿನಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ ಎಂದು ಟೆಕ್ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ನ ಸಾರ್ವಜನಿಕ ನೀತಿ ತಜ್ಞ ಮತ್ತು ಕಾರ್ಯಕ್ರಮಗಳ ಮುಖ್ಯಸ್ಥ ಪ್ರತೀಕ್ ವಾಘ್ರೆ ಹೇಳುತ್ತಾರೆ. ಅನೇಕ ಖಾತೆಗಳನ್ನು, ಕುಟುಂಬ ಸದಸ್ಯರು ಅಥವಾ ಸ್ನೇಹಿತರ ಸಹಾಯದಿಂದ ರಚಿಸಲಾಗಿದೆ ಮತ್ತು ವೈಯಕ್ತಿಕ ಇಮೇಲ್ ವಿಳಾಸಗಳಿಗೆ ಲಿಂಕ್ ಮಾಡಲಾಗಿಲ್ಲ, ಇದು ವಯಸ್ಸಿನ ಪರಿಶೀಲನಾ ವ್ಯವಸ್ಥೆಗಳಿಗೆ ಆಧಾರವಾಗಿರುವ ವೈಯಕ್ತಿಕ ಮಾಲೀಕತ್ವದ ಊಹೆಗಳನ್ನು ಸಂಕೀರ್ಣಗೊಳಿಸುತ್ತದೆ ಎನ್ನುವುದು ಅವರ ಅಭಿಮತ.
ಆದ್ದರಿಂದ ಮುಖ್ಯವಾಗಿ ಇಲ್ಲಿ ಬೇಕಿರುವುದು ಸರ್ಕಾರದ ಕಾನೂನಿಗಿಂತಲೂ ಮುಖ್ಯವಾಗಿ, ಪೋಷಕರು ಸ್ವತಃ ಮಕ್ಕಳಿಗೆ ಸಾಕಷ್ಟು ಸಮಯವನ್ನು ನೀಡುವುದು ಹಾಗೂ ಅವರ ಜೊತೆ ಕಾಲ ಕಳೆಯುವುದು ಆಗಿದೆ ಎನ್ನುವುದು ತಜ್ಞರ ಅಭಿಮತ. ಇದೇ ವೇಳೆ ಎಷ್ಟೋ ಚಿಕ್ಕ ಮಕ್ಕಳು ಸೋಷಿಯಲ್ ಮೀಡಿಯಾವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಟ್ಯಾಲೆಂಟ್ ಇರುವ ಮಕ್ಕಳೂ ಖಾತೆಗಳನ್ನು ತೆರೆದಿದ್ದಾರೆ. ಅವರು ಅದನ್ನು ಒಳ್ಳೆಯದ್ದಕ್ಕೆ ಮಾತ್ರ ಉಪಯೋಗ ಮಾಡುತ್ತಿದ್ದಾರೆ. ಇವರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಎಲ್ಲರೂ ಕಳ್ಳಮಾರ್ಗ ಹುಡುಕಲು ಇನ್ನಷ್ಟು ಟೈಮ್ ವೇಸ್ಟ್ ಮಾಡುತ್ತಾರೆ ಎನ್ನಲಾಗುತ್ತಿದೆ. ಅದೇನೇ ಇದ್ದರೂ, ಒಂದಷ್ಟು ಜನರಿಗಾದರೂ ಈ ಕಾನೂನು ಉಪಯೋಗಕ್ಕೆ ಬರುವುದು ಸದ್ಯದ ಸಮಾಧಾನದ ಸಂಗತಿಯಾಗಿದೆ.