Karnataka Budget: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮರುನಾಮಕರಣ, ಹೊಸ ಹೆಸರು ಏನು ಗೊತ್ತಾ?

Published : Mar 06, 2026, 11:25 AM IST
victoria hospital renamed

ಸಾರಾಂಶ

ರಾಜ್ಯ ಸರ್ಕಾರವು ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಗೆ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಹೆಸರನ್ನು ಇಡಲು ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಈ ಘೋಷಣೆ ಮಾಡಿದ್ದು, ಬ್ರಿಟಿಷ್ ರಾಣಿಯ ಹೆಸರಿನ ಬದಲಿಗೆ ನಾಡಿನ ರೈತ ಹೋರಾಟಗಾರನಿಗೆ ಗೌರವ ಸಲ್ಲಿಸಲಾಗಿದೆ.

ಬೆಂಗಳೂರು (ಮಾ.6): ರಾಜ್ಯದ ಅತ್ಯಂತ ಹಳೆಯ ಹಾಗೂ ಐತಿಹಾಸಿಕ ಆಸ್ಪತ್ರೆಗಳಲ್ಲಿ ಒಂದಾದ ವಿಕ್ಟೋರಿ ಆಸ್ಪತ್ರೆಯಮರು ನಾಮಕರಣಕ್ಕೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ರಾಜ್ಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಧಾನಿಯ ಹೆಗ್ಗುರುತಾದ ವಿಕ್ಟೋರಿಯಾ ಆಸ್ಪತ್ರೆಯ ಹೆಸರನ್ನು ಬದಲಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ಆಸ್ಪತ್ರೆಗೆ ಇನ್ಮುಂದೆ ಕರ್ನಾಟಕದ ಧೀಮಂತ ಸಮಾಜವಾದಿ ನಾಯಕ 'ಶಾಂತವೇರಿ ಗೋಪಾಲಗೌಡ' ಅವರ ಹೆಸರನ್ನು ಇಡಲಾಗುವುದು ಎಂದು ಘೋಷಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯ ಭವ್ಯ ಇತಿಹಾಸ

ಬೆಂಗಳೂರಿನ ಕಳಾಸಿಪಾಳ್ಯದಲ್ಲಿರುವ ಈ ಆಸ್ಪತ್ರೆಯು ಬ್ರಿಟಿಷ್ ಕಾಲದ ವಾಸ್ತುಶಿಲ್ಪದ ಸಂಕೇತವಾಗಿದೆ. 1897ರ ಜೂನ್ 22ರಂದು ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣ್ಣಿಯವರು ರಾಣಿ ವಿಕ್ಟೋರಿಯಾರ ಆಳ್ವಿಕೆಯ 60 ವರ್ಷಗಳ ನೆನಪಿಗಾಗಿ ಈ ಆಸ್ಪತ್ರೆಗೆ ಅಡಿಗಲ್ಲು ಹಾಕಿದ್ದರು. ತದನಂತರ 1900ರ ಡಿಸೆಂಬರ್ 8ರಂದು ಅಂದಿನ ವೈಸ್ರಾಯ್ ಲಾರ್ಡ್ ಕರ್ಜನ್ ಇದನ್ನು ಉದ್ಘಾಟಿಸಿದ್ದರು. 1901ರಲ್ಲಿ ಮೈಸೂರು ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಅವರು ಇದನ್ನು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆ ಮಾಡಿದರು. ಕೇವಲ 140 ಹಾಸಿಗೆಗಳಿಂದ ಆರಂಭವಾದ ಈ ಸಂಸ್ಥೆ ಇಂದು ಭಾರತದ ಎರಡನೇ ಅತಿದೊಡ್ಡ ಆಸ್ಪತ್ರೆಯಾಗಿ ಬೆಳೆದಿದೆ.

ಈ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯು ಕೇವಲ ಚಿಕಿತ್ಸಾ ಕೇಂದ್ರವಾಗಿರದೆ, ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಯಾದ ಬೆಂಗಳೂರು ವೈದ್ಯಕೀಯ ಕಾಲೇಜು (BMC) ಅಡಿಯಲ್ಲಿ ಬರುವ ಪ್ರಮುಖ ಬೋಧನಾ ಆಸ್ಪತ್ರೆಯಾಗಿದೆ. ಭಾರತದ ಅಗ್ರಗಣ್ಯ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾದ ಇದು, ಅತ್ಯುನ್ನತ ಮಟ್ಟದ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಗಳಿಗೆ ಹೆಸರಾಗಿದೆ.

ಈ ಹಿಂದೆ 'ಬೆಂಗಳೂರು ಮೆಡಿಕಲ್ ಕಾಲೇಜು' ಎಂದು ಕರೆಯಲ್ಪಡುತ್ತಿದ್ದ ಈ ಸಂಸ್ಥೆಯನ್ನು ಈಗ ಅಧಿಕೃತವಾಗಿ 'ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ' (Bangalore Medical College and Research Institute - BMCRI) ಎಂದು ಮರುನಾಮಕರಣ ಮಾಡಲಾಗಿದೆ. ಈ ಸಂಸ್ಥೆಯ ಅಡಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸುವ ಪ್ರಧಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಶಾಂತವೇರಿ ಗೋಪಾಲಗೌಡರ ಹೆಸರು

ಆಸ್ಪತ್ರೆಗೆ ನಾಮಕರಣ ಮಾಡಲಿರುವ ಶಾಂತವೇರಿ ಗೋಪಾಲಗೌಡರು (1923-1972) ಕರ್ನಾಟಕದ ರಾಜಕೀಯ ಕಂಡ ಅಪರೂಪದ ಪ್ರಾಮಾಣಿಕ ನಾಯಕ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಇವರು ಸಮಾಜವಾದಿ ಚಿಂತನೆಯ ಪ್ರತಿಪಾದಕರು.1951ರಲ್ಲಿ 'ಉಳುವವನೇ ಹೊಲದೊಡೆಯ' ಎಂಬ ಘೋಷಣೆಯಡಿ ಇವರು ನಡೆಸಿದ ಕಾಗೋಡು ಸತ್ಯಾಗ್ರಹವು ಕರ್ನಾಟಕದ ಭೂಸುಧಾರಣೆಗೆ ಬುನಾದಿ ಹಾಕಿತು.ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ ಮತ್ತು ದೇವರಾಜ್ ಅರಸ್ ಅವರಂತಹ ನಾಯಕರಿಗೆ ಇವರು ರಾಜಕೀಯ ಮಾರ್ಗದರ್ಶಕರಾಗಿದ್ದರು. ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳಿಂದ ಮೂರು ಬಾರಿ ಶಾಸಕರಾಗಿದ್ದರೂ, ಇವರು ಅತೀವ ಬಡತನದಲ್ಲಿಯೇ ನಿಸ್ವಾರ್ಥ ಜೀವನ ನಡೆಸಿದವರು.

ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್‌ನಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಹಾಗೂ ಅವರ ಸಮಾಜಮುಖಿ ಹೋರಾಟವನ್ನು ಸ್ಮರಿಸಿ ಈ ಗೌರವ ಸಮರ್ಪಿಸಿದ್ದಾರೆ. ಬ್ರಿಟಿಷ್ ರಾಣಿಯ ಹೆಸರನ್ನು ಬದಲಿಸಿ, ನಾಡಿನ ಮಣ್ಣಿನ ಮಗ, ರೈತ ಹೋರಾಟಗಾರನ ಹೆಸರನ್ನು ಇಡುವ ಮೂಲಕ ಸರ್ಕಾರವು ದೇಶೀಯ ಅಸ್ಮಿತೆಗೆ ಒತ್ತು ನೀಡಿದೆ.

 

PREV
Read more Articles on
click me!

Recommended Stories

Congress Dinner Politics: ಕೈ ನಾಯಕರಿಂದ ಡಿನ್ನರ್ ಪಾಲಿಟಿಕ್ಸ್: ಡಿಕೆಶಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಭರ್ಜರಿ ಔತಣಕೂಟ?
Phone Tapping: ಎಚ್ಡಿಕೆ/ಬಿಜೆಪಿ ಬಳಿ ಫೋನ್‌ ಟ್ಯಾಪ್‌ ಬಗ್ಗೆ ದಾಖಲೆ ಇದ್ರೆ ಕೊಡಲಿ, ಸುಮ್ಮನೆ ಆರೋಪ ಬೇಡ: ಗೃಹಸಚಿವ