ಬ್ರ್ಯಾಂಡ್ ಬೆಂಗಳೂರಿಗೆ ಬಂಪರ್: ವೈಟ್ ಟ್ಯಾಪಿಂಗ್, ಮೆಟ್ರೋ ವಿಸ್ತರಣೆ, 5 ಮಹಾನಗರ ಪಾಲಿಕೆ ಸೇರಿ ₹7000 ಕೋಟಿ ಅನುದಾನ!

Published : Mar 06, 2026, 10:51 AM IST
Bengaluru urban Budget

ಸಾರಾಂಶ

‘ಬ್ರ್ಯಾಂಡ್ ಬೆಂಗಳೂರು’ ಯೋಜನೆಯಡಿ ರಾಜ್ಯ ಸರ್ಕಾರವು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೃಹತ್ ಹೆಜ್ಜೆ ಇರಿಸಿದೆ. ರಸ್ತೆಗಳ ವೈಟ್ ಟಾಪಿಂಗ್, ಮೆಟ್ರೋ ವಿಸ್ತರಣೆ, ಮತ್ತು ಹೊರ ವರ್ತುಲ ರಸ್ತೆ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಘೋಷಿಸಿದೆ.

ಬೆಂಗಳೂರು (ಮಾ.06): ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸಲು ರಾಜ್ಯ ಸರ್ಕಾರ 'ಬ್ರ್ಯಾಂಡ್ ಬೆಂಗಳೂರು' ಯೋಜನೆಯಡಿ ಮಹತ್ವದ ಹೆಜ್ಜೆ ಇರಿಸಿದೆ. ನಗರದ ರಸ್ತೆಗಳು, ಮೆಟ್ರೋ ಸಂಪರ್ಕ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಬರೋಬ್ಬರಿ 7 ಸಾವಿರ ಕೋಟಿ ರೂ. ಬೃಹತ್ ಮೊತ್ತದ ಅನುದಾನವನ್ನು ಘೋಷಿಸಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರಿನ ಚಿತ್ರಣವೇ ಬದಲಾಗುವ ಸಾಧ್ಯತೆಯಿದೆ. 

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ವಿಕೇಂದ್ರೀಕರಣ

ನಗರದ ಹೊರವಲಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (GBA) ಅಡಿಯಲ್ಲಿ ಬರುವ 5 ನಗರ ಪಾಲಿಕೆಗಳ ಮೂಲಸೌಕರ್ಯಕ್ಕೆ ಸರ್ಕಾರ 1,255 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇದರಿಂದ ನಗರದ ಕೇಂದ್ರ ಭಾಗದ ಮೇಲಿನ ಜನದಟ್ಟಣೆ ಕಡಿಮೆಯಾಗಿ, ಉಪನಗರಗಳೂ ಸಮಾನವಾಗಿ ಬೆಳೆಯಲು ಪೂರಕವಾಗಲಿದೆ.

ರಸ್ತೆಗಳ ಬಲವರ್ಧನೆ: ವೈಟ್ ಟಾಪಿಂಗ್‌ಗೆ ಆಧ್ಯತೆ

ಬೆಂಗಳೂರಿನ ರಸ್ತೆ ಗುಂಡಿ ಮುಕ್ತವಾಗಿಸಲು 1,700 ಕೋಟಿ ರೂಪಾಯಿ ವೆಚ್ಚದಲ್ಲಿ 158 ಕಿ.ಮೀ ಉದ್ದದ ರಸ್ತೆಗಳಿಗೆ 'ವೈಟ್ ಟಾಪಿಂಗ್' ಮಾಡಲು ನಿರ್ಧರಿಸಲಾಗಿದೆ. ಇದರೊಂದಿಗೆ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ 1,936 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಿಂದ ರಸ್ತೆಗಳ ಬಾಳಿಕೆ ಹೆಚ್ಚುವುದಲ್ಲದೆ ಮಳೆಗಾಲದಲ್ಲಿ ರಸ್ತೆ ಹಾಳಾಗುವುದನ್ನು ತಪ್ಪಿಸಬಹುದಾಗಿದೆ.

ಐಟಿ ಹಬ್‌ಗೆ ಸಿಹಿಸುದ್ದಿ: ಹೊರ ವರ್ತುಲ ರಸ್ತೆ ಅಭಿವೃದ್ಧಿ

ಬೆಂಗಳೂರಿನ ಅತಿ ಹೆಚ್ಚು ಸಂಚಾರ ದಟ್ಟಣೆಯ ಪ್ರದೇಶವಾದ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗಿನ ಹೊರ ವರ್ತುಲ ರಸ್ತೆಯ (ORR) ಅಭಿವೃದ್ಧಿಗೆ 450 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದು ಐಟಿ ಉದ್ಯೋಗಿಗಳ ಸುಗಮ ಸಂಚಾರಕ್ಕೆ ಹಾದಿ ಮಾಡಿಕೊಡಲಿದೆ.

ನೆರೆ ಹಾವಳಿ ತಡೆ ಮತ್ತು ಸೌಂದರ್ಯೀಕರಣ

ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ಸೃಷ್ಟಿಯಾಗುವ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜಕಾಲುವೆಗಳ ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ 273 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇನ್ನು ನಗರದ ಸೌಂದರ್ಯ ಹೆಚ್ಚಿಸಲು 175 ಜಂಕ್ಷನ್‌ಗಳನ್ನು ನವೀಕರಿಸಲಾಗುವುದು. ಪಾದಚಾರಿಗಳ ಸುರಕ್ಷತೆಗಾಗಿ 100 ಹೊಸ ಸ್ಕೈ ವಾಕ್‌ಗಳ ನಿರ್ಮಾಣ ಮತ್ತು 500 ಕಿ.ಮೀ ಪಾದಚಾರಿ ಮಾರ್ಗವನ್ನು ಮೇಲ್ದರ್ಜೆಗೇರಿಸುವ ಗುರಿ ಹೊಂದಲಾಗಿದೆ.

ಮೆಟ್ರೋ ಮತ್ತು ಭವಿಷ್ಯದ ಮಾಸ್ಟರ್ ಪ್ಲಾನ್

ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು 2026-27ನೇ ಸಾಲಿನ ಅಂತ್ಯದೊಳಗೆ ಹೆಚ್ಚುವರಿ 41 ಕಿ.ಮೀ ಮೆಟ್ರೋ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಅಷ್ಟೇ ಅಲ್ಲದೆ, 2027ರ ಅಂತ್ಯದೊಳಗೆ ಬೆಂಗಳೂರಿನ ವ್ಯವಸ್ಥಿತ ಬೆಳವಣಿಗೆಗೆ ಪೂರಕವಾಗಿ 'ಪರಿಷ್ಕೃತ ಮಾಸ್ಟರ್ ಪ್ಲಾನ್' (Revised Master Plan) ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.

PREV
Read more Articles on
click me!

Recommended Stories

Karnataka Budget 2026-27: ಹಿಂದಿನ ಬಜೆಟ್‌ನಿಂದ ನಿರಾಸೆ, ಈ ಬಾರಿ ಹಾವೇರಿ ಜನರ ಬೇಡಿಕೆ ಈಡೇರುತ್ತಾ?
Congress Dinner Politics: ಕೈ ನಾಯಕರಿಂದ ಡಿನ್ನರ್ ಪಾಲಿಟಿಕ್ಸ್: ಡಿಕೆಶಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಭರ್ಜರಿ ಔತಣಕೂಟ?