Murugha Mutt; ವಿಚಾರಣಾಧೀನ ಕೈದಿಯಾಗಿ ಶರಣರು ಬಂದಾಗ ಧ್ಯಾನದಲ್ಲಿದ್ದ ಶೂನ್ಯಪೀಠ!

By Kannadaprabha News  |  First Published Sep 5, 2022, 10:30 PM IST

ವಿಚಾರಣಾಧೀನ ಕೈದಿಯಾಗಿ ಮುರುಘಾ ಶರಣರು ಆಗಮಿಸಿದಾಗ ತಮ್ಮದೇ ಸನ್ನಿಧಿಯಲ್ಲಿ ಅಪರಿಚಿತರಂತೆ ಹೆಜ್ಜೆ ಹಾಕಿದ ಮುರುಘಾಶ್ರೀ. ಹತ್ತು ದಿನಗಳ ಹಿಂದೆ ಇದ್ದ ವೈಭೋಗ ಮಾಯ, ನೆನಪಿನಂಗಳಕ್ಕೆ ಜಾರಿದ ಐಶರಾಮಿ ಕಾರು, ಲಿಫ್ಟ್, ಸ್ಕೈ ವಾಕ್‌. 


ಚಿಕ್ಕಪ್ಪನಹಳ್ಳಿ ಷಣ್ಮುಖ

 ಚಿತ್ರದುರ್ಗ (ಸೆ.5): ಅಲ್ಲಮ ಪ್ರಭುಗಳ ಶೂನ್ಯ ಪೀಠ ಪರಂಪರೆ ಹೊಂದಿರುವ ಮುರುಘಾ ಮಠಕ್ಕೆ ವಿಚಾರಣಾಧೀನ ಕೈದಿಯಾಗಿ ಮುರುಘಾ ಶರಣರು ಭಾನುವಾರ ಆಗಮಿಸಿದಾಗ ಅಕ್ಷರಶಃ ಮೌನ ಆವರಿಸಿತ್ತು. ಶರಣರ ಕಂಡಾಕ್ಷಣ ದೀರ್ಘದಂಡ ನಮಸ್ಕಾರ, ಭಕ್ತಿಯಿಂದ ತಲೆ ಬಾಗಿಸಿ ನಿಲ್ಲುತ್ತಿದ್ದ ಭಕ್ತ ಸಮೂಹ ಅಲ್ಲಿರಲಿಲ್ಲ. ಧ್ಯಾನಸ್ಥ ಸ್ಥಿತಿಯಲ್ಲಿತ್ತು ಶೂನ್ಯ ಪೀಠ. ಕಾವಿ ಪೇಟವಿರುತ್ತಿದ್ದ ನೆತ್ತಿಗೆ ಬಿಳಿ ಟವೆಲ್‌ ಹಾಕಿಕೊಂಡು ತಮ್ಮದೇ ಸನ್ನಿಧಿಯಲ್ಲಿ ಅಪರಿಚಿತರಂತೆ ಮುರುಘಾಶ್ರೀ ಹೆಜ್ಜೆ ಹಾಕಬೇಕಾಗಿ ಬಂತು. ಅಬ್ಬಾ! ಶರಣರು ಮುರುಘಾಮಠದಲ್ಲಿ ಇದ್ದರೆಂದರೆ ಇಡೀ ಪರಿಸರ ಲವಲವಿಕೆಯಲ್ಲಿ ಮುಳುಗಿರುತ್ತಿತ್ತು. ತುಂಬಿ ತುಳುಕಾಡುತ್ತಿದ್ದ ರಾಜಾಂಗಣ, ಶರಣರ ದರ್ಶನಕ್ಕಾಗಿ ಹಾತೊರೆಯುತ್ತಿದ್ದ ಭಕ್ತ ಸಮೂಹ, ಮಂತ್ರಿಗಳಿಗೆ ಶಿಫಾರಸ್ಸು ಪತ್ರ ನೀಡುವಂತೆ ಸರತಿಯಲ್ಲಿ ಕಾದಿರುತ್ತಿದ್ದ ಜನ, ಕಾರ್ಯಕ್ರಮಕ್ಕೆ ಆಹ್ವಾನಿಸಲು ಫಲತಾಂಬೂಲ ಹಿಡಿದುಕೊಂಡು ಭಕ್ತಿ ಭಾವ ಪ್ರದರ್ಶಿಸುತ್ತಿದ್ದವರು ಅದೆಷ್ಟೋ ಮಂದಿ, ನೋವುಗಳ ಹರವಿ ಕಾಲೇಜು ಫೀ ಕಡಿಮೆ ಮಾಡುವಂತೆ ಕೇಳುತ್ತಿದ್ದ ಗ್ರಾಮೀಣರು, ಜನರ ನಡುವೆಯೇ ಮೆಲ್ಲಗೆ ಬಾಗಿಲು ನೂಕಿ ಉಭಯ ಕುಶಲೋಪರಿಗಳ ಮಾತನಾಡಿಕೊಂಡು ಹೋಗುತ್ತಿದ್ದ ಗಣ್ಯರು. ಒಂದೇ ಎರಡೇ ಇಂತಹ ನೂರಾರು ದೃಶ್ಯಗಳು ಕಾಣ ಬರುತ್ತಿದ್ದವು.

Latest Videos

undefined

ಏಕಾಂತದಲ್ಲಿ ಪುಸ್ತಕ ಓದುವ ಅಭ್ಯಾಸ ಇಟ್ಟುಕೊಂಡಿದ್ದ ಶರಣರಿಗೆ ತಮ್ಮ ವಾಸ್ತವ್ಯದ ಕೊಠಡಿಯಲ್ಲಿದ್ದ ಕಪಾಟು ಓದಿನ ಸಂಸ್ಕೃತಿ ಅಡ್ಡ ಪರಿಣಾಮಗಳ ರವಾನಿಸಿತು. ಕೊಠಡಿಯಲ್ಲಿ ಪೊಲೀಸರು ವಸ್ತುಗಳಿಗಾಗಿ ತಲಾಶ್‌ ಮಾಡುವಾಗ ಶರಣರು ಮೌನಕ್ಕೆ ಸರಿದಿದ್ದರು. ಅನುಭವ ಮಂಟಪ, ಅಲ್ಲಮ ಪ್ರಭು ಅಧ್ಯಯನ ಪೀಠಕ್ಕೆ ಶರಣರು ಒಬ್ಬರೇ ಸ್ಕೈವಾಕ್‌ ಮಾಡಿಕೊಂಡು ಹೋಗುತ್ತಿದರು. ಸ್ಕೈವಾಕ್‌ ಕಡೆಗೂ ಪೊಲೀಸರು ಶರಣರನ್ನು ಕರೆದೊಯ್ದು ಮಹಜರ್‌ ಮಾಡಿದರು. ಸ್ಕೈವಾಕ್‌ ಸೇತುವೆ ಧೂಳಿನಿಂದ ಆವೃತವಾಗಿತ್ತು. ಎರಡುವರೆ ತಾಸು ವಿಚಾರಣಾಧೀನ ಕೈದಿಯಾಗಿ ಶರಣರು ಮಠದೊಳಗೆ ಸುತ್ತಾಡಿದಾಗ ಭವ್ಯ ಪರಂಪರೆಯೊಂದು ಮುಂದುವರಿಸಿದೆನೆಂಬ ಯಾವ ಭಾವವೂ ಅಲ್ಲಿ ಸುಳಿದಾಡಿದಂತೆ ಕಾಣಿಸಲಿಲ್ಲ.

ಕತೃಗದ್ದುಗೆ ಕಂಡಾಗ ಉಮ್ಮಳಿಸಿದ ದುಃಖ: ಭಾನುವಾರದ ಮಟ್ಟಿಗೆ ಇವೆಲ್ಲ ನೆನಪಾಗಿ ಉಳಿದವು. ಐಶರಾಮಿ ಕಾರಿನಿಂದ ಇಳಿದು ಲಿಫ್ಟ್ ಏರಿ ನೇರವಾಗಿ ತಮ್ಮ ಕಚೇರಿ, ವಿಶ್ರಾಂತಿ ಕೊಠಡಿಗೆ ತೆರಳುತಿದ್ದ ಶರಣರು ಪೊಲೀಸ್‌ ವ್ಯಾನ್‌ನಿಂದ ಇಳಿದಾಗ ಲಿಫ್ಟ್ ಚಾಲನೆಯಲ್ಲಿ ಇದ್ದರೂ ಅವರ ಕಾಲುಗಳು ಅತ್ತ ಸೆಳೆಯಲಿಲ್ಲ. ನಡೆದುಕೊಂಡೇ ಮಠ ಪ್ರವೇಶಿಸಿದರು. ಕತೃಗದ್ದುಗೆ ಕಂಡಾಗ ಉಮ್ಮಳಿಸಿ ಬಂದ ದುಃಖದ ಕಣ್ಣೀರನ್ನು ಬಿಳಿ ಟವಲ್‌ ಹೀರಿಕೊಂಡಿತು. ನೊಂದ ಸಾವಿರಾರು ಮನಸ್ಸುಗಳಿಗೆ ಸಾಂತ್ವನ ಹೇಳಿದ್ದ ವ್ಯಕ್ತಿತ್ವವೊಂದು ನೋವಿನ ಮಡುವಿಗೆ ನೂಕಲ್ಪಟ್ಟಿತ್ತು. ದರ್ಬಾರ್‌ ಹಾಲ್‌ ಕಡೆ ಶರಣರು ಹೆಜ್ಜೆ ಹಾಕಿದಾಗ ನೋವು ಮತ್ತಷ್ಟು ಇಮ್ಮಡಿಯಾಯಿತು. ನ್ಯಾಯ ವಿತರಣೆ ಜಾಗದಲ್ಲಿ ಕುಳಿತಿದ್ದ ಹಳೇ ನೆನಪುಗಳು ಮಾರ್ದನಿಸಿದವು. ಪ್ರಶಾಂತ ವಾತಾವರಣದಲ್ಲಿ ಹೆಜ್ಜೆಗಳು ಸದ್ದು ಮಾಡುತ್ತಿದ್ದವು. ಮುರುಘೇಶಾ ನನಗ್ಯಾಕೆ ಇಂತ ಪರಿಸ್ಥಿತಿ ಎಂದು ಶರಣರ ಒಳ ಮನಸ್ಸು ಪ್ರಶ್ನಿಸುತ್ತಿತ್ತು.

ಹಾಗೆ ನೋಡಿದರೆ ಮುರುಘಾಮಠ ಬಸವಭಕ್ತರ ಆಚೆ ಪ್ರವಾಸಿಗರ ಆಕರ್ಷಕ ಕೇಂದ್ರವಾಗಿ ಇತ್ತೀಚೆಗಿನ ದಿನಗಳಲ್ಲಿ ರೂಪಾಂತರಗೊಂಡಿತ್ತು. ಐತಿಹಾಸಿಕ ಚಿತ್ರದುರ್ಗ ಕೋಟೆ ನೋಡಲು ಬರುವವರೆಲ್ಲ ಪ್ಯಾಕೇಜ್‌ ರೂಪದಲ್ಲಿ ಮುರುಘಾಮಠಕ್ಕೆ ಭೇಟಿ ನೀಡುತ್ತಿದ್ದರು. ಮುರುಘಾವನ, ಕಾಯಕ ಗ್ರಾಮ ನೋಡಿಕೊಂಡು ವಾಪಾಸ್ಸಾಗುತ್ತಿದ್ದರು. ಮಠದಲ್ಲಿ ಶಿವಮೂರ್ತಿ ಶರಣರಿದ್ದಲ್ಲಿ ಮಾತನಾಡಿಸಿಕೊಂಡು ಪ್ರಸಾದ ಸ್ವೀಕರಿಸಿ ವಾಪಾಸ್ಸಾಗುತ್ತಿದ್ದರು. ಶನಿವಾರ , ಭಾನುವಾರವಂತೂ ಮಠ ಪ್ರವಾಸಿಗರಿಂದ ತುಂಬಿ ತುಳುಕಾಡುತ್ತಿತ್ತು.

Murugha Mutt ಪ್ರತಿ ಸ್ಥಳದಲ್ಲೂ ಪೊಲೀಸರ ಮಹಜರು!

ಆದರೆ ಸೆ.3ರಿಂದ ಬೇರೆಯದೇ ಸಂದೇಶ ರವಾನಿಸಿತು. ಐತಿಹಾಸಿಕ ಚಿತ್ರದುರ್ಗ ಕೋಟೆಗೆ ಭೇಟಿ ನೀಡಿದವರು ಮುರುಘಾಮಠದತ್ತ ಕಣ್ಣಾಯಿಸಲಿಲ್ಲ. ನೇರವಾಗಿ ಹಂಪಿಯತ್ತ ಪ್ರಯಾಣ ಬೆಳೆಸಿದರು. ಏನು ಭಾರೀ ಪ್ರಮಾದವಾಗಿದೆ ಎಂಬ ಭಾವನೆ ಪ್ರವಾಸಿಗರಲ್ಲಿ ಇತ್ತು. ಪ್ರತಿ ತಿಂಗಳು ಐದನೇ ತಾರೀಖು ಮುರುಘಾಮಠದಲ್ಲಿ ಸಾಮೂಹಿಕ ವಿವಾಹ ನಡೆಯಲಿದ್ದು ನೋಂದಣಿ ಮಾಡಿಸಲು, ಮದುವೆ ಸ್ಥಳ ನೋಡಲು ಜನತೆ ಆಗಮಿಸುತ್ತಿದ್ದರು. ಆದರೆ ಸಾಮೂಹಿಕ ವಿವಾದ ಮೇಲೂ ಕರಾಳ ಛಾಯೆ ಆವರಸಿದಂತಿತ್ತು. ಇದುವರೆಗೂ ಕೇವಲ ಹನ್ನೊಂದು ಮಂದಿ ವಧೂ-ವರರು ನೋಂದಣಿ ಮಾಡಿಸಿದ್ದರು. ಕೆಲವರಂತೂ ಮದುವೆಗಳು ಇವೆಯಾ , ಹೇಗೆ ಎಂಬಿತ್ಯಾದಿ ಅನುಮಾನಗಳ ಹರವಿ ಉತ್ತರ ಕಂಡುಕೊಂಡು ವಾಪಸ್ಸಾಗುತ್ತಿದ್ದರು.

ಮುರುಘಾ ಶ್ರೀ ಮೇಲಿನ ಪೋಕ್ಸೋ ಪ್ರಕರಣ ತೀವ್ರ ಬೇಸರ ತರಿಸಿದೆ: ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ

ನಿತ್ಯದ ಪೂಜಾ ಕೈಂಕರ್ಯ, ದಾಸೋಹ ನೋಡಿಕೊಳ್ಳಲು ಈಗಾಗಲೇ ಹೆಬ್ಬಾಳು ಮಠದ ಮಹಾಂತ ರುದ್ರಸ್ವಾಮಿಗಳ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಸೋಮವಾರ ನಡೆದ ಸಾಮೂಹಿಕ ವಿವಾಹದ ನೇತೃತ್ವವನ್ನು ಹೆಬ್ಬಾಳು ಶ್ರೀಗಳೇ ಹೊತ್ತಿದ್ದಾರೆ. 

click me!