ಬೀದರ್ನ ನಗರಸಭೆಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಹಿಂದಿನ ಪೌರಾಯುಕ್ತ ರವೀಂದ್ರನಾಥ ಅಂಗಡಿ ಸೇರಿದಂತೆ 8ಜನ ಸಿಬ್ಬಂದಿಯನ್ನು ಅಮಾನತು ಮಾಡಿ ಇಲಾಖೆಯ ನಿರ್ದೇಶಕರು ಆದೇಶಿಸಿಯಾಗಿದೆ.
ಬೀದರ್(ಮೇ.24): ನಗರಸಭೆಯ ಮಳಿಗೆಗಳ ಬಾಡಿಗೆ ಗೋಲ್ಮಾಲ್ ಇದೀಗ ಬಹಿರಂಗವಾಗಿದ್ದು, ಮಳಿಗೆಗಳನ್ನು ಹರಾಜು ಹಾಕದೆ, ಮೀಸಲಾತಿಯನ್ನೂ ಲೆಕ್ಕಿಸದೆ ಜೀವನ ಪರ್ಯಂತ ಮತ್ತು ಬಾಡಿಗೆದಾರರ ಮಕ್ಕಳಿಗೆ ನಾಲ್ಕೈದು ಸಾವಿರ ರುಪಾಯಿಗಳ ಮಾಸಿಕ ಬಾಡಿಗೆ ನಿಗದಿಗೊಳಿಸಿ ಭಾರಿ ಅಕ್ರಮ ಎಸಗಿರುವುದು ಬಯಲಾಗಿದೆ.
ಜಿಲ್ಲಾ ಕೇಂದ್ರ ಬೀದರ್ನ ನಗರಸಭೆಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಹಿಂದಿನ ಪೌರಾಯುಕ್ತ ರವೀಂದ್ರನಾಥ ಅಂಗಡಿ ಸೇರಿದಂತೆ 8ಜನ ಸಿಬ್ಬಂದಿಯನ್ನು ಅಮಾನತು ಮಾಡಿ ಇಲಾಖೆಯ ನಿರ್ದೇಶಕರು ಆದೇಶಿಸಿಯಾಗಿದೆ. ನಗರಸಭೆಯ ಈ ಅಕ್ರಮಗಳು ಹುಬ್ಬೇರಿಸುವಂತೆ ಮಾಡಿದ್ದು ಇದರ ವಿವರಗಳು ಕನ್ನಡಪ್ರಭಕ್ಕೆ ಲಭ್ಯವಾಗಿವೆ.
undefined
ಬೀದರ್ ಜಿಲ್ಲೆಗೆ 2 ಸಚಿವ ಸ್ಥಾನಗಳ ಸಾಧ್ಯತೆ: ಈಶ್ವರ ಖಂಡ್ರೆ, ರಹೀಮ್ಖಾನ್ಗೆ ಮಂತ್ರಿಗಿರಿ?
ಕೋಟ್ಯಂತರ ರುಪಾಯಿ ಬಾಡಿಗೆ ಬರಬೇಕಿದ್ದದ್ದು ಬಿಡಿಗಾಸೂ ಇಲ್ಲ:
ಕೋಟ್ಯಂತರ ರುಪಾಯಿ ಬಾಡಿಗೆ ಮೂಲಕ ಆದಾಯ ತರುವ ಡಾ. ಅಂಬೇಡ್ಕರ್ ವೃತ್ತದ ಬಳಿಯ 23 ಮಳಿಗೆಗಳು ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ 17 ಮಳಿಗೆಗಳು, ಝಡ್ಎನ್ ರಸ್ತೆಯಲ್ಲಿನ 17 ಮಳಿಗೆಗಳು ಹಾಗೂ ಐಡಿಎಸ್ಎಂಟಿಯ 41 ಮಳಿಗೆಗಳ ಬಾಡಿಗೆ ಅವಧಿ ಮಾಚ್ರ್ 2107ರಲ್ಲಿಯೇ ಮುಗಿದಿದ್ದು ನಗರಸಭೆಯ ಈ ಮಳಿಗೆಗಳನ್ನು ಹರಾಜು ಮಾಡುವ ಮೂಲಕ ಬಾಡಿಗೆ ನೀಡುವುದು ಎಂದು 2019ರಲ್ಲಿ ಜಿಲ್ಲಾಧಿಕಾರಿಗಳು ಆದೇಶ ಮಾಡಿ ಸುತ್ತೋಲೆ ಹೊರಡಿಸಿದ್ದರೂ ಅದನ್ನೂ ಲೆಕ್ಕಿಸದೇ ಅಕ್ರಮ ಎಸಗಲಾಗಿದೆ ಎಂದು ತನಿಖಾ ತಂಡ ನೀಡಿದ ವರದಿಯಲ್ಲಿ ಸ್ಪಷ್ಟವಾಗಿದೆ.
ಮಳಿಗೆಗಳ ಬಾಡಿಗೆ ಅವಧಿ ಮುಕ್ತಾಯಗೊಂಡಿದ್ದು ಕಂದಾಯ ನಿರೀಕ್ಷಕರು ಬಾಡಿಗೆ ಅವಧಿ ವಿಸ್ತರಿಸಲು ಅಥವಾ ಲೀಲಾವು ಮಾಡಲು ನಿರ್ದೇಶನ ಕೋರಿ ಕಡತ ಮಂಡಿಸಿದರೆ ಅಂದಿನ ಪೌರಾಯುಕ್ತ, ರವೀಂದ್ರನಾಥ ಅವರು ಮಳಿಗೆಗಳ ಬಾಡಿಗೆ ಅವಧಿ ಮುಕ್ತಾಯಗೊಂಡಿದ್ದು ಮುಂದಿನ ಅವಧಿಗೆ ಬಾಡಿಗೆ ನಿರ್ಧರಿಸಲು ಆದೇಶಕ್ಕಾಗಿ ಕಡತ ಮಂಡಿಸಿ ಪ್ರಸ್ತುತ ಚಾಲ್ತಿಯಲ್ಲಿದ್ದ ಸುತ್ತೋಲೆಯಂತೆ ಕ್ರಮವಹಿಸದೆ ನಿಯಮ ಉಲ್ಲಂಘಿಸಿ 12 ವರ್ಷಗಳ ಅವಧಿಗೆ ಬಾಡಿಗೆ ಕರಾರು ಮಾಡಿ ನೀಡಿದ್ದಾರೆಂದು ತನಿಖಾ ತಂಡದ ಪ್ರಮುಖ ಆರೋಪಗಳಲ್ಲಿ ಒಂದಾಗಿದೆ.
ಮಳಿಗೆ ಬಾಡಿಗೆ ಜೀವನ ಪರ್ಯಂತ, ಮಕ್ಕಳಿಗೆ ಹಂಚಿಕೆ ಮಾಡಿದ ಸಿಎಂಸಿ:
ಅಷ್ಟೇ ಅಲ್ಲ ಸರ್ಕಾರದ ಸುತ್ತೋಲೆ ಮರೆ ಮಾಚಿ. ಈಗಾಗಲೇ ಹಂಚಿಕೆ ನೀಡಲಾಗಿದ್ದವರಿಗೆ ಜೀವನ ಪರ್ಯಂತ ಮತ್ತು ಪುನಃ ಅವರ ಮಕ್ಕಳಿಗೆ ಹಂಚಿಕೆ ಮಾಡಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು ಮತ್ತು ನಗರದ ಪ್ರಮುಖ ಸ್ಥಳಗಳಲ್ಲಿರುವ ಈ ವಾಣಿಜ್ಯ ಮಳಿಗೆಗಳಿಗೆ ಕನಿಷ್ಟ20ಸಾವಿರ ರು.ಗಳ ಬಾಡಿಗೆ ಬರುವಂತಿದ್ದರೆ ಅವುಗಳನ್ನು ಮಾಸಿಕ ಕೇವಲ 5ಸಾವಿರ ರು.ಗಳ ಬಾಡಿಗೆ ಆಧಾರದ ಮೇಲೆ ನೀಡಲಾಗಿದ್ದು ಅಲ್ಲದೆ ಸದರಿ ಹಣವನ್ನು ಇತರೆ ಕಾರ್ಯಕ್ಕೆ ಬಳಸಿದ್ದು ನಗರಸಭೆಯ ಆರ್ಥಿಕ ನಷ್ಟಕ್ಕೆ ಕಾರಣವಾದಂತಾಗಿದೆ.
ಪರಿಶಿಷ್ಟಜಾತಿ, ಪಂಗಡದ ಮೀಸಲಿಗೂ ಕತ್ತರಿ ಹಾಕಿದ ನಗರಸಭೆ:
ಇದಲ್ಲದೆ ಒಟ್ಟು ಮಳಿಗೆಗಳಿಗೆ ಶೇ. 18ರಷ್ಟು ಮಳಿಗೆಗಳನ್ನು ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದವರಿಗೆ ಮೀಸಲಿರುವುದು ಆ ಜನಾಂಗದವರಿಗೆ ಹರಾಜುಪಡಿಸುವ ಮೂಲಕ ನೀಡಬೇಕೆಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದ್ದರೂ ಅದನ್ನು ಉಲ್ಲಂಘಿಸಿ ಮೊದಲು ವಾಣಿಜ್ಯ ಮಳಿಗೆಗಳಿದ್ದ ಬಾಡಿಗೆದಾರರಿಗೆ ನವೀಕರಣ ಮಾಡಿ ಕೊಟ್ಟಿರುತ್ತಾರೆ ಎಂದು ಆರೋಪಿಸಲಾಗಿದೆ.
ಔರಾದ್ ಅಭಿವೃದ್ಧಿಗೆ ಕೇಂದ್ರ ಸಚಿವ ಭಗವಂತ ಖೂಬಾ ಅಡ್ಡಗಾಲು: ಪ್ರಭು ಚವ್ಹಾಣ್
ಬಾಡಿಗೆಯನ್ನೇ ಕಟ್ಟದ ಬಾಡಿಗೆದಾರರು, ಬಿಡದೇ ವಸೂಲಿಯಾಗಲಿ:
ಕಳೆದ ಹಲವು ವರ್ಷಗಳಿಂದ ಬಾಡಿಗೆಯಲ್ಲಿರುವ ಅಂಗಡಿಗಳ ಬಾಡಿಗೆದಾರರು ಬಾಡಿಗೆಯನ್ನೂ ಕಟ್ಟಿಲ್ಲ ಈ ಕುರಿತಂತೆ ನಗರಸಭೆ ಸಹ ಕ್ಯಾರೆ ಎಂದಿಲ್ಲ ಎಂಬ ಆರೋಪವೂ ಪ್ರಮುಖವಾಗಿ ಕೇಳಿ ಬಂದಿದೆ. ಇದರಲ್ಲಿ ಪೌರಾಯುಕ್ತರಾಗಿದ್ದ ರವೀಂದ್ರನಾಥ ಅಂಗಡಿ, ಕಚೇರಿ ವ್ಯವಸ್ಥಾಪಕರಾಗಿದ್ದ ಸವಿತಾ ರೇಣುಕಾ ಅವರ ಸ್ಪಷ್ಟದೋಷವಿದೆ ಎಂದು ಆರೋಪಿಸಿ ಅವರುಗಳನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಅರ್ಧಕ್ಕರ್ಧ ಮಳಿಗೆಗಳ ಹಂಚಿಕೆಯಲ್ಲಿ ಭಾರಿ ಅಕ್ರಮ, ಡಿಸಿ ಗಮನಿಸಲಿ:
ಬೀದರ್ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 308 ಮಳಿಗೆಗಳಿದ್ದು ಈ ಪೈಕಿ 129 ಮಳಿಗೆಗಳನ್ನು ಕಾನೂನು ಬಾಹಿರವಾಗಿ ನೀಡಲಾಗಿದೆ ಎಂಬ ಆರೋಪವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಮಳಿಗೆಗಳಿಗೆ ಸೂಕ್ತ ಬಾಡಿಗೆ ನಿರ್ಧರಿಸಿ, ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಿ ಬಹಿರಂಗ ಹರಾಜು ಮೂಲಕ ಬಾಡಿಗೆ ನೀಡುವುದಕ್ಕೆ ಮುಂದಾಗಬೇಕು. ಅಲ್ಲದೆ ಇಲ್ಲಿವರೆಗೆ ಆಗಿರುವ ನಷ್ಟವನ್ನು ಭರಿಸಲು ತಪ್ಪಿತಸ್ಥರಿಗೆ ಸೂಚಿಸಬೇಕೆಂಬುವದು ಸಾರ್ವಜನಿಕರ ಆಗ್ರಹವಾಗಿದೆ. ಹೀಗಾಗಿ ಜಿಲ್ಲಾಡಳಿತದ ನಡೆಯನ್ನು ಕಾದು ನೋಡಬೇಕಿದೆ.