ಬೆಳಗಾವಿ: ಖಾನಾಪುರದ ಕಾನನದಲ್ಲಿ ಹರಿಯುತ್ತಿವೆ ಜಲಮೂಲಗಳು..!

By Kannadaprabha News  |  First Published May 24, 2023, 8:29 PM IST

ಬೇಸಿಗೆಯಲ್ಲೂ ನೀರಿನ ಹರಿವು, ವನ್ಯ ಜೀವಿಗಳ ದಾಹ ನೀಗಿಸುತ್ತಿದೆ ಜೀವಜಲ, ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಜಲಮೂಲಗಳು ಈ ವರ್ಷ ಬರಿದಾಗಿಲ್ಲ 


ಖಾನಾಪುರ(ಮೇ.24): ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹಳ್ಳ-ಕೊಳ್ಳ, ಕೆರೆ-ಕಟ್ಟೆ ಮತ್ತು ನದಿಗಳಲ್ಲಿ ನೀರಿನ ಹರಿವು ಕ್ಷೀಣಿಸುವುದು ವಾಡಿಕೆ. ಆದರೆ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಜಲಮೂಲಗಳು ಈ ವರ್ಷ ಬರಿದಾಗಿಲ್ಲ. ಕಾನನದಲ್ಲಿನ ಹಳ್ಳ-ಕೊಳ್ಳ, ನದಿಗಳಲ್ಲಿ ಇನ್ನೂ ನೀರಿನ ಸಂಗ್ರಹವಿದೆ.

ಕಳೆದ ವರ್ಷ ಉತ್ತಮ ಪ್ರಮಾಣದ ಮಳೆಯಾಗಿದ್ದರಿಂದ ತಾಲೂಕಿನ ಕಾಡಿನಲ್ಲಿ ಹುಟ್ಟಿಹರಿಯುವ ಮಹದಾಯಿ, ಮಲಪ್ರಭೆ ಸೇರಿದಂತೆ ಅನೇಕ ಜಲಮೂಲಗಳು ಈ ವರ್ಷದ ಬೇಸಿಗೆಯಲ್ಲೂ ವನ್ಯಜೀವಿಗಳ ದಾಹ ನೀಗಿಸುತ್ತಿವೆ.
ದೇಗಾಂವ ಅರಣ್ಯದಲ್ಲಿ ಜನ್ಮ ತಳೆಯುವ ಮಹದಾಯಿ ಜಾಮಗಾಂವ, ಗವ್ವಾಳಿ, ಕೊಂಗಳಾ, ಕಬನಾಳಿ, ಕೊಡುಗೈ ಗ್ರಾಮಗಳ ಸಮೀಪ ಸಂಚರಿಸಿ ಭೀಮಗಡ, ಖಾನಾಪುರ ಮತ್ತು ಕಣಕುಂಬಿ ಅರಣ್ಯದಲ್ಲಿ ಹರಿಯುತ್ತದೆ. ಜಾಂಬೋಟಿ ಅರಣ್ಯದ ಚಾಪೋಲಿ ಗ್ರಾಮದ ಬಳಿಯ ಜಲಪಾತದಲ್ಲಿ ಧುಮ್ಮಿಕ್ಕಿ ಗೋವಾ ರಾಜ್ಯವನ್ನು ಪ್ರವೇಶಿಸುವ ಈ ನದಿಯನ್ನು ಗೋವಾ ರಾಜ್ಯದವರು ಮಾಂಡ ನದಿ ಎಂಬ ಹೆಸರಿನಿಂದ ಕರೆಯುತ್ತಾರೆ. ಸಮುದ್ರ ಸೇರುವವರೆಗೆ ಒಟ್ಟು 88 ಕಿ.ಮೀ. ವ್ಯಾಪ್ತಿಯ ಮಹದಾಯಿ ವನ್ಯ ಜೀವಿಗಳ ಪಾಲಿಗೆ ಜೀವಜಲ ಕರುಣಿಸಿದ ಜಲಮೂಲವಾಗಿದೆ. ರಾಜ್ಯದ ಅರಣ್ಯ ಪ್ರದೇಶದ 39 ಕಿ.ಮೀ. ವ್ಯಾಪ್ತಿಯ ಸುತ್ತಲಿನ ದಟ್ಟಅರಣ್ಯದಲ್ಲಿ ವಾಸಿಸುವ ಹುಲಿ, ಚಿರತೆ, ಕರಿ ಚಿರತೆ, ಕರಡಿ, ಕಾಡೆಮ್ಮೆ, ಕಾಡು ಕೋಣ, ನರಿ, ಕಾಡು ಹಂದಿ, ಮುಳ್ಳು ಹಂದಿ ಮತ್ತಿತರ ಅಪರೂಪದ ಪ್ರಾಣಿ-ಪಕ್ಷಿಗಳ ದಾಹ ನೀಗಿಸುತ್ತಿದೆ.

Latest Videos

undefined

ಬೆಳಗಾವಿ: ಹುಕ್ಕೇರಿ ವಿದ್ಯುತ್‌ ಸಹಕಾರಿ ಸಂಘಕ್ಕೆ ‘ಗ್ಯಾರಂಟಿ’ ಹೊರೆ

ಮಹದಾಯಿ ನದಿ ಬಹುತೇಕ ಅರಣ್ಯ ಪ್ರದೇಶದಲ್ಲೇ ಹರಿದಿದ್ದರಿಂದ ಈ ನದಿಯೊಂದಿಗೆ ಮನುಷ್ಯ ಸಂಪರ್ಕ ಕಡಿಮೆ. ಹೀಗಾಗಿ ನದಿ ಮತ್ತು ನದಿ ತೀರ ಸ್ವಚ್ಛವಾಗಿದೆ. ಮಾನವ ಹಸ್ತಕ್ಷೇಪ ಇಲ್ಲದ್ದರಿಂದ ಮಹದಾಯಿ ಅನಾದಿ ಕಾಲದಿಂದಲೂ ವನ್ಯಜೀಗಳ ಪಾಲಿನ ಜೀವಜಲ ಮೂಲವಾಗಿದೆ.

ಮಹದಾಯಿ ನದಿಗೆ ಅರಣ್ಯದಲ್ಲಿ ಹುಟ್ಟುವ ನೂರಾರು ಹಳ್ಳಗಳು ಸೇರುತ್ತಿದ್ದು, ಅವುಗಳಲ್ಲಿ ಬಂಡೂರಿ ಹಳ್ಳ ನದಿಯ ನೀರಿನ ಹರಿವು ಹೆಚ್ಚಳಕ್ಕೆ ಪ್ರಮುಖ ಪಾತ್ರ ವಹಿಸಿದೆ. ಡೊಂಗರಗಾಂವ, ತೇರೇಗಾಳಿ ಅರಣ್ಯದಲ್ಲಿ ಹುಟ್ಟಿನೇರಸಾ ಮೂಲಕ ಹರಿಯುವ ಬಂಡೂರಿ ಹಳ್ಳ ಕಬನಾಳಿ ಬಳಿ ಮಹದಾಯಿಯನ್ನು ಸೇರುತ್ತದೆ. ಕಣಕುಂಬಿ ಅರಣ್ಯದಲ್ಲಿ ಹುಟ್ಟುವ ಕಳಸಾ ಹಳ್ಳ, ಜಾಂಬೋಟಿ ಅರಣ್ಯದ ಚಾಪೋಲಿ ಬಳಿ ಹುಟ್ಟುವ ಕೋಟ್ನಿ ಹಳ್ಳ, ಬೈಲ್‌ ಹಳ್ಳ, ಕಣಕುಂಬಿ ಬಳಿ ಹರಿಯುವ ಸೂರ್ಲಾ ಹಳ್ಳ, ಚೋರ್ಲಾ ಬಳಿಯ ಕೊಟ್ರಾಚಿ ಹಳ್ಳಗಳು ಮಹದಾಯಿಯನ್ನು ಸೇರುತ್ತವೆ.

ಮಲಪ್ರಭಾ ನದಿ ತಾಲೂಕಿನ ಕಣಕುಂಬಿ ಅರಣ್ಯದಲ್ಲಿ ಹುಟ್ಟಿಜಾಂಬೋಟಿ, ಖಾನಾಪುರ, ಪಾರಿಶ್ವಾಡ, ಎಂ.ಕೆ.ಹುಬ್ಬಳ್ಳಿ ಮೂಲಕ ಕ್ರಮಿಸಿ ಸವದತ್ತಿ ಬಳಿ ನವಿಲುತೀರ್ಥ ಆಣೆಕಟ್ಟೆಸೇರುತ್ತದೆ. ಕಣಕುಂಬಿಯಿಂದ ರೇಣುಕಾ ಸಾಗರ ಆಣೆಕಟ್ಟೆವರೆಗಿನ 150 ಕಿ.ಮೀ. ಕ್ರಮಿಸುವ ಈ ನದಿಯೊಂದಿಗೆ ಮಂಗೇತ್ರಿ, ಕುಂಬಾರ, ನಿಟ್ಟೂರ, ಅಲಾತ್ರಿ, ತಟ್ಟೀ ಮತ್ತಿತರ ಹಳ್ಳಗಳು ಸಂಧಿಸುತ್ತವೆ. ತಾಲೂಕಿನ ಕಣಕುಂಬಿ ಮತ್ತು ಜಾಂಬೋಟಿ ಅರಣ್ಯದಲ್ಲಿ ಸಾಗುವ ಈ ಮಲಪ್ರಭೆ ತನ್ನ ಮಾರ್ಗ ಮಧ್ಯೆ ದಟ್ಟಕಾನನದ ನಡುವೆ ಬಂಡೆಗಳ ಮೇಲೆ ಹಾಯುತ್ತದೆ.

Bus Accident: ರಾಮದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, 7 ಜನ ಆಸ್ಪತ್ರೆಗೆ ದಾಖಲು

ದಟ್ಟ ಅರಣ್ಯದ ನಡುವೆ ಬಹುಪಾಲು ದೂರವನ್ನು ಕ್ರಮಿಸುವ ಎರಡೂ ನದಿಗಳು ಮತ್ತು ಹಳ್ಳ-ಕೊಳ್ಳಗಳ ನೀರಿನಲ್ಲಿ ಔಷಧೀಯ ಗುಣ ಹೊಂದಿದೆ ಎಂಬ ಮಾತಿದೆ. ಈ ನದಿಗಳು ಹರಿಯುವಲ್ಲಿ ಸೂರ್ಯನ ಕಿರಣಗಳು ಕಾಣಸಿಗುವುದೇ ಅಪರೂಪವಾಗಿದ್ದು, ಈ ಕಾರಣಕ್ಕಾಗಿಯೇ ಈ ನದಿಗಳ ನೀರು ತಂಪಾಗಿ, ಸ್ವಚ್ಛ ಮತ್ತು ಶುಭ್ರವಾಗಿದೆ. ಈ ನದಿ ನೀರನ್ನು ಸೇವಿಸುತ್ತಿರುವ ತಾಲೂಕಿನ ಕಾನನ ವಾಸಿಗಳು ಪ್ರಕೃತಿ ಮಾತೆ ತಮಗೆ ನೈಸರ್ಗಿಕವಾದ ನೀರಿನ ಸೌಕರ್ಯವನ್ನು ಕರುಣಿಸಿದ್ದಕ್ಕಾಗಿ ಧನ್ಯತಾಭಾವ ಹೊಂದಿದ್ದಾರೆ.

ಮಹದಾಯಿ ಮತ್ತು ಮಲಪ್ರಭಾ ನದಿಗಳ ನೀರು ಸ್ವಚ್ಛ, ಶುಭ್ರವಾಗಿದ್ದು, ಔಷಧೀಯ ಗುಣ ಹೊಂದಿವೆ. ಕಳೆದ ಮಳೆಗಾಲದಲ್ಲಿ ಎರಡೂ ನದಿ ಪಾತ್ರಗಳಲ್ಲಿ ಉತ್ತಮ ಮಳೆ ಸುರಿದ ಕಾರಣ ಈ ವರ್ಷ ಉಭಯ ನದಿಗಳಲ್ಲಿ ನೀರಿನ ಪ್ರಮಾಣ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿದೆ. ಹೀಗಾಗಿ ಈ ಬೇಸಿಗೆಯಲ್ಲಿ ಖಾನಾಪುರದ ಕಾಡಿನಲ್ಲಿ ವಾಸಿಸುವ ಅಸಂಖ್ಯಾತ ವನ್ಯಜೀಗಳು ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಿವೆ ಅಂತ ಖಾನಾಪುರ ಉಪ ವಲಯ ಅರಣ್ಯಾಧಿಕಾರಿ ನಾಯಕ ಪಾಟೀಲನ ತಿಳಿಸಿದ್ದಾರೆ. 

click me!