ಶಿವಮೊಗ್ಗ ನಗರಕ್ಕೆ ಪ್ರಮುಖ ರೈಲು ಸೇವೆ ಒದಗಿಸುವ ಬೆಂಗಳೂರು ತಾಳಗುಪ್ಪ ರೈಲು ಮಾರ್ಗದಲ್ಲಿ ಬೃಹತ್ ಮರವೊಂದು ಬಿದ್ದಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಶಿವಮೊಗ್ಗ (ಜು.18): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರಕ್ಕೆ ಪ್ರಮುಖ ರೈಲು ಸೇವೆಯನ್ನು ಒದಗಿಸುವ ಬೆಂಗಳೂರು ತಾಳಗುಪ್ಪ ರೈಲು ಮಾರ್ಗದಲ್ಲಿ ಬೃಹತ್ ಮರವೊಂದು ಹಳಿಯ ಮೇಲೆ ಬಿದ್ದಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಹೌದು, ರೈಲ್ವೆ ಹಳಿಯ ಮೇಲೆ ಬಿದ್ದ ಬೃಹತ್ ಮರದಿಂದಾಗಿ ಕೆಲಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಗುರುವಾರ ಶಿವಮೊಗ್ಗದಿಂದ ತಾಳಗುಪ್ಪ ಮಾರ್ಗದಲ್ಲಿ ಘಟನೆ ನಡೆದಿದೆ. ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದಲ್ಲಿ ಆಗಿರುವಂತಹ ಘಟನೆ ನಡೆದಿದೆ. ಇಂದು ಗುರುವಾರ ಬೆಳಗ್ಗೆ ತಾಳಗುಪ್ಪ -ಬೆಂಗಳೂರು ರೈಲುಗಾಡಿಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಪ್ರಯಾಣಿಕರ ಸಹಾಯದಿಂದಲೇ ರೈಲ್ವೆ ಸಿಬ್ಬಂದಿ ತೆರವು ಮಾಡಿದ್ದಾರೆ. ಇದಕ್ಕೆ ನೆರವಾಗಿದ್ದು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಒಂದು ಇಂಟೀರಿಯರ್ಸ್ ಕೆಲಸ ಮಾಡುವ ತಂಡ ಎನ್ನುವುದು ಮುಖ್ಯ ಸಂಗತಿಯಾಗಿದೆ.
10 ಜನರ ಬಲಿ ಪಡೆದ ರೈಲು ಅವಘಡ ನಡೆದು ಸರಿಯಾಗಿ ಒಂದು ತಿಂಗಳಿಗೆ ಮತ್ತೊಂದು ರೈಲು ದುರಂತ
ರೈಲು ಮಾರ್ಗ ಮಧ್ಯದಲ್ಲಿ ಬಿದ್ದ ಮರವನ್ನು ತಕ್ಷಣಕ್ಕೆ ತೆರವು ಮಾಡಲು ಅಗತ್ಯ ಸಾಮಗ್ರಿಗಳು ಇರಲಿಲ್ಲ. ಮರವನ್ನು ಕತ್ತರಿಸುವ ಮಷಿನ್, ಕೊಡಲಿ ಅಥವಾ ಮದ್ಯಾವುದೇ ವಸ್ತುಗಳು ಇಲ್ಲದಿರುವ ಕಾರಣ ರೈಲು ಸಂಚಾರ ಪುನಾರಂಭ ಆಗುವುದು ಸುಮಾರು ಗಂಟೆಗಳ ಕಾಲ ತಡವಾಗುತ್ತದೆ ಎಂದು ಪ್ರಯಾಣಿಕರು ನಿರೀಕ್ಷೆ ಮಾಡಿದ್ದರು. ಇನ್ನು ನಿಂತಿರುವ ರೈಲಿನಿಂದ ಇಳಿದು ಬಸ್‌ಗಳಿಗೆ ಅಥವಾ ಇತರೆ ವಾಹನಗಳನ್ನು ಹೋಗೋಣ ಎಂದರೂ ಅಲ್ಲಿಂದ ನಡೆದುಕೊಂಡು ಹೋಗುವುದಕ್ಕೆ ಸುಲಭ ಮಾರ್ಗವೂ ಇರಲಿಲ್ಲ. ಜೊತೆಗೆ, ಮಳೆಯೂ ಹೆಚ್ಚಾಗಿ ಸುರಿಯುತ್ತಿದ್ದರಿಂದ ರೈಲಿನಿಂದ ಪ್ರಯಾಣಿಕರು ಕೆಳಗಿಳಿದು ಬೇರೆಡೆ ಹೋಗುವುದು ಕೂಡ ಕಷ್ಟಸಾಧ್ಯವಾಗಿತ್ತು.
ಈ ವೇಳೆ ರೈಲ್ವೆ ಸಿಬ್ಬಂದಿಗೆ ನೆರವಾಗಿದ್ದು, ಇದೇ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರಾದ ಇಂಟೀರಿಯರ್ಸ್ ವರ್ಕ್ ಕೆಲಸ ಮಾಡುವ ರಾಮದಾಸ್ ಮತ್ತವರ ತಂಡ. ಇಂಟೀರಿಯರ್ ವರ್ಕ್ ಟೀಮಿನ ಆನಂದ್, ಲೋಕೇಶ್, ಮಾಣಿ , ರಾಹುಲ್, ಪ್ರಜ್ವಲ್ ಒಗ್ಗೂಡಿ ಮರ ತೆರವು ಕಾರ್ಯವನ್ನು ಆರಂಭಿಸಿದರು. ಅವರ ಬಳಿ ಇದ್ದ ಮರ ಕತ್ತರಿಸುವ ಯಂತ್ರಗಳಿಂದ ರೈಲು ಹಳಿಯ ಮೇಲೆ ಬಿದ್ದಿದ್ದ ಮರವನ್ನು ತುಂಡರಿಸಿ ರೈಲು ಸಂಚಾರಕ್ಕೆ ಬೇಕಾದಷ್ಟು ಜಾಗವನ್ನು ತೆರವು ಮಾಡಿದರು. ಇದಾದ ನಂತರ ರೈಲ್ವೆ ಸಿಬ್ಬಂದಿ ಹಾಗೂ ಇತರೆ ಪ್ರಯಾಣಿಕರು ರಾಮದಾಸ್ ನೇತೃತ್ವದ ತಂಡಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ: ರಾಜ್ಯಾದ್ಯಕ್ಷ, ವಿಪಕ್ಷ ನಾಯಕನ ವಿರುದ್ಧವೇ ತೊಡೆ ತಟ್ಟಿದ ಶಾಸಕರು.!
ಮರ ತೆರವು ಕಾರ್ಯಾಚರಣೆ ಮುಗಿಯುತ್ತಿದ್ದಂತೆ ಮತ್ತೊಂದು ಸಮಸ್ಯೆ ಎದುರಾಯಿತು. ಅದೇನೆಂದರೆ ರೈಲ್ವೆ ಇಲಾಕೆಯಿಂದ ಅಳವಡಿಕೆ ಮಾಡಿದ್ದ ವಿದ್ಯುತ್ ಲೈನ್ ಕೂಡ ಹಳಿಯ ಮೇಲೆ ಬಿದ್ದಿತ್ತು. ಆದರೆ, ಈ ವಿದ್ಯುತ್ ಲೈನ್ ಕಾಮಗಾರಿ ಇನ್ನೂ ಪೂರ್ಣವಾಗದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಆದರೆ, ಈ ವಿದ್ಯುತ್ ಲೈನ್ ಅನ್ನು ರೈಲ್ವೆ ಇಲಾಖೆ ಸಿಬ್ಬಂದಿ ಬಂದು ತೆರವುಗೊಳಿಸುವವರೆಗೂ ರೈಲು ಹೊರಡುವುದಕ್ಕೆ ಸಾಧ್ಯವಾಗಲಿಲ್ಲ. ವಿದ್ಯುತ್ ಲೈನ್ ಅನ್ನು ತೆರವು ಮಾಡಿದ ನಂತರ ಅಲ್ಲಿಂದ ರೈಲು ಸಂಚಾರ ಆರಂಭವಾಯಿತು.