ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ: ಸಂಸತ್ತಿನ ಗಮನ ಸಳೆದ ಸಂಸದ ರಾಘವೇಂದ್ರ

By Girish GoudarFirst Published Dec 21, 2022, 8:40 PM IST
Highlights

ಮಲೆನಾಡಿನ ಪ್ರಮುಖ ಜ್ವಲಂತ ಸಮಸ್ಯೆಯಾದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪಿಸಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ಥರ ಜಮೀನಿಗೆ ಹಕ್ಕಪತ್ರ ನೀಡಲು ಅರಣ್ಯ ಭೂಮಿಯನ್ನು ಡಿ-ನೋಟಿಫೈ ಮಾಡುವಂತೆ ಸದನದಲ್ಲಿ ಕೇಂದ್ರದ ಗಮನ ಸೆಳೆದಿದ್ದಾರೆ.

ವರದಿ: ರಾಜೇಶ ಕಾಮತ್, ಸುವರ್ಣ ನ್ಯೂಸ್, ಶಿವಮೊಗ್ಗ

ಶಿವಮೊಗ್ಗ(ಡಿ.21):  ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಲೋಕಸಭಾ ಅಧಿವೇಶನದಲ್ಲಿ ಇಂದು(ಬುಧವಾರ) ಶೂನ್ಯ ವೇಳೆಯಲ್ಲಿ ಶರಾವತಿ ಜಲವಿದ್ಯುತ್ ಯೋಜನೆಯಲ್ಲಿ ನಿರಾಶ್ರಿತರಾದ ಸಾವಿರಾರು ಕುಟುಂಬಗಳು ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕನ್ನು ನೀಡುವ ಬಗ್ಗೆ ಸನ್ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರ ಗಮನ ಸೆಳೆದರು. ಮೊದಲಿಗೆ ಶರಾವತಿ ಜಲವಿದ್ಯುತ್ ಯೋಜನೆಯಲ್ಲಿ ನಿರಾಶ್ರಿತರಾದ ಸಾವಿರಾರು ಕುಟುಂಬಗಳು ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿಯನ್ನು ಡಿ-ನೋಟಿಫೈ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಸಭಾಧ್ಯಕ್ಷರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಮಲೆನಾಡು ಪ್ರದೇಶದ 31 ವಿವಿಧ ಅರಣ್ಯ ಪ್ರದೇಶಗಳಲ್ಲಿನ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಲು ಶರಾವತಿ ಜಲವಿದ್ಯುತ್ ಯೋಜನೆಯಿಂದಾಗಿ ಮುಳುಗಡೆಯಾದ ಪ್ರದೇಶದಿಂದ ಸ್ಥಳಾಂತರಗೊಂಡ ಕುಟುಂಬಗಳಿಗೆ ಅವಕಾಶ ನೀಡಲಾಗಿತ್ತು. ಆದರೆ 1959ರಿಂದ ಕಂದಾಯ ದಾಖಲೆಗಳಲ್ಲಿ ರೈತರ ಹೆಸರು ನಮೂದಾಗಿಲ್ಲ. ಮಲೆನಾಡು ಪ್ರಾಂತ್ಯವಾದ ಶಿವಮೊಗ್ಗ ಜಿಲ್ಲೆಯ ಈ ಭಾಗದ ಪ್ರಮುಖ ರೈತರು ಈಡಿಗ, ಇತರೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದವರಾಗಿದ್ದು, ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Shivamogga: ಶಿವಮೊಗ್ಗದಲ್ಲಿ ಅಕ್ರಮ ದನದ ಮಾಂಸದ ದಂಧೆ ನಡೆಸಿದ 'ಕೈ' ಕಾರ್ಪೋರೇಟರ್

ಪ್ರಸ್ತುತ ಅಸ್ತಿತ್ವದಲ್ಲಿರುವ ಅರಣ್ಯ ಸಂರಕ್ಷಣಾ ಕಾಯಿದೆ-1980 ಕ್ಕಿಂತ ಮೊದಲು, ಅದನ್ನು ಮಾಡಬೇಕಾಗಿತ್ತು ಮತ್ತು ಭೂಮಿಯನ್ನು ಡಿ-ನೋಟಿಫೈ ಮಾಡಬೇಕಾಗಿತ್ತು. ಆದರೆ ಆಗಿನ ಸರ್ಕಾರದ ನಿರ್ಲಕ್ಷದಿಂದ ಅದು ಆಗಲಿಲ್ಲ. ಇದರಿಂದಾಗಿ ಈ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಥವಾ ಸರ್ಕಾರದ ಯಾವುದೇ ಯೋಜನೆಗಳಿಂದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ.

ಈ ಸಾವಿರಾರು ರೈತರ ಜಮೀನಿಗೆ ಹಕ್ಕುಪತ್ರ ನೀಡಬೇಕೆಂಬ ಬಹುದಿನಗಳ ಬೇಡಿಕೆ ಇಂದಿಗೂ ಈಡೇರಿಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆ-1980 ಜಾರಿಗೆ ಬಂದ ನಂತರ ಅರಣ್ಯ ಭೂಮಿಯ ಡಿ-ನೋಟಿಫಿಕೇಶನ್ ಅನ್ನು ಕೇಂದ್ರ ಸರ್ಕಾರ ಮಾತ್ರ ಮಾಡಬಹುದಾಗಿದೆ. ಆದ್ದರಿಂದ ಈಗ ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರದಿಂದ ವಿವರವಾದ ಪ್ರಸ್ತಾವನೆಯನ್ನು ಪಡೆದು ಭೂಮಿಯ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಆ ರೈತರ ಜೀವನೋಪಾಯವನ್ನು ಉಳಿಸಲು ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ.

ದೇಶದ 139 ಕೋಟಿ ಜನರಿಗೆ ಸಂತೋಷ ಮತ್ತು ಸುರಕ್ಷಿತ ಜೀವನವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಹೆಜ್ಜೆ ಇಡುತ್ತಿರುವ, ಭಾರತವನ್ನು ಪರಿವರ್ತಿಸುವ ಚಾಂಪಿಯನ್ ಆಗಿರುವ  ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ , ಪರಿಸರ ಮತ್ತು ಅರಣ್ಯ ಖಾತೆಯ ಮಾನ್ಯ ಸಚಿವರು ಶರಾವತಿ ಜಲವಿದ್ಯುತ್ ಯೋಜನೆಯ ಎಲ್ಲಾ ನಿರಾಶ್ರಿತ ಕುಟುಂಬಗಳಿಗೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡುವ ಮೂಲಕ ವಿಳಂಬ ಮಾಡದೆ ತಕ್ಷಣವೇ ಡಿ-ನೋಟಿಫಿಕೇಶನ್ ಹೊರಡಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

click me!