ಮಡಿಕೇರಿಯ ಐತಿಹಾಸಿಕ ಕೋಟೆಯನ್ನು ದುರಸ್ಥಿ ಮಾಡುವಂತೆ ಹೈಕೋರ್ಟ್ ಸೂಚನೆ.
ಆಗಸ್ಟ್ 22ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಿದ್ದ ನ್ಯಾಯಾಲಯ
ಹೈಕೋರ್ಟ್ ನೀಡಿದ್ದ ಅವಧಿ ಮುಗಿದು ನಾಲ್ಕು ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ನೋಟಿಸ್ ನೀಡಿದ ಹೈಕೋರ್ಟ್
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.21): ಪ್ರವಾಸಿಗರ ಹಾಟ್‍ಸ್ಪಾಟ್ ಆಗಿರುವ ಮಡಿಕೇರಿಯಲ್ಲಿ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಅದರಲ್ಲಿ ಮಡಿಕೇರಿಯ ಐತಿಹಾಸಿಕ ಕೋಟೆ ಕೂಡ ಒಂದು. ಆ ಕೋಟೆಯನ್ನು ಸಂರಕ್ಷಣೆ ಮಾಡಲು ಇಡೀ ಕೋಟೆಯನ್ನು ದುರಸ್ಥಿ ಮಾಡುವಂತೆ ಸ್ವತಃ ಹೈಕೋರ್ಟ್ ಸೂಚನೆ ನೀಡಿ ಒಂದಷ್ಟು ಸಮಯ ನೀಡಿತ್ತು. ವಿಪರ್ಯಾಸವೆಂದರೆ ಹೈಕೋರ್ಟ್ ನೀಡಿದ್ದ ಅವಧಿ ಮುಗಿದು ನಾಲ್ಕು ತಿಂಗಳು ಮುಗಿದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ಹೈಕೋರ್ಟ್ ಕೊಡಗು ಜಿಲ್ಲಾಡಳಿತಕ್ಕೆ ನೋಟಿಸ್ ನೀಡಿದೆ.
undefined
ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ರಾಜ್ಯವನ್ನು ಆಳ್ವಿಕೆ ಮಾಡಿದ್ದ ಹಾಲೇರಿ ರಾಜವಂಶಸ್ಥರು, ತಮ್ಮ ಆಡಳಿತದ ಕೇಂದ್ರವಾಗಿದ್ದ ಮಡಿಕೇರಿಯಲ್ಲಿ ಕೋಟೆಯನ್ನು ನಿರ್ಮಿಸಿ ಅಲ್ಲಿಂದಲೇ ರಾಜ್ಯದ ಆಳ್ವಿಕೆ ಮಾಡಿದ್ದರು. ಅದು ಈಗ ಇತಿಹಾಸ. ಆದರೆ 17 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಈ ಐತಿಹಾಸಿಕ ಕೋಟೆ ಪ್ರಾಚ್ಯವಸ್ತು ಇಲಾಖೆ ಸುಪರ್ದಿಯಲ್ಲಿದ್ದು, ಇದನ್ನು ಸಂರಕ್ಷಿಸುವಂತೆ ರಾಜ್ಯ ಉಚ್ಚನ್ಯಾಯಾಲಯ ಸೂಚಿಸಿತ್ತು. ಎಲ್ಲಾ ದುರಸ್ಥಿ ಕಾರ್ಯಗಳನ್ನು ಆ.23 ರ ಒಳಗಾಗಿ ಮಾಡಿ ಮುಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ವಿಪರ್ಯಾಸವೆಂದರೆ ಗಡುವು ನೀಡಿದ ಅವಧಿ ಮುಗಿದು ನಾಲ್ಕು ತಿಂಗಳುಗಳೇ ಪೂರೈಸಿವೆ. ಆದರೂ ಇಂದಿಗೂ ದುರಸ್ಥಿ ಕಾರ್ಯದ ಅರ್ಧದಷ್ಟೂ ಕಾಮಗಾರಿ ಮುಗಿದಿಲ್ಲ.
BIG 3: ಸೇತುವೆ ಕುಸಿದು 6 ತಿಂಗಳಾದ್ರೂ ಡೋಂಟ್ ಕೇರ್: ಕೊಡಗು ಜನರ ಸಮಸ್ಯೆ ಕೇಳುವವರು ಯಾರು?
ಮುಂದಿನ ಮಳೆಗಾಲದೊಳಗೆ ಕಾಮಗಾರಿ ಪೂರ್ಣ: ಇಂದಿಗೂ ಅರಮನೆಯ ಒಳಗೋಡೆಗಳ ಪ್ಲಾಸ್ಟಿಂಗ್ ತೆಗೆಯಲಾಗಿದ್ದು, ಹಾಳಾಗಿದ್ದ ಕಿಟಕಿ, ಬಾಗಿಲುಗಳನ್ನು ತೆಗೆಯಲಾಗಿದೆ. ಹೀಗಾಗಿ ಸದ್ಯಕ್ಕಂತು ಕಾಮಗಾರಿ ಮುಗಿಯುವಂತೆ ಕಾಣುತ್ತಿಲ್ಲ. ಕಾಮಗಾರಿ ಮುಗಿಯದಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಕೊಡಗು ಜಿಲ್ಲಾಡಳಿತಕ್ಕೆ ಚಾಟಿ ಬೀಸಿದೆ. ಈ ಕುರಿತು ಜಿಲ್ಲಾಧಿಕಾರಿ ಅವರನ್ನು ಕೇಳಿದರೆ, ದುರಸ್ಥಿ ಮಾಡುತ್ತಿದ್ದ ಕಾರ್ಮಿಕರು ಇಲ್ಲದಿದ್ದರಿಂದ ತಡವಾಗಿದೆ. ಈಗಾಗಲೇ ಹೈಕೋರ್ಟ್ ವಿಭಾಗೀಯ ಪೀಠವು ಕೂಡಲೇ ಕಾಮಗಾರಿ ಮುಗಿಸಿರುವುದನ್ನು ಖಾತರಿಪಡಿಸುವಂತೆ ಅಫಿಡೆವಿಟ್ ಸಲ್ಲಿಸುವಂತೆ ಸೂಚನೆ ನೀಡಿದೆ. ಮುಂದಿನ ನಾಲ್ಕೈದು ತಿಂಗಳಲ್ಲಿ ಮಳೆಗಾಲ ಮತ್ತೆ ಆರಂಭವಾಗುವುದರಿಂದ ಅಷ್ಟರ ಒಳಗಾಗಿ ಕಾಮಗಾರಿ ಮುಗಿಸುವುದಾಗಿ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ಹೇಳುತ್ತಿದ್ದಾರೆ.
ಅರ್ಜಿದಾರರಿಂದ ಕಾಮಗಾರಿ ಪರಿಶೀಲನೆ: ಮಡಿಕೇರಿ ಕೋಟೆ, ಅರಮನೆಯನ್ನು ಸಂರಕ್ಷಣೆ ಮಾಡುವಂತೆ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಾದ ಪರಮಶಿವಯ್ಯ ಮತ್ತು ತಂಡದವರು ಬುಧವಾರವೂ ಕೂಡ ಕೋಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಅರಮನೆಯ ದುರಸ್ಥಿ ಕಾಮಗಾರಿ ಕೆಲಸವು ತೀರಾ ವಿಳಂಭವಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ಪರಮಶಿವಯ್ಯ ಅವರು ಕಳೆದ ಆರು ತಿಂಗಳಿನಿಂದ ಕಾಮಗಾರಿಯನ್ನೇ ಮಾಡಿಲ್ಲ. ಜೊತೆಗೆ ಅರಮನೆಯ ರೂಫಿಂಗ್‍ಗೆ ಬಳಸುತ್ತಿದ್ದ ರೀಪರ್ ಗಳು ಕೂಡ ಒಳ್ಳೆಯ ಗುಣಮಟ್ಟದ ಮರಗಳನ್ನು ಬಳಸಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2018ರಲ್ಲಿ ಕುಸಿದ ಸೇತುವೆಗಳಿಗೆ ಇನ್ನೂ ಆಗಿಲ್ಲ ಕಾಮಗಾರಿ, ಕೊಡಗು ಜನರ ಆಕ್ರೋಶ
ಗುಣಮಟ್ಟದ ಕಾಮಗಾರಿ ಮಾಡಲು ಆಗ್ರಹ: ಕೋಟೆ ಮತ್ತು ಅರಮನೆ ದುರಸ್ತಿ ಕಾಮಗಾರಿ ಗುಣಮಟ್ಟದ ಮರಗಳನ್ನು ಬಳಸುವಂತೆಯೂ ಮತ್ತೆ ಹೈಕೋರ್ಟ್ ಮೆಟ್ಟಿಲೇರಬೇಕಾಗಿತ್ತು. ಇದಕ್ಕೆಲ್ಲಾ ಯಾರು ಹೊಣೆ ಎಂದು ಪರಮಶಿವಯ್ಯ ಅವರು ಪ್ರಶ್ನಿಸಿದರು. ಕೋಟೆ ದುರಸ್ಥಿ ಕಾರ್ಯಕ್ಕಾಗಿ ಕೋರ್ಟ್ ಸೂಚನೆಯಂತೆ 10.83 ಕೋಟಿ ರೂ. ಹಣವನ್ನು ಪ್ರಾಚ್ಯವಸ್ತು ಇಲಾಖೆ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ಆದರೂ ಕಾಮಗಾರಿ ತಡವಾಗುತ್ತಿದೆ. ಕಾಮಗಾರಿ ತಡವಾಗುತ್ತಿರುವ ಬಗ್ಗೆ ಪ್ರಶ್ನಿಸಿದರೆ ಮೆಟಿರಿಯಲ್ ಇಲ್ಲ ಎಂದು ಹೇಳುತ್ತಿದ್ದಾರೆ. ಮೆಟಿರಿಯಲ್ ಬೇಕಾಗುತ್ತದೆ ಎನ್ನುವುದು ಇವರಿಗೆ ಗೊತ್ತಿರಲಿಲ್ಲವೇ? ಜನವರಿ ಒಂಭತ್ತರಂದು ಕೋರ್ಟ್‍ಗೆ ಹಾಜರಾಗಬೇಕಾಗಿದ್ದು, ಕಾಮಗಾರಿ ಇಷ್ಟೇ ನಡೆದಿರುವ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪರಮಶಿವಯ್ಯ ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಕೊಡಗನ್ನು ಆಳ್ವಿಕೆ ಮಾಡಿದ್ದ ಕೊಡಗಿನ ರಾಜರ ಪರಂಪರೆ, ಇತಿಹಾಸದ ಪ್ರತೀಕವಾಗಿರುವ ಮಡಿಕೇರಿ ಕೋಟೆ, ಅರಮನೆಯನ್ನು ರಕ್ಷಿಸುವ ಕೆಲಸ ಮತ್ತಷ್ಟು ತೀವ್ರವಾಗಬೇಕಾಗಿದೆ. ಎಲ್ಲ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕಾಗಿದೆ.