ಕಾಂಗ್ರೆಸ್‌ ಗ್ಯಾರಂಟಿಗೆ ಚಾಲನೆ ಕೊಟ್ಟ ಬಿಜೆಪಿ ಶಾಸಕ: ಉಚಿತ ಬಸ್‌ ಟಿಕೆಟ್ ವಿತರಣೆ

By Sathish Kumar KH  |  First Published Jun 11, 2023, 5:01 PM IST

ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ ಗ್ಯಾರಂಟಿ ಘೋಷಣೆಗಳನ್ನು ಟೀಕೆ ಮಾಡಿದ್ದ ಬಿಜೆಪಿ ನಾಯಕರ ಭದ್ರಕೋಟೆ ಶಿವಮೊಗ್ಗದಲ್ಲಿಯೇ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಚಾಲನೆ ನೀಡಿದರು.


ವರದಿ- ರಾಜೇಶ್‌ ಕಾಮತ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ಶಿವಮೊಗ್ಗ (ಜೂ.11): ರಾಜ್ಯದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ ಗ್ಯಾರಂಟಿ ಘೋಷಣೆಗಳನ್ನು ಟೀಕೆ ಮಾಡಿದ್ದ ಬಿಜೆಪಿ ನಾಯಕರ ಭದ್ರಕೋಟೆ ಶಿವಮೊಗ್ಗದಲ್ಲಿಯೇ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಚಾಲನೆ ನೀಡಿದರು.

Latest Videos

undefined

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ 5 ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಿತ್ತು. ಆದರೆ, ಈ ಗ್ಯಾರಂಟಿ ಯೋಜನೆಗಳು ಕೇವಲ ಘೋಷಣೆಗಳಿಗಷ್ಟೇ ಸೀಮಿತವಾಗಲಿದ್ದು, ಅವರು ಅಧಿಕಾರಕ್ಕೆ ಬರುವುದೇ ಇಲ್ಲ ಎಂದು ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದರು. ಹೀಗೆ, ಕಾಂಗ್ರೆಸ್‌ ಗ್ಯಾರಂಟಿಗಳನ್ನು ಸುಳ್ಳು ಭರವಸೆ ಎಂದು ಟೀಕೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಈಗ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರೇ ಸ್ವತಃ ಕಾಂಗ್ರೆಸ್‌ ಮೊದಲ ಗ್ಯಾರಂಟಿಯಾದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ.

'ಶಕ್ತಿ ಯೋಜನೆ ಸ್ಮಾರ್ಟ್‌ ಕಾರ್ಡ್‌' ಪಡೆದ ಮೊದಲ ಮಹಿಳೆ ಇವರೇ! ಉಚಿತ ಪ್ರಯಾಣವನ್ನೂ ಮಾಡಿದ್ರು

ಸರ್ಕಾರದ ಯೋಜನೆಗೆ ಎಲ್ಲರೂ ಚಾಲನೆ ನೀಡಬಹುದು: ಇನ್ನು ರಾಜ್ಯದಲ್ಲಿ ಚುನಾವಣೆ ಮುಕ್ತಾಯಗೊಂಡು ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಈಗ ಎಲ್ಲ ಶಾಸಕರು ಕೂಡ ಕಾಂಗ್ರೆಸ್‌ ಸರ್ಕಾರದ ಆಡಳಿತಕ್ಕೆ ಒಳಪಡಲಿದ್ದಾರೆ. ಈಗ ರಾಜ್ಯದಲ್ಲಿ ಒಂದು ಪಕ್ಷ ಅಧಿಕಾರದಲ್ಲಿದೆ ಎನ್ನುವ ಬದಲು ಎಲ್ಲರೂ ಸರ್ಕಾರದ ಪ್ರತಿನಿಧಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಯಾದ ಶಕ್ತಿ ಯೋಜನೆಗೆ ಒಬ್ಬ ಜನಪ್ರತಿನಿಧಿಯಾಗಿ ಎಸ್.ಎನ್. ಚನ್ನಬಸಪ್ಪ ಚಾಲನೆ ನೀಡಿದ್ದಾರೆ ಎಂಬ ಮಾತು ಕೂಡ ಅವರ ಬೆಂಬಲಿಗರಿಂದ ಕೇಳಿ ಬರುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಯಾರೇ ಆದರೂ ಸಹಕಾರ ನೀಡಬೇಕು ಎಂದು ಟೀಕಾಕಾರರಿಗೆ ಶಾಸಕರ ಬೆಂಬಲಿಗರು ತಿರುಗೇಟು ನೀಡಿದ್ದಾರೆ.

ಶಕ್ತಿ ಯೋಜನೆಗೆ ಚಾಲನೆ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ - ಶಿವಮೊಗ್ಗ ವಿಭಾಗದ ವತಿಯಿಂದ ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ 'ಶಕ್ತಿ ಯೋಜನೆಗೆ' (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ವಿಧ್ಯುಕ್ತವಾಗಿ ಚಾಲನೆಯನ್ನು ನೀಡಲಾಯಿತು. ರಾಜ್ಯ ಸರ್ಕಾರವು ಈ ಯೋಜನೆಯನ್ನು ಸಂಪೂರ್ಣ ಐದು ವರ್ಷಗಳ ಕಾಲ ನಡೆಸುತ್ತದೆ ಎಂಬ ವಿಶ್ವಾಸವಿದ್ದು, ಸರ್ಕಾರವು ಘೋಷಿಸಿದ ಯೋಜನೆಗಳು ಜನರಿಗೆ ತಲುಪುವಂತಾಗಲಿ ಎಂದು ಆಶಿಸುತ್ತೇನೆ.
- ಎಸ್‌.ಎನ್. ಚನ್ನಬಸಪ್ಪ, ಶಾಸಕ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ಮಾತನಾಡಿ, ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು ಅಲ್ಪಾವಧಿಯಲ್ಲಿ ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತಂದ ಸರ್ಕಾರದ ಕ್ರಮ ಸ್ವಾಗತಾರ್ಹವಾದುದು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳುವಂತಾಗಲಿ ಎಂದರು..

ಸಮಾರಂಭದಲ್ಲಿ ಸಾರಿಗೆ‌ ನಿಗಮದ ಜಿಲ್ಲಾ ಅಧಿಕಾರಿ ವಿಜಯಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ಸೇರಿದಂತೆ ಕರ್ನಾಟಕ ರಾಜ್ಯದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಈ ಉಚಿತ ಪ್ರಯಾಣದ ಸೌಲಭ್ಯ ಪಡೆಯಬಹುದಾಗಿದೆ. ಮಹಿಳಾ ಪ್ರಯಾಣಿಕರ ಪೈಕಿ ಆರು ವರ್ಷದಿಂದ 12 ವರ್ಷದವರೆಗಿನ ಬಾಲಕಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸಹ ಪ್ರಯಾಣ ಬೆಳೆಸಬಹುದಾಗಿದೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಮಾತ್ರ ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದರು.

ನನ್ನ ವಿದ್ಯಾರ್ಹತೆ ಮಾಹಿತಿ ಬೇಕಾ ಅಫಿಡವಿಟ್‌ ನೋಡ್ಕೊಳಿ: ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು

ಸ್ಮಾರ್ಟ್‌ ಕಾರ್ಡ್‌ ಬರುವವರೆಗೆ ಗುರುತಿನ ಚೀಟಿ ತೋರಿಸಿ: ಮಹಿಳಾ ಪ್ರಯಾಣಿಕರಿಗೆ ದೂರದ ಯಾವುದೇ ಮಿತಿ ಇರುವುದಿಲ್ಲ ಹಾಗೂ ಪ್ರಯಾಣ ಸೌಲಭ್ಯವು ರಾಜ್ಯದ ಒಳಗೆ ಪ್ರಯಾಣಿಸಲು ಮಾತ್ರ ಅನ್ವಯಗೊಳಲಿದೆ. ಶಕ್ತಿ ಯೋಜನೆಯು ಪಾಸು ಸಾಂದರ್ಭಿಕ ಒಪ್ಪಂದ ಹಾಗೂ ಖಾಯಂ ಗುತ್ತಿಗೆ ಮುಂತಾದ ಸೇವೆಗಳಿಗೆ ಅನ್ವಯಗೊಳ್ಳುವುದಿಲ್ಲ. ಉಚಿತ ಪ್ರಯಾಣದ ಶಕ್ತಿ ಯೋಜನೆಯ ಸೌಲಭ್ಯ ಪಡೆಯಲಿಚ್ಚಿಸುವ ಮಹಿಳಾ ಪ್ರತಿನಿಧಿಗಳು ಆಧಾರ್ ಕಾರ್ಡ್ ವಾಹನ ಚಾಲನಾ ಪರವಾನಗಿ, ಚುನಾವಣಾ ಗುರುತಿನ ಚೀಟಿ, ರಾಜ್ಯ ಸರ್ಕಾರದ ಅಂಗವಿಕಲರ ಗುರುತಿನ ಚೀಟಿ ಮತ್ತಿತರ ಯಾವುದೇ ಒಂದು ದಾಖಲೆಯನ್ನು ಒದಗಿಸಿ, ಸೇವಾಸಿಂಧು ಮೂಲಕ ಅರ್ಜಿಗಳನ್ನು ಪಡೆದು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯುವವರೆಗೆ ಪ್ರಯಾಣಿಸಬಹುದಾಗಿದೆ ಎಂದರು.

 ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್, ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್, ಮೇಯರ್ ಶಿವಕುಮಾರ್ ಮಹಾನಗರಪಾಲಿಕೆ ಸದಸ್ಯರಾದ  ರೇಖಾ ರಂಗನಾಥ, ಯಮುನಾ ರಂಗೇಗೌಡ,  ಯೋಗೇಶ್ , ಜಿಲ್ಲಾಧಿಕಾರಿ ಡಾಕ್ಟರ್ ಆರ್ ಸೇಲ್ಬಮಣಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

click me!