ಬೆಂಗಳೂರು(ಮೇ.26): ಉಡುಪಿಯ ಶ್ರೀ ಶಿರೂರು ಮಠದ ಪೀಠಾಧಿಪತಿಯಾಗಿ ಅಪ್ರಾಪ್ತರನ್ನು ನೇಮಕ ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯಲ್ಲಿನ ಮನವಿ ಮಾರ್ಪಾಡುಗೊಳಿಸಲು ಅರ್ಜಿದಾರರಿಗೆ ಹೈಕೋರ್ಟ್ ಅನುಮತಿ ನೀಡಿದೆ. ಶಿರೂರು ಮಠ ಭಕ್ತ ಸಮಿತಿಯ ಕಾರ್ಯದರ್ಶಿ ಪಿ. ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಾರ್ಪಾಡುಗೊಳಿಸಲು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ಅನುಮತಿ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಮನವಿಗಳನ್ನು ಗಮನಿಸಿದ ಪೀಠ, ಅರ್ಜಿಯಲ್ಲಿ ಖಾಸಗಿ ಮಠ ಹಾಗೂ ವ್ಯಕ್ತಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ. ಆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಖಾಸಗಿಯವರಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಇದು ಸಂಪೂರ್ಣವಾಗಿ ಖಾಸಗಿ ವ್ಯಾಜ್ಯವಾಗಿದ್ದು, ಸಾರ್ವಜನಿಕ ಹಿತಾಸಕ್ತಿ ವ್ಯಾಪ್ತಿಯಲ್ಲಿ ವಿಚಾರಣೆಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಅರ್ಜಿದಾರರ ಪರ ವಕೀಲ ಡಿ.ಆರ್. ರವಿಶಂಕರ್ ವಾದ ಮಂಡಿಸಿ, 16 ವರ್ಷದ ಬಾಲಕನನ್ನು ಪೀಠಾಧಿಪತಿಯಾಗಿ ನೇಮಕ ಮಾಡಲಾಗಿದ್ದು, ಬಲವಂತವಾಗಿ ಸನ್ಯಾಸಿ ಮಾಡಲಾಗಿದೆ. 18 ವರ್ಷ ತುಂಬದವರು ನೀಡುವ ಸಮ್ಮತಿಗೂ ಮಾನ್ಯತೆ ಇಲ್ಲ. ಪ್ರಕರಣದಲ್ಲಿ ಅಪ್ರಾಪ್ತರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಅಲ್ಲದೆ, ಅರ್ಜಿಯಲ್ಲಿರುವ ಮನವಿಗಳನ್ನು ತಿದ್ದುಪಡಿ ಮಾಡಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಉಡುಪಿ ಶಿರೂರು ಮಠದ ಭಾವಿ ಯತಿಗಳ ಸಂನ್ಯಾಸಾಶ್ರಮ ಸ್ವೀಕಾರ ...
ಈ ವೇಳೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಅರ್ಜಿಯಲ್ಲಿ ಅಪ್ರಾಪ್ತರ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಸರ್ಕಾರ ಈ ವಿಚಾರದಲ್ಲಿ ಮೂಕ ಪ್ರೇಕ್ಷಕನಂತೆ ವರ್ತಿಸಬಾರದು ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ಅಲ್ಲದೆ, ತಿದ್ದುಪಡಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡಿ, ವಿಚಾರಣೆಯನ್ನು ಜೂ.2ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ
ಶಿರೂರು ಮಠದ ಆಡಳಿತಾತ್ಮಕ, ಆರ್ಥಿಕ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ನಿಯಂತ್ರಣ ಸಾಧಿಸಲು ಸೋದೆ ಮಠಕ್ಕೆ ಅವಕಾಶವಿಲ್ಲ. ಹೀಗಿದ್ದರೂ, ಪೀಠಾಧಿಪತಿ ನೇಮಕ ವಿಚಾರದಲ್ಲಿ ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಧ್ಯಪ್ರವೇಶಿಸಿರುವುದು ಕಾನೂನು ಬಾಹಿರ. ಶಿರೂರು ಮಠದ ಪೀಠಾಪತಿ ಸ್ಥಾನಕ್ಕೆ ಯಾವುದೇ ವ್ಯಕ್ತಿಯನ್ನು ನೇಮಕ ಮಾಡಲು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಘೋಷಿಸಬೇಕು. ಜೊತೆಗೆ, ಅಪ್ರಾಪ್ತರನ್ನು ಶಿರೂರು ಮಠದ ಪೀಠಾಧಿಪತಿಯಾಗಿ ನೇಮಕ ಮಾಡಿರುವುದು ಕಾನೂನುಬಾಹಿರ ಎಂಬುದಾಗಿ ಘೋಷಣೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.