* ಗ್ರಾಮದ ಸುತ್ತಲೂ ‘ಓಂ ನಮಃ ಶಿವಾಯ’ ನಾಮಸ್ಮರಣೆಯೊಂದಿಗೆ ಸಂಚಾರ
* ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಇಬ್ರಾಹಿಂಪುರ್ ಗ್ರಾಮ
* ಮಹಾಮಾರಿ ಕಾಲಿಡಬಾರದೆಂದು ಈ ರೀತಿ ದಿಗ್ಬಂಧನ ಪೂಜೆ ಪ್ರತಿವರ್ಷ ಮಾಡುತ್ತಿದ್ದರಂತೆ
ಈಶ್ವರ ಜಿ ಲಕ್ಕುಂಡಿ
ನವಲಗುಂದ(ಮೇ.26): ಕೊರೋನಾ ಬಾರದಂತೆ ಇಲ್ಲೊಂದು ಗ್ರಾಮದಲ್ಲಿ ಸ್ವಾಮೀಜಿಯಿಂದ ದಿಗ್ಬಂಧನ ಪೂಜೆ ನಡೆಯುತ್ತಿದೆ. ರಾತ್ರಿ 10ರಿಂದ 11ರ ವರೆಗೆ ಪೂಜೆ ನಡೆಯುತ್ತಿದ್ದು, ಬಳಿಕ ಸ್ವಾಮೀಜಿ ಬೆತ್ತ ಹಿಡಿದು ಗ್ರಾಮದ ಸುತ್ತಲೂ ಓಂ ನಮಃ ಶಿವಾಯ ನಾಮ ಸ್ಮರಣೆಯೊಂದಿಗೆ ಸುತ್ತಾಡಿ ದಿಗ್ಬಂಧನ ಮಾಡುತ್ತಿದ್ದಾರೆ!
undefined
ಹೌದು! ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರದಲ್ಲಿ ಕಳೆದ ಮೂರು ದಿನಗಳಿಂದ ದಿಗ್ಬಂಧನ ನಡೆಯುತ್ತಿದೆ. ಇಬ್ರಾಹಿಂಪುರದಲ್ಲಿ ಬೂದಿಸ್ವಾಮಿ ಹಾಗೂ ರುದ್ರಮುನಿ ಸ್ವಾಮಿ ಎಂಬ ಎರಡು ಮಠಗಳಿವೆ. ಇವುಗಳಲ್ಲಿ ಶಿವಯೋಗಿ ಹಿರೇಮಠ ಸ್ವಾಮೀಜಿ ಪೂಜೆ ಸಲ್ಲಿಸುತ್ತಿದ್ದಾರೆæ. ಮಠದ ಗರ್ಭಗುಡಿಯಲ್ಲಿ ರಾತ್ರಿ ವೇಳೆ ಬೆತ್ತಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅದನ್ನು ಹಿಡಿದು ಶಿವಯೋಗಿ ಸ್ವಾಮೀಜಿ, ‘ಓಂ ನಮಃ ಶಿವಾಯ’ ಎಂದು ನಾಮ ಸ್ಮರಣೆ ಮಾಡುತ್ತಾ ಊರೆಲ್ಲ ಸುತ್ತು ಹಾಕುತ್ತಾರೆ.
ಹೀಗೆ ಸುತ್ತು ಹಾಕುವುದರಿಂದ ಊರಲ್ಲಿ ಕೊರೋನಾ ಬಾರದಂತೆ ದಿಗ್ಬಂಧನ ಹಾಕಿದಂತೆ. ಇದರಿಂದ ಕೊರೋನಾ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ನಮ್ಮೂರಿನತ್ತ ಹಾಯುವುದಿಲ್ಲ ಎಂಬ ನಂಬುಗೆ ಗ್ರಾಮಸ್ಥರು ಮತ್ತು ಶ್ರೀಗಳದ್ದು. 5 ದಿನಗಳ ದಿಗ್ಬಂಧನ ಪೂಜೆಯಿದು. ಈಗಾಗಲೇ ಮೂರು ದಿನಗಳ ಪೂಜೆ ಮುಗಿದಿದ್ದು, ಇನ್ನೆರಡು ದಿನ ಪೂಜೆ ಮಾಡುವುದು ಬಾಕಿಯಿದೆ. ಗುರುವಾರ ಮುಕ್ತಾಯವಾಗುತ್ತದೆ. ಕಳೆದ ವರ್ಷ ಕೊರೋನಾ ಮೊದಲ ಅಲೆಯ ವೇಳೆಯಲ್ಲೂ ಈ ರೀತಿ ಪೂಜೆ ಮಾಡಿ ದಿಗ್ಬಂಧನ ಹಾಕಲಾಗಿತ್ತು. ಆಗ ಹಾವಳಿ ಕಡಿಮೆಯಾಗಿತ್ತು ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಹುಬ್ಬಳ್ಳಿ: ಬ್ಲ್ಯಾಕ್ ಫಂಗಸ್‌ಗೆ ಚುಚ್ಚುಮದ್ದಿನ ಕೊರತೆ, ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ
ಮೊದಲು ಇತ್ತು:
ದಶಕಗಳ ಹಿಂದೆ ಬೂದಿಸ್ವಾಮಿ ಹಾಗೂ ರುದ್ರಮುನಿ ಸ್ವಾಮಿ ಎಂಬ ಇಬ್ಬರು ಈ ಊರಲ್ಲಿ ತಪಸ್ಸು ಮಾಡಿ ನೆಲೆ ನಿಂತಿದ್ದರಂತೆ. ಆಗ ಊರೆಲ್ಲೆಲ್ಲ ಪ್ಲೇಗ್ ಹಾವಳಿ ಇತ್ತಂತೆ. ಇಬ್ರಾಹಿಂಪುರದಲ್ಲಿ ಈ ಮಹಾಮಾರಿ ಕಾಲಿಡಬಾರದೆಂದು ಈ ರೀತಿ ದಿಗ್ಬಂಧನ ಪೂಜೆ ಪ್ರತಿವರ್ಷ ಮಾಡುತ್ತಿದ್ದರಂತೆ. ಇದೀಗ ಕೊರೋನಾ ಹಾವಳಿ ಮಿತಿಮೀರಿದೆ. ಜೊತೆಗೆ ಕಳೆದ ವಾರ ಈ ಗ್ರಾಮದಲ್ಲಿ ಒಂದೇ ದಿನ ಏಳು ಜನರು ಸಾವಿಗೀಡಾಗಿದ್ದಾರೆ. (ಇಬ್ಬರು ಕೊರೋನಾದಿಂದ ಮೃತಪಟ್ಟರೆ, ಇನ್ನುಳಿದ ಐವರು ಅನ್ಯಕಾರಣಗಳಿಂದ ಮೃತಪಟ್ಟಿದ್ದಾರೆ) ಈ ಕಾರಣದಿಂದ ಗ್ರಾಮಸ್ಥರೆಲ್ಲರೂ ಚರ್ಚಿಸಿ, ಹಿಂದೆ ಹಿರಿಯ ಸ್ವಾಮೀಜಿಗಳು ಮಾಡಿದಂತೆ ದಿಗ್ಬಂಧನ ಪೂಜೆ ಮಾಡಲು ನಿರ್ಧರಿಸಿ, ಈಗಿನ ಸ್ವಾಮೀಜಿ ಶಿವಯೋಗಿ ಹಿರೇಮಠ ಅವರಿಗೆ ಹೇಳಿ ಅವರಿಂದ ಪೂಜೆ ಮಾಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಇಬ್ರಾಹಿಂಪುರದಲ್ಲಿ ದಿಗ್ಬಂಧನ ಪೂಜೆ ಮಾಡುತ್ತಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ. ಈ ಪೂಜೆಯಲ್ಲಿ ಗ್ರಾಮದ ಶಿವಾನಂದ ಮಠದ ಶ್ರೀ ದಯಾನಂದ ಸ್ವಾಮಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಚಿಪ್ಪಾಡಿ, ಹೇಮಣ್ಣ ಬಡಿಗೇರ ಸೇರಿದಂತೆ ಮತ್ತಿತರರ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಗ್ರಾಮದಲ್ಲಿ ಒಂದೇ ದಿನಕ್ಕೆ 7 ಜನ ಮೃತಪಟ್ಟಿದ್ದಾರೆ. ಇದರಿಂದ ದೊಡ್ಡ ಆಘಾತವೇ ಉಂಟಾಗಿತ್ತು. ಈ ಹಿಂದೆ ಪ್ಲೇಗ್ ಬಂದಾಗ ಮಾಡುತ್ತಿದ್ದ ದಿಗ್ಬಂಧನ ಪೂಜೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಮಾಡಲು ನಿರ್ಧರಿಸಿ ಶ್ರೀಗಳ ಸನ್ನಿಧಾನದಲ್ಲಿ ಕೋರಿದೆವು. ಕೊರೋನಾ ಸೇರಿ ಯಾವುದೇ ರೋಗ ಗ್ರಾಮಕ್ಕೆ ಬರಬಾರದೆಂಬ ಉದ್ದೇಶದಿಂದ ನಿರ್ಣಯ ತೆಗೆದುಕೊಂಡಿದ್ದೇವೆ. ಇದರಿಂದ ಗ್ರಾಮಕ್ಕೆ ಒಳ್ಳೆಯದೇ ಆಗುತ್ತದೆ ಎಂದು ಗ್ರಾಮದ ಹಿರಿಯರು ಹೇಮರಡ್ಡಿ ಕುರಹಟ್ಟಿ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona