ಶಿರಾಡಿ ಘಾಟಿ ರಸ್ತೆ ಲಘು ವಾಹನ ಸಂಚಾರಕ್ಕೆ ಶೀಘ್ರ ಮುಕ್ತ

By Web DeskFirst Published Sep 3, 2018, 10:28 AM IST
Highlights

ಎಲ್ಲೆಲ್ಲಿ ಭೂಕುಸಿತದಿಂದ ಹಾನಿಯಾಗಿದೆಯೋ ಅಲ್ಲಲ್ಲಿ ತಾತ್ಕಾಲಿಕ ರಿಪೇರಿ ಕಾಮಗಾರಿ ನಡೆಸಿದ್ದು, ಶಿರಾಡಿ ಘಾಟ್ ಶೀಘ್ರವೇ ಲಘು ವಾಹನಗಳ ಓಡಾಡಕ್ಕೆ ಮುಕ್ತವಾಗಲಿದೆ. ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಘಾಟಿ ಪ್ರದೇಶದಲ್ಲಿ ಭೂಕುಸಿತವೂ ಸಂಪೂರ್ಣ ನಿಂತಿದೆ. ಈ ಹಿನ್ನೆಲೆಯಲ್ಲಿ ಸೆ.3ರ ಬೆಳಗ್ಗಿನಿಂದಲೇ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಹೆದ್ದಾರಿ ಇಲಾಖೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿ ಪತ್ರ ಬರೆದಿತ್ತು. ಇದೀಗ ಜಿಲ್ಲಾಡಳಿತದ ತೀರ್ಮಾನ ಮಾತ್ರ ಬಾಕಿ ಉಳಿದಿದೆ.

ಮಂಗಳೂರು: ಭೂಕುಸಿತದಿಂದಾಗಿ 20 ದಿನಗಳಿಂದ ಸಂಚಾರ ಸ್ಥಗಿತಗೊಂಡಿರುವ ಶಿರಾಡಿ ಘಾಟಿ ರಸ್ತೆ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ. ಆದರೆ ಕುಸಿದ ತಡೆಗೋಡೆ ಕಾಮಗಾರಿ ಪೂರ್ತಿಯಾಗುವವರೆಗೆ ಬಸ್‌ ಹಾಗೂ ಲಘು ವಾಹನಗಳಿಗೆ ಮಾತ್ರ ಪ್ರವೇಶ ನೀಡುವ ಕುರಿತು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಎಲ್ಲೆಲ್ಲಿ ಭೂಕುಸಿತದಿಂದ ಹಾನಿಯಾಗಿದೆಯೋ ಅಲ್ಲಲ್ಲಿ ತಾತ್ಕಾಲಿಕ ರಿಪೇರಿ ಕಾಮಗಾರಿ ನಡೆಸಲಾಗಿದೆ. ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಘಾಟಿ ಪ್ರದೇಶದಲ್ಲಿ ಭೂಕುಸಿತವೂ ಸಂಪೂರ್ಣ ನಿಂತಿದೆ. ಈ ಹಿನ್ನೆಲೆಯಲ್ಲಿ ಸೆ.3ರ ಬೆಳಗ್ಗಿನಿಂದಲೇ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಹೆದ್ದಾರಿ ಇಲಾಖೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿ ಪತ್ರ ಬರೆದಿತ್ತು. ಇದೀಗ ಜಿಲ್ಲಾಡಳಿತದ ತೀರ್ಮಾನ ಮಾತ್ರ ಬಾಕಿ ಉಳಿದಿದೆ.

ಮೂರು ದಿನಗಳಲ್ಲಿ ನಿರ್ಧಾರ: ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕುಮಾರ್‌, ಭೂಕುಸಿತ ಆದ ಕಡೆಗಳಲ್ಲಿ ತಾತ್ಕಾಲಿಕ ಕಾಮಗಾರಿ ನಡೆಸಲಾಗಿದೆ. ಜಿಲ್ಲಾಡಳಿತ ಪರಿಶೀಲನೆ ನಡೆಸಿ ಮೂರು ದಿನದೊಳಗೆ ನಿರ್ಧಾರ ಪ್ರಕಟಿಸಲಿದೆ. ಆದರೆ ಘನ ವಾಹನಗಳ ಸಂಚಾರ ಸ್ವಲ್ಪ ಕಷ್ಟ. ಬಸ್‌ಗಳು ಹಾಗೂ ಲಘು ವಾಹನಗಳು ಸಂಚರಿಸಬಹುದು ಎಂದು ತಿಳಿಸಿದ್ದಾರೆ.

ಹಲವೆಡೆ ಒನ್‌ವೇ ಸಂಚಾರ: ಕಳೆದ ತಿಂಗಳು ಘಾಟಿಯ ಸುಮಾರು 9 ಕಡೆಗಳಲ್ಲಿ ಹೊಳೆ ಬದಿಯ ತಡೆಗೋಡೆ ಕುಸಿದು ಹೆದ್ದಾರಿ ಅಡಿಭಾಗದಲ್ಲಿ ಭೂಕುಸಿತ ಉಂಟಾಗಿತ್ತು. ರಸ್ತೆ ಮೇಲ್ಭಾಗದಲ್ಲೂ 33 ಕಡೆಗಳಲ್ಲಿ ಗುಡ್ಡ ಜರಿದಿತ್ತು. ಕ್ಷಿಪ್ರ ಕಾಮಗಾರಿ ನಡೆಸಿದ ಹೆದ್ದಾರಿ ಇಲಾಖೆ ಈ ಪ್ರದೇಶಗಳಲ್ಲಿ ತಾತ್ಕಾಲಿಕ ಕಾಮಗಾರಿ ನಡೆಸಿ ಸಂಚಾರ ಯೋಗ್ಯಗೊಳಿಸಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆ ಅಡಿಭಾಗದಲ್ಲಿ ಭೂಕುಸಿತವಾದ ಪ್ರದೇಶಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆಗೊಳಿಸಲಾಗುವುದು ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗಾಲದ ಬಳಿಕ ಶಾಶ್ವತ ಪರಿಹಾರ: ಈಗ ಮಳೆಗಾಲವಾಗಿರುವುದರಿಂದ ಹೊಳೆ ಬದಿಯಲ್ಲಿ ಭೂಮಿ ಕುಸಿದ ಪ್ರದೇಶಗಳಲ್ಲಿ ರಕ್ಷಣಾ ತಡೆಗೋಡೆ ಕಾಮಗಾರಿ ನಡೆಸಲು ಅಡ್ಡಿಯಾಗಿದೆ. ಮಳೆಗಾಲದ ಬಳಿಕವಷ್ಟೆಈ ಕಾಮಗಾರಿ ನಡೆಸಲು ಸಾಧ್ಯವಾಗುವುದರಿಂದ ಅಲ್ಲಿಯವರೆಗೂ ಘನವಾಹನಗಳಿಗೆ ಶಿರಾಡಿ ಘಾಟಿ ಸಂಚಾರ ಮರೀಚಿಕೆಯಾಗಲಿದೆ.

ಜು.15ರಂದು ಶಿರಾಡಿ ಘಾಟಿ ರಸ್ತೆಯ 2ನೇ ಹಂತದ ಕಾಮಗಾರಿಯನ್ನು ಉದ್ಘಾಟಿಸಲಾಗಿತ್ತು. ಆದರೆ ತಿಂಗಳೊಳಗೇ ಅತಿವೃಷ್ಟಿಯಿಂದ ಭೂಕುಸಿತ ಉಂಟಾಗಿ ಬೆಂಗಳೂರನ್ನು ಸಂಪರ್ಕಿಸುವ ಈ ಪ್ರಮುಖ ಹೆದ್ದಾರಿಯನ್ನು ಮುಚ್ಚಬೇಕಾಯತು. ಪರ್ಯಾಯ ರಸ್ತೆಯಾಗಿದ್ದ ಮಾಣಿ-ಮೈಸೂರು ಹೆದ್ದಾರಿಯೂ ಇದೇ ಅವಧಿಯಲ್ಲಿ ಸಂಪರ್ಕ ಕಡಿತಗೊಂಡು ಕರಾವಳಿ ಜನರ ಸಂಕಷ್ಟಆರಂಭವಾಗಿತ್ತು. ಚಾರ್ಮಾಡಿ ಹಾಗೂ ಎಸ್‌.ಕೆ.ಬಾರ್ಡರ್‌-ಕುದುರೆಮುಖ ಮೂಲಕ ಬಸ್‌ಗಳ ಸಂಚಾರವಿದ್ದರೂ ಘನವಾಹನಗಳಿಗೆ ಇನ್ನೂ ಈ ರಸ್ತೆಯನ್ನು ಮುಕ್ತಗೊಳಿಸಿಲ್ಲ. ಇದೀಗ ಶಿರಾಡಿ ಘಾಟಿ ಸಂಚಾರ ಆರಂಭವಾದರೆ ಕರಾವಳಿ ಜನತೆ ತುಸು ನಿರಾಳರಾಗಲಿದ್ದಾರೆ.

click me!