ಮಂಗಳೂರು : ಈಗ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು.ಟಿ.ಖಾದರ್ ವಿರುದ್ಧ ಮಂಗಳೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ ಮಾಜಿ ಮೇಯರ್ ಕೆ. ಅಶ್ರಫ್ ಅವರು ಪಕ್ಷಕ್ಕೆ ಗುಡ್‌ಬೈ ಹೇಳಲು ಮುಂದಾಗಿದ್ದಾರೆ.
ಈ ಬಾರಿಯ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಪಕ್ಷೇತರನಾಗಿ ಸ್ಪರ್ಧಿಸಲು ಅಶ್ರಫ್ ಸಿದ್ಧತೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸುಮಾರು 30 ವರ್ಷಕಾಲ ಕಾರ್ಯಕರ್ತನಾಗಿ, ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ಆಗ ಮಂಗಳೂರಿನ ಮೇಯರ್ ಕೂಡ ಆಗಿದ್ದ ಅಶ್ರಫ್ ಅವರು ಮಾಜಿ ಶಾಸಕ ಜೆ. ಆರ್.ಲೋಬೋ ಅವರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ತ್ಯಜಿಸಿದ್ದರು.
ಬಳಿಕ ಜೆಡಿಎಸ್ ಸೇರ್ಪಡೆಯಾಗಿ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಫಾರೂಕ್ ಒತ್ತಾಸೆಯ ಮೇರೆಗೆ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ ಜೆಡಿಎಸ್‌ನ ಸಹವಾಸವೇ ಬೇಡ ಎಂದು ಅಶ್ರಫ್ ಅವರು ಪಕ್ಷೇತರನಾಗಿ ಮತ್ತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಂದರು ವಾರ್ಡ್ ನಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಅಲ್ಲದೆ ತನ್ನ 10 ಮಂದಿ ಬೆಂಬಲಿಗರನ್ನು ಬೇರೆ ವಾರ್ಡ್‌ಗಳಲ್ಲಿ ಪಕ್ಷೇತರರಾಗಿ ಕಣಕ್ಕಿಳಿಸಲು ಅವರು ತೀರ್ಮಾನಿಸಿದ್ದಾರೆ.
ಯಾಕೆ ಪಕ್ಷ ಬಿಡುವ ನಿರ್ಧಾರ?:
ಮಾಜಿ ಶಾಸಕ ಜೆ.ಆರ್.ಲೋಬೋ ಅವರ ಗೆಲುವಿಗೆ ಶ್ರಮಿಸಿದ್ದ ಅಶ್ರಫ್ ಅವರು ಬಂದರು ಪ್ರದೇಶದಲ್ಲಿ 5 ಸಾವಿರ ಮತಗಳ ಮುನ್ನಡೆಯನ್ನು ತೆಗೆಸಿಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಆದರೆ ಲೋಬೋ ಅವರು ನನ್ನ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯ ಆರೋಪವನ್ನು ಹೊರಿಸಿದ್ದರು. ಇದರಿಂದ ನೊಂದು ಕಾಂಗ್ರೆಸ್ ಸಹವಾಸವೇ ಬೇಡ ಎಂದು ಪಕ್ಷ ತೊರೆದಿದ್ದೆ ಎನ್ನುತ್ತಾರೆ ಅಶ್ರಫ್.
ಜೆಡಿಎಸ್ ಸೇರ್ಪಡೆ ನಂತರ ಅಶ್ರಫ್ ಅವರು ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ವಿರುದ್ಧ ಮಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು. ಆದರೆ ಜೆಡಿಎಸ್ ಮುಖಂಡ ಫಾರೂಕ್ ಅವರ ಒತ್ತಾಸೆ ಹಾಗೂ ಖಾದರ್ ಅವರ ಸವಾಲಿನ ಮೇರೆಗೆ ಅಶ್ರಫ್ ಮಂಗಳೂರು(ಉಳ್ಳಾಲ)ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಅಸೆಂಬ್ಲಿ ಚುನಾವಣೆಯಲ್ಲಿ ಅಶ್ರಫ್ ಗೆ ಸಿಕ್ಕಿದ್ದು ಕೇವಲ 3800 ಮತ. ಠೇವಣಿಯೂ ಇಲ್ಲ, ಚುನಾವಣೆಗೆ ಮಾಡಿದ ಲಕ್ಷಗಟ್ಟಲೆ ಖರ್ಚು ವ್ಯರ್ಥ. ಆ ಮೊತ್ತವನ್ನು ಭರಿಸಲು ಜೆಡಿಎಸ್ ಮುಖಂಡರು ಮಾತುಕೊಟ್ಟು ನಂತರ ಕೈಕೊಟ್ಟಿರುವುದು ಅಶ್ರಫ್ ಕೋಪಕ್ಕೆ ಕಾರಣವಂತೆ. ಅಷ್ಟೇ ಅಲ್ಲ, ಪಕ್ಷ ಸಂಘಟನೆಗೆ ಮುಖಂಡರು ಆಸ್ಪದ ನೀಡುತ್ತಿಲ್ಲ. ಎಲ್ಲ ಮುಖಂಡರು ನಾಯಕರು ಬಂದಾಗ ಫೋಸು ಕೊಡುವುದು ಬಿಟ್ಟರೆ ಪಕ್ಷದ ಕೆಲಸ ಮಾಡುವವರಿಲ್ಲ. ನಾನು ಸ್ಪರ್ಧಿಸಿದಾಗಲೂ ಯಾರೊಬ್ಬ ನಾಯಕರೂ ಪ್ರಚಾರಕ್ಕೆ ಬರಲಿಲ್ಲ. ಈ ಎಲ್ಲ ಕಾರಣಗಳಿಂದ ಜೆಡಿಎಸ್ ಸಹವಾಸವೇ ಬೇಡ ಎಂದು ಪಕ್ಷ ಬಿಡಲು ತೀರ್ಮಾನಿಸಿದ್ದೇನೆ ಎಂದು ಅಶ್ರಫ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಪಕ್ಷೇತರನಾಗಿ ಸ್ಪರ್ಧೆ:
ಮುಂದಿನ ವರ್ಷ ನಡೆಯುವ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಲು ಅಶ್ರಫ್ ನಿರ್ಧರಿಸಿದ್ದಾರೆ. ಈ ಹಿಂದೆ ಬಂದರು ವಾರ್ಡ್ ನಂ.44ರಿಂದ ಅಶ್ರಫ್ ಎರಡು ಬಾರಿ ಆಯ್ಕೆಯಾಗಿದ್ದರು. ಎರಡನೇ ಬಾರಿ ಆಯ್ಕೆಯಾದಾಗ ಮೇಯರ್ ಆಗುವ ಅದೃಷ್ಟ ಒಲಿದಿತ್ತು. 2005-06ರಲ್ಲಿ ಮೇಯರ್ ಆಗಿದ್ದಾಗ ಅಶ್ರಫ್ ಅವರು 40 ಕೋಟಿ ರು. ವೆಚ್ಚದಲ್ಲಿ ತುಂಬೆಗೆ ಹೊಸ ಡ್ಯಾಂ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಮುತುವರ್ಜಿ ವಹಿಸಿದ್ದರು.
ಪಾಲಿಕೆಯ 1 ಕೋಟಿ ರು. ನಿಧಿಯನ್ನು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ವಿನಿಯೋಗಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು ಈಗ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಲೆಕ್ಕಾಚಾರವನ್ನು ಅಶ್ರಫ್ ಹಾಕುತ್ತಿದ್ದಾರೆ.
ಎರಡು ಅವಧಿಯಲ್ಲಿ ಬಂದರು ವಾರ್ಡ್‌ನಲ್ಲಿ ಸಾಮಾನ್ಯ ಮಹಿಳೆ ಮೀಸಲಾತಿ ಇದೆ. ಈ ಬಾರಿ ಹಿಂದುಳಿದ ವರ್ಗ ಎ ಮೀಸಲಾತಿ ನಿಗದಿಯಾಗಿದೆ. ಒಂದು ವೇಳೆ ಇದನ್ನು ಬದಲಾಯಿಸಿದರೆ ಕೋರ್ಟ್ ಮೆಟ್ಟಿಲೇರುವುದು ಖಚಿತ ಎನ್ನುತ್ತಾರೆ ಅಶ್ರಫ್. ಅಶ್ರಫ್ ಅವರು ಕಂದಕ್ ವಾರ್ಡ್ ನಂ.45ರಿಂದ ಒಂದು ಬಾರಿ ಸ್ಪರ್ಧಿಸಿದ್ದರು.
ಅರ್ಧದಲ್ಲೇ ರಾಜಿನಾಮೆ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅಶ್ರಫ್ ಅವರು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ವಿನಾಕಾರಣ ಆರೋಪಿಸಿದರು ಎಂದು ನೊಂದು ರಾಜಿನಾಮೆ ನೀಡಿದ್ದರು. ಆದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಪರವಾಗಿ ಪ್ರಚಾರ ನಡೆಸಿದ್ದೇನೆ ಎನ್ನುತ್ತಾರೆ ಅವರು.
ಆಗ ಮಂಗಳೂರು ದಕ್ಷಿಣದಿಂದ ಟಿಕೆಟ್‌ಗೆ ಐವನ್ ಡಿಸೋಜಾ ಅವರನ್ನು ಬೆಂಬಲಿಸಿದ್ದು ನನ್ನನ್ನು ಪಕ್ಷ ವಿರೋಧಿ ಎಂದು ಜೆ.ಆರ್. ಲೋಬೋ ಅವರು ಬಿಂಬಿಸುವಂತೆ ಆಯಿತು. ನಿಜವಾಗಿ ನಾನು ಲೋಬೋ ಅವರ ಗೆಲುವಿಗೆ ಬಂದರು ಪ್ರದೇಶದಲ್ಲಿ ಶ್ರಮಿಸಿದ್ದೆ. ಆದರೂ ನನ್ನ ಮೇಲೆ ಅವರಿಗೆ ವಿಶ್ವಾಸ ಇರಲಿಲ್ಲ. ಇದರಿಂದಾಗಿ ನಾನು ಕಾಂಗ್ರೆಸ್ ತ್ಯಜಿಸುವಂತಾಯಿತು ಎನ್ನುತ್ತಾರೆ ಅಶ್ರಫ್.
ಇದನ್ನೂ ಓದಿ: