
ಮಾಗಡಿ (ಅ.13): ಪೂಜೆಗಾಗಿ ಹೂ ತರಲು ಜಮೀನಿಗೆ ತೆರಳಿದ್ದ ಅರ್ಚಕರೊಬ್ಬರು ಚಿರತೆ ದಾಳಿಯಿಂದ ಮೃತಪಟ್ಟಿರುವ ಘಟನೆ ಸೋಮವಾರ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಡೆದಿದೆ.
ಕಲ್ಲುದೇವನಹಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಿವಸ್ವಾಮಿ ಮೃತರು. ಶಿವಸ್ವಾಮಿ ಅವರು ಸೋಮವಾರ ಬೆಳಗ್ಗೆ ಪೂಜೆಗಾಗಿ ತಮ್ಮ ಜಮೀನಿಗೆ ಹೂ ತರಲು ತೆರಳಿದ್ದರು. ಹೂವು ಕಿತ್ತು ಬ್ಯಾಗ್‌ಗೆ ಹಾಕಿಕೊಳ್ಳುವಾಗ ಚಿರತೆ ಇವರ ಮೇಲೆ ದಾಳಿ ಮಾಡಿ ಕುತ್ತಿಗೆ ಹಾಗೂ ಕೈ ಭಾಗಕ್ಕೆ ಕಚ್ಚಿ, ಸುಮಾರು 10 ಅಡಿಗಳಷ್ಟು ದೂರಕ್ಕೆ ಎಳೆದೊಯ್ದಿದೆ.
ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗ್ಗೆ ರಸ್ತೆಯಲ್ಲಿ ಹಾಲು ಹಾಕಲು ತೆರಳುತ್ತಿದ್ದ ಸ್ಥಳೀಯ ಯುವಕ, ಜಮೀನಿನಲ್ಲಿ ಅರ್ಚಕರು ಮಲಗಿರುವುದನ್ನು ಕಂಡು ಮಾತನಾಡಿಸಲು ಯತ್ನಿಸಿದ್ದಾನೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಹತ್ತಿರ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಶವ ಬಿದ್ದಿರುವುದು ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ (ಚಾಮರಾಜನಗರ): ತಾಲೂಕಿನ ಕಾಡು ಬಸವೇಶ್ವರ ದೇವಸ್ಥಾನದ ಸಮೀಪ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಮೂಡಿಸಿದೆ. ಜಮೀನಿನಲ್ಲಿ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿದ್ದ ಬಾಲಕನಿಗೆ ಚಿರತೆ ಕಾಣಿಸಿದೆ. ಬಾಲಕ ತನ್ನ ಮೊಬೈಲ್‌ನಲ್ಲಿ ಚಿರತೆಯನ್ನು ಸೆರೆ ಹಿಡಿದಿದ್ದು, ಆ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಚಿರತೆಯ ಚಲನವಲನದ ಬಗ್ಗೆ ನಿಗಾ ವಹಿಸಿ, ಚಿರತೆಯನ್ನು ಸೆರೆ ಹಿಡಿಯಲು ಶ್ರಮವಹಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.