ಕಳೆದ 2-3 ದಿನಗಳಿಂದ ನಗರದಲ್ಲಿ ತುಂತುರು ಮಳೆಯ ಸಿಂಚನ ಆರಂಭವಾಗಿದ್ದು, ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ. ಇದು ರೈತರ ಮೊಗದಲ್ಲೂ ಮಂದಹಾಸಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ (ಜು.6) : ಕಳೆದ 2-3 ದಿನಗಳಿಂದ ನಗರದಲ್ಲಿ ತುಂತುರು ಮಳೆಯ ಸಿಂಚನ ಆರಂಭವಾಗಿದ್ದು, ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ. ಇದು ರೈತರ ಮೊಗದಲ್ಲೂ ಮಂದಹಾಸಕ್ಕೆ ಕಾರಣವಾಗಿದೆ.
ಬೆಳಂಬೆಳಗ್ಗೆ ಆರಂಭವಾದ ತುಂತುರು ಮಳೆಯು ಕೆಲಕಾಲ ಸುರಿದು ಮತ್ತೆ ಮರೆಯಾಯಿತು. ಈ ವೇಳೆ ಮತ್ತೆ ಬಿಸಿಲಿನ ವಾತಾವರಣ ಮುಂದುವರಿಯಿತು. ಸುಮಾರು 10 ಗಂಟೆಯ ವೇಳೆಗೆ ಮತ್ತೇ ಮೋಡ ಕವಿದು ಆರಂಭವಾದ ಮಳೆಯು ಅರ್ಧಗಂಟೆಗೂ ಹೆಚ್ಚುಕಾಲ ಸುರಿದು ಕೆಲಕಾಲ ವಿರಾಮ ನೀಡಿತು. ಮತ್ತೆ ಆರಂಭವಾದ ಗಂಟೆಗೂ ಹೆಚ್ಚುಕಾಲ ಸುರಿದು ಸ್ವಲ್ಪ ವಿರಾಮ ನೀಡಿತು.
ಜಿಟಿ ಜಿಟಿ ಮಳೆಗೆ ಮಂಗಳೂರಿನ ಈ ತಿನಿಸು ಬೆಸ್ಟ್ ಕಾಂಬಿನೇಶನ್
ವರುಣನ ಕಣ್ಣಾಮುಚ್ಚಾಲೆ:
ಹುಬ್ಬಳ್ಳಿ ಮಹಾನಗರದಲ್ಲಿ ಕಳೆದ 2-3 ದಿನಗಳಿಂದ ಬೆಳಗ್ಗೆಯಿಂದ ರಾತ್ರಿ ವರೆಗೂ ವರುಣನ ಕಣ್ಣಾಮುಚ್ಚಾಲೆ ಮುಂದುವರಿದೆ. ಮಳೆ ಜೋರಾಗಿ ಬರುತ್ತಿದೆ ಎಂದು ಸವಾರರು ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿಗಳ ಮುಂದೆ ನಿಂತುಕೊಳ್ಳುತ್ತಿದ್ದಂತೆ ಕಡಿಮೆಯಾಗುತ್ತಿತ್ತು. ಇನ್ನೇನು ಮಳೆ ನಿಂತಿತು ಎಂದು ಬೈಕ್ ಹತ್ತಿ ಮುಂದೆ ಹೋಗುತ್ತಿದ್ದಂತೆ ಮತ್ತೆ ಮಳೆ ಆರಂಭವಾಗುತ್ತಿತ್ತು. ಇದರಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಿದರು.
ಹಲವೆಡೆ ಚರಂಡಿ ಬಂದ್:
ಬುಧವಾರ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವು ಕಡೆಗಳಲ್ಲಿ ಚರಂಡಿ ಭರ್ತಿಯಾಗಿ ನೀರೆಲ್ಲ ರಸ್ತೆಯ ಮೇಲೆ ಹರಿದು ಜನರು ತೊಂದರೆ ಅನುಭವಿಸುವಂತಾಯಿತು. ಹಳೇ ಹುಬ್ಬಳ್ಳಿಯ ನೇಕಾರ ನಗರ, ಅಜಮೀರ್ ನಗರ, ಮಂಟೂರಿನ ಅರಳಿಕಟ್ಟಿಕಾಲನಿ, ಕಟಗರ ಓಣಿಯ ಮಸೀದಿ ಪಕ್ಕ, ಕಮರಿಪೇಟೆಯಲ್ಲಿ 3-4 ಕಡೆ, ಯಲ್ಲಾಪುರ ಓಣಿಯ ಗಣೇಶ ಪೇಟೆ ಸೇರಿದಂತೆ 2-3 ಕಡೆ, ಆನಂದ ನಗರ, ಕೊಪ್ಪಿಕರ ರಸ್ತೆಯ ಆನಂದ ವಿಲಾಸ್ ಹೊಟೇಲ್ ಎದುರು, ಕೇಶ್ವಾಪುರದ ಕ್ಲಬ್ ರೋಡ್, ಹೊಸೂರಿನ ಶಕುಂತಲಾ ಆಸ್ಪತ್ರೆಯ ಪಕ್ಕ, ಚೆನ್ನಮ್ಮ ವೃತ್ತದ ಪಂಚಮಿ ಹೊಟೇಲ್ ಪಕ್ಕ, ನೆಹರು ಮೈದಾನದ ಹತ್ತಿರ, ವಿದ್ಯಾ ನಗರದ ಹೊಸ ಕೋರ್ಚ್ ಬಳಿ, ಗೋಕುಲ ರಸ್ತೆಯ ಶಾಂತೇಶ ಹೋಂಡಾ ಶೋ ರೂಂ, ನಂದಗೋಕುಲ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಚರಂಡಿ ಬಂದಾಗಿ ನೀರೆಲ್ಲ ರಸ್ತೆಯ ಮೇಲೆ ಹರಿಯಿತು. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ದುರ್ನಾತ ಬೀರುತ್ತಿದ್ದ ಚರಂಡಿ ನೀರಿನಲ್ಲಿಯೇ ಸಂಚರಿಸುವಂತಾಯಿತು.
ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಚುರುಕು: ಗಾಜನೂರು ಡ್ಯಾಂ ಭರ್ತಿ
15ಕ್ಕೂ ಅಧಿಕ ಚರಂಡಿ ದುರಸ್ತಿ:
ಚರಂಡಿ ಬಂದಾಗಿರುವ ಕುರಿತು ಮಾಹಿತಿ ದೊರೆಯುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸುಮಾರು 15ಕ್ಕೂ ಅಧಿಕ ಚರಂಡಿ ದುರಸ್ತಿಗೊಳಿಸಿದರು. ರಾತ್ರಿಯ ವೇಳೆಯೂ ಚರಂಡಿ ದುರಸ್ತಿ ಕಾರ್ಯ ಮುಂದುವರೆದಿತ್ತು. ಆದಷ್ಟುಬೇಗ ಚರಂಡಿ ಬಂದಾಗಿ ಸಮಸ್ಯೆ ಅನುಭವಿಸುತ್ತಿರುವ ಪ್ರದೇಶಗಳಿಗೆ ತೆರಳಿ ತೀವ್ರಗತಿಯಲ್ಲಿ ದುರಸ್ತಿಗೊಳಿಸುವ ಕಾರ್ಯ ಕೈಗೊಳ್ಳುತ್ತಿರುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.