ಚಾಮುಂಡಿ ಬೆಟ್ಟಕ್ಕೆ ಹೇಗೆ ಹೋದರೂ 20 ರಿಂದ 30 ನಿಮಿಷದ ಪ್ರಯಾಣ, ಇದಕ್ಕೆ ರೋಪ್‌ವೇ ಅಗತ್ಯವಿಲ್ಲ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
ಮೈಸೂರು (ಏ.07): ಚಾಮುಂಡಿ ಬೆಟ್ಟಕ್ಕೆ (Chamundi Hills) ಹೇಗೆ ಹೋದರೂ 20 ರಿಂದ 30 ನಿಮಿಷದ ಪ್ರಯಾಣ, ಇದಕ್ಕೆ ರೋಪ್‌ವೇ (Ropeway) ಅಗತ್ಯವಿಲ್ಲ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಹೇಳಿದರು. ಕಡಿದಾದ ದುರ್ಗಮ ಸ್ಥಳಕ್ಕೆ ಅಥವಾ ರಸ್ತೆ ನಿರ್ಮಿಸಲಾಗದ ಸ್ಥಳಕ್ಕೆ ರೋಪ್ ವೇ ಮಾಡಿದರೆ ಸರಿ. ನೀವು ರಸ್ತೆ ಮಾರ್ಗದಲ್ಲಿ ಹೋದರೂ 20 ನಿಮಿಷ, ಮೆಟ್ಟಿಲ ಮೂಲಕ ಹೋದರೂ 30 ನಿಮಿಷದಲ್ಲಿ ಬೆಟ್ಟತಲುಪಬಹುದು. ಹೀಗಿರುವಾಗ ರೋಪ್ ವೇ ಏಕೆ? ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ಈಗಾಗಲೇ ಚಾಮುಂಡಿಬೆಟ್ಟದ ಪರಿಸರಕ್ಕೆ ಸಾಕಷ್ಟುಧಕ್ಕೆಯಾಗಿದೆ.
ಅದನ್ನು ನಾವು ಉಳಿಸಿಕೊಳ್ಳಬೇಕೆ ಹೊರತು ಮತ್ತಷ್ಟುನಾಶ ಮಾಡಿದರೆ 100 ವರ್ಷವಾದರೂ ಮತ್ತೆ ಸರಿಪಡಿಸಲಾಗದು ಎಂದುಅವರು ಕಳವಳ ವ್ಯಕ್ತಪಡಿಸಿದರು. ಬೆಟ್ಟದಲ್ಲಿ ಒಂದು ಪುಟ್ಟದಾದ ಗ್ರಾಮವಿತ್ತು. ಪೂರ್ವದಲ್ಲಿ ಮಹಾಬಲೇಶ್ವರ ದೇವಸ್ಥಾನ ಬಹಳ ಹಳೇಯದು. ಬಲೀಂದ್ರ ಚಕ್ರವರ್ತಿಯ ಇತಿಹಾಸ ಆ ದೇವಾಲಯಕ್ಕಿದೆ. ಆದರೆ ಈಗ ಚಾಮುಂಡೇಶ್ವರಿ ದೇವಾಲಯ ಪ್ರಖ್ಯಾತಿ ಪಡೆದಿದೆ. ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ನಿಯಮದ ಪ್ರಕಾರ ಬೆಟ್ಟದಲ್ಲಿನ ಅರ್ಚಕರು, ದೀಕ್ಷಿತರು, ಆಗಮಿಕರ ಹಾದಿಯಾಗಿ ದೇವಸ್ಥಾನದ ಬಾಗಿಲಿಗೆ ಬೀಗ ಹಾಕುವ, ಕಾವಲು ಕಾಯುವವರೂ ಆ ಗ್ರಾಮದಲ್ಲಿ ವಾಸವಿರಬೇಕು. ಆದರೆ ಇತ್ತೀಚೆಗೆ ಮೈಸೂರಿನವರೂ ಅಲ್ಲಿ ಹೋಗಿ ವಾಸವಿದ್ದಾರೆ ಇದು ಸರಿಯಲ್ಲ ಎಂದು ಅವರು ಹೇಳಿದರು.
undefined
Mysuru: ಆನೆಗಳಿಗೆ ಶವರ್, ಸಿಂಹಕ್ಕೆ ಮಳೆ ಹನಿ: ಮೃಗಾಲಯದಲ್ಲಿ ಪ್ರಾಣಿಗಳಿಗೆ ಬೇಸಿಗೆ ಟ್ರೀಟ್‌ಮೆಂಟ್
ದೊಡ್ಡ ದೊಡ್ಡ ಕಟ್ಟಡ: ದೊಡ್ಡ ದೊಡ್ಡ ಕಟ್ಟಡಗಳು ಬೆಟ್ಟದಲ್ಲಿ ತಲೆ ಎತ್ತುತ್ತಿದೆ. ಮೈಸೂರಿನಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಪ್ರಾಕೃತಿಕ ಸೌಂದರ್ಯವುಳ್ಳ ಬೆಟ್ಟದಲ್ಲಿ ಅಷ್ಟೊಂದು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಅಗತ್ಯವಿತ್ತೆ? ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಗತ್ಯವಿರುವ ಅನುಕೂಲ ಕಲ್ಪಿಸಿಕೊಟ್ಟಿದ್ದರೆ ಸಾಕಿತ್ತು. ಸರದಿ ಸಾಲಿನಲ್ಲಿ ನಿಲ್ಲಲು ಜನರು ಬಹಳ ತೊಂದರೆ ಪಡುತ್ತಾರೆ. ಇಂತಹ ಸೌಲಭ್ಯ ಕಲ್ಪಿಸುವುದು ಬಹಳಷ್ಟಿದೆ. ಇನ್ನು ನಂದಿಗೆ ಹೋಗುವ ಮಾರ್ಗ ಕುಸಿದಿತ್ತು. ಅದನ್ನು ಎಷ್ಟುವೈಜ್ಞಾನಿಕವಾಗಿ ನಿರ್ಮಿಸಿದ್ದಾರೋ ಗೊತ್ತಿಲ್ಲ. ನಾನು ಆ ಕಡೆ ಹೋಗಿಲ್ಲ ಎಂದರು.
ಬೆಟ್ಟಕ್ಕೆ ರೈಲಿಂಗ್ ಮಾಡಲು ಉದ್ದೇಶಿಸಿದ್ದರು. ಇದರ ಅಗತ್ಯತೆಯನ್ನು ಅರಿವುದು ಒಳ್ಳೆಯದು. ಎಷ್ಟೋ ಮಂದಿ ವಯಸ್ಕರೇ ಬರುತ್ತಾರೆ. ವಯಸ್ಸಾದವರು ವಾಹನಗಳಲ್ಲಿ ಬರುತ್ತಾರೆ. ಆದ್ದರಿಂದ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಯೋಜನೆ ಕೈಗೆತ್ತಿಕೊಂಡರೆ ಒಳ್ಳೆಯದು. ಚಾಮುಂಡಿಬೆಟ್ಟದ ಪರಿಸರ ಉಳಿಸಲು ಅದಕ್ಕೆ ಪ್ರತ್ಯೇಕ ಕಾಯ್ದೆಯ ಅಗತ್ಯವಿಲ್ಲ. ಇರುವ ಕಾಯ್ದೆಯ ಅನುಸಾರವೇ ಕೆಲಸ ಮಾಡಿದರೆ ಸಾಕು. ಬೆಟ್ಟದಲ್ಲಿ ಮತ್ತೆ ಮತ್ತೆ ಕಾಮಗಾರಿಗೆ ಅವಕಾಶ ನೀಡಬಾರದು. ಇಂತಿಷ್ಟೇ ಕಟ್ಟಡ ಇರಬೇಕು ಎಂಬ ನಿಯಂತ್ರಣ ಹೇರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಆಪ್ತ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಇದ್ದರು.
ರಾಜೇಂದ್ರವಿಲಾಸ ಹೊಟೇಲ್ ಮರು ಆರಂಭಕ್ಕೆ ಚಿಂತನೆ: ಚಾಮುಂಡಿಬೆಟ್ಟದ ಮೇಲಿನ ರಾಜೇಂದ್ರ ವಿಲಾಸ ಅರಮನೆಯ ದುರಸ್ತಿ ಕಾರ್ಯ ಆರಂಭವಾಗಿದ್ದು, ಹೊಟೇಲ್ ಆಗಿ ಪರಿವರ್ತಿಸಲಾಗುತ್ತಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೇಂದ್ರ ವಿಲಾಸ ಅರಮನೆಯನ್ನು ಇಷ್ಟುದಿನ ಹಾಗೆಯೇ ಬಿಡಲಾಗಿತ್ತು. ಕಳೆದ ಒಂದು ವಾರದಿಂದ ಈಚೆಗೆ ಅದರ ದುರಸ್ತಿ ಕಾರ್ಯ ಆರಂಭಿಸಿದ್ದೇವೆ. ಗೋಪುರ ತುಂಬಾ ಎತ್ತರದಲ್ಲಿ ಇರುವುದರಿಂದ ಅವುಗಳನ್ನು ದುರಸ್ತಿಗೊಳಿಸುವುದು ಸ್ವಲ್ಪ ಕಷ್ಟವಿದೆ. ಆದರೂ ತಮಿಳುನಾಡಿನಿಂದ ತಜ್ಞರನ್ನು ಕರೆಯಿಸಿ ದುರಸ್ತಿಪಡಿಸಲಾಗುತ್ತಿದೆ ಎಂದರು.
Karnataka Politics: 2023ರ ಚುನಾವಣೆ ನನ್ನ ಕೊನೆ ಎಲೆಕ್ಷನ್: ಸಿದ್ದು
ಕಾಮಗಾರಿ ಪೂರ್ಣಗೊಂಡ ನಂತರ ಅದನ್ನು ಹೊಟೇಲ್ ಆಗಿ ಪರಿವರ್ತಿಸುತ್ತೇವೆ. ಬೆಟ್ಟದ ಮೇಲೆ 120 ಅಡಿ ಎತ್ತರದಲ್ಲಿರುವ ರಾಜೇಂದ್ರ ವಿಲಾಸ ಅರಮನೆ ಬಹಳ ದಿನಗಳಿಂದ ಪ್ರವಾಸಿಗರಿಗೆ ಮುಚ್ಚಿತ್ತು. ಈಗ ರಾಜೇಂದ್ರ ವಿಲಾಸ ಪುನಶ್ಚೇತನ ಕಾಮಗಾರಿ ಆರಂಭವಾಗಿದೆ. ತಜ್ಞರ ಅಭಿಪ್ರಾಯ ಪಡೆದು ನವೀಕರಣ ಕಾರ್ಯ ಕೈಗೊಳ್ಳಲಾಗಿದೆ. ಅರಮನೆಯ ಪುರಾತನ ಪಾರಂಪರಿಕ ಶೈಲಿಯಲ್ಲೇ ನವೀಕರಣಗೊಳಿಸಲಾಗುತ್ತಿದೆ. 1975 ರಿಂದ ರಾಜೇಂದ್ರ ವಿಲಾಸ ಅರಮನೆ ಹೋಟೆಲ್ ಆಗಿ ನಡೆಯುತ್ತಿತ್ತು. ನಂತರ 1995 ರಲ್ಲಿ ರಾಜೇಂದ್ರ ವಿಲಾಸ ಅರಮನೆ ಮುಚ್ಚಲ್ಪಟ್ಟಿತ್ತು ಎಂದು ಅವರು ತಿಳಿಸಿದರು. ನಗರದ ಗನ್‌ಹೌಸ್ ಕಟ್ಟಡವನ್ನೂ ಹೊಟೇಲ್ ಆಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ನೋಡೋಣ. ದಸರಾ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳುವುದು ಕಷ್ಟಎಂದು ಅವರು ಹೇಳಿದರು.