Karnataka Hijab Row: ಶಿವಮೊಗ್ಗದ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಎಫ್ಐಆರ್!

By Suvarna News  |  First Published Feb 11, 2022, 2:52 PM IST

*ಶಿವಮೊಗ್ಗದಲ್ಲಿ ಹಿಜಾಬ್ ವರ್ಸಸ್ ಕೇಸರಿ ಸಂಘರ್ಷ ಪ್ರಕರಣ
*ಇದುವರೆಗೂ 9 ಎಫ್ಐಆರ್ ದಾಖಲು ಮಾಡಿದ ಪೋಲಿಸ್ ಇಲಾಖೆ
*ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲು


ಶಿವಮೊಗ್ಗ (ಫೆ. 11):  ರಾಜ್ಯದ ವಿವಿಧೆಡೆ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಹಿಜಾಬ್‌ ಮತ್ತು ಕೇಸರಿ ಶಾಲು ವಿವಾದ ಶಿವಮೊಗ್ಗದಲ್ಲಿ ಹಿಂಸಾಚಾರಕ್ಕ ತಿರುಗಿತ್ತು. ಈ ಬೆನ್ನಲ್ಲೇ ನಗರದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿ ಒಟ್ಟಾರೆ 40ಕ್ಕೂ ಹೆಚು ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ, ದಾವಣಗೆರೆ ಮತ್ತು ಹರಿಹರಗಳಲ್ಲಿ ಸರ್ಪಗಾವಲು ಹಾಕಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಹಿಜಾಬ್‌-ಕೇಸರಿ ಶಾಲು ಸಂಘರ್ಷಕ್ಕೆ ಸಂಬಂಧಿಸಿ ಹರಿಹರ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಗಲಾಟೆ, ಮಲೆಬೆನ್ನೂರಿನ ಯುವಕನಿಗೆ ಇರಿದ ಪ್ರಕರಣಗಳಿಗೆ ಸಂಬಂಧಿಸಿ ಪ್ರಕರಣಗಳು ದಾಖಲಾಗಿವೆ.

ಶಿವಮೊಗ್ಗ ಮತ್ತು ಸಾಗರ ಪಟ್ಟಣದಲ್ಲಿ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಪೊಲೀಸರು ಒಟ್ಟು 9 ಎಫ್ಐಆರ್ ದಾಖಲು ಮಾಡಿದ್ದಾರೆ. ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಸದ್ಯ 6 ವಿದ್ಯಾರ್ಥಿಗಳನ್ನು ಪೋಲಿಸ್ ಬಂಧಿಸಿದ್ದಾರೆ.  ಪೋಲಿಸ್ ವಾಹನ ಜಖಂ ಗೊಳಿಸಿದ ಪ್ರಕರಣದಲ್ಲಿ ಹೊರಗಿನ ಮೂವರನ್ನು ಬಂಧಿಸಲಾಗಿದೆ. ಒಟ್ಟು 9 ಆರೋಪಿತರ ಬಂಧನವಾಗಿದೆ. 

Tap to resize

Latest Videos

ಇದನ್ನೂ ಓದಿ: Hijab Row ಶಿವಮೊಗ್ಗದ ಕಾಲೇಜಿನಲ್ಲಿ ಮಂಗಳವಾರ ಕೇಸರಿ ಧ್ವಜ, ಬುಧವಾರ ಹಾರಾಡಿದ ರಾಷ್ಟ್ರ ಧ್ವಜ

ಶಿವಮೊಗ್ಗದ ಬಾಪೂಜಿ ನಗರದ ಸರ್ಕಾರಿ ಕಾಲೇಜಿನಲ್ಲಿ ಅಹಿತಕರ ಘಟನೆ ಸಂಬಂಧಿಸಿದಂತೆ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಲಾಗಿದೆ.  ಸಾಗರದಲ್ಲಿ ನಡೆದ ಘಟನೆ ಸಂಬಂಧ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಲಾಗಿದೆ. ಘಟನೆಯ ವಿಡಿಯೋ ಮತ್ತು ಪೋಟೋಗ್ರಫಿ ಆದಾರದ ಮೇಲೆ ನೈಜ ಆರೋಪಿಗಳ ಬಂಧನವಾಗಿದೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ. 

ವಸ್ತ್ರ ಸಂಘರ್ಷಕ್ಕೆ ಸದ್ಯ ಬ್ರೇಕ್‌: ವಿವಾದಿತ ಹಿಜಾಬ್‌-ಕೇಸರಿ ವಸ್ತ್ರ ಪ್ರಕರಣದ ಬಗ್ಗೆ ತೀರ್ಪು ಪ್ರಕಟಿಸುವವರೆಗೂ ಹಿಜಾಬ್‌-ಕೇಸರಿ ವಸ್ತ್ರ ಸೇರಿದಂತೆ ಯಾವುದೇ ಧಾರ್ಮಿಕ ಉಡುಪು ಧರಿಸದೆ ಶಾಲಾ​-ಕಾಲೇಜಿಗೆ ತೆರಳಬೇಕು. ಈ ವಿಚಾರದಲ್ಲಿ ಯಾರೂ ಒತ್ತಾಯ ಮಾಡುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡುವುದಾಗಿ ಹೈಕೋರ್ಟ್‌ನ ವಿಸ್ತೃತ ಪೀಠ ಗುರುವಾರ ವಿಚಾರಣೆ ವೇಳೆ ತಿಳಿಸಿದೆ.

ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಫೆ.5ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಸ್ತೃತ ಪೀಠ ಈ ಆದೇಶ ನೀಡಿದೆ.

ಇದನ್ನೂ ಓದಿ: Hijab Row: 1 ವಾರ ಹಿಜಾಬ್ ತೆಗೆದಿಟ್ಟು ಬಂದ್ರೆ ಲೋಕ ಮುಳುಗಲ್ಲ: ರಘುಪತಿ ಭಟ್

ಗುರುವಾರ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಅರ್ಜಿಗಳ ಕುರಿತು ವಾದ ಆಲಿಸಿದ ನ್ಯಾಯಪೀಠ, ‘ಶಿಕ್ಷಣ ಸಂಸ್ಥೆಗಳು ಮತ್ತೆ ಆರಂಭವಾಗಬೇಕು. ಪ್ರಕರಣ ನಿರ್ಧಾರವಾಗುವವರೆಗೆ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಸಂಬಂಧಪಟ್ಟವರು ಹಿಜಾಬ್‌ ಅಥವಾ ಶಾಲು ಸೇರಿದಂತೆ ಯಾವುದೇ ರೀತಿಯ ಧಾರ್ಮಿಕ ಉಡುಪು ಹಾಕಬಾರದು. ಈ ವಿಚಾರದಲ್ಲಿ ಯಾರಿಗೆ ಯಾರೂ ಒತ್ತಾಯಿಸುವಂತಿಲ್ಲ. ರಾಜ್ಯದಲ್ಲಿ ಮತ್ತೆ ಶಾಂತಿ ಮತ್ತು ನೆಮ್ಮದಿ ಪುನರ್‌ ಸ್ಥಾಪನೆಯಾಗಬೇಕು. ಈ ಕುರಿತು ಮಧ್ಯಂತರ ಆದೇಶ ನೀಡಲಾಗುವುದು’ ಎಂದು ಮೌಖಿಕವಾಗಿ ಹೇಳಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

click me!