*ಪಂಚಮಸಾಲಿ ಪೀಠ ಯಾರ ವಿರುದ್ಧವಾಗಿ ಪ್ರಾರಂಭವಾಗ್ತಿಲ್ಲ
*ನಿರಾಣಿ ಹಿತಾಸಕ್ತಿಗೆ ಮೂರನೇ ಪೀಠ ಅನ್ನೋದು ಸತ್ಯಕ್ಕೆ ದೂರ
*ಪರೋಕ್ಷವಾಗಿ ಸಚಿವ ಯತ್ನಾಳ್‌ಗೆ ಟಾಂಗ್ ನೀಡಿದ ಸಚಿವ ನಿರಾಣಿ
ಕಲಬುರಗಿ (ಫೆ. 11): ರಾಜ್ಯದ ಪಂಚಮಸಾಲಿ ಸಮುದಾಯದ(Panchamasali Community) ಸಂಘಟನೆಯ ನೊಗಕ್ಕೆ ಹೆಗಲಾಗಲು ಜಮಖಂಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ(Veerashaiva Lingayata Panchamasaali Jagadguru Peetha) ಫೆ.13ರಂದು ಉದಯವಾಗಲಿದೆ. ಈ ಬೆನ್ನಲ್ಲೆ ಶುಕ್ರವಾರ ಕಲುಬುರಗಿ ನಗರದಲ್ಲಿ ಮಾತನಾಡಿದ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಪಂಚಮಸಾಲಿ ಪೀಠ ಯಾರ ವಿರುದ್ಧವಾಗಿ ಪ್ರಾರಂಭವಾಗುತ್ತಿಲ್ಲ ಎಂದು ಹೇಳಿದ್ದಾರೆ. "ಮೂರನೇ ಪೀಠದ ಕಾರ್ಯಕ್ರಮಕ್ಕೆ ಅನೇಕ ಸ್ವಾಮೀಜಿಗಳು ಬರುತ್ತಿದ್ದಾರೆ. ಕೂಡಲಸಂಗಮ ಪೀಠದ ಸ್ವಾಮೀಜಿಗಳಿಗೆ ಕೂಡ ಆಹ್ವಾನ ನೀಡಲಾಗಿದೆ. ಅವರು ಬರುತ್ತಾರೋ ಇಲ್ಲವೊ ಗೊತ್ತಿಲ್ಲ" ಎಂದು ನಿರಾಣಿ ಹೇಳಿದ್ದಾರೆ
ಆತ್ಮಾವಲೋಕನ ಮಾಡಿಕೊಳ್ಳಲಿ: ನಿರಾಣಿ ಹಿತಾಸಕ್ತಿಗೆ ಮೂರನೇ ಪೀಠ ಅನ್ನೋದು ಸತ್ಯಕ್ಕೆ ದೂರ ಎಂದ ಸಚಿವರು " ಪಂಚಮಸಾಲಿ ಒಂದು ಮತ್ತು ಎರಡನೇ ಪೀಠ ಪ್ರಾರಂಭದಲ್ಲಿ ನನ್ನ ಕೊಡುಗೆಯಿದೆ. ಮೂರನೇ ಪೀಠದ ಬಗ್ಗೆ ಮಾತನಾಡೋರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಎರಡನೇ ಪೀಠ ಏಕೆ ಹುಟ್ಟಿತು ಅನ್ನೋ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಹೇಳುವ ಮೂಲಕ ಪರೋಕ್ಷವಾಗಿ ಶಾಸಕ ಯತ್ನಾಳ್‌ಗೆ ಟಾಂಗ್ ನೀಡಿದ್ದಾರೆ
ಇನ್ನು ದೇಶಾದ್ಯಂತ ವಿವಾದ ಸೃಷ್ಟಿಸಿರುವ ಹಿಜಾಬ್ ವಿವಾದದ ಬಗ್ಗೆ ಮಾತನಾಡಿರುವ ನಿರಾಣಿ " ಹಿಜಾಬ್ ವಿಚಾರ ಕೋರ್ಟ್ ನಲ್ಲಿದೆ, ಹೀಗಾಗಿ ನ್ಯಾಯಾಲಯದ ಆದೇಶ ಎಲ್ಲರು ಪಾಲನೆ ಮಾಡಬೇಕು" ಎಂದು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ, ಅದು ಸಿಎಂ ಪರಮಾಧಿಕಾರ ಎಂದು ಮರುಗೇಶ್ ನಿರಾಣಿ ಹೇಳಿದ್ದಾರೆ.
ಇದನ್ನೂ ಓದಿ: Reservation ಮೀಸಲಾತಿ ಹೋರಾಟ ಮತ್ತೆ ಮುನ್ನೆಲೆಗೆ, ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ
ಪೀಠಾಧ್ಯಕ್ಷರಾಗಿ ಡಾ.ಮಹಾದೇಶ ಶಿವಾಚಾರ್ಯ ಸ್ವಾಮೀಜಿ: ಇನ್ನು ಫೆ.13ರಂದು ಕೃಷಿ ಹಿನ್ನೆಲೆಯುಳ್ಳ ಸಮುದಾಯವನ್ನು ಒಗ್ಗೂಡಿಸಲು ವಿರಾಟ್ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಮೂಲೆ-ಮೂಲೆಯಿಂದ ಲಕ್ಷಾಂತರ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ಹರ ಕ್ಷೇತ್ರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಅಧ್ಯಕ್ಷ ವಚನಾನಂದ ಸ್ವಾಮೀಜಿ(Vachananand Swamiji) ಹೇಳಿದ್ದಾರೆ.
ಅಂದು ಜಮಖಂಡಿ ಪೀಠದ ಪೀಠಾಧ್ಯಕ್ಷರಾಗಿ ಡಾ.ಮಹಾದೇಶ ಶಿವಾಚಾರ್ಯ ಸ್ವಾಮೀಜಿ(Dr Mahadesh Shivacharya Swamiji) ಪೀಠಾರೋಹಣ ಮಾಡಲಿದ್ದಾರೆ. ಈ ಕುರಿತು ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಚನಾನಂದ ಸ್ವಾಮೀಜಿ, ಪಂಚಮಸಾಲಿಗಳ ಮೂಲ ಪೀಠದ ಪೀಠಾಧ್ಯಕ್ಷರಾದ ತಾವು ಸೇರಿದಂತೆ ನಾಡಿನ ಶ್ರೇಷ್ಠ ಸಂತ-ಮಹಾಂತರ ದಿವ್ಯ ಸಾನ್ನಿಧ್ಯದಲ್ಲಿ ನೂತನ ಪೀಠ ಉದಯವಾಗುವ ಮೂಲಕ ಐತಿಹಾಸಿಕ ಮೈಲುಗಲ್ಲು ಸ್ಥಾಪಿತವಾಗಲಿದೆ ಎಂದರು.
ಇದನ್ನೂ ಓದಿ: Panchamasali Peetha ಪಂಚಮಸಾಲಿ 3ನೇ ಪೀಠ, ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ವಚನಾನಂದ ಶ್ರೀ ಕಿಡಿ
ವೀರಶೈವ ಲಿಂಗಾಯತ ಸಮುದಾಯದ ಪಂಚಮಸಾಲಿ ಹಾಗೂ ಎಲ್ಲಾ ಒಳಪಂಗಡಗಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ 2-ಎ ಮೀಸಲಾತಿ(2A Reservation) ಹಾಗೂ ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವುದು. ಸಮುದಾಯದ ಮೂಲ ಉದ್ಯೋಗವಾದ ಕೃಷಿಯಲ್ಲಿ ಆದಾಯ ಕೇಂದ್ರಿತ ಕೃಷಿ ವ್ಯವಸ್ಥೆಗೆ ರೈತರನ್ನು ಸಿದ್ಧಗೊಳಿಸುವುದು ನೂತನ ಪೀಠದ ಪ್ರಮುಖ ಪ್ರಾಧಾನ್ಯತೆ ಎಂದು ಹೇಳಿದರು.
ಇನ್ನಷ್ಟು ಪೀಠಗಳು ಉದಯವಾಗಲಿ: ನಮ್ಮ ಮೂಲ ಪೀಠದ ಜೊತೆಯಲ್ಲಿ ಹೆಜ್ಜೆ ಹಾಕುವಂತಹ ನೂತನ ಶಕ್ತಿ ಬೇಕಾಗಿತ್ತು. ಈ ನಿಟ್ಟಿನಲ್ಲಿ ಇನ್ನೊಂದು ಪೀಠ ಸ್ಥಾಪನೆಯಾಗಿದೆ. ಹರಿಹರ ಪೀಠ ಪಂಚಮಸಾಲಿಗಳ ಪಾಲಿಗೆ ಧರ್ಮಕ್ಷೇತ್ರವಾಗಿರಲಿದೆ. ನಾಡಿನ ಉದ್ದಗಲಕ್ಕೂ ಇನ್ನೂ ಕೆಲವು ಪೀಠಗಳು ಉದಯವಾಗಲಿ. ನಮ್ಮ ಪೀಠದ ಮೂಲತತ್ವಗಳನ್ನು ಪ್ರಚುರಪಡಿಸುವ ಎಲ್ಲಾ ಪೀಠಗಳಿಗೂ ನಮ್ಮ ಬೆಂಬಲ ಇರಲಿದೆ ಅಂತ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.