3 ತಿಂಗಳಿನಿಂದ 3 ವರ್ಷದ ವರೆಗಿನ 42 ಗಂಡು, 33 ಹೆಣ್ಣು ಹಾಗೂ 3ರಿಂದ 6 ವರ್ಷದೊಳಗಿನ 15 ಗಂಡು ಹಾಗೂ 9 ಹೆಣ್ಣು ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಬಾಧಿಸಿದೆ.
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ(ಸೆ.15): ಧಾರವಾಡ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ!. ಕಳೆದ ವರ್ಷ 30ರ ಆಸುಪಾಸುನಲ್ಲಿದ್ದ ಮಕ್ಕಳ ಸಂಖ್ಯೆ ಈ ವರ್ಷ ಜೂನ್ ಹಾಗೂ ಜುಲೈನಲ್ಲಿ 144ಕ್ಕೇರಿದೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರಂತರ ಪ್ರಯತ್ನದ ಫಲವಾಗಿ ಆ ಸಂಖ್ಯೆ ಆಗಸ್ಟ್‌ನಲ್ಲಿ 99ಕ್ಕೆ ಇಳಿದಿದೆ. ಜತೆಗೆ 2486 ಮಕ್ಕಳು ಸಾಧಾರಣ ಪ್ರಮಾಣದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆಗಸ್ಟ್ 1ರಿಂದ 31ರ ವರೆಗೆ ಜಿಲ್ಲೆಯ ಎಲ್ಲ ಅಂಗನವಾಡಿಯಲ್ಲಿ 6 ತಿಂಗಳಿಂದ 6 ವರ್ಷದ ವರೆಗಿನ ಮಕ್ಕಳ ತೂಕ, ಎತ್ತರ ಹಾಗೂ ತೋಳಿನ ಸುತ್ತಳತೆ ಪರಿಶೀಲಿಸಿ ನಡೆಸಿದ ವರದಿಯಲ್ಲಿ ಈ ವಿವರ ಬಹಿರಂಗಗೊಂಡಿದೆ.
ಕಳೆದ ವರ್ಷ ತೀವ್ರ ಪ್ರಮಾಣದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 30 ಇತ್ತು. ಆದರೆ 2022-23ರಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ 144ಕ್ಕೆ ತಲುಪಿತ್ತು. ಆಗಸ್ಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರಂತರ ಜಾಗೃತಿ ಕಾರ್ಯಕ್ರಮದ ಬಳಿಕ ಆ ಸಂಖ್ಯೆ 99ಕ್ಕೆ ಇಳಿದಿದೆ. ಆದರೆ ಅಪೌಷ್ಟಿಕತೆ ಎಂಬ ಭೂತ ಮಕ್ಕಳನ್ನು ಕಾಡುತ್ತಿದೆ.
Vande Bharat Express Train: ಬೆಂಗಳೂರು- ಹುಬ್ಬಳ್ಳಿ ನಡುವೆ ಅತಿವೇಗದ ವಂದೇ ಭಾರತ್ ರೈಲು
3 ತಿಂಗಳಿನಿಂದ 3 ವರ್ಷದ ವರೆಗಿನ 42 ಗಂಡು, 33 ಹೆಣ್ಣು ಹಾಗೂ 3ರಿಂದ 6 ವರ್ಷದೊಳಗಿನ 15 ಗಂಡು ಹಾಗೂ 9 ಹೆಣ್ಣು ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಬಾಧಿಸಿದೆ. ಇನ್ನು ಹುಬ್ಬಳ್ಳಿ ಶಹರ ತಾಲೂಕಿನಲ್ಲಿಯೇ 51 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆಗಸ್ಟ್‌ನಲ್ಲಿ 4 ಮಕ್ಕಳನ್ನು ಧಾರವಾಡ ಸಿವಿಲ್ ಆಸ್ಪತ್ರೆ ಹಾಗೂ 5 ಮಕ್ಕಳನ್ನು ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.
ಹಲವು ಜಾಗೃತಿ ಕಾರ್ಯಕ್ರಮ:
ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಕೇಂದ್ರ ಸರ್ಕಾರ ಪೋಷಣಾ ಮಾಸ ಯೋಜನೆ ಆರಂಭಿಸಿದ್ದು, ಇದರ ನಿಮಿತ್ತ ಜಿಲ್ಲೆಯಲ್ಲಿ ಸೆ. 1ರಿಂದ 30ರ ವರೆಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ವಾರ ಮಹಿಳಾ ಸ್ವಾಸ್ಥ್ಯ ಮತ್ತು ಆರೋಗ್ಯ ಸಂಬಂಧಿ ಕಾರ್ಯಕ್ರಮ, 2ನೇ ವಾರ ಪೋಷಣೆಯೊಂದಿಗೆ ಪಾಠ, ಶಿಕ್ಷಣದ ಕುರಿತು ಅರಿವು ಮೂಡಿಸಲಾಗಿದೆ. 3ನೇ ವಾರ ಸ್ವಚ್ಛತೆ ಹಾಗೂ ಮಳೆ ನೀರು ಸಂಗ್ರಹದ ಕುರಿತು ಜಾಗೃತಿ ಮೂಡಿಸುವುದು, 4ನೇ ವಾರ ಸಾಂಪ್ರದಾಯಿಕ ಆಹಾರ ಪದ್ಧತಿ, ಸಿರಿಧಾನ್ಯಗಳ ಬಳಕೆ ಕುರಿತು ಅರಿವು ಮೂಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ವೈದ್ಯರು ಎಲ್ಲ ಅಂಗನವಾಡಿಗಳಲ್ಲಿ ಮಕ್ಕಳ ಆರೋಗ್ಯ, ಅವರ ಬೆಳವಣಿಗೆಯನ್ನು ಪ್ರತಿ ತಿಂಗಳು ಪರಿಶೀಲನೆ ನಡೆಸಿ ಮುತುವರ್ಜಿ ವಹಿಸಿದ್ದಾರೆ. ತೀವ್ರ ಅಪೌಷ್ಟಿಕತೆವುಳ್ಳ ಮಕ್ಕಳ ಕುರಿತು ವಿಶೇಷ ಕಾಳಜಿ ವಹಿಸುವಂತೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಅಂತ ಜಿಪಂ ಸಿಇಒ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.
ಮಕ್ಕಳ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿ ಸುಳ್ಳು: ಎಸ್ಪಿ ಲೋಕೇಶ ಜಗಲಾಸರ್
ಹಂತ-ಹಂತವಾಗಿ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಿರಿಧಾನ್ಯಗಳ ಬಳಕೆ, ಪೌಷ್ಟಿಕ ತೋಟದ ಕುರಿತು ಎಲ್ಲ ಅಂಗನವಾಡಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಎಚ್.ಎಚ್. ಕುಕನೂರ ಹೇಳಿದ್ದಾರೆ.
ತಾಲೂಕಾವಾರು ತೀವ್ರ ಅಪೌಷ್ಟಿಕತೆವುಳ್ಳ ಮಕ್ಕಳ ಸಂಖ್ಯೆ
ಧಾರವಾಡ(ಗ್ರಾ) 06
ಹುಬ್ಬಳ್ಳ(ಗ್ರಾ) 02
ಹುಬ್ಬಳ್ಳಿ(ಶಹರ) 51
ಕಲಘಟಗಿ 23
ಕುಂದಗೋಳ 02
ನವಲಗುಂದ 05
ಒಟ್ಟು 99
ಅಪೌಷ್ಟಿಕತೆ ನಿವಾರಣೆಗೆ ಮೊಟ್ಟೆ-ಹಾಲು-ಪೌಷ್ಟಿಕ ಆಹಾರ
ಮಕ್ಕಳ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಎಲ್ಲ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ದಿನ . 8 ಮೌಲ್ಯದ (ಚಿಕ್ಕಿ, ಮೊಳಕೆ ಕಾಳು, ಕಿಚ್ಚಡಿ, ಪಲಾವ್, ಅನ್ನ ಸಾಂಬಾರ) ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ತೀವ್ರ ಅಪೌಷ್ಟಿಕತೆವುಳ್ಳ ಮಕ್ಕಳಿಗೆ ನಿತ್ಯ . 12 ಮೌಲ್ಯದ (ಪ್ರಮಾಣ ಹೆಚ್ಚಳ) ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಅಂಗನವಾಡಿಗೆ ಹಾಜರಾಗುವ 3 ವರ್ಷದಿಂದ 6 ವರ್ಷದೊಳಗಿನ ಎಲ್ಲ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ, ಹಾಲು ನೀಡಲಾಗುತ್ತಿದೆ. ಜತೆಗೆ ಆರೋಗ್ಯ ಇಲಾಖೆಯ ಪೌಷ್ಟಿಕ ಪುನರ್ವಸತಿ ಕೇಂದ್ರದಲ್ಲಿ ತೀವ್ರ ಅಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.