ಸೂರತ್‌-ಚೆನ್ನೈ ಎಕ್ಸಪ್ರೆಸ್‌ ವೇ: ನ್ಯಾಯಯುತ ಪರಿಹಾರಕ್ಕೆ ರೈತರ ಆಗ್ರಹ

By Kannadaprabha NewsFirst Published Sep 15, 2022, 11:00 AM IST
Highlights

ನೀರಾವರಿ ಜಮೀನುಗಳನ್ನು ಖುಷ್ಕಿ ಎಂದು ಪರಿಗಣಿಸಿ ಸರ್ಕಾರ ಪರಿಹಾರ ನೀಡಲು ಮುಂದಾಗಿರುವುದು ಸರಿಯಲ್ಲ. ಪರಿಹಾರ ಪಡೆಯುವಂತೆ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ

ಯಾದಗಿರಿ(ಸೆ.15):  ಕೇಂದ್ರ ಸರ್ಕಾರದ ಭಾರತಮಾಲಾ ಯೋಜನೆಯಡಿಯ, ಸೂರತ್‌-ಚೆನ್ನೈ ಎಕ್ಸಪ್ರೆಸ್‌ ವೇ ನಿರ್ಮಾಣಕ್ಕೆಂದು ಸ್ವಾಧೀನಪಡಿಸಿಕೊಳ್ಳುತ್ತಿರುವ ರೈತರ ಜಮೀನುಗಳಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಜಿಲ್ಲೆಯ ಶಹಾಪುರ ಹಾಗೂ ವಡಗೇರಾ ತಾಲೂಕುಗಳ ಕೆಲವು ಸಂತ್ರಸ್ತ ರೈತರು ಬುಧವಾರ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರಕ್ಕೆ ಆಗ್ರಹಿಸಿದರು.

ನೀರಾವರಿ ಜಮೀನುಗಳನ್ನು ಖುಷ್ಕಿ ಎಂದು ಪರಿಗಣಿಸಿ ಸರ್ಕಾರ ಪರಿಹಾರ ನೀಡಲು ಮುಂದಾಗಿರುವುದು ಸರಿಯಲ್ಲ. ಪರಿಹಾರ ಪಡೆಯುವಂತೆ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ. ದಾಖಲೆಗಳಲ್ಲಿ ನೀರಾವರಿ ಎಂದಿದ್ದರೂ ಖುಷ್ಕಿ ಪರಿಹಾರ ನೀಡಲು ಮುಂದಾಗಿರುವುದು ಅದ್ಯಾವ ನ್ಯಾಯ ಎಂದು ಪ್ರಶ್ನಿಸಿದ ಶಿರವಾಳ ಗ್ರಾಮದ ಸಂತ್ರಸ್ತ ರೈತ ಮೊಹ್ಮದ್‌ ಯಾಕೂಬ್‌, ಲೋಪದೋಷಗಳನ್ನು ಸರಿಪಡಿಸಿ ವೈಜ್ಞಾನಿಕ ರೀತಿಯ, ನ್ಯಾಯಯುತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಯಾದಗಿರಿ: ಹೆದ್ದಾರಿ ಪರಿಹಾರ, ಪ್ರಭಾವಿಗಳಿಗೆ ಬೆಣ್ಣೆ, ಬಡವರಿಗೆ ಸುಣ್ಣ!

ಶಹಾಪುರ ಹಾಗೂ ವಡಗೇರಾ ತಾಲೂಕುಗಳ 21 ಗ್ರಾಮಗಳಲ್ಲಿನ ಸುಮಾರು 718 ರೈತರ 516 ಹೆಕ್ಟರ್‌ (ಅಂದಾಜು 1500 ಎಕರೆ) ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾ​ಧಿಕಾರ ಭೂಸ್ವಾಧೀನಕ್ಕೆ ಮುಂದಾಗಿದೆ. ವಿಚಾರಣೆಯಲ್ಲಿರುವ ಇನ್ನೂ ಅನೇಕ ರೈತರ ಸಮಸ್ಯೆ ಬಗೆಹರಿಸದೆ, ಪರಿಹಾರವೂ ನೀಡದೇ ಜಮೀನುಗಳ ಮೇಲೆ ಹಕ್ಕು ಸಾಧಿಸಿದೆ ಎಂದು ವಡಗೇರಾದ ಪೀರ್‌ಸಾಬ್‌ ಹಾಗೂ ಶರಣಿ ಇಟಗಿ ಬೇಸರ ವ್ಯಕ್ತಪಡಿಸಿದರು.

ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಕಂದಾಯ ಅಧಿ​ಕಾರಿಗಳ ಎಡವಟ್ಟಿನಿಂದ ಭೂದಾಖಲೆಗಳಲ್ಲಿ ಖುಷ್ಕಿ ಭೂಮಿ ಎಂದು ನಮೂದಿಸಲಾಗಿದೆ. ಜಮೀನುಗಳಿಗೆ ತೆರಳಿ ವಾಸ್ತವಾಂಶ ಪರಿಶೀಲಿಸದೆ ಪರಿಹಾರ ನಿರ್ಧರಿಸಲಾಗಿದೆ. ದಾಖಲೆಗಳಲ್ಲಿ ನೀರಾವರಿ ಎಂದಿದ್ದರೂ ಕೂಡ, ಖುಷ್ಕಿ ಎಂದು ಪರಿಗಣಿಸಿ ಕಡಿಮೆ ಮೊತ್ತದ ಪರಿಹಾರ ನೀಡಲಾಗುತ್ತಿದೆ ಎಂದು ವಡಗೇರಾದ ನಾಗೇಶ್‌ ಅಳಲು ತೋಡಿಕೊಂಡರು.

ಅಧಿಸೂಚನೆ ಹೊರಡಿಸಿದ್ದ ಸಂದರ್ಭದಲ್ಲೇ ನಾವು ಇಂತಹ ಲೋಪಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದೆವು. ಎರಡು ವರ್ಷಗಳಾಯ್ತು ನಾವು ಇನ್ನೂ ಕಚೇರಿ ಕಚೇರಿ ಅಲೆದಾಡುತ್ತಿದ್ದೇವೆ. ಸರ್ವೆ ಕಾರ್ಯವೇ ತಪ್ಪಾಗಿದೆ ಎಂದ ಯಾಕೂಬ್‌, ಶಿರವಾಳದಲ್ಲಿನ 2 ಗುಂಟೆ ಸರ್ಕಾರಿ ಸ್ಮಶಾನ ಭೂಮಿಯಲ್ಲಿ ಒಂದೆಕರೆಗೂ ಹೆಚ್ಚು ಸ್ವಾಧೀನಕ್ಕೆ ಆದೇಶಿಸಿರುವುದು ಸರ್ವೆ ಕಾರ್ಯವೈಖರಿಯ ಬಗ್ಗೆ ಅನುಮಾನಗಳ ಮೂಡಿಸಿವೆ ಎಂದರು.

PSI Recruitment Scam:ಪಿಎಸ್‌ಐ ಅಕ್ರಮ: ತುಮಕೂರು, ದಾವಣಗೆರೆ, ಮೂಡಬಿದಿರೆಗೂ ಲಿಂಕ್‌..!

ಭೂಮಿ ಕಳೆದುಕೊಳ್ಳುತ್ತಿರುವ ಸಂತ್ರಸ್ತ ರೈತರು ಅನೇಕ ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾರೂ ಕೇಳುತ್ತಿಲ್ಲ. ಪರಿಹಾರ ಪಡೆಯದಿದ್ದರೂ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂಬ ಅಧಿಕಾರಿಗಳ ಹೇಳಿಕೆ ನಮ್ಮನ್ನು ಆತಂಕಕ್ಕೀಡಾಗಿಸಿದೆ ಎಂದ ನಾಗೇಶ್‌ ಹಾಗೂ ಪೀರ್‌ಸಾಬ್‌, ಯೋಜನೆಗೆ ನಮ್ಮದೇನೂ ವಿರೋಧವಿಲ್ಲದಿದ್ದರೂ, ಕಡಿಮೆ ಪರಿಹಾರಕ್ಕೆ ಒಪ್ಪದ ನಮ್ಮ ಜಮೀನುಗಳನ್ನು ಬಲವಂತವಾಗಿ ಪಡೆಯಲು ಸರ್ಕಾರ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವಂತಿದೆ ಎಂದರು.

ಇದೇ ಸೆ.17 ರಂದು ಜಿಲ್ಲೆಗೆ ಆಗಮಿಸಲಿರುವ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ, ಕಲಬುರಗಿಗೆ ಆಗಮಿಸುವ ಸಿಎಂ ಅವರನ್ನೂ ಸಹ ನಮ್ಮ ಒಂದಿಷ್ಟುಸಂತ್ರಸ್ತ ರೈತರು ಅಂದು ಭೇಟಿಯಾಗಿ, ನಮ್ಮ ಅಳಲು ತೋಡಿಕೊಳ್ಳುತ್ತೇವೆ ಎಂದು ಸಂತ್ರಸ್ತ ರೈತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶಿರವಾಳದ ಗುರುಲಿಂಗನಗೌಡ, ಮಲ್ಲಿಕಾರ್ಜುನ್‌, ಸತೀಶಗೌಡ ಬೆಂಡೆಬೆಂಬಳಿ, ಮಲ್ಲು ಪೂಜಾರಿ, ಶಂಕರಗೌಡ ಕೋಡಾಲ ಮುಂತಾದವರಿದ್ದರು.
 

click me!