ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರವಾಗಿದ್ದ ದಂಪತಿಗಳಿಬ್ಬರು ಹೊಸದುರ್ಗ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಒಂದಾದರು.
ಹೊಸದುರ್ಗ (ಜು.9) : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರವಾಗಿದ್ದ ದಂಪತಿಗಳಿಬ್ಬರು ಹೊಸದುರ್ಗ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಒಂದಾದರು.
ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ನಾಗರಾಜ್ ಹಾಗೂ ಲಕ್ಷ್ಮೀ ದಂಪತಿ 13 ವರ್ಷಗಳ ವಿರಸ ಮರೆತು ಸಾಂಸಾರಿಕ ಸಾಮರಸ್ಯದೆಡೆ ಹೆಜ್ಜೆ ಹಾಕಿದ್ದಾರೆ.
undefined
ಹೊಸದುರ್ಗ ಪಟ್ಟಣದ ಲಕ್ಷ್ಮೀ ಹಾಗೂ ಹೊನ್ನಾಳಿ ತಾಲೂಕಿನ ನಾಗರಾಜ್ ಹಿರಿಯರ ಸಮ್ಮುಖದಲ್ಲಿ 2008ರಲ್ಲಿ ಮದುವೆಯಾಗಿದ್ದರು. ಕುಟುಂಬದಲ್ಲಿ ಮನಸ್ತಾಪ ಬಂದಿದ್ದರಿಂದ ಪತಿ ನಾಗರಾಜ್ 2010ರಲ್ಲಿ ಪತ್ನಿ ಲಕ್ಷ್ಮೀ ಜೊತೆ ಸಂಸಾರ ನಡೆಸುವುದಿಲ್ಲವೆಂದು ವಿವಾಹ ವಿಚ್ಛೇದನ ಕೋರಿ ಹರಿಹರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ 15 ಜೋಡಿಗಳನ್ನು ಮತ್ತೆ ಒಂದುಗೂಡಿಸಿದ ಲೋಕ ಅದಾಲತ್
ಈ ಪ್ರಕರಣವನ್ನು 2011ರಲ್ಲಿ ಹೈಕೋರ್ಟ್ ಮೂಲಕ ಹೊಸದುರ್ಗ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲಾಗಿತ್ತು. ವಿಚ್ಛೇದನ ಅರ್ಜಿ ಹೊಸದುರ್ಗದ ನ್ಯಾಯಾಲಯದಲ್ಲಿ ವಜಾ ಆಗಿತ್ತು. ನಂತರ ನಾಗರಾಜ್ ಅವರು ವಿವಾಹ ವಿಚ್ಛೇದನ ಕೋರಿ ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಚ್ ಅರ್ಜಿಯನ್ನು ವಜಾಗೊಳಿಸಿ ಹೊಸದುರ್ಗ ನ್ಯಾಯಾಲಯದಲ್ಲಿ ವಿಚಾರಣೆ ಮಾಡುವಂತೆ ಪ್ರಕರಣ ಮತ್ತೆ ಇಲ್ಲಿಗೆ ವರ್ಗಾವಣೆಗೊಳಿಸಿತ್ತು. ಶನಿವಾರದಂದು ನಡೆದ ಲೋಕ ಅದಾಲತ್‌ನಲ್ಲಿ 13 ವರ್ಷಗಳ ಬಳಿಕ ದಂಪತಿ ಪರಸ್ಪರ ಒಂದಾಗಿದ್ದಾರೆ ಎಂದು ಲಕ್ಷ್ಮೀ ಪರ ವಕೀಲ ಡಿ.ಬಿ. ಅಂಜನ್‌ಕುಮಾರ್ ಮಾಹಿತಿ ನೀಡಿದರು.
ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್. ಶಶಿಕಲಾ ಮಾತನಾಡಿ, ಇದೊಂದು ವಿಶೇಷ ಪ್ರಕರಣವಾಗಿದೆ. 13 ವರ್ಷಗಳ ನಂತರ ದಂಪತಿಗಳಿಬ್ಬರು ಪರಸ್ಪರ ಒಪ್ಪಿಕೊಂಡು ಸಾಂಸರಿಕ ಜೀವನ ನಡೆಸಲು ಮುಂದಾಗಿದ್ದಾರೆ. ಕೌಟುಂಬಿಕ ಜೀವನದಲ್ಲಿ ಬರುವ ಮನಸ್ತಾಪಗಳಿಗೆ ಹೆಚ್ಚಿನ ಮಹತ್ವ ನೀಡದೆ ಹೊಂದಾಣಿಕೆಯಿಂದ ಜೀವನ ನಡೆಸಬೇಕು. ದಂಪತಿ ಮಕ್ಕಳ ಮುಖ ನೋಡಿಯಾದರೂ ಒಂದಾಗಿ ಜೀವಿಸಬೇಕು ಎಂದರು.
ಕೌಟುಂಬಿಕ ವಿಚಾರವಾಗಿ ದೂರಾಗಿದ್ದೇವು. ನ್ಯಾಯಾಲಯ ಮತ್ತೆ ನಮ್ಮನ್ನು ಒಂದುಗೂಡಿಸಿದೆ. ನ್ಯಾಯಾಲಯವು ಇಂತಹ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ಪರಸ್ಪರ ರಾಜೀ ಮಾಡಿದರೆ ಒಳ್ಳೆಯದು ಎಂದು ಲಕ್ಷ್ಮೀ ಹೇಳಿದರು.
ಜುಲೈ 8ರಂದು ಮೆಗಾ ಲೋಕ್ ಅದಾಲತ್: 20 ಲಕ್ಷ ಕೇಸ್ ಇತ್ಯರ್ಥ ಗುರಿ
ವಕೀಲರ ಸಂಘದ ಅಧ್ಯಕ್ಷ ಡಿ. ನಿರಂಜನಮೂರ್ತಿ ಮಾತನಾಡಿ, ಇಬ್ಬರು ಪರಸ್ಪರ ಒಪ್ಪಿ 13 ವರ್ಷಗಳ ನಂತರ ದಾಂಪತ್ಯ ಜೀವನಕ್ಕೆ ಮರಳಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸುತ್ತೇನೆ ಎಂದರು.
ಸಂಧಾನಕರರಾಗಿ ವಕೀಲೆ ಜ್ಯೋತಿ ಕಾರ್ಯನಿರ್ವಹಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ರುದ್ರಮುನಿ, ವಕೀಲರ ಸಂಘದ ಅಧ್ಯಕ್ಷ ಡಿ. ನಿರಂಜನಮೂರ್ತಿ, ಕಾರ್ಯದರ್ಶಿ ಬಸವಲಿಂಗಪ್ಪ, ವಕೀಲರಾದ ಈರಣ್ಣ, ಗುರುಬಸಪ್ಪ ಮತ್ತಿತರಿದ್ದರು.