Latest Videos

ಚಿತ್ರದುರ್ಗ: ಕೋಟೆ ವಾಯುವಿಹಾರಿಗಳಿಗೆ ಶುಲ್ಕದ ಶಾಕ್‌!

By Kannadaprabha NewsFirst Published Jul 9, 2023, 5:53 AM IST
Highlights

: ಐತಿಹಾಸಿಕ ಚಿತ್ರದುರ್ಗ ಕೋಟೆ ಒಳ ಆವರಣದಲ್ಲಿ ಮುಂಜಾನೆ ಹಾಗೂ ಸಂಜೆ ವಾಯುವಿಹಾರ ಮಾಡುತ್ತಿದ್ದವರಿಗೆ ಪುರಾತತ್ವ ಇಲಾಖೆ ಶುಲ್ಕದ ಶಾಕ್‌ ನೀಡಲು ಮುಂದಾಗಿದೆ.

 ಚಿತ್ರದುರ್ಗ (ಜು.9) : ಐತಿಹಾಸಿಕ ಚಿತ್ರದುರ್ಗ ಕೋಟೆ ಒಳ ಆವರಣದಲ್ಲಿ ಮುಂಜಾನೆ ಹಾಗೂ ಸಂಜೆ ವಾಯುವಿಹಾರ ಮಾಡುತ್ತಿದ್ದವರಿಗೆ ಪುರಾತತ್ವ ಇಲಾಖೆ ಶುಲ್ಕದ ಶಾಕ್‌ ನೀಡಲು ಮುಂದಾಗಿದೆ. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ಸಂಬಂಧ ಚರ್ಚೆಗಳು ನಡೆದು ಮೊತ್ತ ನಿಗದಿ ಮಾಡಿ ಪಾಸ್‌ ವಿತರಿಸುವ ನಿರ್ಣಯ ಕೈಗೊಳ್ಳಲಾಯಿತು. ಆದರೆ ದರ ಅಂತಿಮಗೊಳಿಸಲಾಗಲಿಲ್ಲ. ಮತ್ತೊಂದು ಸಭೆ ನಡೆಸಲು ತೀರ್ಮಾನಿಸಲಾಯಿತು.

ಏಳು ಸುತ್ತಿನ ಕೋಟೆ ಎಂದರೆ ಚಿತ್ರದುರ್ಗದ ಜನರಿಗೆ ಅಚ್ಚು ಮೆಚ್ಚು. ಅದರಲ್ಲೂ ದೊಡ್ಡಪೇಟೆ, ಕರುವಿನಕಟ್ಟೆವೃತ್ತ, ಜೋಗಿಮಟ್ಟಿಪ್ರದೇಶದ ಮಹಿಳೆಯರು, ಪುರುಷರು, ಹಿರಿಯ ನಾಗರಿಕರು ನಿತ್ಯವೂ ಮುಂಜಾನೆ ಕೋಟೆಯೊಳಗೊಂದು ಸುತ್ತು ಹಾಕಿಕೊಂಡು ಬಂದು ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಕೆಲ ಯುವಕರು ಗೋಪಾಲಸ್ವಾಮಿ ಹೊಂಡಕ್ಕೆ ಹೋಗಿ ಈಜಾಡಿಕೊಂಡು ಬರುತ್ತಿದ್ದು, ಇದಾವುದಕ್ಕೂ ಶುಲ್ಕ ಇರಲಿಲ್ಲ.

ಚಿತ್ರದುರ್ಗ: ಕೋಟೆನಾಡಲ್ಲಿ ಗಮನ ಸೆಳೆಯುತ್ತಿರುವ ತ್ರಿವರ್ಣ ಧ್ವಜದ ಲೈಟಿಂಗ್ಸ್

ಕೋವಿಡ್‌ ವೇಳೆ ಕೋಟೆಗೆ ಪ್ರವೇಶ ನಿಷೇಧ ಮಾಡಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ವಾಯುವಿಹಾರಿಗಳಿಗೆ ನಿರ್ಬಂಧ ವಿಧಿಸಲಾಯಿತು. ವಾಯುವಿಹಾರಿಗಳಿಂದ ಒತ್ತಡ ಬಂದಾಗ ಪಾಸ್‌ ವಿತರಣೆ ಶುರುವಾಯಿತು. ಇದನ್ನು ಅಧೀಕೃತಗೊಳಿಸಿರಲಿಲ್ಲ. ಪುರಾತತ್ವ ಇಲಾಖೆ ಅಧಿಕಾರಿಗಳ ಕ್ರಮದಿಂದ ರೋಸಿ ಹೋಗಿದ್ದ ವಾಯುವಿಹಾರಿಗಳು ಕೇಂದ್ರ ಸಚಿವ ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಪಾಸ್‌ ವಿತರಣೆ ಬೇಡವೆಂದಿದ್ದರು. ಮುಂಜಾನೆ ವಾಕ್‌ ಮಾಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು.

ಇದಾವುದಕ್ಕೂ ಕಿವಿಗೊಡದ ಪುರಾತತ್ವ ಇಲಾಖೆ ತನ್ನ ನಿಲುವು ಬದಲಿಸಿರಲಿಲ್ಲ. ಶನಿವಾರ ನಡೆದ ಸಭೆಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ಆರು ತಿಂಗಳಿಗೆ 250 ರುಪಾಯಿ ಶುಲ್ಕ ವಿಧಿಸುವ ಅಭಿಪ್ರಾಯವ ಮಂಡಿಸಿದರು. ಚಿತ್ರದುರ್ಗ ಕೋಟೆ ಬಗ್ಗೆ ಸ್ಥಳೀಯರು ಅವರದ್ದೇ ಆದ ಅಭಿಮಾನ ಇಟ್ಟುಕೊಂಡಿರುತ್ತಾರೆ. ಹಾಗಾಗಿ ವಾಯುವಿಹಾರಕ್ಕೆ ಶುಲ್ಕ ನಿಗಧಿಪಡಿಸುವುದು ಸೂಕ್ತವಲ್ಲವೆಂದು ಪ್ರವಾಸೋದ್ಯ ಇಲಾಖೆಯ ಕಾರ್ಯದರ್ಶಿ ರಾಮ್‌ಪ್ರಸಾದ್‌ ಮನೋಹರ್‌ ಸಲಹೆ ಮಾಡಿದರು. ಆರು ತಿಂಗಳಿಗೆ ಪಾಸ್‌ ಅವಧಿ ನಿಗದಿಮಾಡುವ ಬದಲು ಎರಡು ವರ್ಷಕ್ಕೆ ವಿಸ್ತರಿಸಿ ಎಂದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಪಾಸ್‌ ವಿತರಣೆ ಪ್ರಸ್ತಾಪ ಹೊಸದೇನಲ್ಲ. ವಾಯುವಿಹಾರಕ್ಕೆ ಬರುವವರಿಗೆ ಈಗಾಗಲೇ ಪಾಸ್‌ ವಿತರಿಸಲಾಗುತ್ತಿದೆ. ಪಾಸ್‌ ದರದ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದರು. ಈ ಬಗ್ಗೆ ಮತ್ತೊಂದು ಸಭೆ ನಡೆಸೋಣವೆಂದಾಗಿ ಸಭೆ ಸಮ್ಮತಿಸಿತು.

ಕಲ್ಲಿನ ಕೋಟೆಗೆ ಧ್ವನಿ ಬೆಳಕಿನ ವ್ಯವಸ್ಥೆ, ಲೇಸರ್‌ ಶೋ, ದೀಪಾಲಂಕಾರ, ಕುಡಿಯುವ ನೀರು, ಶೌಚಾಲಯ, ಪಾದಚಾರಿ ಮಾರ್ಗ ನಿರ್ಮಾಣ, ಹೊಂಡ ಮತ್ತು ದೇಗುಲಗಳ ಅಭಿವೃದ್ಧಿ ಸೇರಿದಂತೆ ಏಳು ಕಾಮಗಾರಿಗೆ ಸಭೆ ಒಪ್ಪಿಗೆ ಸೂಚಿಸಿತು.

ಚಂದ್ರವಳ್ಳಿ ಕೆರೆ ಹಾಗೂ ಅಂಕಲಿ ಮಠದ ಸುತ್ತಲಿನ ಪರಿಸರದ ಅಭಿವೃದ್ಧಿಗೆ ಸಭೆ ಗಂಭೀರವಾಗಿ ಚರ್ಚಿಸಿತು. ಈ ಕುರಿತು ಕಂದಾಯ ಇಲಾಖೆ ಹಾಗೂ ಕೇಂದ್ರ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳ ಜಂಟಿ ಸಮೀಕ್ಷೆಯನ್ನು ಜುಲೈ 18ರಂದು ನಡೆಸಲು ತೀರ್ಮಾನಿಸಲಾಯಿತು.

Chitradurga Fort: ಉಕ್ಕಿನ ಕೋಟೆಯಲ್ಲಿ ಹಂದಿಗಳ ಹಾವಳಿ: ದ್ವಾರಬಾಗಿಲನ್ನೇ ಮುಚ್ಚಿರೊ ಕಿಡಿಗೇಡಿಗಳು!

ಚಿತ್ರದುರ್ಗ ಕೋಟೆ ಅಭಿವೃದ್ದಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಕೇಂದ್ರ ಪುರಾತತ್ವ ಇಲಾಖೆ ಅನುಮತಿ ಪಡೆಯುವ ಸಂಬಂಧ ದೆಹಲಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ)ರು. 30 ಕೋಟಿ, ಕೋಟೆಯ ಅಭಿವೃದ್ಧಿಗೆ ರು. 8.9 ಕೋಟಿ ಅನುದಾನ ಇದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್‌. ದಿವಾಕರ್‌, ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜಾಹ್ನವಿ ಶರ್ಮ, ಪ್ರಾದೇಶಿಕ ನಿರ್ದೇಶಕ ಎನ್‌.ಕೆ. ಪಾಠಕ್‌, ಅಧೀಕ್ಷಕ ಬಿಪಿನ್‌ ಚಂದ್ರ ಇದ್ದರು.

click me!