
ಬೆಂಗಳೂರು: ಅಂಚೆ ಕಚೇರಿಯಲ್ಲಿ 44 ಖಾತೆದಾರರ ಉಳಿತಾಯ ಖಾತೆಗಳ 1.3 ಕೋಟಿ ರು. ದುರ್ಬಳಕೆ ಮಾಡಿದ ಆರೋಪದಡಿ ಮೈಸೂರು ಜಿಲ್ಲೆಯ ಸರಗೂರು ಅಂಚೆ ಕಚೇರಿಯ ಇಬ್ಬರು ನೌಕರರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.ಅಂಚೆ ಕಚೇರಿ ಸಹಾಯಕ ಪೋಸ್ಟ್ ಮಾಸ್ಟರ್ ಮತ್ತು ಪೋಸ್ಟ್ ಮ್ಯಾನ್ ಬಂಧಿತರು. ಇಬ್ಬರು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಈ ಇಬ್ಬರು ನೌಕರರು 2022-2025ರ ಅವಧಿಯಲ್ಲಿ ಅಂಚೆ ಕಚೇರಿಯ ಉಳಿತಾಯ ಖಾತೆದಾರರ ಲಾಗಿನ್ ಗುರುತಿನ ಚೀಟಿಗಳು, ಪಾಸ್ ವರ್ಡ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಗ್ರಾಹಕರ ಉಳಿತಾಯ ಖಾತೆಗಳ ಹಣವನ್ನು ಸ್ವಂತ ಖಾತೆಗಳು ಹಾಗೂ ತಮ್ಮ ಸಂಬಂಧಿಕರ ಖಾತೆಗಳಿಗೆ ಜಮೆ ಮಾಡಿಕೊಂಡು ವ್ಯವಸ್ಥಿತವಾಗಿ ವಂಚಿಸಿರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳು ಇತರೆ ಗ್ರಾಹಕರ ಖಾತೆಗಳ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಶಂಕೆ ಇದ್ದು, ಹೆಚ್ಚಿನ ತನಿಖೆಯಿಂದ ಮತ್ತಷ್ಟು ವಿಚಾರಗಳು ಬಯಲಿಗೆ ಬರಲಿವೆ.
ಇದನ್ನೂ ಓದಿ: 'ನಿಮ್ಮನ್ನ ಸುಮ್ನೆ ಬಿಡೋಲ್ಲ..' ಮಂಡ್ಯ ಭ್ರಷ್ಟ ಪಿಡಿಒ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ!
ಸರಗೂರು ಅಂಚೆ ಕಚೇರಿಯಲ್ಲಿ ಗ್ರಾಹಕರ ಹಣ ದುರ್ಬಳಕೆ ಸಂಬಂಧ ಕಳೆದ ಮಾರ್ಚ್ 6ರಂದು ನೀಡಲಾದ ಲಿಖಿತ ದೂರಿನ ಮೇರೆಗೆ ವಂಚನೆ, ನಂಬಿಕೆ ದ್ರೋಹ, ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Bengaluru: 2ನೇ ವಿಮಾನ ನಿಲ್ದಾಣ ಎಲ್ಲಿ? ಕನಕಪುರ, ನೆಲಮಂಗಲ ರಸ್ತೆಯ ಈ ಗ್ರಾಮಗಳು ಶಾರ್ಟ್‌ಲಿಸ್ಟ್