
ಮೈಸೂರು: ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ವಿದ್ಯುತ್ ಮಾರ್ಗ ಹಾದುಹೋಗಲೆಂದು ಕೆಐಎಡಿಬಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಕ್ರಮ ಕೈಬಿಡಲು ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ರೈತರು ದಿಢೀರ್ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಕೆಎನ್ಎಸ್ ಬಡಾವಣೆಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಕರ್ತರ ನೂತನ ಭವನದ ಕಟ್ಟಡ ಕಾಮಗಾರಿಗೆ ಚಾಲನೆ, ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಅಭಿನಂದನೆ, ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ, ಡಾ. ಯತೀಂದ್ರ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ರೈತರು ದಿಢೀರ್ ಘೋಷಣೆ ಕೂಗಿ, ಭೂ ಸ್ವಾಧೀನ ಕೈಬಿಡುವಂತೆ ಒತ್ತಾಯಿಸಿದರು.
ಸಿದ್ದರಾಮಯ್ಯ ಅವರು ಕೆಲವೇ ನಿಮಿಷಗಳಲ್ಲಿ ಕಾರ್ಯಕ್ರಮದಿಂದ ನಿರ್ಗಮಿಸಿದ ವೇಳೆಯೂ ರೈತರು ಅವರ ಕಾರನ್ನು ಸುತ್ತುವರೆದು ಪ್ರತಿಭಟಿಸಿದರು. ಪೊಲೀಸರು ರೈತರನ್ನು ನಿಯಂತ್ರಿಸುವ ಮೂಲಕ ಅವರು ತೆರಳಲು ಅನುವು ಮಾಡಿಕೊಟ್ಟರು.
ನಂತರ ಕಾರ್ಯಕ್ರಮದಲ್ಲಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ರೈತರು ಮನವಿ ಸಲ್ಲಿಸಲು ಮುಂದಾದರು. ರೈತರ ಕೋರಿಕೆ ಮೇರೆಗೆ ವೇದಿಕೆಯಿಂದ ಬಂದ ಸಚಿವರಿಗೆ, ರೈತರೊಂದಿಗೆ ಬಿಜೆಪಿ ಮುಖಂಡ ಡಾ. ಶುಶ್ರೂತ್ ಗೌಡ ಎದುರಾಗಿ, ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಕೇಳಿದರು. ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಡಾ, ಶುಶ್ರೂತ್ ಗೌಡ ಅವರೊಂದಿಗೆ ಡಾ. ಯತೀಂದ್ರ ವಾಗ್ವಾದಕ್ಕೆ ಇಳಿದರು. ಈ ವೇಳೆ ಜೊತೆಗಿದ್ದ ಶಾಸಕರಾದ ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ್ ಅವರು ಡಾ. ಯತೀಂದ್ರ ಅವರನ್ನು ಸಮಾಧಾನಪಡಿಸಿ ವೇದಿಕೆಗೆ ಕರೆದುಕೊಂಡು ಹೋದರು.
ಮಂಡಕಳ್ಳಿ ವಿಮಾನ ನಿಲ್ದಾಣ ಬಳಿಯ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರಸೆ ಹಾಗೂ ಮದರಗಳ್ಳಿ ತಮ್ಮ 165 ಎಕರೆ ಜಮೀನು ಸ್ವಾಧೀನಕ್ಕೆ ಮುಂದಾಗಿದ್ದಾರೆ. ಇಲ್ಲಿ ಭತ್ತ ಹಾಗೂ ಇನ್ನಿತರ ಬೆಳೆಗಳಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ತೆಂಗಿನ ಮರಗಳೂ ಇವೆ. ಹೀಗಾಗಿ, ಇವನ್ನು ಸ್ವಾಧೀನ ಪಡಿಸಿಕೊಂಡಲ್ಲಿ ತಮ್ಮ ಬದುಕು ಅತಂತ್ರವಾಗುತ್ತವೆ. ನಮಗೆ ಪರಿಹಾರ ಬೇಡ, ನಮ್ಮ ಜಮೀನು ನಮಗೇ ಉಳಿಸಿಕೊಡಿ ಎಂದು ಗ್ರಾಮಸ್ಥರು ಹಾಗೂ ರೈತರು ಆಗ್ರಹಿಸಿದರು.
ಇದನ್ನೂ ಓದಿ: ದಸರಾ ಪರೇಡ್‌ಗೆ ಸೇನೆ, ಚಲನಚಿತ್ರ ನಟರ ಹೆಜ್ಜೆ! ವಿಭಿನ್ನ ದಸರಾ, ಮೆರವಣಿಗೆಯ ರೂಪ ಬದಲು: ಡಿಕೆಶಿ - ಕಂಬಳ ನಡೆಯುತ್ತಾ?