Mysuru: ಉದ್ಯಮಿಯನ್ನು ಕಿಡ್ನಾಪ್ ಮಾಡಿ, 55 ಸಾವಿರ ರೂ.ಗಳನ್ನು ದೇವರ ಹುಂಡಿಗೆ ಹಾಕಿದ ಗ್ಯಾಂಗ್!

By Suvarna News  |  First Published Feb 13, 2023, 5:23 PM IST

ಕಿಡ್ನಾಪ್ ಮಾಡುವುದಕ್ಕೂ ಹರಕೆ ಕಟ್ಟಿಕೊಂಡು, ಕಿಡ್ನಾಪ್​ನಿಂದ ಪೀಕಿದ ಹಣವನ್ನೂ ಹುಂಡಿಗೆ ಹಾಕಿದ ವಿಲಕ್ಷಣ ಘಟನೆ ಮೈಸೂರಿನಲ್ಲಿ ನಡೆದಿದೆ. ಉದ್ಯಮಿಯನ್ನು ಅಪಹರಣ ಮಾಡಿದ್ದ ಖತರ್​ನಾಕ್ ಗ್ಯಾಂಗ್ 55 ಸಾವಿರ ರೂ.ಗಳನ್ನು ದೇವರ ಹುಂಡಿಗೆ ಹಾಕಿರುವುದು ಬೆಳಕಿಗೆ ಬಂದಿದೆ.


ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್
 
ಮೈಸೂರು (ಫೆ.13): ಅಂದುಕೊಂಡ ಕೆಲಸ ಸಕ್ಸಸ್ ಆಗಲಿ ಅಂತ ದೇವರಿಗೆ ಪ್ರಾರ್ಥನೆ ಮಾಡೋದು, ಹರಕೆ ಕಟ್ಟಿಕೊಳ್ಳೋದು ಕಾಮನ್. ಕಿಡ್ನಾಪ್ ಮಾಡುವುದಕ್ಕೂ ಹರಕೆ ಕಟ್ಟಿಕೊಂಡು, ಕಿಡ್ನಾಪ್​ನಿಂದ ಪೀಕಿದ ಹಣವನ್ನೂ ಹುಂಡಿಗೆ ಹಾಕಿದ ವಿಲಕ್ಷಣ ಘಟನೆ ಮೈಸೂರಿನಲ್ಲಿ ನಡೆದಿದೆ. ಉದ್ಯಮಿಯನ್ನು ಅಪಹರಣ ಮಾಡಿದ್ದ ಖತರ್​ನಾಕ್ ಗ್ಯಾಂಗ್ 55 ಸಾವಿರ ರೂ.ಗಳನ್ನು ದೇವರ ಹುಂಡಿಗೆ ಹಾಕಿರುವುದು ಬೆಳಕಿಗೆ ಬಂದಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಫೆ.6ರಂದು ಉದ್ಯಮಿಯ ಕಿಡ್ನಾಪ್ ಆಗಿತ್ತು. ಒಂದೇ ವಾರದಲ್ಲಿ ಪ್ರಕರಣ ಭೇದಿಸಿರುವ ಮೈಸೂರು ಪೊಲೀಸರು, 10 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 21 ಲಕ್ಷ ರೂ. ಹಣ, ಎರಡು ಕಾರು, ಮೂರು ಬೈಕ್, 5 ಡ್ರಾಗರ್, 2 ಲಾಂಗ್, 11 ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ. 

ಒಂದು ವರ್ಷದ ಹಿಂದೆಯೇ ಬಂದಿತ್ತು ಬೆದರಿಕೆ:
ವರ್ಷದ ಹಿಂದೆ ಬಂದ ಅಪಹರಣದ ಬೆದರಿಕೆ ಕರೆಯೇ ಮೈಸೂರಿನ ಉದ್ಯಮಿ ಅಪಹರಣ ಪ್ರಕರಣದ ಮೂಲ ಪತ್ತೆಗೆ ನೆರವಾಗಿದೆ. ಮೈಸೂರಿನ ಉದ್ಯಮಿ ದೀಪಕ್ ಮತ್ತು ಅವರ ಪುತ್ರ ಹರ್ಷನನ್ನು ದುಷ್ಕರ್ಮಿಗಳ ಗುಂಪೊಂದು ಅಪಹರಿಸಿ  ಹಣಕ್ಕಾಗಿ ಒತ್ತೆಯಾಗಿಟ್ಟು, ಹಣ ನೀಡಿದ ಬಳಿಕ ಬಿಡುಗಡೆ ಮಾಡಿ ಆಸಾಮಿಗಳು ಪರಾರಿಯಾಗಿದ್ದರು. ಇದೇ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಚ್ಚುವುದು ಮೈಸೂರು ಜಿಲ್ಲಾ ಪೊಲೀಸರಿಗೆ ಸವಾಲಾಗಿತ್ತು. ಕಾರಣ ಅಪಹರಣಕಾರರು ಉದ್ಯಮಿ ಮತ್ತು ಅವರ ಪುತ್ರನ ಕಣ್ಣಿಗೆ ಬಟ್ಟೆ ಕಟ್ಟಿದ್ದರು. ಅಲ್ಲದೇ ಬ್ಲಾಕ್ ಮೇಲ್ ಮಾಡಲು ಉದ್ಯಮಿಯ ಮೊಬೈಲ್ ಫೋನ್ ಅನ್ನೇ ಬಳಕೆ ಮಾಡಿದ್ದರು. ಇಷ್ಟಾದರೂ ವರ್ಷದ ಹಿಂದೆ ಉದ್ಯಮಿಗೆ ಅಪಹರಿಸುವುದಾಗಿ ಬೆದರಿಕೆ ಹಾಕಿದ್ದವನ ಬಗ್ಗೆ ಸಿಕ್ಕ ಸಣ್ಣ ಸುಳಿವು ಪೊಲೀಸರಿಗೆ ಇಡೀ ಅಪಹರಣಕಾರರ ತಂಡವನ್ನೇ ಹೆಡೆ ಮುರಿ ಕಟ್ಟುವಲ್ಲಿ ನೆರವಾಗಿದೆ.

Latest Videos

undefined

ಕಾರ್ಖಾನೆಯಲ್ಲೇ ಇದ್ದ ಅಪಹರಣದ ಸೂತ್ರಧಾರ:
ಉದ್ಯಮಿಯ ಕಾರ್ಖಾನೆಯಲ್ಲಿದ್ದ ಮಾಜಿ ನೌಕರನೇ ಅಪಹರಣದ ಸೂತ್ರಧಾರ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಉದ್ಯಮಿ  ದೀಪಕ್ ಕಾರ್ಖಾನೆಯ ಮಾಜಿ ನೌಕರನೇ ಅಪಹರಣಕ್ಕೆ  ಸ್ಕೇಚ್ ಹಾಕಿದ್ದು, ವರ್ಷದ ಬಳಿಕ ಸ್ನೇಹಿತರೊಂದಿಗೆ ಕಾರ್ಯಾಚರಣೆ ನಡೆಸಿ ಅಪಹರಿಸಿದ್ದಾನೆ. ಉದ್ಯಮಿ ಅಪ್ಪ-ಮಗನನ್ನು ಅಪಹರಿಸಿ ಬಿಡುಗಡೆ ಮಾಡಿದ್ದ ಅಪಹರಣಕಾರನ್ನು ಬಂಧಿಸುವಲ್ಲಿ ಮೈಸೂರು ಜಿಲ್ಲಾ  ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆಯಾದ ವಾರದಲ್ಲೇ ಆಸಾಮಿಗಳು ಅಂದರ್:
ಅಪ್ಪ ಮಗನ ಅಪಹರಣ ಘಟನೆ ನಡೆದ ವಾರದೊಳಗೆ ಕಾರ್ಯಾಚರಣೆ ನಡೆಸಿ ಪೊಲೀಸರು 10 ಮಂದಿಯನ್ನು ಬಂಧಿಸಿದ್ದು, ಬಂಧಿತರಿಂದ  21 ಲಕ್ಷ  10 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್‌ಗಳು ಮತ್ತು ಮೊಬೈಲ್ ಫೋನ್‌ಗಳೊಂದಿಗೆ ಮಾರಾಕಾಸ್ತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ. ಮತ್ತೋಬ್ಬನ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ.

ಒಂದೇ ವಾರದಲ್ಲಿ‌ ಸಿಕ್ಕಿ‌ ಬಿದ್ದರು ಅಪಹರಣಕಾರರು:
ಕಳೆದ ಫೆ.6 ರಂದು ಮಧ್ಯಾಹ್ನ  ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಹರ್ಷ ಇಂಪೆಕ್ಸ್ ಫ್ಯಾಕ್ಟರಿಗೆ ಬೈಕ್ ಮತ್ತು ಕಾರಿನಲ್ಲಿ ಬಂದ ಅಪಹರಣಕಾರರು, ಮಾರಾಕಾಸ್ತ್ರಗಳಿಂದ ಕಾರ್ಮಿಕರನ್ನು ಬೆದರಿಸಿ ಒಂದು ಕೋಣೆಯಲ್ಲಿ ಕೂಡಿ ಹಾಕಿದರಲ್ಲದೇ  ಕಾರ್ಖಾನೆ ಮಾಲೀಕರಾದ ದೀಪಕ್ ಮತ್ತು ಹರ್ಷ ಅವರನ್ನು ಅವರದೇ ಕಾರಿನಲ್ಲಿ ಅಪಹರಿಸಿದ್ದರು. ಅಪಹರಣದ ವೇಲೆ ಕಣ್ಣಿಗೆ ಬಟ್ಟೆ ಕಟ್ಟಿದ್ದರು. ಅಪಹರಣದ ಬಳಿಕ ದೀಪಕ್ ಕುಟುಂಬದವರಿಗೆ ದೀಪಕ್ ಮೊಬೈಲ್ ಪೋನ್‌ನಿಂದಲ್ಲೇ ಕರೆ ಮಾಡಿ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ಸಕಾಲದಲ್ಲಿ ಹೊಂದಿಸಲು ಸಾಧ್ಯವಾಗೋದಿಲ್ಲ ಎಂದು ಹೇಳಿದ್ದಕ್ಕೆ ಕೊನೆಗೆ 35 ಲಕ್ಷ ರೂ. ನೀಡುವಂತೆ ಒತ್ತಡ ಹೇರಿದ್ದಾರೆ. ಅಷ್ಟು ಹಣವನ್ನು ದೀಪಕ್ ಕುಟುಂಬದವರು ಹೊಂದಿಸಿ ಸ್ನೇಹಿತರ ಮೂಲಕ ಕಳುಹಿಸಿದ್ದಾರೆ. ಹಣ ಪಡೆದ  ಅಪಹರಣಕಾರರು, ಇಬ್ಬರನ್ನು ಬನ್ನೂರು ರಸ್ತೆಯಲ್ಲಿನ ಜಲಮಹಲ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

ಅಪಹರಣಕ್ಕೆ ನಡೆದಿತ್ತು ಸಂಘಟನೆ:
ಉದ್ಯಮಿ ದೀಪಕ್ ಅವರ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದ  ಅದೇ ಕಾರ್ಖಾನೆಯ ಮಾಜಿ ನೌಕರ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದನಲ್ಲದೇ ಬೆದರಿಕೆ ಹಾಕಿದ್ದ. ಆದರೆ ಉದ್ಯಮಿ ದೀಪಕ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ್ದರು. ಈ ಮಾಹಿತಿಯನ್ನು ಮಾಜಿ ನೌಕರ, ಅಪಹರಣಕಾರರ ಗುಂಪಿನಲ್ಲಿದ್ದ ಒಬ್ಬಾತನೊಂದಿಗೆ ಹಂಚಿ ಕೊಂಡಿದ್ದಾನೆ. ಉದ್ಯಮಿಯನ್ನು ಅಪಹರಿಸಿದರೆ ಕೋಟಿ ಗಟ್ಟಲ್ಲೇ ಹಣ ಸಂಪಾದಿಸಬಹುದು ಎಂದು ಹೇಳಿದ್ದಾನೆ. ತಕ್ಷಣ ಕಾರ್ಯ ಪ್ರವೃತ್ತನಾದ ಮೊದಲನೇ ಆರೋಪಿ, ಮೂರ್ನಾಲ್ಕು ಮಂದಿ ಸ್ನೇಹಿತರೊಂದಿಗೆ ಮಾತನಾಡಿ 11 ಮಂದಿಯ ತಂಡವನ್ನು ಸಿದ್ದಪಡಿಸಿಕೊಂಡು  ಅಪಹರಣ ಕೃತ್ಯ ನಡೆಸಿದ್ದಾರೆ. ಅಪಹರಣ ಪ್ರಕರಣದದಲ್ಲಿ ಭಾಗಿಯಾದವರಲ್ಲಿ ಮಂಡ್ಯದ ಇಬ್ಬರು, ಬನ್ನೂರಿನ ನಾಲ್ಕು, ತುಮಕೂರು ಇಬ್ಬರು,  ಕೆ.ಆರ್. ನಗರದ ಇಬ್ಬರು ಇದ್ದಾರೆ.  ಒಂದನೇ ಆರೋಪಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಇತ್ತಿಚೆಗೆ ಬಿಡುಗಡೆಯಾಗಿದ್ದ. ಆತನ ವಿರುದ್ದ ಮಂಡ್ಯ, ಮೈಸೂರು, ಕೆ.ಆರ್. ಪೇಟೆ ಠಾಣೆಗಳಲ್ಲಿ ಕೊಲೆ, ಅಕ್ರಮ ಶಸ್ತ್ರಾ ಸ್ತ್ರ ಕಾಯಿದೆ ಸೇರಿ 9 ಪ್ರಕರಣಗಳು ದಾಖಲಾಗಿದೆ. ಎರಡನೇ ಆರೋಪಿ ವಿರುದ್ದ  ಆರ್ಮ್ಸ್ ಆಕ್ಟ್ ನಡಿ ಪ್ರಕರಣ, ಮೂರನೇ ಆರೋಪಿ ವಿರುದ್ದ ಐದು ಕಳ್ಳತನ ಪ್ರಕರಣ, ಐದು  ಮತ್ತು 7 ನೇ ಆರೋಪಿ ವಿರುದ್ದ  ಹಲ್ಲೆ ಪ್ರಕರಣ ದಾಖಲಾಗಿದೆ.

ಹಣ ಪಡೆಯುವ ವರೆಗೆ ಕಾರಿನಲ್ಲಿ ಸುತ್ತಾಟ:
ಮಧ್ಯಾಹ್ನ 12.50 ರ ಹೊತ್ತಿಗೆ ಉದ್ಯಮಿ ಮತ್ತು ಅವರ ಪುತ್ರನನ್ನು ಅಪಹರಿಸಿದ ದುಷ್ಕರ್ಮಿಗಳು, ರಾತ್ರಿ 7 ಗಂಟೆಯವರೆಗೂ ಬಿಡದೇ ಕಾರಿನಲ್ಲಿಯೇ ನಂಜನಗೂಡು, ಮೈಸೂರು ನಗರ ಮತ್ತು ತಾಲೂಕಿನ ಹೆದ್ದಾರಿಗಳಲ್ಲಿ ಸಂಚರಿಸುತ್ತಾ ಸುತ್ತಾಟ ನಡೆಸಿದ್ದಾರೆ. ಮೂರ್ನಾಲ್ಕು ಕಡೆ ಹಣ ತರುವಂತೆ ಹೇಳಿ ಕೊನೆಗೆ ಒಂದು ಕಡೆ ಹಣ ಪಡೆದು ನಂತರ ಕಾರಿನ ಸಮೇತ ಅಪ್ಪ-ಮಗನನ್ನು ಬಿಟ್ಟು ಪರಾರಿಯಾಗಿದ್ದಾರೆ.

ಜೈಲಿನಲ್ಲೇ ಇದ್ದ ಕೊಲೆ ಆರೋಪಿಗಾಗಿ 20 ವರ್ಷ ಹುಡುಕಾಡಿದ ಪೊಲೀಸರು..!

ಬಂದ ಹಣದಲ್ಲಿ‌ ದೇವರಿಗೂ ಪಾಲು:
ನಂಜನಗೂಡು ಮೂಲದ ಉದ್ಯಮಿ, ಹರ್ಷ ಇಂಪೆಕ್ಸ್ ಫ್ಯಾಕ್ಟರಿ ಮಾಲೀಕ ದೀಪಕ್ ಹಾಗೂ ಪುತ್ರ ಹರ್ಷ ಅವರನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳು. ಅವರದ್ದೇ ಫೋನ್​ನಿಂದ ಕರೆ ಮಾಡಿಸಿ 1 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ 35 ಲಕ್ಷ ರೂ. ಪಡೆದುಕೊಂಡು ಒಂದು ಗಂಟೆ ನಂತರ ಬಿಟ್ಟು ಕಳುಹಿಸಿದ್ದರು. ಈ ಪೈಕಿ 55 ಸಾವಿರ ರೂ.ಗಳನ್ನು ದೇವರ ಹುಂಡಿಗೆ ಹಾಕಿದ್ದಾರೆ. ತನಿಖೆ ವೇಳೆ ಈ ವಿಚಾರವನ್ನು ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಗೆ SDPI ಟಿಕೆಟ್‌: ಸಚಿವ ಆರ್.ಅಶೋಕ್ ಆಕ್ರೋಶ

ಪೊಲೀಸರಿಗೆ 25 ಸಾವಿರ ರೂ. ಬಹುಮಾನ:
ಕಿಡ್ನಾಪ್ ಪ್ರಕರಣದ ಕಾರ್ಯಾಚರಣೆಯಲ್ಲಿ  ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಗೋವಿಂದ ರಾಜು, ನಂಜನಗೂಡು ಗ್ರಾಮಾಂತರ ಠಾಣೆಯ  ಇನ್ಸ್‌ಪೆಕ್ಟರ್ ಶಿವನಂಜ ಶೆಟ್ಟಿ, ಎಸ್‌ಐಗಳಾದ ಚೇತನ್, ರಮೇಶ್ ಕರಕಿಕಟ್ಟಿ, ಕೃಷ್ಣಕಾಂತಕೋಳಿ, ಕಮಲಾಕ್ಷಿ, ಸಿ.ಕೆ. ಮಹೇಶ್, ಪ್ರೊಬೇಷನರಿ ಎಸ್‌ಐ ಚರಣ್ ಗೌಡ, ಎಎಸ್‌ಐಗಳಾದ ಶಿವಕುಮಾರ್, ವಸಂತ ಕುಮಾರ್, ಸಿಬ್ಬಂದಿಗಳಾದ  ಸುರೇಶ, ವಸಂತ ಕುಮಾರ್, ಸುನೀತ, ಕೃಷ್ಣ, ಭಾಸ್ಕರ್, ಅಬ್ದುಲ್ ಲತೀಫ್, ನಿಂಗರಾಜು, ಸುರೇಶ, ಸುಶೀಲ್ ಕುಮಾರ್, ರಾಜು,ಚೇತನ್, ವಿಜಯ್ ಕುಮಾರ್, ಮಂಜು, ಚೆಲುವರಾಜು ಇದ್ದರು. ತನಿಖಾ ತಂಡಕ್ಕೆ‌ 25 ಸಾವಿರ ಬಹುಮಾನವನ್ನು ಎಸ್‌ಪಿ ಸೀಮಾ ಲಟ್ಕರ್ ಘೋಷಿಸಿದ್ದಾರೆ.

click me!