*ಬಿಜೆಪಿ ಶಾಸಕರೂ ಆಟಕ್ಕುಂಟು ಲೆಕ್ಕಕ್ಕಿಲ್ಲ: ಎಚ್ ಪಿ ಮಂಜುನಾಥ್
*ವಿಧಾನಸೌಧದಲ್ಲಿ ಕೈ ಎತ್ತುವುದಕ್ಕೆ ಮಾತ್ರ ಇಟ್ಟುಕೊಂಡಿದ್ದಾರೆ.
*ಶಿಷ್ಟಾಚಾರ ಉಲ್ಲಂಘನೆ ಸಂಬಂಧ ಹಕ್ಕುಚ್ಯುತಿ ಮಂಡಿಸುತ್ತೇವೆ.
ಮೈಸೂರು (ಜ. 22): ಬಿಜೆಪಿ (BJP) ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಬಿಜೆಪಿ ಶಾಸಕರೂ ಆಟಕ್ಕುಂಟು ಲೆಕ್ಕಕ್ಕಿಲ್ಲ.ವಿಧಾನಸೌಧದಲ್ಲಿ ಕೈ ಎತ್ತುವುದಕ್ಕೆ ಮಾತ್ರ ಇಟ್ಟುಕೊಂಡಿದ್ದಾರೆ. ಅವರಿಗೂ ಗ್ರಾಮಾಂತರ ಶಾಸಕರನ್ನು ಕಡೆಗಣಿಸುತ್ತಿರುವ ಬಗ್ಗೆ ನೋವಿದೆ. ಜಿಲ್ಲಾ ಮಂತ್ರಿ ಕಟ್ಟಡಗಳ ಉದ್ಘಾಟನೆಯನ್ನು ತಮ್ಮ ಮನೆಯ ಗೃಹಪ್ರವೇಶ ಅಂದುಕೊಂಡಿರುವಂತಿದೆ." ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ (H P Manjunath) ಹೇಳಿದ್ದಾರೆ.
"ಜಿಲ್ಲೆಗೆ ನಿಮ್ಮ ಕೊಡುಗೆ ಏನು ಅಂತ ಶ್ವೇತಪತ್ರ ಹೊರಡಿಸಿ. ಇಲ್ಲ ಬಾವುಟ ಹಾರಿಸಲು ಬಂದಿದ್ದೇನೆ ಅಂತ ಹೇಳಿ. ಶಾಸಕರ ಹಿತಕ್ಕೆ ವಿರುದ್ಧವಾಗಿ ಜಿಲ್ಲಾ ಉಸ್ತುವಾರಿ ಸಚಿವರು (In Charge) ನಡೆದುಕೊಂಡಿದ್ದಾರೆ. ಶಿಷ್ಟಾಚಾರ ಉಲ್ಲಂಘನೆ ಸಂಬಂಧ ಹಕ್ಕುಚ್ಯುತಿ ಮಂಡಿಸುತ್ತೇವೆ. ಈ ಬಗ್ಗೆ ಖುದ್ದು ಸ್ಪೀಕರ್ (Speaker) ಅವರಿಗೆ ದೂರು ಕೊಡುತ್ತೇವೆ. ಜಿಲ್ಲಾ ಮಂತ್ರಿ ತಪ್ಪು ತಿದ್ದಿಕೊಳ್ಳಬೇಕು. ನಮ್ಮಿಂದ ಸಹಕಾರ ನಿರೀಕ್ಷೆ ಮಾಡಬೇಡಿ. ನೀವು ಮೈಸೂರಿಗೆ ಬಂದಾಗ ಕಪ್ಪು ಪಟ್ಟಿ ತೋರಿಸುತ್ತೇವೆ" ಎಂದು ಎಚ್.ಪಿ.ಮಂಜುನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಅನುದಾನದ ಹಂಚಿಕೆಯಲ್ಲಿ ಬಿಜೆಪಿ ತಾರತಮ್ಯ: ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪ!
ಎಸ್.ಟಿ.ಸೋಮಶೇಖರ್ ಬಾವುಟ ಹಾರಿಸುವ ಮಂತ್ರಿ: "ಸರ್ಕಾರ ಶಿಷ್ಟಾಚಾರ (Etiquette) ಪಾಲನೆ ಮಾಡುತ್ತಿಲ್ಲ.ಆಡಳಿತಾತ್ಮಕವಾಗಿ ತಾರತಮ್ಯ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekhar ) ಬಾವುಟ ಹಾರಿಸುವ ಮಂತ್ರಿ ಆಗಿದ್ದಾರೆ. ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಜಲಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಯಾರನ್ನೂ ಕರೆದಿಲ್ಲ. ಪುಸ್ತಕ ವಿತರಣೆ ಕಾರ್ಯಕ್ರಮದಲ್ಲೂ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಸಿದ್ದರಾಮಯ್ಯ ಕಾಲದ ಕೊಡುಗೆಗಳನ್ನು ಎಸ್.ಟಿ.ಸೋಮಶೇಖರ್ ಉದ್ಘಾಟನೆ ಮಾಡುತ್ತಿದ್ದಾರೆ. ಜಲಭವನದ ಶಂಕು ಸ್ಥಾಪನೆಯ ಕಲ್ಲನ್ನೂ ಕಿತ್ತು ಎಸೆಯಲಾಗಿದೆ" ಶಾಸಕ ಎಚ್.ಪಿ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸದ್ದಾರೆ.
"ಸಿದ್ದರಾಮಯ್ಯ ಸಿಎಂ ಆಗಿದ್ದಾಗ 22,350 ಕೋಟಿ ರೂ.ಗಳನ್ನು ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಕೊಟ್ಟಿದ್ದಾರೆ. ಮೈಸೂರು ಮಹಾನಗರಕ್ಕೆ 3800 ಕೋಟಿ ರೂ. ಕೊಟ್ಟಿದ್ದಾರೆ. ಶಿಷ್ಟಾಚಾರ ಹೇಗೆ ಪಾಲನೆ ಮಾಡಬೇಕು ಅನ್ನೋದಕ್ಕೆ ಕೈಪಿಡಿ ಇದೆ. ಆದರೆ ಗ್ರಾಮಾಂತರ ಭಾಗದ ಯಾವುದೇ ಶಾಸಕರನ್ನು ಕರೆದಿಲ್ಲ" ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: Covid-19 Crisis: ವೀಕೆಂಡ್ ಕರ್ಫ್ಯೂ ಮುಖ್ಯಮಂತ್ರಿಯೊಬ್ಬರ ತೀರ್ಮಾನವಲ್ಲ: ಸಚಿವ ಸೋಮಶೇಖರ್
ವೀಕೆಂಡ್ ಕರ್ಫ್ಯೂ ಮುಖ್ಯಮಂತ್ರಿಯೊಬ್ಬರ ತೀರ್ಮಾನವಲ್ಲ: ವಾರಾಂತ್ಯ ಕರ್ಫ್ಯೂ ಮುಖ್ಯಮಂತ್ರಿಯೊಬ್ಬರ ತೀರ್ಮಾನವಲ್ಲ. ತಜ್ಞರು ನೀಡಿದ ಮುನ್ನೆಚ್ಚರಿಕೆ, ಸಂಪುಟದ ಸಚಿವರ ತೀರ್ಮಾನದ ಬಳಿಕ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದೆಯೇ ವಿನಃ ಮುಖ್ಯಮಂತ್ರಿಗಳೊಬ್ಬರೇ ಕೈಗೊಂಡ ತೀರ್ಮಾನವಲ್ಲ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್(ST Somashekhar) ಹೇಳಿದರು. ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್, ಜನರ ಆರೋಗ್ಯದ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಾರಾಂತ್ಯ ಕರ್ಫ್ಯೂ ಮುಂದುವರಿಸುವ ಸಂಬಂಧ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಕುರಿತು ಸಾರ್ವಜನಿಕರಿಂದ ಅಹವಾಲನ್ನು ಕೂಡ ಸ್ವೀಕರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಾಪ್ ಸಿಂಹ, ಸಿ.ಟಿ.ರವಿ ಅವರು ಸಾರ್ವಜನಿಕರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತಜ್ಞರು ನೀಡಿದ ವರದಿ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಜೊತೆಗೆ ಆಯಾ ಜಿಲ್ಲೆಯ ಪರಿಸ್ಥಿತಿ ನೋಡಿ ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಲಾಗಿದೆ ಎಂದು ಹೇಳಿದರು. ಕೋವಿಡ್(Covid-19) ವಿಚಾರವಾಗಿ ಕೆಲವರು ಮಾತ್ರ ಹೇಳಿಕೆ ನೀಡಬೇಕು ಎಂಬ ಸಚಿವ ಸುಧಾಕರ್(Dr K Sudhakar) ಹೇಳಿಕೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದರೆ ಜನರಿಗೆ ಗೊಂದಲ ಉಂಟಾಗುತ್ತದೆ. ಸಂಪೂರ್ಣ ಜ್ಞಾನ ಹೊಂದಿದವರು ಮಾತನಾಡಿದರೆ ಸೂಕ್ತ ಎಂಬ ದೃಷ್ಟಿಯಿಂದ ಹೇಳಿಕೆ ನೀಡಿದ್ದಾರೆ ಅಷ್ಟೇ ಎಂದರು.