ಟೊಯೋಟಾ ಕಾರ್ಮಿಕರು ಕೆಲಸಕ್ಕೆ ಹಾಜರಾಗಬೇಕು: ಸಚಿವ ಹೆಬ್ಬಾರ್‌

Kannadaprabha News   | Asianet News
Published : Feb 03, 2021, 07:44 AM IST
ಟೊಯೋಟಾ ಕಾರ್ಮಿಕರು ಕೆಲಸಕ್ಕೆ ಹಾಜರಾಗಬೇಕು: ಸಚಿವ ಹೆಬ್ಬಾರ್‌

ಸಾರಾಂಶ

ಕೆಲಸಕ್ಕೆ ಹೋಗದಿದ್ದರೆ ತಪ್ಪು ಸಂದೇಶ: ಶಿವರಾಂ| ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕರುಣಾಕರ ರೆಡ್ಡಿ|ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌|  

ಬೆಂಗಳೂರು(ಫೆ.03): ಬಿಡದಿ ಬಳಿಯ ಟೊಯೋಟಾ ಕಿರ್ಲೋಸ್ಕರ್‌ ಕಂಪನಿಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಹಲವು ಸಭೆಗಳನ್ನು ನಡೆಸಿದರೂ ಫಲಪ್ರದವಾಗಿಲ್ಲ. ಆದರೂ ಮತ್ತೊಮ್ಮೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ತಿಳಿಸಿದ್ದಾರೆ.

ಮಂಗಳವಾರ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಕರುಣಾಕರ ರೆಡ್ಡಿ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಕಾರ್ಮಿಕರ ಧರಣಿ ಆರಂಭವಾಗಿ 85 ದಿನವಾಗಿದೆ. ಕಾರ್ಮಿಕ ಇಲಾಖೆಯು ಹಲವು ಸಭೆಗಳನ್ನು ನಡೆಸಿದೆ. ಸಭೆಗೆ ಕಾರ್ಮಿಕ ಸಂಘಟನೆಯ ಅಧ್ಯಕ್ಷರು ಬರುತ್ತಿಲ್ಲ. ಕಾರ್ಮಿಕರು ಹೋರಾಟವನ್ನು ನಿಲ್ಲಿಸಿ ಕೆಲಸಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಹೇಳಿದರು.

ಕಾರ್ಖಾನೆಯ 64 ಕಾರ್ಮಿಕರ ವಿರುದ್ಧ ವಿಚಾರಣೆ ನಡೆಯುತ್ತಿದೆ. ಸರ್ಕಾರವು ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದಿಲ್ಲ. ಕಾರ್ಮಿಕರು ಸಹ ಪ್ರತಿಷ್ಠೆಯಾಗಿ ಪರಿಗಣಿಸದೆ ಚರ್ಚೆಗೆ ಬರಬೇಕು. ಕಾರ್ಖಾನೆ ಬಂದ್‌ ಮಾಡುವುದು ಸರಿಯಲ್ಲ. ಹಠ ಬಿಟ್ಟು ಕೆಲಸಕ್ಕೆ ಹಾಜರಾಗಬೇಕು. ಆಡಳಿತ ಮಂಡಳಿಯ ಕೈಯಲ್ಲಿ ಎಲ್ಲಾ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇದೆ. ಕೋವಿಡ್‌ನಂತಹ ಪರಿಸ್ಥಿತಿಯಲ್ಲಿಯೂ ಕಾರ್ಖಾನೆ ಪೂರ್ಣ ವೇತನ ನೀಡಿದೆ ಎಂದರು.

ವಿಚಾರ ದೊಡ್ಡದು ಮಾಡಬೇಡಿ : ಟೊಯೋಟಾ ಕಾರ್ಮಿಕರಿಗೆ ಎಚ್ಚರಿಕೆ

ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಖಾನೆಯಲ್ಲಿ 66 ಕಾರ್ಮಿಕರನ್ನು ಅಮಾನತು ಮಾಡಿ, 8 ಕಾರ್ಮಿಕರನ್ನು ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ. ಇದು ಜಪಾನ್‌ ಮೂಲದ ಕಾರ್ಖಾನೆಯಾಗಿದ್ದು, ಅಲ್ಲಿನ ಕಾನೂನುಗಳನ್ನು ಇಲ್ಲಿ ಜಾರಿ ಮಾಡಲಾಗುತ್ತಿದೆ ಎಂಬ ಆರೋಪ ಇದೆ. ನಮ್ಮ ನೆಲದ ಕಾನೂನಿನಂತೆ ಕೆಲಸ ಮಾಡಬೇಕಾಗಿದೆ. ಮಾನವೀಯತೆ ದೃಷ್ಟಿಯಿಂದ ಬಿಕ್ಕಟ್ಟನ್ನು ಬಗೆಹರಿಸಬೇಕು. ಬಗ್ಗದಿದ್ದರೆ ಸರ್ಕಾರ ಅಸಹಾಯಕವಾಗಲಿದೆ ಎಂಬ ಸಂದೇಶವನ್ನು ನೀಡಬೇಕು ಎಂದು ಹೇಳಿದರು.

ವಿಷಯ ಪ್ರಸ್ತಾಪಿಸಿದ ಕರುಣಾಕರ ರೆಡ್ಡಿ, ಕಳೆದ ಮೂರು ತಿಂಗಳಿನಿಂದ ಟೊಯೋಟಾ ಕಾರ್ಖಾನೆಯ ಕಾರ್ಮಿಕರು ಧರಣಿ ನಡೆಸುತ್ತಿದ್ದು, ಮೂರು ನಿಮಿಷದಲ್ಲಿ ಮಾಡುವ ಕೆಲಸವನ್ನು ಎರಡೂವರೆ ನಿಮಿಷದಲ್ಲಿ ಮಾಡಬೇಕು ಎಂಬ ಒತ್ತಡ ಹಾಕಲಾಗುತ್ತಿದೆ ಎಂಬುದು ಕಾರ್ಮಿಕ ಆರೋಪವಾಗಿದೆ. ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.
 

PREV
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು