ಆರೋಪಿಯನ್ನು ಪೊಲೀಸರು ತ್ವರಿತವಾಗಿ ಬಂಧಿಸಿದ್ದು, ಶ್ಲಾಘನೀಯ ಕೆಲಸ ಮಾಡಿದ್ದಾರೆ. ದುಃಖತಪ್ತ ಕುಟುಂಬದವರು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ಮೂಲಕ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುತ್ತೇವೆ. ಸಂತ್ರಸ್ತ ಕುಟುಂಬದ ಜೊತೆ ಸರ್ಕಾರವಿದ್ದು, ಕುಟುಂಬಕ್ಕೆ ಆದಷ್ಟು ಶೀಘ್ರ ನ್ಯಾಯ ದೊರಕಿಸಲು ಪ್ರಯತ್ನ ಮಾಡುತ್ತೇವೆ ಎಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಉಡುಪಿ(ನ.18): ಇಲ್ಲಿನ ನೇಜಾರು ಗ್ರಾಮದಲ್ಲಿ ತಾಯಿ ಮತ್ತು ಮೂವರು ಮಕ್ಕಳ ಹತ್ಯೆಯಾದ ಮನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಭೇಟಿ ನೀಡಿ, ಮೃತ ಹಸೀನಾ ಪತಿ ನೂರ್ ಮೊಹಮದ್, ಮಗ ಆಸಾದ್ ಹಾಗೂ ಕುಟುಂಬದ ಇತರ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಆರೋಪಿ ಸೈಕೋ ರೀತಿಯಲ್ಲಿ ವರ್ತಿಸಿದ್ದಾನೆ. 20 ನಿಮಿಷದಲ್ಲಿ 4 ಕೊಲೆಗಳನ್ನೆಸಗಿದ ಆತನ ಮಾನಸಿಕ ಸ್ಥಿತಿ ಯಾವ ರೀತಿ ಇರಬಹುದು ಎಂದು ಅಚ್ಚರಿ ವ್ಯಕ್ತಪಡಿಸಿದರು.
ಆರೋಪಿಯನ್ನು ಪೊಲೀಸರು ತ್ವರಿತವಾಗಿ ಬಂಧಿಸಿದ್ದು, ಶ್ಲಾಘನೀಯ ಕೆಲಸ ಮಾಡಿದ್ದಾರೆ. ದುಃಖತಪ್ತ ಕುಟುಂಬದವರು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ಮೂಲಕ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುತ್ತೇವೆ. ಸಂತ್ರಸ್ತ ಕುಟುಂಬದ ಜೊತೆ ಸರ್ಕಾರವಿದ್ದು, ಕುಟುಂಬಕ್ಕೆ ಆದಷ್ಟು ಶೀಘ್ರ ನ್ಯಾಯ ದೊರಕಿಸಲು ಪ್ರಯತ್ನ ಮಾಡುತ್ತೇವೆ ಎಂದರು.
undefined
ಉಡುಪಿ ಕುಟುಂಬದ ನಾಲ್ವರ ಕೊಲೆ: ಆರೋಪಿ ಪ್ರವೀಣ್ ಚೌಗಲೆಯನ್ನು 14 ದಿನ ಪೊಲೀಸರಿಗೊಪ್ಪಿಸಿದ ಕೋರ್ಟ್
ಶಾಂತಿ ಪ್ರಿಯರ ಉಡುಪಿ ಜಿಲ್ಲೆಯಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಮುಂದೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಖುತ್ತೇವೆ, ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಎಂದು ಸಚಿವೆ ಭರವಸೆ ನೀಡಿದರು.
ಬೆಳಗಾವಿಯಲ್ಲಿದ್ದರಿಂದ ತಕ್ಷಣ ಇಲ್ಲಿಗೆ ಬರಲಾಗಲಿಲ್ಲ, ಆದರೂ ಸಂತ್ರಸ್ತ ಕುಟುಂಬದ ಜೊತೆಗೆ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಮೃತ ಮಹಿಳೆಯ ಸಹೋದರರಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆದಿದ್ದೆ ಎಂದು ಸಚಿವರು ತಮ್ಮ ವಿರುದ್ಧ ಕೇಳಿ ಬಂದಿದ್ದ ಆರೋಪಕ್ಕೆ ಉತ್ತರಿಸಿದರು.
ಒಂದಲ್ಲ ಎರಡಲ್ಲ..ಅಲ್ಲಿ ಬಿದ್ದಿದ್ದು 4 ಹೆಣಗಳು: ದೀಪಾವಳಿ ದಿನ ರಕ್ತದೋಕುಳಿ ಆಡಿದ್ದ ಹಂತಕ..!
ಸಚಿವರೊಂದಿಗೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ ಮತ್ತಿತರಿದ್ದರು.
ಫಾಸ್ಟ್ ಟ್ರಾಕ್ ಕೋರ್ಟ್‌ಗೆ ಆಗ್ರಹ
ಮನೆಗೆ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕುಟುಂಬದ ಯಜಮಾನ ನೂರ್ ಮೊಹಮ್ಮದ್ ಮನವಿಯೊಂದನ್ನು ಸಲ್ಲಿಸಿದರು. ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಒತ್ತಾಯಿಸಿದ್ದೇವೆ ಮತ್ತು ಸರ್ಕಾರಿ ವಿಶೇಷ ಅಭಿಯೋಜಕರಾಗಿ ಅಡ್ವೊಕೇಟ್ ಶಿವಪ್ರಸಾದ್ ಆಳ್ವ ಅವರನ್ನು ನೇಮಕ ಮಾಡಲು ಒತ್ತಾಯಿಸಿದ್ದೇವೆ. ಸಚಿವೆ ಮನವಿ ಸ್ವೀಕರಿಸಿದ್ದಾರೆ, ಬೇಗ ನ್ಯಾಯ ಕೊಡಿಸುವ ವಿಶ್ವಾಸ ಕೊಟ್ಟಿದ್ದಾರೆ, ಎಲ್ಲಾ ರೀತಿಯಲ್ಲಿ ಸಹಕಾರ ಕೊಡುವ ಆಶ್ವಾಸನೆ ನೀಡಿದ್ದಾರೆ ಎಂದು ನೂರ್ ಮೊಹಮ್ಮದ್ ಹೇಳಿದರು.