ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ: ಸಚಿವ ಸತೀಶ ಜಾರಕಿಹೊಳಿ

By Kannadaprabha News  |  First Published Nov 18, 2023, 12:00 AM IST

ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ₹ 422 ಕೋಟಿ ಪರಿಹಾರ ಕೇಂದ್ರ ಸರಕಾರದಿಂದ ಬಿಡುಗಡೆಯಾಗಬೇಕಿದೆ . ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿಲ್ಲ ಎಂದು ಹೇಳಿದ ಸಚಿವ ಸತೀಶ ಜಾರಕಿಹೊಳಿ 


ಬೆಳಗಾವಿ(ನ.18):  ಮಳೆ ಕೊರತೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ 3.65 ಲಕ್ಷ ಹೆಕ್ಟೇರ್‌ ಬೆಳೆ ಹಾನಿಗೀಡಾಗಿದೆ. ಜಿಲ್ಲಾಡಳಿತದ ಬಳಿ ₹ 31 ಕೋಟಿ ಇದೆ. ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಸುವರ್ಣ ವಿಧನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ₹ 422 ಕೋಟಿ ಪರಿಹಾರ ಕೇಂದ್ರ ಸರಕಾರದಿಂದ ಬಿಡುಗಡೆಯಾಗಬೇಕಿದೆ . ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿಲ್ಲ ಎಂದು ಹೇಳಿದರು.

Tap to resize

Latest Videos

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿಕೆಗೆ ಖಂಡನೆ

ಮುಂಬರುವ ಜನವರಿ ಇಲ್ಲವೇ ಫೆಬ್ರವರಿಯಲ್ಲಿ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆಯಿದೆ. ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಜನವರಿ ಬಳಿಕ ಅಗತ್ಯವಿರುವ ಮೇವು ಖರೀದಿಗೆ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.

ಅಧಿವೇಶನಕ್ಕೆ ಸಿದ್ಧತೆ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್‌ 4 ರಿಂದ ನಡೆಯಲಿರುವ ವಿಧಾನ ಮಂಡಳದ ಅಧಿವೇಶನಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಯಾವುದೇ ತೊಂದರೆ ಎದುರಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸುವಂತೆ ಜಿಲ್ಲೆಯ ಶಾಸಕರ ಜೊತೆಗೆ ಸಭೆ ನಡೆಸಲಾಗುವುದು. ಸುವರ್ಣ ಸೌಧಕ್ಕೆ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಕಚೇರಿಗಳ ಸ್ಥಳಾಂತರ ಆಗುವುದಿಲ್ಲ ಎಂದು ಹೇಳಿದರು.

ರೈತರ ಆತಿಥ್ಯಕ್ಕೆ ಧನ್ಯವಾದ

ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ವಿಧಾನಮಂಡಳದ ಅಧಿವೇಶನಕ್ಕೆ ಆಗಮಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ವಸತಿ, ಊಟದ ವ್ಯವಸ್ಥೆ ಮಾಡಿ ಆತಿಥ್ಯ ಸ್ವೀಕರಿಸಲು ಆಹ್ವಾನಿಸಿರುವ ರೈತರ ನಿರ್ಧಾರದ ವಿಚಾರ ಒಳ್ಳೆಯದ್ದೆ ಆಗಿದೆ. ರೈತರಿಗೆ ನಾನು ಧನ್ಯವಾದ ಹೇಳುತ್ತೇನೆ. ಆದರೆ, ಇದು ಅನುಷ್ಠಾನಗೊಳ್ಳುವುದು ಕಷ್ಟಸಾಧ್ಯ. ರೈತರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೇಯರ್‌ ಪತ್ರದ ಫೈಲ್‌ ಕಾಣೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಣೆಯಾಗಿದ್ದ ಮೇಯರ್‌ ಪತ್ರದ ಫೈಲ್‌ ಕೊನೆಗೂ ಸಿಕ್ಕಿದೆ. ಅದು ಯಾರ ಮನೆಯಲ್ಲಿ ಸಿಕ್ಕಿದೆ ಗೊತ್ತಿಲ್ಲ. ಆದರೆ, ಅದು ಸಿಕ್ಕಿದ್ದು, ಅದನ್ನು ಪಾಲಿಕೆ ಆಯುಕ್ತರಿಗೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಎಕರೆಗೆ 4 ಕೋಟಿ ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾವನೆ ಸದ್ಯಸರ್ಕಾರದ ಮುಂದಿಲ್ಲ. ನಾವು ನಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಜಿಲ್ಲಾ ವಿಭಜನೆ ಸಂಬಂಧ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿ ಶಾಸಕರುಕೂಡ ನಮಸ್ಕಾರ ಸ್ಪೀಕರ್‌ ಸಾಬ್‌ ಎನ್ನುತ್ತಾರೆ ಎಂಬ ಸಚಿವ ಜಮೀರ ಅಹ್ಮದ ಖಾನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ, ಸ್ಪೀಕರ್‌ ಹುದ್ದೆಗೆ ಎಲ್ಲರೂ ಗೌರವ ನೀಡುತ್ತಾರೆ. ಈ ಹುದ್ದೆಗಳಿಗೆ ಯಾವುದೇ ಜಾತಿ, ಧರ್ಮ ಇರುವುದಿಲ್ಲ. ಎಲ್ಲರೂ ಗೌರವ ನೀಡುತ್ತಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವಿಶ್ವಾಸ ವೈದ್ಯ, ಮಹೇಂದ್ರ ತಮ್ಮಣ್ಣವರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಉಪಸ್ಥಿತರಿದ್ದರು.

click me!