ಮಂಡ್ಯ ಮೂಲದ ಕುಟುಂಬಕ್ಕೆ ಮಾರ್ಗೋನಹಳ್ಳಿಯ 95 ಎಕರೆ ಗೋಮಾಳ ಭೂಮಿ ವರ್ಗಾವಣೆ ಆರೋಪ

Published : Jul 14, 2026, 08:57 AM IST
Mandya KR Pete

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಮಾರ್ಗೋನಹಳ್ಳಿ ಗ್ರಾಮದಲ್ಲಿ 95 ಎಕರೆ ಗೋಮಾಳ ಭೂಮಿಯನ್ನು ಬಲಾಢ್ಯರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಕ್ರಮ ಮಂಜೂರಾತಿ ರದ್ದುಪಡಿಸಿ, ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಅಂಬೇಡ್ಕರ್ ಸೇವಾ ಸಮಿತಿ ನೇತೃತ್ವದಲ್ಲಿ ಒತ್ತಾಯಿಸಲಾಯಿತು.

ಮಂಡ್ಯ: 95 ಎಕರೆ ಗೋಮಾಳ ಭೂಮಿಯನ್ನು ಬಲಾಢ್ಯರಿಗೆ ಅಕ್ರಮವಾಗಿ ಮಂಜೂರು ಮಾಡಿಕೊಡಲಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ತಾಲೂಕಿನ ಮಾರ್ಗೋನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಕರ್ನಾಟಕ ಅಂಬೇಡ್ಕರ್ ಸೇವಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದ ಗ್ರಾಮಸ್ಥರು, ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಬಲಾಢ್ಯರಿಗೆ ಮಾಡಿಕೊಟ್ಟಿರುವ ಅಕ್ರಮ ಭೂ ಮಂಜೂರಾತಿ ರದ್ದುಪಡಿಸಬೇಕು. ಇದಕ್ಕೆ ಸಹಕರಿಸಿದ ಕಂದಾಯ ಇಲಾಖೆ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಸರ್ವೇ ನಂ.13 ಮತ್ತು ಹೊಸ ಸರ್ವೇ ನಂ.165 ರಲ್ಲಿರುವ ಒಟ್ಟು 95 ಎಕರೆ 13 ಗುಂಟೆ ಗೋಮಾಳ ಭೂಮಿ

ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆ.ಎಂ.ಸಂದೇಶ ಮಾತನಾಡಿ, ಗ್ರಾಮದ ಸರ್ವೇ ನಂ.13 ಮತ್ತು ಹೊಸ ಸರ್ವೇ ನಂ.165 ರಲ್ಲಿರುವ ಒಟ್ಟು 95 ಎಕರೆ 13 ಗುಂಟೆ ಗೋಮಾಳ ಭೂಮಿಯನ್ನು ಮಂಡ್ಯ ಮೂಲದ ಡಿ.ರಾಮಲಿಂಗಯ್ಯ ಕುಟುಂಬಸ್ಥರು ಏಕ ಕಾಲದಲ್ಲಿ ಮಂಜೂರು ಮಾಡಿಕೊಂಡಿದ್ದಾರೆ. ಹಣ ಮತ್ತು ರಾಜಕಾರಣಿ ಬಲದಿಂದ ದೌರ್ಜನ್ಯದ ಮೂಲಕ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿದರು.

ಈ ಭೂಮಿ ದಲಿತರು ಮತ್ತು ಹಿಂದುಳಿದ ವರ್ಗದ ರೈತರಿಗೆ ಸೇರಬೇಕಾಗಿತ್ತು. ಈ ಗ್ರಾಮವೇ ಇನಾಮ್ ಗ್ರಾಮವಾಗಿದೆ. 95 ಎಕರೆ ಭೂಮಿ ಮಂಜೂರಿನ ಹಿಂದೆ ದೊಡ್ಡ ಸಂಚು ನಡೆದಿದೆ. ಕೂಡಲೇ ತನಿಖೆ ಆಗಬೇಕು. ಭೂಕಬಳಿಕೆ ಮಾಡಿರುವ ಡಿ.ರಾಮಲಿಂಗಯ್ಯ ಪುತ್ರ ವಿವೇಕಾನಂದ ಸರ್ಕಾರಿ ಪೊಲೀಸ್ ಅಧಿಕಾರಿಯಾಗಿದ್ದು, ಅದನ್ನು ಪ್ರಶ್ನಿಸಿ ಹೋರಾಟ ಮಾಡುವ ಗ್ರಾಮದ ಮುಗ್ಧ ಜನರ ಮೇಲೆ ಸುಳ್ಳು ಕೇಸ್ ದಾಖಲಿಸಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಮಂಜೂರಾತಿ ರದ್ದುಗೊಳಿಸುವಂತೆ ಆಗ್ರಹ

ಈ ಭೂಗಳ್ಳರ ಕುಟುಂಬಕ್ಕೆ ಕಿಕ್ಕೇರಿ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಭೂ ಕಬಳಿಕೆ ವಿರುದ್ಧ ಹೋರಾಟ ಮಾಡುತ್ತಿರುವ ರೈತರು ಕ್ರಿಮಿನಲ್‌ಗಳಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿರುವ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕಿಕ್ಕೇರಿ ಪೊಲೀಸರು ಬಲಾಡ್ಯರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಗೋಮಳದ ಅಕ್ರಮ ಮಂಜೂರಾತಿ ರದ್ದುಗೊಳಿಸಬೇಕು. ರೈತರ ಮೇಲೆ ಹಾಕಿರುವ ಸುಳ್ಳು ಕೇಸ್‌ಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಹಸೀಲ್ದಾರ್ ಶ್ರೇಯಸ್ ಭರವಸೆ

ಮನವಿ ಸ್ವೀಕರಿಸಿದ ತಹಸೀಲ್ದಾರ್ ಶ್ರೇಯಸ್ ಮಾತನಾಡಿ, ಈ ಆರೋಪದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಂದಾಯ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ ಅಕ್ರಮವಾಗಿ ಮಂಜೂರಾಗಿದ್ದರೆ ಕೂಡಲೇ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಹಾವೇರಿ ಬೆಳಗಾವಿ ಬಳಿಕ ಮತ್ತೆರಡು ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಚಿಂತನೆ, ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?

ದಲಿತರು ಮತ್ತು ಹಿಂದುಳಿದ ರೈತರ ಮೇಲೆ ದಾಖಲಾಗಿರುವ ಸುಳ್ಳು ಕೇಸ್ ಆರೋಪಗಳ ಬಗ್ಗೆಯೂ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮಾರ್ಗೋನಹಳ್ಳಿ ಅಯ್ಯಪ್ಪ, ಮಂಜುನಾಥ್, ಗಿರೀಶ್, ನಾಗರಾಜು, ಅಜ್ಜೇಗೌಡ, ರಾಜೇಗೌಡ, ಶಿವಣ್ಣ, ನರಸಿಂಹ, ಯೋಗೇಶ್, ತ್ರಿಪುರರಾಜ್, ಬಾಬು, ರಾಮು, ರುದ್ರೇಶ್, ನಾಗರಾಜು, ರಾಮ, ನರಸೇಗೌಡ, ಲಕ್ಷ್ಮಣ, ಚಂದ್ರು, ರಾಜಶೇಖರ, ವಿಜಯ, ಜಯಣ್ಣ, ಶ್ರೀನಿವಾಸ್, ಶಾಂತಮ್ಮ, ತಾಯಮ್ಮ, ಕೆಂಚಮ್ಮ, ರಂಗಮ್ಮ, ಅಂಜಲಿ ಸೇರಿದಂತೆ ಹಲವು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇದನ್ನೂ ಓದಿ: 'ಭಾರತ್ ಜೋಡೋ' ಸಂಘ ಸ್ಥಾಪನೆ, ಸದಸ್ಯತ್ವ ನೋಂದಣಿ ಹೇಗೆ? ವಾರ್ಷಿಕ ₹10 ಲಕ್ಷ ಅನುದಾನ

PREV
Read more Articles on
click me!

Recommended Stories

ಲವ್ ಜಿಹಾದ್ ಆರೋಪ ಹೊತ್ತಿದ್ದ ಯೂಟ್ಯೂಬರ್ ಮುಕಳೆಪ್ಪನಿಂದ ಹಿಂದೂ ಸಂಪ್ರದಾಯದಂತೆ ಪತ್ನಿಯ ಸೀಮಂತ ಶಾಸ್ತ್ರ!
ಶಿವಮೊಗ್ಗ-ಮಂಗಳೂರು ರೈಲ್ವೆ ಯೋಜನೆ: ತೀರ್ಥಹಳ್ಳಿ-ಶೃಂಗೇರಿ ಮಾರ್ಗಕ್ಕೆ ಹೊಸ ತಿರುವು?