
ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ
ಮಂಡ್ಯ(ಅ.25): ಅಜ್ಞಾನವೆಂಬ ಕತ್ತಲು ಕಳೆದು ಜ್ಞಾನವೆಂಬ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬವೇ ದೀಪಾವಳಿ. ಬೆಳಕಿನ ಹಬ್ಬ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ದೀಪ ಬೆಳಗಿ, ಹಬ್ಬದ ಊಟ ಮಾಡಿ, ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮಿಸುತ್ತಾರೆ. ಆದರೆ, ದೀಪಾವಳಿ ಸಮಯದಲ್ಲಿ ಮಂಡ್ಯದ ಮೇಲುಕೋಟೆ ಮಾತ್ರ ನಿಶ್ಯಬ್ದವಾಗಿರುತ್ತದೆ. ಹಬ್ಬದ ದಿನದಂದು ದೇಶದ ಜನರೆಲ್ಲಾ ಸಂಭ್ರಮದಲ್ಲಿ ಮುಳುಗಿದ್ರೆ ಮೇಲುಕೋಟೆಯ ಮಂಡ್ಯಮ್ ಅಯ್ಯಂಗಾರ್‌ಗಳು ಶೋಕಾಚರಣೆ ಮಾಡ್ತಾರೆ. ನರಕ ಚತುರ್ದಶಿಯಂದು ನರಕ ಸೃಷ್ಟಿಸಿದ ಟಿಪ್ಪುವಿನ ಕೃತ್ಯ ಖಂಡಿಸಿ ಕರಾಳ ದಿನವನ್ನಾಗಿ ಆಚರಣೆ ಮಾಡ್ತಾರೆ.
ಕೆಆರ್‌ಎಸ್‌ನಲ್ಲಿ ಚಿರತೆ ಪ್ರತ್ಯಕ್ಷ : ಸೆರೆಗಾಗಿ ಕಾರ್ಯಾಚರಣೆ ಮುಂದುವರಿಕೆ
ಮೇಲುಕೋಟೆ ಮಂಡ್ಯಮ್ ಅಯ್ಯಂಗಾರರ ಹತ್ಯೆ ಖಂಡಿಸಿ ಪಂಜಿನ ಮೆರವಣಿಗೆ
ಸುಮಾರು 250 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್ ಕ್ರೌರ್ಯಕ್ಕೆ ಬಲಿಯಾದ 800 ಮಂಡ್ಯಮ್ ಅಯ್ಯಂಗಾರ್ ಜೀವ ಬಿಟ್ಟಿದ್ದರು. ದೀಪಾವಳಿಯಂದೆ ನಡೆದ ಈ ಕೃತ್ಯ ಇಂದಿಗೂ ಮೇಲುಕೋಟೆ ಅಯ್ಯಂಗಾರ್‌ಗಳು ಹಬ್ಬ ಆಚರಣೆ ಮಾಡದಂತೆ ತಡೆದಿದೆ. ಪ್ರತಿ ವರ್ಷ ಕರಾಳ ದಿನ ಆಚರಿಸುವ ಅಯ್ಯಂಗಾರ್‌ಗಳು ಈ ವರ್ಷ ಪಂಜಿನ ಮೆರವಣಿಗೆ ನಡೆಸಿ ಟಿಪ್ಪು ಕೃತ್ಯ ಖಂಡಿಸಿದರು. ಬಿಜೆಪಿ ಮುಖಂಡ ಡಾ. ಇಂದ್ರೇಶ್ ನೇತೃತ್ವದ ಮೇಲುಕೋಟೆ ಹತ್ಯಾಕಾಂಡ ಶೋಕಾಚರಣೆ ಸಮಿತಿ ಕರಾಳ ದಿನಾಚರಣೆ ಆಯೋಜನೆ ಮಾಡಿತ್ತು. ಕೈಯಲ್ಲಿ ಪಂಜು ಹಿಡಿದು ಮೇಲುಕೋಟೆಯ ರಸ್ತೆಯಲ್ಲಿ ಸಾಗಿದ ಮಂಡ್ಯಮ್ ಅಯ್ಯಂಗಾರ್ ವಂಶಸ್ಥರು ಹಾಗೂ ಹಿಂದೂ ಕಾರ್ಯಕರ್ತರು ಟಿಪ್ಪು ವಿರುದ್ಧ ಧಿಕ್ಕಾರ ಕೂಗಿ ಕೃತ್ಯ ಖಂಡಿಸಿದರು.
ಮೈಸೂರು ಆಸ್ಥಾನದಲ್ಲಿದ್ದ ಶಾಮಯ್ಯ ಅಯ್ಯಂಗಾರ್ ಬ್ರಿಟಿಷರನ್ನು ಭೇಟಿಯಾಗಿ ಟಿಪ್ಪುವಿನ ದುರಾಡಳಿತದ ಬಗ್ಗೆ ದೂರು ನೀಡಿದ್ದನು ಎಂಬ ಗುಮಾನಿ ಮೇಲೆ ಟಿಪ್ಪು ಮಂಡ್ಯಮ್ ಅಯ್ಯಂಗಾರ್‌ಗಳ ಮೇಲೆ ದಾಳಿ ಮಾಡಿದ್ದನಂತೆ. ನರಕ ಚತುರ್ದಶಿಯ ದಿನದಂದು ಸೈನ್ಯದೊಡನೆ ಮೇಲುಕೋಟೆಗೆ ಲಗ್ಗೆ ಇಟ್ಟ ಟಿಪ್ಪು ಸುಲ್ತಾನ್ ಸಿಕ್ಕಸಿಕ್ಕ ಅಯ್ಯಂಗಾರರ ಮೇಲೆ ಆಕ್ರಮಣ ಮಾಡಿ ಅವರ ನರಮೇಧ ನಡೆಸಿದ ಎನ್ನಲಾಗಿದೆ. ಈ ಹತ್ಯಾಕಾಂಡದಲ್ಲಿ ಸುಮಾರು 800 ಜನ ಅಯ್ಯಂಗಾರ್‌ಗಳು ಪ್ರಾಣ ಕಳೆದುಕೊಂಡರಂತೆ. ಅಂದು ದೀಪಾವಳಿ ದಿನವೇ ಸ್ಮಶಾನವಾದ ಮೇಲುಕೋಟೆಯಲ್ಲಿ ಇಂದಿಗೂ ನರಕಚತುರ್ಥಿಯಂದು ಶೋಕದಿನವನ್ನಾಗಿ ಆಚರಿಸಲಾಗುತ್ತದೆ.