
ವಿಶ್ವನಾಥ ಮಲೆಬೆನ್ನೂರು
ಬೆಂಗಳೂರು(ಅ.25): ಅರ್ಧ ಅಡಿಗೂ ಆಳವಾದ ಗುಂಡಿಗಳು, ರಸ್ತೆ ತುಂಬೆಲ್ಲಾ ಹರಡಿದ ಜಲ್ಲಿಕಲ್ಲು, ಮೇಲ್ಪದರ ಕಿತ್ತು ಹೋಗಿ ರಸ್ತೆಯ ಅಸ್ಥಿ ಪಂಜರದ ದರ್ಶನ. ಇದು ಸಿಲಿಕಾನ್ ಸಿಟಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ನಾಗರಭಾವಿ-2ನೇ ಹಂತದ ಮುಖ್ಯ ರಸ್ತೆಯ ದುಸ್ಥಿತಿ. ನಾಗರಭಾವಿ-2ನೇ ಹಂತದ ಹೊರ ವರ್ತು ರಸ್ತೆ (ನಮ್ಮೂರ ತಿಂಡಿ ಹೋಟೆಲ್)ನಿಂದ ಕೆಂಗುಂಟೆ ಜಂಕ್ಷನ್‌ವರೆಗೆ ಸುಮಾರು 500 ಮೀ. ಉದ್ದದ ರಸ್ತೆ ಎರಡೂ ಪಥದಲ್ಲಿ ಗುಂಡಿ ಬಿದ್ದು ಸಂಪೂರ್ಣವಾಗಿ ಹಾಳಾಗಿದೆ. ಇದು ಶ್ರೀಗಂಧದ ಕಾವಲು, ಕೆಂಗೇರಿ ಕಡೆಯಿಂದ ರಿಂಗ್ ರಸ್ತೆ ಮತ್ತು ವಿಜಯನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ.
ವಸತಿ ಕೇಂದ್ರೀತ ಪ್ರದೇಶವಾಗಿರುವುದರಿಂದ ತರಕಾರಿ, ಹಣ್ಣು, ದಿನಸಿ, ಹೋಟೆಲ್, ರೆಸ್ಟೋರೆಂಟ್‌ಗಳು, ಆಸ್ಪತ್ರೆ ಸೇರಿದಂತೆ ಇನ್ನಿತರೆ ವ್ಯಾಪಾರ ತಾಣಗಳು ಈ ರಸ್ತೆಯಲ್ಲಿ ಇವೆ. ಹಾಗಾಗಿ, ದಿನವಿಡೀ ಈ ರಸ್ತೆಯಲ್ಲಿ ಲಕ್ಷಾಂತರ ಮಂದಿ ಓಡಾಟ ನಡೆಸುತ್ತಾರೆ. ಕಳೆದ ಆರು ತಿಂಗಳಿನಿಂದ ಈ ರಸ್ತೆಯಲ್ಲಿ ಗುಂಡಿಗಳು ಸೃಷ್ಟಿಯಾಗಿದ್ದು, ಸಂಚಾರ ಮಾಡುವುದೇ ದುಸ್ತರವಾಗಿದೆ. ಅದರಲ್ಲೂ ಬೈಕ್ ಮತ್ತು ಆಟೋದಲ್ಲಿ ಸಂಚರಿಸುವವರು ನರಕಯಾತನೆ ಅನುಭವಿಸುವಂತಾಗಿದೆ.
Bengaluru: ಮಹದೇವಪುರದಲ್ಲೀಗ ರಸ್ತೆ ಗುಂಡಿ ಗಂಡಾಂತರ!
ಹರಡಿದ ಜಲ್ಲಿಕಲ್ಲು
ಕಳೆದ ಕೆಲವು ದಿನಗಳ ಹಿಂದೆ ಗುಂಡಿ ಮುಚ್ಚುವ ಸಲುವಾಗಿ ಮರಳು ಮತ್ತು ಜಲ್ಲಿಕಲ್ಲಿನ ಮಿಶ್ರಣವನ್ನು ರಸ್ತೆ ಗುಂಡಿಗೆ ಸುರಿಯಲಾಗಿತ್ತು. ಸುರಿದ ಮರಳು ಮತ್ತು ಜಲ್ಲಿಕಲ್ಲುಗಳು ಇದೀಗ ರಸ್ತೆ ತುಂಬೆಲ್ಲಾ ಹರಡಿಕೊಂಡಿವೆ. ಜಲ್ಲಿಕಲ್ಲು ಸುರಿಯುವ ಮುನ್ನ ರಸ್ತೆ ಗುಂಡಿ ತಪ್ಪಿಸಿ ವಾಹನ ಚಲಾಯಿಸುವುದಕ್ಕೆ ಅವಕಾಶವಿತ್ತು. ಆದರೀಗ ಅದಕ್ಕೂ ಅವಕಾಶವಿಲ್ಲ. ಜಲ್ಲಿಕಲ್ಲಿನ ಮೇಲೆ ಬೈಕ್ ಹೋಗುತ್ತಿದಂತೆ ಎಲ್ಲಿ ಜಾರಿ ಬಿದ್ದು ಬಿಡುತ್ತೇವೆಯೋ ಎಂಬ ಭಯದಲ್ಲಿ ಸಂಚಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಮಳೆ ಪ್ರಮಾಣ ಕಡಿಮೆ ಆಗುತ್ತಿದಂತೆ ಗುಂಡಿ ಸಮಸ್ಯೆಯ ಜೊತೆಗೆ ಧೂಳಿದ ಸಮಸ್ಯೆಯೂ ಶುರುವಾಗಿದೆ. ಲಾರಿ, ಬಸ್ ಸಂಚರಿಸುತ್ತಿದಂತೆ ರಾಕ್ಷಸಾಕಾರದ ಧೂಳಿನ ಭೂತ ರೂಪಗೊಳ್ಳುತ್ತಿದೆ.
ಗುಂಡಿಗಳು ಹೊಸದಲ್ಲ
ಇನ್ನು ಈ ರಸ್ತೆಯಲ್ಲಿ ಸೃಷ್ಟಿಯಾಗಿರುವ ಗುಂಡಿಗಳು ಹೊಸ ಗುಂಡಿಯಲ್ಲ. ಈ ಹಿಂದೆ ಸೃಷ್ಟಿಯಾದ ಗುಂಡಿಗಳಿಗೆ ತೇಪೆ ಹಾಕಲಾಗಿತ್ತು. ಕಳಪೆ ಕಾಮಗಾರಿಯಿಂದ ಮತ್ತೆ ಅದೇ ಗುಂಡಿಗಳು ಬಾಯಿ ತೆæರೆದುಕೊಂಡಿವೆ. ಇನ್ನು ಜಲಮಂಡಳಿಯ ಕೊಳವೆ ಒಡೆದು ರಸ್ತೆಯಲ್ಲಿ ನೀರು ಜಿನುಗುತ್ತಿದ್ದು, ವಾಹನಗಳು ಸಂಚರಿಸುವುದರಿಂದ ಗುಂಡಿಗಳ ಸಂಖ್ಯೆ ಹಾಗೂ ಗಾತ್ರವು ಹೆಚ್ಚಾಗಿದೆ.
ಅಪಘಾತಕ್ಕೆ ಲೆಕ್ಕವೇ ಇಲ್ಲ
ಈ ರಸ್ತೆಯಲ್ಲಿ ಕಳೆದ ಆರು ತಿಂಗಳಿನಿಂದ ಸಂಭವಿಸಿದ ಅಪಘಾತಕ್ಕೆ ಲೆಕ್ಕವೇ ಇಲ್ಲ. ದೊಡ್ಡ ದೊಡ್ಡ ಗುಂಡಿ ಇರುವುದರಿಂದ ವೇಗವಾಗಿ ಬರುವ ಬೈಕ್ ಸವಾರರು ಏಕಾಏಕಿ ಬ್ರೇಕ್ ಹಾಕಿ ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಾರೆ. ಗುಂಡಿ ತಪ್ಪಿಸಲು ಬ್ರೇಕ್ ಹಾಕಿದ ವೇಳೆ ಹಿಂದೆಯಿಂದ ಬರುವ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸುತ್ತಿವೆ. ಹೀಗಾಗಿ, ರಸ್ತೆಯಲ್ಲಿ ಅಪಘಾತಕ್ಕೆ ಕೊರತೆಯೇ ಇಲ್ಲ.
ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚಿ: ಸಿಎಂ ಬೊಮ್ಮಾಯಿ
ಸ್ಥಳೀಯ ಶಾಸಕರಿಗೆ, ಅಧಿಕಾರಿಗಳಿಗೆ ಜನರ ಬಗ್ಗೆ ಕಾಳಜಿ ಇಲ್ಲ. ರಸ್ತೆ ಗುಂಡಿಯಿಂದ ಜನ ಬೇಸತ್ತು ಹೋಗಿದ್ದಾರೆ. ಕಳೆದ ಆರು ತಿಂಗಳಿನಿಂದ ರಸ್ತೆ ಸ್ಥಿತಿ ಇದೇ ರೀತಿ ಇದೆ. ಆದರೂ ಸರಿಪಡಿಸುವ ಕೆಲಸ ಆಗಿಲ್ಲ ಅಂತ ಯೋಗ ಶಿಕ್ಷಕ ಗಣೇಶ್ ತಿಳಿಸಿದ್ದಾರೆ.
ರಸ್ತೆ ಗುಂಡಿಯಿಂದ ಆಟೋ ಪದೇ ಪದೆ ರಿಪೇರಿಗೆ ಬರುತ್ತಿದೆ. ದುಡಿದ ಹಣದಲ್ಲಿ ಬಹುಪಾಲು ರಿಪೇರಿಗೆ ಹಾಕಬೇಕಾದ ಸ್ಥಿತಿ ಇದೆ. ರಸ್ತೆ ಗುಂಡಿಗಳನ್ನು ಕಂಡು ಮಹಿಳೆಯರು, ಹಿರಿಯ ನಾಗಕರಿಕರು ಆಟೋದಲ್ಲಿ ಪ್ರಯಾಣ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಷ್ಟೊಂದು ಕೆಟ್ಟರಸ್ತೆಗಳನ್ನು ಈ ಹಿಂದೆ ಯಾವುದೇ ಪಕ್ಷದ ಆಡಳಿತದಲ್ಲಿಯೂ ನೋಡಿರಲಿಲ್ಲ ಅಂತ ಆಟೋ ಚಾಲಕ ಮಹದೇವ ಹೇಳಿದ್ದಾರೆ.